
ಒಂದು ಕಾಲದಲ್ಲಿ ಶಾರುಖ್ ಖಾನ್ (Shah rukh Khan) ಮತ್ತು ಐಶ್ವರ್ಯ ರೈ ಜೋಡಿ ಸಕತ್ ಸದ್ದು ಮಾಡಿತ್ತು. ಇವರಿಬ್ಬರ ಕೆಮೆಸ್ಟ್ರಿಯಲ್ಲಿ ವೀಕ್ಷಕರು ಮೆಚ್ಚಿಕೊಂಡಿದ್ದರು. ಶಾರುಖ್ ಖಾನ್ ಮತ್ತು ಐಶ್ವರ್ಯ ರೈ, 'ಜೋಶ್', ’ದೇವದಾಸ್’ ಹಾಗೂ ’ಮೊಹಬ್ಬತೆ’ ನಂತಹ ಬ್ಲಾಕ್ಬಸ್ಟರ್ ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ಆದರೆ ಇದಾದ ಬಳಿಕ ಇಬ್ಬರೂ ಒಟ್ಟಿಗೆ ಹಲವು ವರ್ಷ ನಟಿಸಿಯೇ ಇಲ್ಲ. ಐದು ಚಿತ್ರಗಳಲ್ಲಿ ಶಾರುಖ್ ಮತ್ತು ಐಶ್ವರ್ಯ ರೈ ಜೋಡಿಯಾಗಿ ನಟಿಸುವ ಅವಕಾಶವಿದ್ದರೂ, ಈ ಚಿತ್ರಕ್ಕೆ ನಟಿ ಓಕೆ ಎಂದಿದ್ದರೂ ಶಾರುಖ್ ಮಾತ್ರ ಐಶ್ವರ್ಯರನ್ನು ರಿಜೆಕ್ಟ್ ಮಾಡಿಬಿಟ್ಟಿದ್ದರು!
ಈ ಕುರಿತು ಖುದ್ದು ನಟಿ ಐಶ್ವರ್ಯ ರೈ ಹಿಂದೊಮ್ಮೆ , ಸಂದರ್ಶನದಲ್ಲಿ ಹೇಳಿದ್ದರು. ಶಾರುಖ್ ಖಾನ್ ವಿಚಿತ್ರ ಸನ್ನಿವೇಶಗಳಲ್ಲಿ ನನ್ನ ಜೊತೆ ನಟಿಸೋಕೆ ಒಪ್ಪಲಿಲ್ಲ. ಈ ಬಗ್ಗೆ ನನಗೂ ವಿಚಿತ್ರ ಎನಿಸುತ್ತಿದ್ದು, ಕಾರಣ ಗೊತ್ತಿಲ್ಲ ಎಂದಿದ್ದರು ನಟಿ.
ಅಷ್ಟಕ್ಕೂ, ಐಶ್ವರ್ಯಾ ಹಾಗೂ ಶಾರುಖ್ ಇಬ್ಬರೂ ಬಹಳ ಹಿಂದಿನಿಂದಲೂ ಆತ್ಮೀಯ ಸ್ನೇಹಿತರು. ತಮ್ಮ ಸ್ನೇಹದ ಕುರಿತಾಗಿ ಮಾತನಾಡಿದ್ದ ಶಾರುಖ್, ’ಈ ಮೊದಲು ನಾವು ಸಿನಿಮಾ ಸೆಟ್‌ನಲ್ಲಿ ಸಿಗುತ್ತಿದ್ದೆವು. ಆದರೀಗ ಮಕ್ಕಳ ಶಾಲೆಯ ಹೊರಗೆ ಭೇಟಿಯಾಗುತ್ತಿದ್ದೇವೆ’ ಎಂದಿದ್ದರು. ಇವರಿಬ್ಬರ ಮಕ್ಕಳು ಒಂದೇ ಶಾಲೆಯಲ್ಲಿ ಶಿಕ್ಷಣ ಪಡೆದವರು. ಆದರೆ ಕೊನೆಗೆ ಶಾರುಖ್ಗೆ ಅದೇನಾಯಿತೋ ಗೊತ್ತಿಲ್ಲ. ಐಶ್ವರ್ಯ ರೈ ಜೊತೆ ನಟಿಸಲು ಹಿಂದೇಟು ಹಾಕಿದ್ದರು.
ಅಷ್ಟಕ್ಕೂ ಈ ಮೊದಲು ಉಲ್ಲೇಖ ಮಾಡಿದ ಚಿತ್ರಗಳಲ್ಲಿ ಈ ಜೋಡಿ ಒಟ್ಟಾಗಿ ನಟಿಸಿದ್ದರೂ, ಇಬ್ಬರಿಗೂ ರೊಮಾನ್ಸ್ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಈ ದುಃಖವನ್ನು ಶಾರುಖ್ ಅವರು ಕೆಲ ವರ್ಷಗಳ ಹಿಂದೆ ’ಲಕ್ಸ್ ಗೋಲ್ಡನ್ ರೋಜ್ ಅವಾರ್ಡ್ಸ್’ ವೇದಿಕೆ ಮೇಲೆ ಬಹಿರಂಗವಾಗಿ ಹೇಳಿಕೊಂಡಿದ್ದರು. ’ಮೊದಲ ಸಿನಿಮಾ ’ಜೋಶ್’ನಲ್ಲಿ ಐಶ್ವರ್ಯಾ ತಂಗಿಯ ಪಾತ್ರ ಮಾಡಿದ್ದರು. ಎರಡನೇ ಸಿನಿಮಾ ’ದೇವದಾಸ್’ ಸಿನಿಮಾದಲ್ಲಿ ಐಶ್ವರ್ಯ ನನ್ನನ್ನು ಬಿಟ್ಟು ಹೋಗುತ್ತಾರೆ ಹಾಗೂ ಮೂರನೇ ಸಿನಿಮಾ ’ಮೊಹಬ್ಬತೆಂ’ಯಲ್ಲಿ ದೆವ್ವದ ಪಾತ್ರ ಮಾಡಿದ್ದರು. ಆದರೆ ಆಕೆಯೊಂದಿಗೆ ನನಗೆ ಆನ್‌ಸ್ಕ್ರೀನ್‌ನಲ್ಲಿ ರೊಮಾನ್ಸ್ ಮಾಡುವ ಅವಕಾಶ ಮಾತ್ರ ಸಿಗಲಿಲ್ಲ. ಈ ವಿಚಾರವಾಗಿ ನನಗೆ ಬಹಳ ಬೇಸರ ಇದೆ' ಎಂದು ಕೂಡ ಶಾರುಖ್ ಹೇಳಿದ್ದರು.
ಐಶ್ವರ್ಯಾ ರೈ ‘‘ಚಲ್ತೆ ಚಲ್ತೆ ’’ಸಿನಿಮಾಗೆ ಮೊದಲು ಆಯ್ಕೆಯಾಗಿದ್ರು. ಆದರೆ ಇವರ ಬದಲಿಗೆ ರಾಣಿ ಮುಖರ್ಜಿ ಅವರನ್ನು ಹಾಕಿಕೊಳ್ಳಲಾಯಿತು. ಐಶ್ವರ್ಯ ರೈ ಸಲ್ಮಾನ್ ಖಾನ್ ಅವರಿಗೆ ಕೈಕೊಟ್ಟಿದ್ದ ಹಿನ್ನೆಲೆಯಲ್ಲಿ ಅವರ ಮಾತು ಕೇಳಿ ಶಾರುಖ್ ಹೀಗೆ ಮಾಡಿದ್ದರು ಎನ್ನಲಾಗಿತ್ತು. ನಂತರ ವೀರ್ ಝಾ ಚಿತ್ರದಿಂದಲೂ ನಟಿಯನ್ನು ಹೊರಕ್ಕೆ ಇಡಲಾಯಿತು. ಹೀಗೆ ಒಂದಾದ ಮೇಲೊಂದರಂತೆ ಐದು ಸಿನಿಮಾಗಳಿಂದ ಐಶ್ವರ್ಯಾ ಅವರನ್ನು ದೂರ ಉಳಿಸಿಕೊಂಡಿದ್ದರು ಶಾರುಖ್.
ಆದರೆ, ಇದರ ನಡುವೆಯೇ, ಶಾರುಖ್ ಖಾನ್ ತಾವು ಐಶ್ವರ್ಯ ರೈ ಅವರನ್ನು ರಿಜೆಕ್ಟ್ ಮಾಡಿರುವ ಕಾರಣ ನೀಡಿದ್ದು, ನಟಿಯ ಕ್ಷಮೆ ಕೋರಿದ್ದಾರೆ. ಇದಕ್ಕೆ ಕಾರಣ ಸಲ್ಮಾನ್ ಖಾನ್ ಎನ್ನುವ ವಿಷಯ ಕೂಡ ರಿವೀಲ್ ಆಗಿದೆ. ಐಶ್ವರ್ಯಾ ಅವರನ್ನು ಹುಚ್ಚನಂತೆ ಪ್ರೀತಿಸುತ್ತಿದ್ದರು ಸಲ್ಮಾನ್. ಆಕೆ ಕೂಡ ಅದೇ ರೀತಿ ಪ್ರೀತಿಸುತ್ತಿದ್ದರು. ಆದರೆ, ಸಲ್ಮಾನ್ ಖಾನ್ ಶೂಟಿಂಗ್ ಸೆಟ್‌ನಲ್ಲಿ ಗದ್ದಲ ಸೃಷ್ಟಿಸಿದ್ದ ಕಾರಣ ಐಶ್ವರ್ಯ ರೈ ಅವರನ್ನು ಚಿತ್ರದಿಂದ ಕೈ ಬಿಟ್ಟು, ರಾಣಿ ಮುಖರ್ಜಿ ಅವರನ್ನು ಆ ಸ್ಥಾನಕ್ಕೆ ಕರೆತರಲಾಗಿತ್ತು ಎಂದಿರುವ ಶಾರುಖ್, "ಐಶ್ವರ್ಯ ನನ್ನ ಆಪ್ತ ಸ್ನೇಹಿತೆಯಾಗಿದ್ದಳು. ಆದರೆ, ಚಲ್ತೆ ಚಲ್ತೆ ಸಿನಿಮಾದಲ್ಲಿ ನಡೆದ ಘಟನೆ ನನ್ನನ್ನು ಅಸಹಾಯಕನನ್ನಾಗಿ ಮಾಡಿತ್ತು. ಆಕೆಯ ಜೊತೆ ನಟಿಸುವುದು ಕಷ್ಟವಾಗಿತ್ತು. ನಾನು ಐಶ್ವರ್ಯ ರೈ ಅವರ ಬಳಿ ಎಷ್ಟೇ ಕ್ಷಮೆಯಾಚಿಸಿದರೂ ಸಾಕಾಗುವುದಿಲ್ಲ" ಎಂದು ಇದೀಗ ಹೇಳಿದ್ದಾರೆ.
"ಒಬ್ಬ ನಿರ್ಮಾಪಕನಾಗಿ, ನಾನು ಸಂಪೂರ್ಣವಾಗಿ ಅಸಹಾಯಕನಾಗಿದ್ದೆ. ಏಕೆಂದರೆ ನಾನು ಒಬ್ಬನೇ ನಿರ್ಮಾಪಕನಲ್ಲ. ನನಗೊಂದು ತಂಡವಿದೆ. ಆದ್ದರಿಂದ ಇದು ಎಲ್ಲರ ನಿರ್ಧಾರವಾಗಿತ್ತು. ನಿರ್ಮಾಪಕರಾಗಿ ನಾವು ಉತ್ತಮ ಸ್ಥಾನದಲ್ಲಿ ಇರಲಿಲ್ಲ. ಅದೇ ಅಪಾಯದಲ್ಲಿತ್ತು. ಕಂಪನಿಯ ಸಂಪೂರ್ಣ ಖ್ಯಾತಿ ಅಪಾಯದಲ್ಲಿತ್ತು ಮತ್ತು ನಾವು ಮೂರರಿಂದ ನಾಲ್ಕು ತಿಂಗಳಲ್ಲಿ ಚಿತ್ರವನ್ನು ಪೂರ್ಣಗೊಳಿಸಲು ಬಯಸಿದ್ದೆವು ಎಂದಿದ್ದಾರೆ.
ವೈಯಕ್ತಿಕವಾಗಿ ಹೇಳುವುದಾದರೆ, ಐಶ್ವರ್ಯಾ ತುಂಬಾ ವೃತ್ತಿಪರರು. ಆದರೆ ಅನಿವಾರ್ಯವಾಗಿ ಆಕೆಯನ್ನು ಹೊರಕ್ಕೆ ಇಡಬೇಕಾಯಿತು. ಅಂದು ಆಗಬಾರದ್ದು ಆಗಿಹೋಯಿತು. ಈ ದುಃಖ ಇಂದಿಗೂ ನನ್ನನ್ನು ಕಾಡುತ್ತಿದೆ. ಐಶ್ವರ್ಯಗೆ ಈ ಮೂಲಕ ಕ್ಷಮೆ ಕೋರುತ್ತೇನೆ ಎಂದಿದ್ದಾರೆ ಶಾರುಖ್ ಖಾನ್.