ಜನಪ್ರಿಯ ನಟಿ ಮತ್ತು ದೂರದರ್ಶನ ನಿರೂಪಕಿ- ಫ್ಯಾಶನ್ ಡಿಸೈನರ್, ಮಂದಿರಾ ಬೇಡಿ ಫೆಬ್ರವರಿ 14, 1999 ರಂದು ತಮ್ಮ ಜೀವನದ ಪ್ರೀತಿಯ ರಾಜ್ ಕೌಶಲ್ ಅವರನ್ನು ವಿವಾಹವಾದರು.
ನಂತರ, ಅವರು ಜೂನ್ 19, 2011 ರಂದು ಗಂಡು ಮಗುವಿಗೆ ಜನ್ಮ ನೀಡಿ ವೀರ್ ಎಂದು ಹೆಸರಿಸಿದರು. ನಂತರ 4 ವರ್ಷದ ಹೆಣ್ಣು ಮಗುವನ್ನು ದತ್ತು ಪಡೆದು ಆಕೆಗೆ ತಾರಾ ಬೇಡಿ ಕೌಶಲ್ ಎಂದು ಹೆಸರಿಟ್ಟಿದ್ದಾರೆ.
ಜೂನ್ 30, 2021ರಲ್ಲಿ ಪತಿಯನ್ನು ಕಳೆದುಕೊಂಡರು ಮಂದಿರಾ. ಇತ್ತೀಚೆಗೆ ಮಂದಿರಾ ಸಂದರ್ಶನವೊಂದರಲ್ಲಿ ತನ್ನ ದತ್ತು ಮಗಳ ಅದೃಷ್ಟದ ಬಗ್ಗೆ ಮಾತಾಡಿದ್ದಾರೆ.
'ನಾನು ಎರಡನೇ ಮಗುವನ್ನು ಹೊಂದಲು ಮತ್ತು ದತ್ತು ತೆಗೆದುಕೊಳ್ಳಲು ಬಯಸಿದ್ದೆ. ನನ್ನ ಮಗ ವೀರ್ ಸುಮಾರು ಆರು ವರ್ಷದವನಿದ್ದಾಗ, ನಾನು ದತ್ತು ಪಡೆಯಲು ಅರ್ಜಿ ಹಾಕಿದೆ' ಎಂದು ಮಂದಿರಾ ತಿಳಿಸಿದ್ದಾರೆ.
'ಇದು ಸುದೀರ್ಘ ಪ್ರಕ್ರಿಯೆಯಾಗಿದೆ ಮತ್ತು ಅದು ಏಕೆ ಸುಲಭವಲ್ಲ ಎಂದು ನನಗೆ ತಿಳಿದಿಲ್ಲ. ಅಂದರೆ, ನಾನು ಕಾರಣಗಳನ್ನು ಅರ್ಥ ಮಾಡಿಕೊಂಡಿದ್ದೇನೆ, ಆದರೆ ಇದು ಉತ್ತಮ ಕುಟುಂಬ ಎಂದು ಸ್ಪಷ್ಟವಾದಾಗ, ಅದು ಸರಳವಾಗಿರಬೇಕು' ಎಂದು ನಟಿ ಹೇಳಿದ್ದಾರೆ.
ಮುಂದುವರಿದು, 'ಇದು ಸ್ವಲ್ಪ ಸಮಯ ತೆಗೆದುಕೊಂಡಿತು, ವೀರ್ ಒಂಬತ್ತು ವರ್ಷಕ್ಕೆ ಕಾಲಿಟ್ಟ, ಸಾಂಕ್ರಾಮಿಕ ಹೊಡೆತ ಶುರುವಾಯಿತು ಮತ್ತು ನಾನು ಈ ಬಗ್ಗೆ ನಾವು ಸ್ವಲ್ಪ ಆಸಕ್ತಿ ತೋರಿಸದಿದ್ದರೆ ಇದು ನಡೆಯುವುದಿಲ್ಲ ಎಂದು ಅರಿತೆ' ಎಂದಿದ್ದಾರೆ.
ದತ್ತುಪುತ್ರಿ ತಾರಾ ಅದೃಷ್ಟ
ಅದೇ ಸಂಭಾಷಣೆಯಲ್ಲಿ ಮಂದಿರಾ ಅವರು ದತ್ತುಪುತ್ರಿ ತಾರಾ ಅವರ ಅದೃಷ್ಟದ ಬಗ್ಗೆ ಮಾತನಾಡಿದರು. ಪುಟ್ಟ ಹುಡುಗಿ ಹಿಂದೆಂದೂ ಕಾರಿನಲ್ಲಿ ಕುಳಿತಿರಲಿಲ್ಲ ಎಂಬುದನ್ನು ಹಂಚಿಕೊಂಡ ಮಂದಿರಾ, ಕೋವಿಡ್ ಕಾರಣದಿಂದಾಗಿ ನಾವು ಮಗಳು ತಾರಾಳನ್ನು ಜಬಲ್‌ಪುರದಿಂದ ಮುಂಬೈಗೆ ಖಾಸಗಿ ಜೆಟ್‌ನಲ್ಲಿ ಕರೆದುಕೊಂಡು ಬಂದೆವು ಎಂದು ತಿಳಿಸಿದ್ದಾರೆ.
'ಇದು ಮಕ್ತೂಬ್... ಇದುವರೆಗೆ ಕಾರಿನಲ್ಲಿ ಕುಳಿತುಕೊಳ್ಳದ ಹುಡುಗಿ ಖಾಸಗಿ ಜೆಟ್‌ನಲ್ಲಿ ಪ್ರಯಾಣ ಬೆಳೆಸಿದಳು. ಅದು ನಸೀಬ್, ಕಿಸ್ಮತ್. ನಾವು ಖಾಸಗಿ ಜೆಟ್ ಅನ್ನು ಬಳಸುತ್ತಿರಲಿಲ್ಲ, ಆದರೆ ಕೋವಿಡ್ ಉತ್ತುಂಗದಲ್ಲಿದ್ದ ಕಾರಣ ವಾಣಿಜ್ಯಿಕವಾಗಿ ಹಾರಾಟ ಮಾಡುವುದು ತುಂಬಾ ಅಪಾಯಕಾರಿ. ಆ ಸಮಯದಲ್ಲಿ ಇದು ಅತ್ಯಂತ ಪ್ರಾಯೋಗಿಕ ಪರಿಹಾರವಾಗಿತ್ತು' ಎಂದಿದ್ದಾರೆ.
ವೀರ್ ಅಳುತ್ತಿದ್ದ
ತಾರಾಳನ್ನು ಮನೆಗೆ ಕರೆತರುವಾಗ ಮಗ ವೀರ್ ಅಳುತ್ತಿದ್ದ ಎಂದು ಮಂದಿರಾ ಹೇಳಿದ್ದಾರೆ. ಆರನೇ ವಯಸ್ಸಿನಲ್ಲಿ, ವೀರ್ ತನ್ನ ಸಹೋದರಿಗೆ ಅಣ್ಣನಾಗಲು ಉತ್ಸುಕನಾಗಿದ್ದನು, ಆದರೆ ಒಂಬತ್ತನೇ ವಯಸ್ಸಿನಲ್ಲಿ, ಅವನು ಆರಂಭದಲ್ಲಿ ಆಸಕ್ತಿಯನ್ನು ತೋರಿಸಲಿಲ್ಲ. ಆದರೆ, ನಿಧಾನವಾಗಿ ಇಬ್ಬರೂ ಹತ್ತಿರವಾದರು ಎಂದು ನಟಿ ಹೇಳಿದ್ದಾರೆ.