16 ವಯಸ್ಸಿಗೆ ಓಡಿ ಹೋಗಿ ಮದುವೆಯಾದ ಆಶಾ ಭೋಸ್ಲೆ ವಿಚ್ಚೇದನ, ಅಫೇರ್, ಎರಡನೇ ಮದುವೆ, ಮಕ್ಕಳ ಸಾವು! ಗಾಯಕಿಯ ಆ ದಿನಗಳು

Published : Apr 12, 2026, 02:40 PM IST

92ನೇ ವಯಸ್ಸಿಗೆ ನಿಧನರಾದ ಗಾಯಕಿ ಆಶಾ ಭೋಸ್ಲೆ ಅವರ ಜೀವನವು ಏರುಪೇರುಗಳಿಂದ ಕೂಡಿತ್ತು. ಎರಡು ಮದುವೆ, ಒಂದು ಪ್ರೇಮ ಸಂಬಂಧ, ಹಾಗೂ ಇಬ್ಬರು ಮಕ್ಕಳ ಅಕಾಲಿಕ ಮರಣದಂತಹ ವೈಯಕ್ತಿಕ ಸಂಕಷ್ಟಗಳ ನಡುವೆಯೂ, ಅವರು ಸಂಗೀತ ಲೋಕದಲ್ಲಿ ಅಳಿಸಲಾಗದ ಛಾಪು ಮೂಡಿಸಿದರು.

PREV
17
ಎರಡು ಮದುವೆ, ಒಂದು ಅಫೇರ್ ಮಕ್ಕಳ ಮರಣ

ಭಾರತೀಯ ಸಂಗೀತ ಲೋಕದ ದಿಗ್ಗಜ ಗಾಯಕಿ ಆಶಾ ಭೋಸ್ಲೆ ತಮ್ಮ 92 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರ ಸಾಧನೆಯ ಜೊತೆಗೆ ವೈಯಕ್ತಿಕ ಹಾಗೂ ವೃತ್ತಿಜೀವನವು ಅನೇಕ ಏರುಪೇರುಗಳಿಂದ ತುಂಬಿದೆ. ಎರಡು ಮದುವೆ, ಒಂದು ಅಫೇರ್, ಓರ್ವ ಪುತ್ರಿ ಮತ್ತು ಪುತ್ರನ ಅಕಾಲಿಕ ನಿಧನವೂ ಅವರ ಜೀವನದ ಕಣ್ಣೀರ ಕಥೆಯಾಗಿದೆ.

27
16ನೇ ವಯಸ್ಸಿನಲ್ಲಿ 31 ವರ್ಷದವನ ಜೊತೆಗೆ ಓಡಿ ಹೋಗಿ ಮದುವೆಯಾಗಿದ್ದ ಆಶಾ

1949ರಲ್ಲಿ ಆಶಾ ಭೋಸ್ಲೆ ಅವರು ಕೇವಲ 16ನೇ ವಯಸ್ಸಿನಲ್ಲಿ ತಮ್ಮ ಕುಟುಂಬದ ವಿರೋಧದ ನಡುವೆಯೇ 31 ವರ್ಷದ ಗಣಪತ್ರಾವ್ ಭೋಸ್ಲೆ ಅವರನ್ನು ವಿವಾಹವಾಗಲು ಮನೆ ಬಿಟ್ಟು ಓಡಿಹೋಗಿ ಮದುವೆಯಾದರು. ಗಣಪತ್ರಾವ್ ಅವರು ಆಶಾ ಭೋಸ್ಲೆ ಅವರ ತಂದೆಯ ಆಪ್ತ ಕಾರ್ಯದರ್ಶಿಯಾಗಿದ್ದರು. ಆದರೆ ಈ ವಿವಾಹ ಜೀವನ ಸುಖಕರವಾಗಿರಲಿಲ್ಲ. ಮದುವೆಯಾದ ಬಳಿಕ ಪತಿ ಮತ್ತು ಅವರ ಕುಟುಂಬದಿಂದ ಹಿಂಸೆ ಎದುರಿಸಿದ ಆಶಾ, ಕೆಲವು ವರ್ಷಗಳ ಬಳಿಕ ತಮ್ಮ ಮೂರನೇ ಮಗುವಿನ ಗರ್ಭಿಣಿಯಾಗಿದ್ದಾಗಲೇ ಇಬ್ಬರು ಮಕ್ಕಳೊಂದಿಗೆ ತಾಯಿಯ ಮನೆಗೆ ಮರಳಿ ಬಂದರು. ಕೊನೆಗೆ 1960ರಲ್ಲಿ ಈ ಸಂಬಂಧ ಅಂತ್ಯಗೊಂಡಿತು. ಹಾಗೂ ವಿಚ್ಚೇದಿತ ಗಂಡ 1966ರಲ್ಲಿ ನಿಧನರಾದರು.

37
ಮೂವರು ಮಕ್ಕಳು ಇಬ್ಬರ ಅಕಾಲಿಕ ಮರಣ

ಮೊದಲ ಗಂಡನಿಂದ ಮೂವರು ಮಕ್ಕಳನ್ನು ಪಡೆದ ಗಾಯಕಿಯ ಹಿರಿಯ ಪುತ್ರ ಹೇಮಂತ್ ಭೋಸ್ಲೆ ಸಂಗೀತ ನಿರ್ದೇಶಕರಾಗಿದ್ದು, ನಂತರ ಪೈಲಟ್ ವೃತ್ತಿಯನ್ನೂ ಅನುಸರಿಸಿದ್ದರು. ಅವರು 2015ರಲ್ಲಿ ಕ್ಯಾನ್ಸರ್‌ನಿಂದ ನಿಧನರಾದರು. ಪುತ್ರಿ ವರ್ಷಾ ಭೋಸ್ಲೆ ಪತ್ರಕರ್ತೆಯಾಗಿದ್ದು, 2012ರಲ್ಲಿ ಆತ್ಮ*ಹತ್ಯೆ ಮಾಡಿಕೊಂಡರು. ಕಿರಿಯ ಪುತ್ರ ಆನಂದ್ ಭೋಸ್ಲೆ ವ್ಯವಹಾರ ಮತ್ತು ಚಿತ್ರರಂಗದ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿದ್ದು, ತಾಯಿಯ ವೃತ್ತಿಜೀವನವನ್ನು ನೋಡಿಕೊಳ್ಳುತ್ತಿದ್ದಾರೆ. ಕುಟುಂಬದಲ್ಲಿ ಅವರ ಮೊಮ್ಮಗ ಚೈತನ್ಯ (ಚಿಂಟು) ಭೋಸ್ಲೆ ಸಂಗೀತ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ಭಾರತದ ಪ್ರಸಿದ್ಧ ಬಾಯ್ ಬ್ಯಾಂಡ್ “A Band of Boys” ಸದಸ್ಯರಾಗಿದ್ದಾರೆ. ಮೊಮ್ಮಗಳು ಜನೈ ಭೋಸ್ಲೆ ಗಾಯಕಿ ಹಾಗೂ ಕಥಕ್ ನರ್ತಕಿಯಾಗಿದ್ದು, ಸಂಗೀತ ಕ್ಷೇತ್ರದಲ್ಲಿ ಅಜ್ಜಿಯಂತೆಯೇ ತಮ್ಮದೇ ಗುರುತು ಮೂಡಿಸುತ್ತಿದ್ದಾರೆ.

47
ಒ.ಪಿ. ನಯ್ಯರ್ ಜೊತೆಗೆ ಸಂಗೀತ ಸಹಯೋಗ, ಪ್ರೇಮ ಸಂಬಂಧ

ಆಶಾ ಭೋಸ್ಲೆ ಅವರ ಸಂಗೀತ ಜೀವನದಲ್ಲಿ O. P. Nayyar ಅವರ ಪಾತ್ರ ಮಹತ್ವದ್ದಾಗಿದೆ. 1952ರಲ್ಲಿ ಇವರಿಬ್ಬರು ಮೊದಲ ಬಾರಿ ಭೇಟಿಯಾಗಿ, ನಂತರ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದರು. “ಬಾಪ್ ರೇ ಬಾಪ್”, “ಸಿಐಡಿ”, “ನಯಾ ದೌರ್” ಸೇರಿದಂತೆ ಹಲವು ಸೂಪರ್‌ಹಿಟ್ ಚಿತ್ರಗಳಲ್ಲಿ ಇವರ ಸಂಗೀತ ಜೋಡಿ ಜನಪ್ರಿಯತೆ ಪಡೆದಿತು. ಅನೇಕ ಜನ ಇವರುನ್ನು ಜೋಡಿಯಾಗಿಯೇ ಗುರುತಿಸಿದರು. ನಯ್ಯರ್ ಮತ್ತು ಭೋಸ್ಲೆ ಅವರ ಜೋಡಿ ವಿಶೇಷವಾಗಿ ಉತ್ಸಾಹಭರಿತ ಹಾಗೂ ವಿಭಿನ್ನ ಶೈಲಿಯ ಹಾಡುಗಳಿಗಾಗಿ ಪ್ರಸಿದ್ಧವಾಗಿತ್ತು. ಇವರಿಬ್ಬರ ನಡುವಿನ ಪ್ರೇಮ ಸಂಬಂಧ ಕುರಿತು ಹಲವಾರು ಊಹಾಪೋಹಗಳು ನಡೆದಿತ್ತು. ಆದರೆ 1972ರಲ್ಲಿ ಅವರು ಇದ್ದಕ್ಕಿಂದ್ದಂತೆಯೇ ಬೇರ್ಪಟ್ಟರು. ಅವರ ಬೇರ್ಪಡುವಿಕೆಗೆ ನಿಖರ ಕಾರಣ ತಿಳಿದಿಲ್ಲ. ಆದರೂ ನಯ್ಯರ್ ಅವರು ಜೀವನದಲ್ಲಿ ಅತ್ಯಂತ ಪ್ರಮುಖ ವ್ಯಕ್ತಿ ಆಶಾ ಭೋಸ್ಲೆ ಎಂದು ಹೇಳಿರುವುದು ಗಮನಾರ್ಹ. ಆದರೆ ಆಶಾ ಎಲ್ಲಿಯೂ ಈ ಬಗ್ಗೆ ಹೇಳಿಕೊಂಡಿಲ್ಲ.

57
ರಾಹುಲ್ ದೇವ್ ಬರ್ಮನ್ ಜೊತೆಗಿನ ಜೀವನ ಮತ್ತು ಸಂಗೀತ

ಎರಡು ಮಕ್ಕಳ ತಾಯಿಯಾಗಿದ್ದಾಗ ಆಶಾ ಭೋಸ್ಲೆ ಸಂಗೀತ ನಿರ್ದೇಶಕ ರಾಹುಲ್ ದೇವ್ ಬರ್ಮನ್ ಅವರನ್ನು ಭೇಟಿಯಾದರು. ರಾಹುಲ್ ಅವರ ತಾಯಿಯಿಂದ ಅವರ ಸಂಬಂಧಕ್ಕೆ ತೀವ್ರ ವಿರೋಧವಿದ್ದರೂ, ಭೋಸ್ಲೆ ಅವರು ದೀರ್ಘಕಾಲದ ಪ್ರಣಯದ ನಂತರ 1980 ರಲ್ಲಿ ರಾಹುಲ್ ದೇವ್ ಬರ್ಮನ್ ಅವರನ್ನು ವಿವಾಹವಾದರು . ರಾಹುಲ್ ಮತ್ತು ಭೋಸ್ಲೆ ಇಬ್ಬರಿಗೂ ಇದು ಎರಡನೇ ವಿವಾಹವಾಗಿತ್ತು ಇವರಿಬ್ಬರಿಗೂ ಇದು ಎರಡನೇ ವಿವಾಹವಾಗಿತ್ತು. ಭೋಸ್ಲೆಗಿಂತ 6 ವರ್ಷ ಚಿಕ್ಕವರಾದ ರಾಹುಲ್, 1971 ರಲ್ಲಿ ರೀಟಾ ಪಟೇಲ್ ಅವರಿಂದ ವಿಚ್ಛೇದನ ಪಡೆದಿದ್ದರು. ಇವರಿಬ್ಬರ ಸಂಗೀತ ಸಹಯೋಗ 1960ರ ದಶಕದಲ್ಲೇ ಪ್ರಾರಂಭವಾಗಿದ್ದು, “ತೀಸ್ರಿ ಮಂಜಿಲ್” ಚಿತ್ರದ ಮೂಲಕ ವಿಶೇಷವಾಗಿ ಗಮನ ಸೆಳೆಯಿತು. ನಂತರ “ಪಿಯಾ ತು ಅಬ್ ತೋ ಆಜಾ”, “ದಮ್ ಮಾರೋ ದಮ್”, “ಚುರಾ ಲಿಯಾ ಹೈ ತುಮ್ನೆ” ಮುಂತಾದ ಅನೇಕ ಜನಪ್ರಿಯ ಹಾಡುಗಳು ಈ ಜೋಡಿಯಿಂದ ಹೊರಬಂದವು.

67
ಬರ್ಮನ್ ನಿಧನದ ಬಳಿಕ ಒಂಟಿಯಾದ ಭೋಸ್ಲೆ

1970 ಮತ್ತು 1980ರ ದಶಕಗಳಲ್ಲಿ ಆಶಾ ಭೋಸ್ಲೆ ಮತ್ತು ಬರ್ಮನ್ ಜೋಡಿ ಹಿಂದಿ ಚಿತ್ರರಂಗದಲ್ಲಿ ಹೊಸ ಸಂಗೀತ ಶೈಲಿಯನ್ನು ಪರಿಚಯಿಸಿತು. ಕ್ಯಾಬರೆ, ರಾಕ್, ಡಿಸ್ಕೋ, ಗಜಲ್ ಮತ್ತು ಶಾಸ್ತ್ರೀಯ ಸಂಗೀತದ ವಿವಿಧ ರೂಪಗಳಲ್ಲಿ ಅವರು ಅನೇಕ ಯಶಸ್ವಿ ಹಾಡುಗಳನ್ನು ನೀಡಿದರು. “ಇಜಾಜತ್” ಚಿತ್ರದ “ಮೇರಾ ಕುಚ್ ಸಾಮನ್”, “ಕತ್ರಾ ಕತ್ರಾ” ಹಾಡುಗಳು ಅವರ ಸಂಗೀತದ ಸೂಕ್ಷ್ಮತೆಯನ್ನು ತೋರಿಸಿವೆ. ಆಶಾ ಭೋಸ್ಲೆ ಅವರು ರಾಹುಲ್ ದೇವ್ ಬರ್ಮನ್ ಅವರನ್ನು ಪ್ರೀತಿಯಿಂದ “ಬಾಬ್” ಎಂದು ಕರೆಯುತ್ತಿದ್ದರು. ಇವರಿಬ್ಬರ ಸಂಬಂಧ ಬರ್ಮನ್ ಅವರ ನಿಧನದವರೆಗೆ ಮುಂದುವರಿದಿತ್ತು. 1994ರಲ್ಲಿ ಬರ್ಮನ್ ಮೃತರಾದರು. 

77
ಭಾರತೀಯ ಸಂಗೀತದ ಇತಿಹಾಸದಲ್ಲಿ ಅಮರ ಗಾಯಕಿ

ಒಟ್ಟಿನಲ್ಲಿ, ಆಶಾ ಭೋಸ್ಲೆ ಅವರ ಜೀವನವು ವೈಯಕ್ತಿಕ ಸಂಕಷ್ಟಗಳು, ಅಸಾಧಾರಣ ಸಾಧನೆಗಳು ಮತ್ತು ಮರೆಯಲಾಗದ ಸಂಗೀತ ಪರಂಪರೆಯ ಸಮನ್ವಯವಾಗಿದೆ. ಅವರು ಕೇವಲ ಗಾಯಕಿಯಲ್ಲ, ಭಾರತೀಯ ಸಂಗೀತದ ಇತಿಹಾಸದಲ್ಲಿ ಅಮರವಾದ ವ್ಯಕ್ತಿತ್ವವಾಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories