ಜಾನ್ವಿ ಕಪೂರ್ ಉರ್ಫಿ ಜಾವೇದ್ ಅವರ ಸೃಜನಶೀಲ ಫ್ಯಾಷನ್‌ನಿಂದ ಸ್ಫೂರ್ತಿ ಪಡೆದಿರುವುದಾಗಿ ಸಾರ್ವಜನಿಕ ವೇದಿಕೆಯಲ್ಲಿ ಹೇಳಿದ್ದಾರೆ.
ಸಾಮಾನ್ಯವಾಗಿ ದೊಡ್ಡ ಸೆಲೆಬ್ರಿಟಿಗಳು ಚಿಕ್ಕವರಿಂದ ತಾವು ಪ್ರೇರಣೆ ಪಡೆದಿದ್ದನ್ನು ಹೇಳೋದಿಲ್ಲ. ಆದರೆ, ಜಾನ್ವಿ ಕಪೂರ್ ಈ ಬಗ್ಗೆ ತುಟಿ ಎರಡು ಮಾಡಿರುವುದು ಅಭಿಮಾನಿಗಳಲ್ಲಿ ಜಾನ್ವಿಯ ಮೇಲಿನ ಗೌರವವನ್ನು ಹೆಚ್ಚಿಸಿದೆ.
ಜೊತೆಗೆ, ದೊಡ್ಡ ದೊಡ್ಡ ಫ್ಯಾಶನ್ ಡಿಸೈನರ್‌ಗಳು ಸುತ್ತುವರಿದಿರುವ ನಡುವೆಯೇ ದೂರದ, ಎಲ್ಲರೂ(ವಿಶೇಷವಾಗಿ ಬಾಲಿವುಡ್‌ನಲ್ಲಿ) ತಮಾಷೆ ಎಂಬಂತೆ ನೋಡುವ ಉರ್ಫಿಯ ಫ್ಯಾಶನ್ನನ್ನು ಜಾನ್ವಿ ಹೊಗಳಿರುವುದು ಸ್ವಾಗತಾರ್ಹ ಬದಲಾವಣೆಯಾಗಿದೆ.
ಸ್ವತಃ ಸೆಲೆಬ್ರಿಟಿಯಾಗಿದ್ದು, ಅದ್ಬುತ ಫ್ಯಾಶನ್ ಸೆನ್ಸ್ ಹೊಂದಿರುವ ನಟಿಯು, ಉರ್ಫಿಯ ಬೋಲ್ಡ್ ಮತ್ತು ಡೇರಿಂಗ್ ಫ್ಯಾಶನ್ ಸೆನ್ಸ್‌ನ ಅಭಿಮಾನಿ ಎಂದು ಹೇಳಿದ್ದಾರೆ. ಜಾನ್ವಿಯ ಈ ಒಂದು ಮಾತು ಉರ್ಫಿಗೆ ಸಾಕಷ್ಟು ಅವಕಾಶಗಳ ಬಾಗಿಲು ತೆರೆಯಬಹುದು.
ನಟಿ ತನ್ನ ಮುಂಬರುವ ಚಲನಚಿತ್ರ ಮಿಸ್ಟರ್ ಅಂಡ್ ಮಿಸೆಸ್ ಮಹಿ ಪ್ರಚಾರದ ಸಂದರ್ಭದಲ್ಲಿ ತನ್ನ ಅಭಿಮಾನಿಗಳು ಮತ್ತು ಅನುಯಾಯಿಗಳೊಂದಿಗೆ ತ್ವರಿತ ಚಾಟ್ ಮಾಡಿದರು.
ಈ ಸಂದರ್ಭದಲ್ಲಿ ಆಕೆಗೆ, ಹಾಲಿವುಡ್ ದಿವಾ ಝೆಂಡಾಯಾ ಶೈಲಿಯನ್ನು ನಕಲು ಮಾಡುತ್ತಿದ್ದಾಳೆಯೇ ಎಂಬ ಪ್ರಶ್ನೆ ಎದುರಾಯಿತು. ಇದಕ್ಕೆ ನಟಿಯು, 'ಹೌದು, ನಾನು ಝೆಂಡಾಯಾ ಜೊತೆಗೆ ಉರ್ಫಿಯ ಫ್ಯಾಶನ್‌ನಿಂದಲೂ ಪ್ರೇರಿತಳಾಗಿದ್ದೇನೆ' ಎಂದಿದ್ದಾರೆ.
ತಾನು ಚಿತ್ರಗಳ ಥೀಮ್‌ಗೆ ಸರಿಯಾಗಿ ಫ್ಯಾಶನ್ ಆಯ್ಕೆ ಮಾಡುವುದರಿಂದ ದೊಡ್ಡ ರೀತಿಯ ಮಾರ್ಕೆಟಿಂಗ್ ಮಾಡಬಹುದು ಎಂಬುದನ್ನು ಉರ್ಫಿಯನ್ನು ನೋಡಿ ಯೋಚಿಸಿದೆ ಎಂದು ಜಾನ್ವಿ ಹೇಳಿದ್ದಾರೆ.
ಉರ್ಫಿ ಇದನ್ನು ನಿರೀಕ್ಷಿಸಿರುವುದಿಲ್ಲ. ಆಕೆಗೆ ತಡವಾಗಿಯಾದರೂ, ಬಾಲಿವುಡ್‌ನಿಂದ ದೊಡ್ಡ ಅಂಗೀಕಾರವೇ ಬಂದಿದೆ. ಉರ್ಫಿ ಜಾವೇದ್ ತನ್ನ ಧೈರ್ಯಶಾಲಿ ಮತ್ತು ಅಸಾಂಪ್ರದಾಯಿಕ ಆಯ್ಕೆಗಳಿಗೆ ಹೆಸರುವಾಸಿಯಾಗಿದ್ದಾಳೆ. ಅವಳು ತನ್ನ ಉಡುಪುಗಳಲ್ಲಿ ವಿಪರೀತ ಪ್ರಯೋಗ ಮಾಡುತ್ತಾಳೆ.
ಇತ್ತೀಚೆಗೆ ಮೆಟ್ ಗಾಲಾ 2024 ರ ಗ್ರ್ಯಾಂಡ್ ರೆಡ್ ಕಾರ್ಪೆಟ್‌ನಲ್ಲಿ ಫ್ಯಾಶನ್ ರನ್‌ವೇಯನ್ನು ನೋಡಿದ ಅನೇಕರು, ಆಕೆಯನ್ನು ಭಾರತದಿಂದ ಕಳುಹಿಸಿದ್ದರೆ ಇನ್ನೂ ಚೆನ್ನಾಗಿ ನಿಭಾಯಿಸುತ್ತಿದ್ದಳು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಈ ಹಿಂದೆ ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಉರ್ಫಿಯ ಫ್ಯಾಶನನ್ನು ಕೆಟ್ಟ ಅಭಿರುಚಿ ಎಂದಿದ್ದರು. ಆದರೆ, ಈಗ ಜಾನ್ವಿ ಕಪೂರ್, ರಣವೀರ್ ಸಿಂಗ್, ಓರಿ ಮತ್ತು ಇತರ ಸೆಲೆಬ್ರಿಟಿಗಳು ಅವಳನ್ನು ಶ್ಲಾಘಿಸುತ್ತಿದ್ದಾರೆ.
ಯಾರು ಹೊಗಳಲಿ, ತೆಗಳಲಿ, ಉರ್ಫಿಯಂತೂ ಅಂದಿನಿಂದಲೂ ಫ್ಯಾಶನ್ನಲ್ಲಿ ಪ್ರಯೋಗ ಮಾಡುತ್ತಾ ಬಂದಿದ್ದಾಳೆ, ಮಾಡುತ್ತಲೇ ಇದ್ದಾಳೆ.