ಖ್ಯಾತ ಫುಟ್ಬಾಲಿಗ ಕ್ರಿಸ್ಟಿಯಾನೋ ರೊನಾಲ್ಡೊ ಕೊರೋನಾ ವೈರಸ್ ವಿರುದ್ಧ ಸೆಣಸಲು ತಮ್ಮ ಹೋಟೆಲ್‌ಗಳನ್ನು ತಾತ್ಕಾಲಿಕ ಆಸ್ಪತ್ರೆಗಳನ್ನಾಗಿ ಪರಿವರ್ತಿಸಿದ್ದಾರೆ ಎಂದು ವರದಿಯಾಗಿತ್ತು. ಆದರೆ ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಿದಾಗ ತಿಳಿದು ಬಂದ ಸಂಗತಿ ಬೇರೆಯದ್ದೇ ಆಗಿತ್ತು.
ನವದೆಹಲಿ(ಮಾ.16): ವಿಶ್ವ ನಂ.1 ಫುಟ್ಬಾಲಿಗ ಕ್ರಿಸ್ಟಿಯಾನೋ ರೊನಾಲ್ಡೋ ಪೋರ್ಚುಗಲ್‌ನಲ್ಲಿರುವ ತಮ್ಮ ಹೋಟೆಲ್‌ಗಳನ್ನು ತಾತ್ಕಾಲಿಕ ಆಸ್ಪತ್ರೆಗಳನ್ನಾಗಿ ಪರಿವರ್ತಿಸಿದ್ದು, ಕೊರೋನಾ ಸೋಂಕಿತರಿಗೆ ಉಚಿತ ಚಿಕಿತ್ಸೆ ಕೊಡಿಸುತ್ತಿದ್ದಾರೆ ಎಂದು ಸ್ಪೇನ್‌ನ ಮಾಧ್ಯಮಗಳು ವರದಿ ಮಾಡಿವೆ. ಆದರೆ ಇದರ ಸತ್ಯಾಸತ್ಯತೆ ಇದೀಗ ಬಯಲಾಗಿದ್ದು, ಇದೊಂದು ಸುಳ್ಳು ಸುದ್ದಿ ಎಂದು ಖಚಿತವಾಗಿದೆ.
undefined
ಸೋಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ಕರೆತಂದಿದ್ದು ದಿನದ 24 ಗಂಟೆಗಳು ಸೇವೆ ನೀಡಲಾಗುತ್ತಿದೆ. ವೈದ್ಯರು, ಸಿಬ್ಬಂದಿ ಹಾಗೂ ಚಿಕಿತ್ಸೆಗೆ ತಗುಲುವ ಸಂಪೂರ್ಣ ವೆಚ್ಚವನ್ನು ರೊನಾಲ್ಡೋ ಭರಿಸಲಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿತ್ತು.
ದಾಖಲೆ 700 ಗೋಲಿನ ಸನಿಹದಲ್ಲಿ ರೊನಾಲ್ಡೊ!
ಪೋರ್ಚುಗಲ್‌ನ ರಾಜಧಾನಿ ಲಿಸ್ಬನ್‌ನಲ್ಲಿ ಒಂದು ಹಾಗೂ ತಮ್ಮ ತವರು ದ್ವೀಪ ಮದಿಯೆರಾದಲ್ಲಿ ರೊನಾಲ್ಡೋ ಪಂಚತಾರಾ ಹೋಟೆಲ್‌ಗಳನ್ನು ಹೊಂದಿದ್ದಾರೆ. ಈ ಹೋಟೆಲ್‌ಗಳನ್ನು ತಾತ್ಕಾಲಿಕ ಆಸ್ಪತ್ರೆಗಳನ್ನಾಗಿ ಪರಿವರ್ತಿಸಲಾಗಿದೆ. ಕೆಲವೇ ದಿನಗಳಲ್ಲಿ ಚಿಕಿತ್ಸೆಗೆ ಅಗತ್ಯವಿರುವ ಸಕಲ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದೆ. ನುರಿತ ವೈದ್ಯರು ಹಾಗೂ ನರ್ಸಿಂಗ್ ಸಿಬ್ಬಂದಿ, ಸಹಾಯಕರನ್ನು ನಿಯೋಜಿಸಲಾಗಿದೆ. ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲು ಬೇಕಿರುವ ಉಪಕರಣಗಳನ್ನು ತರಿಸಲಾಗಿದ್ದು, ಕೊರೋನಾ ಶಂಕಿತರ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿತ್ತು.
ಕೊರೋನಾಗೆ ಎಲ್ಲವೂ ಸ್ತಬ್ಧ: ಜನರಿಂದ ಗಿಜಿಗುಡುತ್ತಿದ್ದ ಪ್ರದೇಶದಲ್ಲಿ ನೊಣಗಳ ಕಾರುಬಾರು!
ಪೋರ್ಚುಗಲ್‌ನಲ್ಲಿ ಇದುವರೆಗೂ 169 ಕೊರೋನಾ ಪ್ರಕರಣಗಳು ದಾಖಲಾಗಿದ್ದು, ಅದೃಷ್ಟವಶಾತ್ ಯಾರೂ ಸಾವನ್ನಪ್ಪಿಲ್ಲ. ಪೋರ್ಚುಗಲ್ ಸರ್ಕಾರ ವಿದೇಶಿ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಿರುವ ಕಾರಣ, ಅಕ್ಕಪಕ್ಕದ ರಾಷ್ಟ್ರಗಳ ಸೋಂಕಿತರಿಗೆ ರೊನಾಲ್ಡೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಆದರೆ ಬೂಮ್ ಲೈವ್ ಸುದ್ದಿಸಂಸ್ಥೆ ಈ ಸುದ್ದಿ ನಿಜವೇ ಎಂದು ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ ಎಂದು ಖಚಿತವಾಗಿದೆ. ಬೂಮ್ ಪೋರ್ಚುಗಲ್‌ನಲ್ಲಿ ಇರುವ ಯುವೆಂಟಸ್ ಫುಟ್ಬಾಲ್ ಪ್ಲೇಯರ್ಸ್ ಹೋಟೆಲ್ ಚೈನ್ ಅನ್ನು ಇ-ಮೇಲ್ ಮೂಲಕ ಸಂಪರ್ಕಿಸಿದಾಗ, ಈ ಹೋಟೆಲ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. ಇವುಗಳನ್ನು ಆಸ್ಪತ್ರೆಯಾಗಿ ಪರಿವರ್ತಿಸಿಲ್ಲ ಎಂಬ ಖಚಿತ ಮಾಹಿತಿ ತಿಳಿದು ಬಂದಿದೆ. ಅಷ್ಟೇ ಅಲ್ಲದೇ ಬೂಮ್ ಪೋರ್ಚುಗಲ್ ಮೂಲದ ಡಿಜಿಟಲ್ ಮೀಡಿಯಾ ಗ್ರೂಪ್ ಅನ್ನು ಸಂಪರ್ಕಿಸಿದಾಗ ಅದೂ ಈ ಸುದ್ದಿಯನ್ನು ಅಲ್ಲಗಳೆದಿದೆ.