Yash-Ramayana: ರಾಮಾಯಣ ಸಿನಿಮಾದಿಂದ ನನಗೆ ಹಿಂದಿ ಕಲಿಯುವ ಅದ್ಭುತ ಅವಕಾಶ ಸಿಕ್ಕಿತು: ರಾಕಿಂಗ್ ಸ್ಟಾರ್ ಯಶ್

Published : Jul 19, 2026, 01:28 PM IST

ರಾಮಾಯಣ ಸಿನಿಮಾದಲ್ಲಿ ರಾವಣನಾಗಿ ಕಾಣಿಸಿಕೊಂಡಿರುವ ಯಶ್, ವೇದಿಕೆಯ ಮೇಲೆ ನಿಂತು ಅಚ್ಚುಕಟ್ಟಾದ ಹಿಂದಿಯಲ್ಲಿ ಮಾತನಾಡಿದ ಅವರು, "ನಮಸ್ಕಾರ, ಇಲ್ಲಿ ಎಲ್ಲರೂ ಹಿಂದಿಯಲ್ಲಿ ಮಾತನಾಡುತ್ತಿದ್ದಾರೆ, ಹಾಗಾಗಿ ನಾನೂ ಕೂಡ ಪ್ರಯತ್ನ ಪಡುತ್ತೇನೆ" ಎಂದರು.

PREV
15

ದೆಹಲಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ದರ್ಬಾರ್: ‘ರಾಮಾಯಣ’ದ ಮೂಲಕ ವಿಶ್ವವನ್ನೇ ಗೆಲ್ಲಲು ಹೊರಟ ರಾಕಿ ಭಾಯ್ ಅಬ್ಬರ!

ಬಾಕ್ಸ್ ಆಫೀಸ್ ಸುಲ್ತಾನ್, ಕನ್ನಡಿಗರ ಹೆಮ್ಮೆಯ 'ರಾಕಿಂಗ್ ಸ್ಟಾರ್' ಯಶ್ (Yash) ಈಗ ಕೇವಲ ಸ್ಯಾಂಡಲ್‌ವುಡ್ ಅಥವಾ ಪ್ಯಾನ್ ಇಂಡಿಯಾ ಸ್ಟಾರ್ ಮಾತ್ರವಲ್ಲ, ಭಾರತೀಯ ಸಂಸ್ಕೃತಿಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯುವ 'ಜಾಗತಿಕ ರಾಯಭಾರಿ' ಆಗುತ್ತಿದ್ದಾರೆ. ದೆಹಲಿಯಲ್ಲಿ ನಡೆದ 'ರಾಮಾಯಣ' (Ramayana) ಸಿನಿಮಾದ ಭವ್ಯ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಯಶ್ ತಮ್ಮ ಮಾತಿನ ಮೂಲಕವೇ ಇಡೀ ದೇಶದ ಗಮನ ಸೆಳೆದಿದ್ದಾರೆ. ಇದು ಕೇವಲ ಒಂದು ಸಿನಿಮಾ ಅಲ್ಲ, ಇದು ಭಾರತದ ಅಸ್ಮಿತೆಯ 'ಪ್ರಥಮ ಸಂಕಲ್ಪ' ಎಂಬುದು ಯಶ್ ಅವರ ಮಾತಿನ ಧಾಟಿಯಲ್ಲಿ ಎದ್ದು ಕಾಣುತ್ತಿತ್ತು. ಜೊತೆಗೆ, ತಮ್ಮ ಮಾತೃಭಾಷೆ ಕನ್ನಡದಲ್ಲಿಯೇ ಮಾತು ಶುರುಮಾಡಿದ್ದು 'ಬೇರು ಮರೆಯದ' ಅವರ ಗುಣವನ್ನು ಎತ್ತಿ ತೋರಿಸುತ್ತಿತ್ತು.

25

ಹಿಂದಿಯಲ್ಲಿ ಮಾತಾಡಿ ಮನಗೆದ್ದ ಯಶ್!

ಸಿನಿಮಾದಲ್ಲಿ ರಾವಣನಾಗಿ ಕಾಣಿಸಿಕೊಳ್ಳಲಿರುವ ಯಶ್, ಈ ಸಿನಿಮಾ ತಮಗೆ ವೈಯಕ್ತಿಕವಾಗಿ ಎಷ್ಟು ಹತ್ತಿರ ಎಂಬ ಗುಟ್ಟನ್ನು ಬಿಟ್ಟುಕೊಟ್ಟರು. ವೇದಿಕೆಯ ಮೇಲೆ ನಿಂತು ಅಚ್ಚುಕಟ್ಟಾದ ಹಿಂದಿಯಲ್ಲಿ ಮಾತನಾಡಿದ ಅವರು, "ನಮಸ್ಕಾರ, ಇಲ್ಲಿ ಎಲ್ಲರೂ ಹಿಂದಿಯಲ್ಲಿ ಮಾತನಾಡುತ್ತಿದ್ದಾರೆ, ಹಾಗಾಗಿ ನಾನೂ ಕೂಡ ಪ್ರಯತ್ನ ಪಡುತ್ತೇನೆ" ಎನ್ನುತ್ತಾ ಅಭಿಮಾನಿಗಳ ಹೃದಯ ಗೆದ್ದರು. "ರಾಮಾಯಣ ಸಿನಿಮಾದಲ್ಲಿ ನಟಿಸುವುದು ಒಂದು ವೃತ್ತಿಪರ ಕೆಲಸ ಮಾತ್ರವಲ್ಲ, ಇದು ನನ್ನ ಜೀವನದ ಮರೆಯಲಾಗದ ಪಯಣ. ನನಗೆ ಈ ಪಾತ್ರ ನೀಡಿದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರಿಗೆ ನಾನು ಚಿರಋಣಿ. ಈ ಸಿನಿಮಾದ ನೆಪದಲ್ಲಿ ನನಗೆ ಹಿಂದಿ ಕಲಿಯುವ ಅದ್ಭುತ ಅವಕಾಶ ಸಿಕ್ಕಿತು" ಎಂದು ಸಂಭ್ರಮದಿಂದ ನುಡಿದರು. ಸಾಧ್ಯವಾದಷ್ಟೂ ಹಿಂದಿಯಲ್ಲಿ ಮಾತನ್ನಾಡಿ ಗಮನಸೆಳೆದರು.

35

ವಿಶ್ವದ ವೇದಿಕೆಯಲ್ಲಿ ಶ್ರೀರಾಮನ ವೈಭವ

"ಇದು ಕೇವಲ ನಮ್ಮ ಸಿನಿಮಾ ಅಲ್ಲ, ಇದು ಭಾರತದ ಕನಸು" ಎಂದ ಯಶ್, ರಾಮಾಯಣವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶವನ್ನು ವಿವರಿಸಿದರು. "ನಾವೆಲ್ಲರೂ ಒಂದೇ ದೃಢ ನಿಶ್ಚಯದೊಂದಿಗೆ ಒಂದಾಗಿದ್ದೇವೆ. ನಮ್ಮ ದೇಶದ ಶ್ರೇಷ್ಠ ಇತಿಹಾಸ ಮತ್ತು ಪ್ರಭು ಶ್ರೀರಾಮನ ಕಥೆಯನ್ನು ವಿಶ್ವದ ಮೂಲೆ ಮೂಲೆಗೂ ತಲುಪಿಸುವುದು ನಮ್ಮ ಗುರಿ. ಈ ಮಹತ್ಕಾರ್ಯಕ್ಕಾಗಿ ನಾವೆಲ್ಲರೂ ನಮ್ಮ ವೈಯಕ್ತಿಕ ಆಸೆಗಳನ್ನು ಬದಿಗಿಟ್ಟು ಕೆಲಸ ಮಾಡುತ್ತಿದ್ದೇವೆ" ಎಂದು ಹೇಳುವಾಗ ಅವರ ಕಣ್ಣಿನಲ್ಲಿ ಒಂದು ವಿಶಿಷ್ಟ ಹೊಳಪಿತ್ತು. ನಿರ್ದೇಶಕ ನಿತೇಶ್ ತಿವಾರಿ ಅವರ ಮಾರ್ಗದರ್ಶನಕ್ಕೆ ಯಶ್ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು.

45

ಸಹನಟರ ಬಗ್ಗೆ ಮೆಚ್ಚುಗೆಯ ಸುರಿಮಳೆ

ಇನ್ನು ಸಹನಟರ ಬಗ್ಗೆ ಮಾತನಾಡುವಾಗ ಯಶ್ ಅವರ ದೊಡ್ಡಗುಣ ಎದ್ದು ಕಾಣುತ್ತಿತ್ತು. ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಅವರನ್ನು ಶ್ಲಾಘಿಸಿದ ಯಶ್, "ರಣಬೀರ್, ನೀವು ಅದ್ಭುತ! ಈ ಪಾತ್ರಕ್ಕಾಗಿ ನೀವು ನಿಮ್ಮನ್ನು ಅರ್ಪಿಸಿಕೊಂಡ ರೀತಿ ಮತ್ತು ನೀವು ಸೃಷ್ಟಿಸಿರುವ ಮ್ಯಾಜಿಕ್ ಅನ್ನು ಇಡೀ ಭಾರತ ಸಂಭ್ರಮಿಸಲಿದೆ" ಎಂದರು. ಹಾಗೆಯೇ ಸಾಯಿ ಪಲ್ಲವಿ ಅವರ ಬಗ್ಗೆ ಮಾತನಾಡುತ್ತಾ, "ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ಅವರ ಅಭಿನಯ ನೋಡೋದೆ ಒಂದು ಹಬ್ಬ. ಅವರ ಕಣ್ಣುಗಳೇ ಎಲ್ಲವನ್ನೂ ಹೇಳುತ್ತವೆ" ಎಂದು ಬಣ್ಣಿಸಿದರು. ಶೂರ್ಪನಖಿಯಾಗಿ ರಾಕುಲ್ ಪ್ರೀತ್ ಸಿಂಗ್ ಹಾಗೂ ಹಿರಿಯ ನಟಿ ಶೋಭನಾ ಅವರ ಪಾತ್ರಗಳೂ ಈ ಸಿನಿಮಾದ ತೂಕವನ್ನು ಹೆಚ್ಚಿಸಿವೆ ಎಂದು ಯಶ್ ಸ್ಮರಿಸಿದರು. ಲಕ್ಷ್ಮಣ ಪಾತ್ರಧಾರಿ ಹಾಗೂ ಇಡೀ ತಾರಾಗಣವನ್ನು ಮೆಚ್ಚಿ ಮಾತನ್ನಾಡಿದರು.

55

ನಕ್ಷತ್ರ ಪುಂಜಗಳ ಸಮಾಗಮ

ದೆಹಲಿಯ ಈ ಕಾರ್ಯಕ್ರಮದಲ್ಲಿ ತಾರೆಯರ ದಂಡೇ ನೆರೆದಿತ್ತು. ರಣಬೀರ್ ಕಪೂರ್, ಸಾಯಿ ಪಲ್ಲವಿ, ರವಿ ದುಬೆ, ವಿವೇಕ್ ಒಬೆರಾಯ್, ಅರುಣ್ ಗೋವಿಲ್, ಅಜಿಂಕ್ಯಾ ದೇವ್ ಸೇರಿದಂತೆ ಘಟಾನುಘಟಿ ಕಲಾವಿದರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಖ್ಯಾತ ಕವಿ ಕುಮಾರ್ ವಿಶ್ವಾಸ್ ಅವರು ಕಾರ್ಯಕ್ರಮವನ್ನು ಅದ್ಭುತವಾಗಿ ನಿರೂಪಿಸಿದ್ದು ವಿಶೇಷವಾಗಿತ್ತು. ಒಟ್ಟಿನಲ್ಲಿ, ಯಶ್ ಅವರ ಈ 'ರಾಮಾಯಣ' ಸಿನಿಮಾ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಒಂದು ಮೈಲಿಗಲ್ಲಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ರಾಕಿಂಗ್ ಸ್ಟಾರ್ ಈಗ ಇಡೀ ವಿಶ್ವಕ್ಕೆ ಭಾರತದ ಸಂಸ್ಕೃತಿಯ ತಾಕತ್ತು ತೋರಿಸಲು ಸಜ್ಜಾಗಿದ್ದಾರೆ. ಇಡೀ ಕನ್ನಡನಾಡು ನಟ ಯಶ್ ಅವರ ಮೇಲೆ ಬೆಟ್ಟದಷ್ಟು ನಿರೀಕ್ಷೆಯ ಕನಸುಗಳನ್ನು ಇಟ್ಟುಕೊಂಡು ಅದು ನನಸಾಗಲು ಕಾದು ಕುಳಿತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories