ಸುಮಾರು ಎರಡು ವರ್ಷಗಳ ಹಿಂದೆ ನೀನಾ ಗುಪ್ತಾ 'ಇಂಡಿಯನ್ ಐಡಲ್' ಎಂಬ ಸಿಂಗಿಂಗ್ ರಿಯಾಲಿಟಿ ಶೋಗೆ ಸೆಲೆಬ್ರಿಟಿ ಅತಿಥಿಯಾಗಿ ಆಗಮಿಸಿದಾಗ, ತನ್ನ ತಂದೆಯನ್ನು ನೆನೆದು ಭಾವುಕರಾದರು. ತಾನು ಅವಿವಾಹಿತ ತಾಯಿಯಾಗಿದ್ದು, ಮಗಳನ್ನು ಸಾಕಲು ತಂದೆ ಸಾಕಷ್ಟು ಸಹಾಯ ಮಾಡಿದ್ದಾರೆ ಎಂದು ಹೇಳಿದ್ದರು.
ಪ್ರೆಗ್ನೆಂಸಿಯಲ್ಲಿ ತನಗೆ ಸಹಾಯ ಮಾಡಲು ತಂದೆ ಮುಂಬೈಗೆ ಬಂದಿದ್ದರು ಮತ್ತು ನೀನಾ ತನ್ನ ತಂದೆಯನ್ನು ತನ್ನ ಗೆಳೆಯ ಎಂದು ಪರಿಗಣಿಸಲು ಪ್ರಾರಂಭಿಸಿದರು ಎಂದು ನೀನಾ ಹೇಳಿದ್ದರು.
'ನನ್ನ ಮಗಳ ಪಾಲನೆಯಲ್ಲಿ ನನ್ನ ತಂದೆಯ ಪಾತ್ರ ದೊಡ್ಡದಿದೆ, ನಾನು ಅವರಿಗೆ ಎಷ್ಟು ಕೃತಜ್ಞನಾಗಿದ್ದೇನೆ ಎಂದು ಮಾತಿನಲ್ಲಿ ಹೇಳಿ ತೀರಿಸಲು ಸಾಧ್ಯವಿಲ್ಲ, ನನ್ನ ಜೀವನದ ಅತ್ಯಂತ ಕಠಿಣ ಹಂತದಲ್ಲಿ ಸಾಗುತ್ತಿರುವಾಗ ಅವರು ಬೆನ್ನೆಲುಬಾಗಿದ್ದರು. ನನ್ನನ್ನು ಹಿಡಿದೆತ್ತಿದ್ದರು' ಎಂದಿದ್ದಾರೆ ನಟಿ.
2021 ರಲ್ಲಿ, ಅವರ 'ಸರ್ದಾರ್ ಕಾ ಗ್ರ್ಯಾಂಡ್‌ಸನ್' ಚಿತ್ರದ ಪ್ರಚಾರದ ಸಮಯದಲ್ಲಿ, ನೀನಾ ಅವರು ಆಗಾಗ್ಗೆ ಒಂಟಿ ಎಂದು ಫೀಲ್ ಆಗುತ್ತಿತ್ತು ಎಂದು ಹೇಳಿದರು. ಏಕೆಂದರೆ ಆ ಸಮಯದಲ್ಲಿ ಆಕೆಗೆ ಗೆಳೆಯನಾಗಲಿ, ಗಂಡನಾಗಲಿ ಇರಲಿಲ್ಲ. ಗತಕಾಲದ ಬಗ್ಗೆ ತಲೆ ಕೆಡಿಸಿಕೊಳ್ಳದ ಕಾರಣ ಒಂಟಿತನವನ್ನು ಹೋಗಲಾಡಿಸಲು ಸಾಧ್ಯವಾಯಿತು ಎಂದೂ ನೀನಾ ಹೇಳಿದ್ದಾರೆ.
'ಒಮ್ಮೆ ನಾನು ಒಂಟಿತನ ಅನುಭವಿಸಿದೆ. ಆದರೆ ನನ್ನ ತಂದೆ ನನ್ನ ಗೆಳೆಯರಾಗಿದ್ದರು. ಅವರು ನನ್ನಲ್ಲಿ ಶಕ್ತಿ ತುಂಬಿದರು, ನನ್ನ ಕಷ್ಟ ಕಾಲದಲ್ಲಿ ಬೆನ್ನೆಲುಬಾಗಿ ನಿಂತರು. ನಾನು ಒಂಟಿತನವನ್ನು ಗೆಲ್ಲಲು ಮತ್ತು ಜೀವನದ ಕಹಿಗಳನ್ನು ಮರೆತು ಮುಂದೆ ನಡೆಯಲು ಅವರೇ ಕಾರಣ ಎಂದು ಗುಪ್ತಾ ಹೇಳಿದರು.
ಮಸಾಬಾ ಗುಪ್ತಾ ಅವರು ನೀನಾ ಗುಪ್ತಾ ಮತ್ತು ಮಾಜಿ ವೆಸ್ಟ್ ಇಂಡಿಯಾ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ಅವರ ಪುತ್ರಿ. 80ರ ದಶಕದಲ್ಲಿ ಇಬ್ಬರಿಗೂ ಸಂಬಂಧವಿತ್ತು. ಆದರೆ ಅವರು ಮದುವೆಯಾಗಲಿಲ್ಲ. ವಿವಿಯನ್ ತನ್ನ ಕುಟುಂಬಕ್ಕೆ ಆದ್ಯತೆ ನೀಡಿ ನೀನಾ ಅವರನ್ನು ತೊರೆದಾಗ ನಟಿ ಗರ್ಭಿಣಿಯಾಗಿದ್ದರು ಮತ್ತು ಅವರು ಮದುವೆಯಾಗದೆ ತಾಯಿಯಾಗಲು ನಿರ್ಧರಿಸಿದರು.
ಆದರೆ ತನ್ನ ತಪ್ಪನ್ನು ತಿದ್ದಿಕೊಳ್ಳುವ ಅವಕಾಶ ಸಿಕ್ಕಿದ್ದರೆ ತಾನು ಮದುವೆಯಾಗದೆ ತಾಯಿಯಾಗುತ್ತಿರಲಿಲ್ಲ ಎಂದೂ ನೀನಾ ಹೇಳುತ್ತಾರೆ. 'ಯಾವುದೇ ಮಗುವಿಗೆ ತಾಯಿ ಮತ್ತು ತಂದೆ ಇಬ್ಬರೂ ಬೇಕು. ನಾನು ಮಸಾಬನ ಪೋಷಣೆಯ ಬಗ್ಗೆ ಪ್ರಾಮಾಣಿಕವಾಗಿ ಹೇಳಿದ್ದೇನೆ. ಬಹುಶಃ ನಮ್ಮ ಸಂಬಂಧದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬಿಳಲಿಲ್ಲ. ಆದರೆ ಅವಳು ತುಂಬಾ ಸಹಿಸಿಕೊಂಡಿದ್ದಾಳೆ ಎಂದು ನನಗೆ ತಿಳಿದಿದೆ' ಎಂದು ಹೇಳಿಕೊಂಡಿದ್ದಾರೆ ನೀನಾ ಗುಪ್ತಾ.