ಸಿಲ್ಕ್ ಸ್ಮಿತಾ ಭಾರತೀಯ ಚಿತ್ರರಂಗವನ್ನೇ ಅಲ್ಲಾಡಿಸಿದ ನಟಿ. ಐಟಂ ಸಾಂಗ್‌ಗಳಿಂದ ವಿಶೇಷವಾಗಿ ಗುರುತಿಸಿಕೊಂಡ ಸಿಲ್ಕ್ ಸ್ಮಿತಾ. ಕೇವಲ 18 ವರ್ಷಗಳ ಸಿನಿಮಾ ಜೀವನದಲ್ಲಿ 450ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.
ಸ್ಟಾರ್ ಹೀರೋಗಳಿಗೆ ಸರಿಸಮಾನವಾಗಿ ಸಂಭಾವನೆ ಪಡೆಯುತ್ತಿದ್ದರು. ಬಡತನದಲ್ಲಿ ಹುಟ್ಟಿ, ಹೈಸ್ಕೂಲ್ ನಂತರ ಓದು ನಿಲ್ಲಿಸಿದ್ದ ಸಿಲ್ಕ್ ಸ್ಮಿತಾ ನಂತರ ಜೀವನೋಪಾಯಕ್ಕಾಗಿ ಸಿನಿಮಾಗಳಲ್ಲಿ ಕೆಲಸ ಮಾಡಬೇಕಾಯಿತು. ಮದುವೆ ಆದರೂ, ಅದು ಹೆಚ್ಚುಕಾಲ ಉಳಿಯಲಿಲ್ಲ. ಹೀಗಾಗಿ ಚೆನ್ನೈಗೆ ಹೋಗಿ ಸಿನಿಮಾ ಅವಕಾಶಗಳನ್ನು ಹುಡುಕಿದರು.
ಸಿಲ್ಕ್ ಸ್ಮಿತಾ ಅವರ ಮೂಲ ಹೆಸರು ವಿಜಯಲಕ್ಷ್ಮಿ ವಡ್ಲಪಾಟಿ, ತಮಿಳು ನಿರ್ದೇಶಕ ವಿನು ಚಕ್ರವರ್ತಿ ಅವರು ಸಿಲ್ಕ್ ಸ್ಮಿತಾ (ವಿಜಯಲಕ್ಷ್ಮಿ ವಡ್ಲಪಾಟಿ) ಅವರಿಗೆ ತಮಿಳಿನ 'ವಂಡಿಚಕ್ಕರಂ' ಚಿತ್ರದಲ್ಲಿ ಮೊದಲ ಬಾರಿ ಬಾರ್ ಗರ್ಲ್ ಪಾತ್ರವನ್ನು ನೀಡಿದರು. ಮೊದಲ ಚಿತ್ರದ ಪಾತ್ರದ ಹೆಸರನ್ನೇ ನಂತರ ಸ್ಮಿತಾ ಅವರು ತಮ್ಮ ಹೆಸರನ್ನಾಗಿ ಮಾಡಿಕೊಂಡರು. ನಂತರ ನಾಯಕಿಯಾಗಿಯೂ ಹಲವು ಚಿತ್ರಗಳಲ್ಲಿ ನಟಿಸಿದರು.
ಇಂತಹ ಸಿಲ್ಕ್ ಸ್ಮಿತಾ ಆರ್‌ಎಂಪಿ ವೈದ್ಯನಾಗಿದ್ದ ರಾಧಾಕೃಷ್ಣ ಎಂಬುವವರನ್ನು ನಂಬಿ ತಮ್ಮ ಎಲ್ಲಾ ಖಾತೆಗಳನ್ನು ಅವನಿಗೆ ಒಪ್ಪಿಸಿದರು. ಆದರೆ ಆತ ಸ್ಮಿತಾಗೆ ದೊಡ್ಡ ಮೋಸ ಮಾಡಿದ. ಬಡತನದಿಂದ ಐಷಾರಾಮಿ ಜೀವನಕ್ಕೆ ಬಂದ ಸಿಲ್ಕ್ ಸ್ಮಿತಾ ಜೀವನದಲ್ಲಾದ ಮೋಸದಿಂದಾಗಿ ಮತ್ತೆ ಬಡತನಕ್ಕೆ ಬಂದರು.
ನಂತರ ಖಿನ್ನತೆಯಿಂದ ಮದ್ಯವ್ಯಸನಕ್ಕೆ ದಾಸರಾದ ಸಿಲ್ಕ್ ಸ್ಲಿತಾ ಸಾವಿಗೆ ಶರಣಾಗುತ್ತಾರೆ. 1996 ಸೆಪ್ಟೆಂಬರ್ 23 ರಂದು ಅವರು ನಿಧನರಾದಾಗ ಯಾರೊಬ್ಬ ಸ್ಟಾರ್ ಹೀರೋಗಳು ಅವರ ಅಂತ್ಯಕ್ರಿಯೆಗೆ ಬರಲಿಲ್ಲವಂತೆ. ಆದರೆ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮಾತ್ರ ಸಿಲ್ಕ್ ಸ್ಮಿತಾ ಅವರನ್ನು ಕೊನೆಬಾರಿ ನೋಡಲು ಬಂದಿದ್ದರು. ಇವರಿಬ್ಬರು 'ಅಳಿಮಯ್ಯ' ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು. ಸಿಲ್ಕ್ ಸ್ಮಿತಾ ಈ ವೇಳೆ ತಮಾಷೆಯಾಗಿ 'ನಾನು ಸತ್ತರೆ ನೀನಾದರೂ ಬರುತ್ತೀಯಾ' ಎಂದು ಕೇಳಿದ್ದರಂತೆ. ಆ ವೇಳೆ ಅರ್ಜುನ್ ಸರ್ಜಾ ಆಕೆಗೆ ಮಾತು ಕೊಟ್ಟಿದ್ದರಂತೆ.