ಆಸ್ತಿ ಮುಟ್ಟುಗೋಲು, ಮಂಗಳೂರಿನ ಕಾರಣಿಕ ದೈವದ ಮೊರೆ ಹೋದ ನಟಿ ಶಿಲ್ಪಾ ಶೆಟ್ಟಿ, ಈ ದೈವದ ವಿಶೇಷತೆ ಗೊತ್ತೇ?

First Published | Apr 27, 2024, 1:41 PM IST

ಬಾಲಿವುಡ್‌ (Bollywood) ನಟಿ ಶಿಲ್ಪಾ ಶೆಟ್ಟಿ (Shilpa Shetty) ಮೂಲತಃ ಮಂಗಳೂರಿನವರು. ಆ ಕಾರಣಕ್ಕೆ ಆಗಾಗ ಮಂಗಳೂರಿಗೆ ಬರುತ್ತಿರುತ್ತಾರೆ. ಈ ಬಾರಿ ಸದ್ದು ಸುದ್ದಿ ಇಲ್ಲದೆ ತನ್ನ ತವರುನಾಡಿಗೆ ಬಂದಿದ್ದು, ಫೋಟೋಗಳು ವೈರಲ್ ಆಗಿದೆ. ಇತ್ತೀಚೆಗೆ ನಟಿ ಶಿಲ್ಪಾ ಶೆಟ್ಟಿಯ ಒಂದು ಬಂಗಲೆ ಮತ್ತು ಅವರ ಪತಿ ರಾಜ್‌ ಕುಂದ್ರಾಗೆ ಸೇರಿದ ಅಪಾರ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿತ್ತು. ಒಟ್ಟು 97.79 ಕೋ. ರೂ. ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಫೋಟೋ ಕೃಪೆ: ಅತುಲ್ ಎಸ್‌ಕೆ (ಅತುಲ್ ಕ್ಯಾಪ್ಚರ್‌)

ದಕ್ಷಿಣ ಕನ್ನಡ ಜಿಲ್ಲೆ ಸುರತ್ಕಲ್‌ ತಾಲೂಕಿನ ದೇಲಂತಬೆಟ್ಟು ಶಿಬರೂರು ಕೊಡಮಣಿತ್ತಾಯ ಕ್ಷೇತ್ರದಲ್ಲಿ ನಡೆಯುತ್ತಿರುವ ಬ್ರಹ್ಮಕುಂಭಾಭಿಷೇಕ, ಅಷ್ಟಪವಿತ್ರ ನಾಗಮಂಡಲ ಸೇವೆ, ಜಾತ್ರಾ ಮಹೋತ್ಸವದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಟುಂಬ ಸಮೇತ ಪಾಲ್ಗೊಂಡರು.

ನಟಿ ಶಿಲ್ಪಾ ಶೆಟ್ಟಿ, ಅವರ ಮಕ್ಕಳಾದ  ವಿಯಾನ್ ಕುಂದ್ರಾ ಮತ್ತು ಸಮಿಷಾ ಕುಂದ್ರಾ ಮತ್ತು ತಾಯಿ ಸುನಂದಾ ಶೆಟ್ಟಿ ಮತ್ತು ಕುಟುಂಬದವರು ಜೊತೆಯಲ್ಲಿದ್ದರು. ಜೀವನದಲ್ಲಿ ಏನೇ ಅಡೆತಡೆಗಳಿದ್ದರೂ ಅದನ್ನು ನಿವಾರಣೆ ಮಾಡಿಕೊಡಿ ಎಂದು ದೈವದ ಮುಂದೆ ಶಿಲ್ಪಾ ಶೆಟ್ಟಿ ಪ್ರಾರ್ಥನೆ ಮಾಡಿದರು.

Tap to resize

ಮೂಲತಃ ಮಂಗಳೂರಿನವರಾಗಿರುವುದರಿಂದ ನಟಿ ಶಿಲ್ಪಾ ಕುಟುಂಬದ ಕಾರ್ಯಕ್ರಮಗಳು, ಭೂತಾರಾದನೆ, ದೈವ ದೇವರುಗಳ ಆರಾಧನೆ, ಆಗಾಗ ಬರುತ್ತಿರುತ್ತಾರೆ. ಈ ಸಲುವೂ ದೈವಾರಾಧನೆಗೆ ಬಂದಿದ್ದಾರೆ. ಇನ್ನು ಮಂಗಳೂರಿಗೆ ಬಂದರೆಂದರೆ ಕಟೀಲು ದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯುತ್ತಾರೆ.

ಕಳೆದ 2023ರ ಎಪ್ರಿಲ್‌ನಲ್ಲಿ ಪತಿ ರಾಜ್‌ ಕುಂದ್ರ, ಮಕ್ಕಳಾ ವಿಯಾನ್ ಮತ್ತು ಸಮಿಷಾ, ಸಹೋದರಿ ನಟಿ ಶಮಿತಾ ಶೆಟ್ಟಿ, ತಾಯಿ ಸುನಂದಾ ಶೆಟ್ಟಿ ಹಾಗೂ ಕುಟುಂಬದ ಸದಸ್ಯರ ಜೊತೆಗೆ ದೇವರ ದರ್ಶನ ಪಡೆದಿದ್ದರು.

ತಮಗೆ ಹೆಣ್ಣು ಮಗು ಬೇಕು. ಹೆಣ್ಣು ಮಗು ಜನಿಸಿದರೆ ಕಟೀಲು ದುರ್ಗಾ ಪರಮೇಶ್ವರಿಗೆ ಸೀರೆಯನ್ನು ಕಾಣಿಕೆ ರೂಪದಲ್ಲಿ ನೀಡುವುದಾಗಿ ಶಿಲ್ಪಾ ಶೆಟ್ಟಿ ಹರಕೆ ಹೊತ್ತಿದ್ದರಂತೆ. ಅದೇ ರೀತಿ ಅಂದು  ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ, ತಮ್ಮ ಹರಕೆಯನ್ನು ತೀರಿಸಿದ್ದರು. ಶಿಲ್ಪಾ ಶೆಟ್ಟಿ ಮತ್ತು ಪತಿ ರಾಜ್ ಕುಂದ್ರಾ ಬಾಡಿಗೆ ತಾಯ್ತನದ ಮೂಲಕ ತಮ್ಮ ಮಗಳು ಸಮೀಶಾಳನ್ನು ಪಡೆದಿದ್ದಾರೆ.

ಈ ವರ್ಷ ಮತ್ತೆ ಮಂಗಳೂರಿಗೆ ಬಂದ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಭೂತಾರಾದನೆಯಲ್ಲಿ ಪಾಲ್ಗೊಂಡು ಕಾರಣಿಕ ದೈವದ ಆಶೀರ್ವಾದ ಪಡೆದಿದ್ದಾರೆ. ಈ ಬಾರಿ ಪತಿ ರಾಜ್ ಕುಂದ್ರಾ ಬಂದಿರಲಿಲ್ಲ.

ಸುರತ್ಕಲ್ ಸಮೀಪದ ಅತ್ಯಂತ ಪ್ರಸಿದ್ಧ ಶಿಬರೂರು ಕೊಡಮಣಿತ್ತಾಯ ದೈವಸ್ಥಾನ ಅತ್ಯಂತ ಕಾರಣಿಕ ಕ್ಷೇತ್ರ. ಶಿಬರೂರುಗುತ್ತು ತಿಮತ್ತಿಕರಿಯಾಲ್ ರವರ ಭಕ್ತಿಗೆ ಒಲಿದ ಉಳ್ಳಾಯ ಮತ್ತು ಕೊಡಮಣಿತ್ತಾಯ ದೈವಗಳು ಕೋಳಿ ಮತ್ತು ಹೋರಿ ಮೂಲಕ ಶಿಬರೂರಿಗೆ ಬಂದು ನೆಲೆ ನಿಂತಿದೆ ಎಂಬ ಪ್ರತೀತಿ ಇದೆ.

ನಂದಿನಿ ನದಿಯ ತಟದಲ್ಲಿ ನೆಲೆ ನಿಂತಿರುವ ಊಳ್ಳಾಯ ಮತ್ತು ಕೊಡ ಮಣಿತ್ತಾಯ ದೈವಗಳು, ಭಕ್ತರಿಂದ ಕಾಲ ಕಾಲಕ್ಕೆ ಸೇವೆಗಳನ್ನು ಪಡೆದು ತಮ್ಮ ಕಾರಣಿಕವನ್ನು ತೋರಿಸುತ್ತಿದೆ.

ಶ್ರೀಕ್ಷೇತ್ರ ಕಟೀಲಿಗೂ ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರಕ್ಕೂ ಅಭೇದ್ಯ ಸಂಬಂಧವಿದೆ. ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರೆಯ ಸಂದರ್ಭ ಶ್ರೀ ಕೊಡಮಣಿತ್ತಾಯ ದೈವವು ಶ್ರೀ ಕಟೀಲಿಗೆ ಭೇಟಿ ನೀಡುವ ಕ್ರಮ ಈಗಲೂ ಮುಂದುವರಿದಿದೆ.

ಶಿಬರೂರು ದೈವಸ್ಥಾನದ ಎದುರಿಗಿರುವ ಬಾವಿಯಲ್ಲಿರುವ ಕಲ್ಲೊಂದು ಇದು ವಿಷವನ್ನು ಹೀರುವ ಗುಣವನ್ನು ಪಡೆದಿದೆ ಎಂಬ ನಂಬಿಗೆ ಇಂದಿಗೂ ಮುಂದುವರಿದಿದೆ. ಹೀಗಾಗಿ ವಿಷಜಂತು ಕಚ್ಚಿದರೆ ಕ್ಷೇತ್ರದ ಮಣ್ಣು ಮತ್ತು ಇಲ್ಲಿನ ತೀರ್ಥ ಕುಡಿದರೆ ಸಮಸ್ಯೆ ಪರಿಹಾರವಾಗುತ್ತದೆ ಎಂಬ ನಂಬಿಕೆ ಇಂದಿಗೂ ಇದೆ.

ಫೋಟೋ ಕೃಪೆ: ಅತುಲ್ ಎಸ್‌ಕೆ (ಅತುಲ್ ಕ್ಯಾಪ್ಚರ್‌)

ಹೀಗಾಗಿ ಇಂದು ಕೂಡ ಇಲ್ಲಿನ ತೀರ್ಥ ಮತ್ತು ಮಣ್ಣನ್ನು ಭಕ್ತರು ತಮ್ಮ ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ. ಇಲ್ಲಿನ ಈ ತೀರ್ಥದ ಬಾವಿಯಿಂದ ಕೊಡಪಾನ (ಬಿಂದಿಗೆ) ಅಥವಾ ಪಂಪು ಮೂಲಕ ನೀರನ್ನು ಎತ್ತುವಂತಿಲ್ಲ. ಬದಲಾಗಿ ಏತದ ಮೂಲಕವೇ ನೀರನ್ನು ಎತ್ತುದು ವಿಶೇಷವಾಗಿದೆ.

Latest Videos

click me!