ವಾಸ್ತವವಾಗಿ, ಜನವರಿ 26 ರಂದು ತಮಿಳು ನಾಟಕ 'ಚಾರುಕೇಸಿ' ಆಚರಣೆಯ ಸಂದರ್ಭದಲ್ಲಿ 72 ವರ್ಷದ ರಜನಿಕಾಂತ್ ಅವರನ್ನು ಮುಖ್ಯ ಅತಿಥಿಯಾಗಿ ಕರೆಯಲಾಗಿತ್ತು. ಈ ವೇಳೆ ರಜನಿ ಅವರು ನಾಟಕದ ನಿರ್ದೇಶಕ ಹಾಗೂ ನಟ ವೈ.ಜಿ.ಮಹೇಂದ್ರನ್ ಅವರನ್ನು ಶ್ಲಾಘಿಸಿ ಧನ್ಯವಾದ ಅರ್ಪಿಸಿದರು
ಪತ್ನಿ ಲತಾ ಅವರನ್ನು ಪರಿಚಯಿಸಿದ್ದಕ್ಕೆ ವೈ.ಜಿ.ಮಹೇಂದ್ರನ್ ಅವರಿಗೆ ಸದಾ ಋಣಿಯಾಗಿರುತ್ತೇನೆ ಎಂದ ರಜನಿಕಾಂತ್ , ಕಂಡಕ್ಟರ್ ಆಗಿದ್ದಾಗ ದಿನವೂ ಮದ್ಯ ಸೇವಿಸುತ್ತಿದ್ದೆ, ಲೆಕ್ಕಕ್ಕೆ ಸಿಗದಷ್ಟು ಸಿಗರೇಟ್ ಸೇದುತ್ತಿದ್ದೆ ಎಂದು ಬಹಿರಂಗ ಪಡಿಸಿದ್ದಾರೆ.
'ನನ್ನ ದಿನವು ಮಾಂಸಾಹಾರದಿಂದ ಪ್ರಾರಂಭವಾಗುತ್ತಿತ್ತು, ನಾನು ದಿನಕ್ಕೆ ಕನಿಷ್ಠ ಎರಡು ಬಾರಿ ಮಾಂಸಾಹಾರ ತಿನ್ನುತ್ತಿದ್ದೆ. ಸಸ್ಯಾಹಾರಿಗಳನ್ನು ನೋಡಿ ನನಗೆ ಬೇಸರವಾಗುತ್ತಿತ್ತು. ಆದರೆ ಈ ಮೂರು (ಮದ್ಯ, ಸಿಗರೇಟ್ ಮತ್ತು ಮಾಂಸಾಹಾರಿ ಆಹಾರ) ಮಾರಣಾಂತಿಕ ಸಂಯೋಜನೆ' ಎಂದು ರಜನಿ ಕಾಂತ್ ಹೇಳಿದ್ದಾರೆ.
ಈ ಮೂರನ್ನು ಹೆಚ್ಚು ಹೊತ್ತು ಸೇವಿಸುವ ವ್ಯಕ್ತಿ 60 ವರ್ಷದ ನಂತರ ಆರೋಗ್ಯವಂತನಾಗಿರಲು ಸಾಧ್ಯವಿಲ್ಲ ಎಂದು ನಂಬಿರುವ ರಜನಿಕಾಂತ್, ನನ್ನ ಮೇಲೆ ಪ್ರೀತಿಯ ಸುರಿಮಳೆಗೈದು ನನ್ನನ್ನು ಬದಲಾಯಿಸಿದವಳು ನನ್ನ ಹೆಂಡತಿ. ನನ್ನನ್ನು ಶಿಸ್ತಿನಿಂದ ಬೆಳೆಸಿದಳು. ಜೀವನ ಹೇಗೆ ನಡೆಸಬೇಕು ಎಂಬುದನ್ನು ಕಲಿಸಿದಳು' ಎಂದು ಕಾರ್ಯಕ್ರಮದ ವೇಳೆ ರಜನಿಕಾಂತ್ ಅವರು ಹಂಚಿಕೊಂಡಿದ್ದಾರೆ
ರಜನಿಕಾಂತ್ ಅವರು ಲತಾ ರಂಗಾಚಾರಿ ಅವರನ್ನು ಫೆಬ್ರವರಿ 26, 1981 ರಂದು ಆಂಧ್ರಪ್ರದೇಶದ ತಿರುಪತಿಯಲ್ಲಿ ವಿವಾಹವಾದರು. ಚೆನ್ನೈನ ಎತಿರಾಜ್ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಲತಾ ರಂಗಾಚಾರಿ ಅವರು ಮದುವೆಗೆ ಮೊದಲು ಕಾಲೇಜು ಮ್ಯಾಗಜೀನ್‌ಗಾಗಿ ರಜನಿಕಾಂತ್ ಅವರನ್ನು ಸಂದರ್ಶಿಸಿದ್ದರು.
rajinikanth family
ರಜನಿಕಾಂತ್ ಮತ್ತು ಲತಾ ಅವರಿಗೆ ಐಶ್ವರ್ಯ ರಜನಿಕಾಂತ್ ಮತ್ತು ಸೌಂದರ್ಯ ರಜನಿಕಾಂತ್ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸೌಂದರ್ಯ ತಮಿಳು ಚಲನಚಿತ್ರೋದ್ಯಮದಲ್ಲಿ ನಿರ್ದೇಶಕ, ನಿರ್ಮಾಪಕ ಮತ್ತು ಗ್ರಾಫಿಕ್ಸ್ ಡಿಸೈನರ್ ಆಗಿ ಕೆಲಸ ಮಾಡುತ್ತಾರೆ. ಅವರು ಕೈಗಾರಿಕೋದ್ಯಮಿ ಅಶ್ವಿನ್ ರಾಮ್ಕುಮಾರ್ ಅವರನ್ನು ವಿವಾಹವಾದರು, ಅವರೊಂದಿಗೆ ಅವರು ವಿಚ್ಛೇದನ ಪಡೆದಿದ್ದಾರೆ. ಅದೇ ಸಮಯದಲ್ಲಿ, ಐಶ್ವರ್ಯಾ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಧನುಷ್ ಅವರನ್ನುವಿವಾಹವಾಗಿ ಡಿವೋರ್ಸ್ ಪಡೆದಿದ್ದಾರೆ
ರಜನಿಕಾಂತ್ ಅವರು 2021 ರಲ್ಲಿ ಬಿಡುಗಡೆಯಾದ ತಮಿಳು ಚಿತ್ರ 'ಅನ್ನತೆ'ಯಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಅವರ ಮುಂಬರುವ ಚಿತ್ರ 'ಜೈಲರ್', ಈ ವರ್ಷ ಬಿಡುಗಡೆಯಾಗಬಹುದು. ಪ್ರಸ್ತುತ, ಅದರ ಅಧಿಕೃತ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಲಾಗಿಲ್ಲ.