ರಷ್ಯಾದಿಂದ ಭಾರತದ ಕಚ್ಚಾ ತೈಲ ಆಮದು ಪ್ರಮಾಣವು 38 ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಡಿಸೆಂಬರ್ 2025ರ ವರದಿಗಳ ಪ್ರಕಾರ, ರಷ್ಯಾದ ತೈಲದ ಪಾಲು ಗಣನೀಯವಾಗಿ ಕಡಿಮೆಯಾಗಿದ್ದು, ಅಮೆರಿಕದಿಂದ ಆಮದು ಹೆಚ್ಚಾಗಿದೆ. ಇದು ಭಾರತ ತನ್ನ ಇಂಧನ ಮೂಲಗಳನ್ನು ವೈವಿಧ್ಯಗೊಳಿಸುತ್ತಿರುವ ಸ್ಪಷ್ಟ ಸೂಚನೆಯಾಗಿದೆ.
ಭಾರತವು ಯಾವುದೇ ಪೂರೈಕೆದಾರರಿಂದ ಕಚ್ಚಾ ತೈಲವನ್ನು ಖರೀದಿಸಲು ಮುಕ್ತವಾಗಿದೆ ಎಂದ ರಷ್ಯಾ
ಕೆಲ ದಿನಗಳ ಹಿಂದಷ್ಟೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ರಷ್ಯಾದಿಂದ ತೈಲ ಖರೀದಿ ನಿಲ್ಲಿಸಲಿದೆ ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರಷ್ಯಾವೂ ಭಾರತವು ಯಾವುದೇ ಪೂರೈಕೆದಾರರಿಂದ ಕಚ್ಚಾ ತೈಲವನ್ನು ಖರೀದಿಸಲು ಮುಕ್ತವಾಗಿದೆ ಮತ್ತು ಇಂಧನ ಆಮದುಗಳನ್ನು ವೈವಿಧ್ಯಗೊಳಿಸುವ ಅದರ ಪ್ರಯತ್ನಗಳು ಹೊಸದಲ್ಲ ಎಂದು ಹೇಳುವ ಮೂಲಕ ನವದೆಹಲಿ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸಲು ಒಪ್ಪಿಕೊಂಡಿದೆ ಎಂಬ ಹೇಳಿಕೆಯನ್ನು ತಿರಸ್ಕರಿಸಿತು.
26
ಭಾರತದ ನಿಲುವಿನಲ್ಲಿ ರಷ್ಯಾಕ್ಕೆ ಯಾವುದೇ ವಿಶೇಷತೆ ಕಾಣಿಸುತ್ತಿಲ್ಲ
ಪ್ರಧಾನಿ ನರೇಂದ್ರ ಮೋದಿ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸಿ ಅಮೆರಿಕ ಮತ್ತು ಬಹುಶಃ ವೆನೆಜುವೆಲಾದಿಂದ ಕಚ್ಚಾ ತೈಲ ಖರೀದಿಗೆ ಬದಲಾಯಿಸಲು ಒಪ್ಪಿಕೊಂಡಿದ್ದಾರೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯಿಸಿದ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್, ಭಾರತದ ನಿಲುವಿನಲ್ಲಿ ರಷ್ಯಾಕ್ಕೆ ಯಾವುದೇ ವಿಶೇಷತೆ ಕಾಣಿಸುತ್ತಿಲ್ಲ, ಭಾರತಕ್ಕೆ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಏಕೈಕ ಪೂರೈಕೆದಾರ ರಷ್ಯಾ ಅಲ್ಲ ಎಂದು ನಮಗೆ ಮತ್ತು ಇತರ ಎಲ್ಲಾ ಅಂತರರಾಷ್ಟ್ರೀಯ ಇಂಧನ ತಜ್ಞರಿಗೆ ಚೆನ್ನಾಗಿ ತಿಳಿದಿದೆ. ಭಾರತ ಯಾವಾಗಲೂ ಇತರ ದೇಶಗಳಿಂದ ಈ ಉತ್ಪನ್ನಗಳನ್ನು ಖರೀದಿಸುತ್ತದೆ. ಆದ್ದರಿಂದ, ನಾವು ಇಲ್ಲಿ ಹೊಸದೇನೂ ಕಾಣುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ರಷ್ಯಾದ ತೈಲ ಆಮದನ್ನು ನಿಲ್ಲಿಸುವ ಬಗ್ಗೆ ಭಾರತದಿಂದ ರಷ್ಯಾಕ್ಕೆ ಯಾವುದೇ ಅಧಿಕೃತ ಸಂವಹನ ಬಂದಿಲ್ಲ ಎಂದು ಪೆಸ್ಕೋವ್ ಹೇಳಿದ್ದರು.
36
ರಷ್ಯಾದಿಂದ ಭಾರತ ಆಮದು ಮಾಡಿಕೊಳ್ಳುತ್ತಿರುವ ಕಚ್ಚಾ ತೈಲದ ಆಮದು ಪ್ರಮಾಣದಲ್ಲಿ ಕುಸಿತ
ಆದರೆ ಈಗ 2025ರ ಡಿಸೆಂಬರ್‌ನಲ್ಲೇ ರಷ್ಯಾದಿಂದ ಭಾರತ ಆಮದು ಮಾಡಿಕೊಳ್ಳುತ್ತಿರುವ ಕಚ್ಚಾ ತೈಲದ ಆಮದು ಪ್ರಮಾಣವೂ 38 ತಿಂಗಳಲ್ಲೇ ಅತ್ಯಂತ ಕನಿಷ್ಟವಾಗಿತ್ತು ಎಂದು ವರದಿಯಾಗಿದೆ. ರಷ್ಯಾದ ತೈಲವು ಭಾರತದ ಆಮದಿನ ಕಾಲು ಭಾಗಕ್ಕಿಂತ ಕಡಿಮೆಯಿದ್ದು, ಇದು ಕೇವಲ ಒಂದು ತಿಂಗಳ ಹಿಂದೆ 34% ರಷ್ಟಿತ್ತು ಎಂದು ಇತ್ತೀಚಿನ ದಾಖಲೆಗಳ ವಿಶ್ಲೇಷಣೆ ತೋರಿಸುತ್ತದೆ. ಹಾಗೆಯೇ ಡಿಸೆಂಬರ್ 2024 ಕ್ಕೆ ಹೋಲಿಸಿದರೆ US ನಿಂದ ಆಮದು ಸುಮಾರು 31% ರಷ್ಟು ಹೆಚ್ಚಾಗಿದೆ.
ಭಾರತದ ಆಮದಿನ ಮೇಲಿನ ಸುಂಕವನ್ನು ಅಮೆರಿಕ 50% ದಿಂದ 18% ಕ್ಕೆ ಇಳಿಸುವುದಕ್ಕೆ ಪ್ರತಿಯಾಗಿ ಭಾರತವು ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ತಂಡ ಕಳೆದ ವಾರ ಪದೇ ಪದೇ ಹೇಳಿಕೊಂಡಿತ್ತು ಅದೇ ಸಮಯದಲ್ಲಿ ಈ ಮಾಹಿತಿ ಬಂದಿದೆ. ಇದಕ್ಕೆ ಪ್ರತಿಯಾಗಿ ಕೇಂದ್ರ ವ್ಯಾಪಾರ ಸಚಿವ ಪಿಯೂಷ್ ಗೋಯಲ್ ಬುಧವಾರ ಮಾತನಾಡುತ್ತಾ, ಬದಲಾಗುತ್ತಿರುವ ಜಾಗತಿಕ ಪರಿಸ್ಥಿತಿಯ ನಡುವೆ ಭಾರತವು ತನ್ನ ಇಂಧನ ಮೂಲಗಳನ್ನು ವೈವಿಧ್ಯಗೊಳಿಸಲಿದೆ ಮತ್ತು ತನ್ನ ನಾಗರಿಕರಿಗೆ ಇಂಧನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲಿದೆ ಎಂದು ಹೇಳಿದ್ದರು.
ವ್ಯಾಪಾರ ಒಪ್ಪಂದದ ಕುರಿತು ಸಂಸತ್ತಿಗೆ ನೀಡಿದ ಮೊದಲ ಹೇಳಿಕೆಯಲ್ಲಿ, ಗೋಯಲ್ ಯಾವುದೇ ದೇಶದಿಂದ ಇಂಧನ ಖರೀದಿಗಳನ್ನು ಬೇರೆಡೆಗೆ ಬದಲಾಯಿಸುವ ಬಗ್ಗೆ ಉಲ್ಲೇಖಿಸಿಲ್ಲ. ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುವಂತೆ ಭಾರತೀಯ ಸಂಸ್ಕರಣಾಗಾರಗಳಿಗೆ ಸರ್ಕಾರ ಹೇಳಿಲ್ಲ ಮತ್ತು ಈಗಾಗಲೇ ಪ್ರಕ್ರಿಯೆಯಲ್ಲಿರುವ ಖರೀದಿಗಳನ್ನು ಪೂರ್ಣಗೊಳಿಸಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ವರದಿಯಾಗಿದೆ. ಅಮೆರಿಕದ ಒಪ್ಪಂದದಲ್ಲಿ, ಭಾರತವು ಕೃಷಿ ಮತ್ತು ಹೈನುಗಾರಿಕೆಯಂತಹ ಸೂಕ್ಷ್ಮ ಕ್ಷೇತ್ರಗಳನ್ನು ಯಶಸ್ವಿಯಾಗಿ ರಕ್ಷಿಸಿದೆ ಎಂದು ಗೋಯಲ್ ಹೇಳಿದ್ದರು.
56
ರಷ್ಯಾದ ತೈಲ ಆಮದು ಪ್ರಮಾಣದಲ್ಲಿ ತೀವ್ರಕುಸಿತ
ಡಿಸೆಂಬರ್ 2025 ರಲ್ಲಿ $2.7 ಶತಕೋಟಿಯಷ್ಟಿದ್ದ ಭಾರತದ ರಷ್ಯಾದ ತೈಲ ಆಮದು, ಡಿಸೆಂಬರ್ 2024ರಲ್ಲಿ ಆಮದು ಮಾಡಿಕೊಂಡ ತೈಲದ ಪ್ರಮಾಣಕ್ಕಿಂತ 15% ಕಡಿಮೆಯಾಗಿದೆ ಮತ್ತು ನವೆಂಬರ್ 2025 ರಲ್ಲಿ ಆಮದು ಮಾಡಿಕೊಂಡ $3.7 ಶತಕೋಟಿ ಮೌಲ್ಯದ ಆಮದುಗಳಿಗಿಂತ 27.1% ರಷ್ಟು ಕಡಿಮೆಯಾಗಿದೆ. ಇದರ ಪರಿಣಾಮವಾಗಿ, ಭಾರತದ ಒಟ್ಟಾರೆ ತೈಲ ಆಮದುಗಳಲ್ಲಿ ರಷ್ಯಾದ ಪಾಲು ಡಿಸೆಂಬರ್ 2025 ರಲ್ಲಿ 24.9% ಕ್ಕೆ ಇಳಿದಿದೆ, ಇದು ಮೂರು ವರ್ಷಗಳಲ್ಲಿ ಅತ್ಯಂತ ಕಡಿಮೆ.
ತೈಲ ಆಮದು ಮಾಡಿಕೊಳ್ಳುವುದಕ್ಕೆ ಈಗ ಭಾರತಕ್ಕೆ ಹಲವು ಆಯ್ಕೆಗಳಿವೆ.
ಭಾರತವು ಡಿಸೆಂಬರ್ 2025 ರಲ್ಲಿ ಅಮೆರಿಕದಿಂದ $569.3 ಮಿಲಿಯನ್ ಮೌಲ್ಯದ ತೈಲವನ್ನು ಆಮದು ಮಾಡಿಕೊಂಡಿದೆ. ಇದು ನವೆಂಬರ್ 2025 ರಲ್ಲಿ ಆಮದು ಮಾಡಿಕೊಂಡ ಪ್ರಮಾಣಕ್ಕಿಂತ 60.5% ಕಡಿಮೆಯಿದ್ದರೂ, ನವೆಂಬರ್‌ನಲ್ಲಿ ಅಮೆರಿಕದಿಂದ ತೈಲ ಆಮದು ಏಳು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿದ್ದರಿಂದ ಹೀಗಾಗಿದೆ. ಡಿಸೆಂಬರ್ 2024ಕ್ಕೆ ಹೋಲಿಸಿದರೆ 2025ರಲ್ಲಿ ಅಮೆರಿಕದಿಂದ ತೈಲ ಆಮದು ಸುಮಾರು 31% ಹೆಚ್ಚಾಗಿದೆ. ಭಾರತವು ಡಿಸೆಂಬರ್ 2025 ರಲ್ಲಿ ಅಮೆರಿಕಾದಿಂದ 1.1 ಮಿಲಿಯನ್ ಟನ್ ಆಮದು ಮಾಡಿಕೊಂಡಿದ್ದು, ಇದು ಹಿಂದಿನ ವರ್ಷದ ಡಿಸೆಂಬರ್‌ಗೆ ಹೋಲಿಸಿದರೆ 58% ಹೆಚ್ಚಾಗಿದೆ. ಒಟ್ಟಾರೆಯಾಗಿ, ಡಿಸೆಂಬರ್ 2025 ರಲ್ಲಿ ಭಾರತವು ತನ್ನ ತೈಲ ಆಮದುಗಳಿಗೆ ಹಲವು ದೇಶಗಳನ್ನು ಅವಲಂಬಿಸಿದ್ದು, ತೈಲ ಆಮದು ಮಾಡಿಕೊಳ್ಳುವುದಕ್ಕೆ ಈಗ ಭಾರತಕ್ಕೆ ಹಲವು ಆಯ್ಕೆಗಳಿವೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.