ಒಂದು ಹನಿ ಎಣ್ಣೆಯಿಲ್ಲದೆ ರೆಸ್ಟೋರೆಂಟ್ ಶೈಲಿಯ ಮಲೈ ಚಿಕನ್ ಈಗ ಮನೆಯಲ್ಲೇ ಮಾಡಿ

Published : Jul 25, 2026, 08:56 PM IST
Healthy Chicken Recipe Kannada

ಸಾರಾಂಶ

Healthy Chicken Recipe Kannada: ಆರೋಗ್ಯದ ಮೇಲೆ ಕಾಳಜಿ ಇರುವವರಿಗೆ ಮತ್ತು ತೂಕ ಇಳಿಸುತ್ತಿರುವವರಿಗೆ ಇದು ಹೇಳಿಮಾಡಿಸಿದ ರೆಸಿಪಿ. ಒಂದು ಹನಿ ಎಣ್ಣೆಯಿಲ್ಲದೆ, ರೆಸ್ಟೋರೆಂಟ್ ಶೈಲಿಯ ಕ್ರೀಮಿ ಮತ್ತು ಜ್ಯೂಸಿ ಮಲೈ ಚಿಕನ್ ಅನ್ನು ಈಗ ಮನೆಯಲ್ಲೇ ತಯಾರಿಸಬಹುದು. ಪ್ರೋಟೀನ್‌ನಿಂದ ಸಮೃದ್ಧವಾಗಿರುವ ಈ ರೆಸಿಪಿ ರುಚಿಯಲ್ಲಿ ಮಾತ್ರವಲ್ಲದೆ ಹೆಲ್ತ್‌ಗೂ ಒಳ್ಳೇದು.

ರೆಸ್ಟೋರೆಂಟ್ ಶೈಲಿಯ ಕ್ರೀಮಿ ಮತ್ತು ಜ್ಯೂಸಿ ಮಲೈ ಚಿಕನ್ ಸವಿಯಬೇಕೆಂಬ ಆಸೆ ನಿಮಗಿದೆಯೇ? ಆದರೆ ಎಣ್ಣೆ ಮತ್ತು ಕ್ಯಾಲೋರಿಗಳ ಭಯದಿಂದ ನಿಮ್ಮ ಆಸೆಯನ್ನು ಕೈಬಿಡುತ್ತಿದ್ದೀರಾ? ಹಾಗಿದ್ದರೆ ಚಿಂತಿಸಬೇಡಿ! ಕೇವಲ ಆರೋಗ್ಯಕರ ಪದಾರ್ಥಗಳನ್ನು ಬಳಸಿ, ಎಣ್ಣೆಯಿಲ್ಲದೆ ಮನೆಯಲ್ಲೇ ಅದ್ಭುತವಾದ ಮಲೈ ಚಿಕನ್ ತಯಾರಿಸಬಹುದು. ಇದು ಪ್ರೋಟೀನ್‌ನಿಂದ ಸಮೃದ್ಧವಾಗಿದ್ದು, ತೂಕ ಇಳಿಸುವವರಿಗೆ ಮತ್ತು ಜಿಮ್‌ಗೆ ಹೋಗುವವರಿಗೆ ಉತ್ತಮ ಆಯ್ಕೆಯಾಗಿದೆ.

ಬೇಕಾಗುವ ಪದಾರ್ಥಗಳು

*ಚಿಕನ್ ಲೆಗ್ ಪೀಸ್‌ಗಳು
*ನೀರಿಲ್ಲದ ಗಟ್ಟಿ ಮೊಸರು (Hung Curd), ಫ್ರೆಶ್ ಕ್ರೀಮ್
*ರುಚಿಗೆ ತಕ್ಕಷ್ಟು ಉಪ್ಪು
*ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಟೇಬಲ್ ಚಮಚ
*ಕಾಳುಮೆಣಸಿನ ಪುಡಿ - 1 ಟೀಚಮಚ, ಧನಿಯಾ ಪುಡಿ - 1 ಟೀಚಮಚ, ಗರಂ ಮಸಾಲಾ - 1 ಟೀಚಮಚ
*ಹಸಿಮೆಣಸಿನಕಾಯಿ - 2 (ಸಣ್ಣಗೆ ಹೆಚ್ಚಿದ್ದು), ಕಸೂರಿ ಮೇತಿ - 1 ಟೀಚಮಚ, ಕೊತ್ತಂಬರಿ ಸೊಪ್ಪು - ಸ್ವಲ್ಪ
*ನಿಂಬೆರಸ - 1 ಟೇಬಲ್ ಚಮಚ 
*ಕಡಲೆಹಿಟ್ಟು - 2 ಟೇಬಲ್ ಚಮಚ (ಬೈಂಡಿಂಗ್‌ಗಾಗಿ)

ತಯಾರಿಸುವ ವಿಧಾನ

*ಮೊದಲಿಗೆ ಚಿಕನ್ ಲೆಗ್ ಪೀಸ್‌ಗಳನ್ನು ಚೆನ್ನಾಗಿ ತೊಳೆದು, ಮಸಾಲೆ ಒಳಗೆ ಹೋಗುವಂತೆ ಚಾಕುವಿನಿಂದ ಸಣ್ಣದಾಗಿ ಗಾಯ (Slits) ಮಾಡಿ.

*ಒಂದು ದೊಡ್ಡ ಪಾತ್ರೆಯಲ್ಲಿ ಗಟ್ಟಿ ಮೊಸರು, ಫ್ರೆಶ್ ಕ್ರೀಮ್, ಉಪ್ಪು ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

ನಂತರ ಇದಕ್ಕೆ ಕಾಳುಮೆಣಸಿನ ಪುಡಿ, ಧನಿಯಾ ಪುಡಿ, ಗರಂ ಮಸಾಲಾ, ಹಸಿಮೆಣಸಿನಕಾಯಿ, ಕಸೂರಿ ಮೇತಿ, ಕೊತ್ತಂಬರಿ ಸೊಪ್ಪು ಮತ್ತು ಲಿಂಬೆರಸ ಸೇರಿಸಿ ಕಲಸಿ. ಮಸಾಲೆ ಚಿಕನ್ ತುಂಡುಗಳಿಗೆ ಸರಿಯಾಗಿ ಅಂಟಿಕೊಳ್ಳಲು 2 ಚಮಚ ಕಡಲೆಹಿಟ್ಟು ಹಾಕಿ.

*ವಿಡಿಯೋದಲ್ಲಿ ತೋರಿಸಿರುವಂತೆ ಚಿಕನ್ ತುಂಡುಗಳಿಗೆ ಮಸಾಲೆಯನ್ನು ಚೆನ್ನಾಗಿ ಮಸಾಜ್ ಮಾಡಿದಂತೆ ಹಚ್ಚಿ.

*ಈ ಮ್ಯಾರಿನೇಟ್ ಮಾಡಿದ ಚಿಕನ್ ಅನ್ನು ಕನಿಷ್ಠ 1 ಗಂಟೆಗಳ ಕಾಲ ಫ್ರಿಡ್ಜ್‌ನಲ್ಲಿ ಇಡಿ. ಇದು ಚಿಕನ್ ಅನ್ನು ಹೆಚ್ಚು ಜ್ಯೂಸಿಯಾಗಿ ಮಾಡುತ್ತದೆ.

*ಈಗ ಏರ್ ಫ್ರೈಯರ್ (Air Fryer) ಬಾಸ್ಕೆಟ್‌ನಲ್ಲಿ ಚಿಕನ್ ತುಂಡುಗಳನ್ನು ಒಂದಕ್ಕೊಂದು ತಾಗದಂತೆ ಜೋಡಿಸಿ.

*ಏರ್ ಫ್ರೈಯರ್ ಅನ್ನು 160°C ಉಷ್ಣತೆಯಲ್ಲಿ 30 ನಿಮಿಷಗಳ ಕಾಲ ಸೆಟ್ ಮಾಡಿ.

*15 ನಿಮಿಷಗಳ ನಂತರ ಚಿಕನ್ ತುಂಡುಗಳನ್ನು ಮಗುಚಿ ಹಾಕಿ (Flip), ಇದರಿಂದ ಎರಡೂ ಬದಿ ಸಮವಾಗಿ ಬೇಯುತ್ತದೆ.

ಅಷ್ಟೇ! ಬಿಸಿಬಿಸಿಯಾದ, ಕ್ರೀಮಿ ಮಲೈ ಚಿಕನ್ ಸವಿಯಲು ಸಿದ್ಧ. ಇದನ್ನು ಪುದೀನಾ ಚಟ್ನಿ ಮತ್ತು ಈರುಳ್ಳಿಯೊಂದಿಗೆ ಸರ್ವ್ ಮಾಡಿ. ಇದು ಬಾಯಲ್ಲಿ ಇಟ್ಟರೆ ಕರಗುವಷ್ಟು ಮೃದುವಾಗಿರುತ್ತದೆ.

ಏರ್ ಫ್ರೈಯರ್ ಬದಲು ನಾನ್-ಸ್ಟಿಕ್ ಪ್ಯಾನ್‌ನಲ್ಲಿ ಮಾಡುವ ವಿಧಾನ

*ಮ್ಯಾರಿನೇಟ್ ಮಾಡಿದ ಚಿಕನ್ ಅನ್ನು ಫ್ರಿಡ್ಜ್‌ನಿಂದ ಹೊರತೆಗೆಯಿರಿ.

*ಒಂದು ಉತ್ತಮ ಗುಣಮಟ್ಟದ ನಾನ್-ಸ್ಟಿಕ್ ಪ್ಯಾನ್ ಅನ್ನು ಒಲೆಯ ಮೇಲಿಟ್ಟು ಸಣ್ಣ ಉರಿಯಲ್ಲಿ ಬಿಸಿ ಮಾಡಿ. (ಎಣ್ಣೆ ಹಾಕುವ ಅಗತ್ಯವಿಲ್ಲ).

*ಪ್ಯಾನ್ ಬಿಸಿಯಾದ ನಂತರ ಚಿಕನ್ ತುಂಡುಗಳನ್ನು ಒಂದೊಂದಾಗಿ ಜೋಡಿಸಿ.

*ಪ್ಯಾನ್ ಮೇಲೆ ಮುಚ್ಚಳವನ್ನು ಮುಚ್ಚಿ (Close the lid). ಸಣ್ಣ ಉರಿಯಲ್ಲಿ 10-12 ನಿಮಿಷ ಬೇಯಿಸಿ. ಚಿಕನ್ ತನ್ನಲ್ಲಿರುವ ನೀರು ಮತ್ತು ಮೊಸರಿನ ತೇವಾಂಶದಿಂದಲೇ ಸಾಫ್ಟ್ ಆಗಿ ಬೇಯುತ್ತದೆ.

* 12 ನಿಮಿಷಗಳ ನಂತರ ಮುಚ್ಚಳ ತೆಗೆದು ಚಿಕನ್ ತುಂಡುಗಳನ್ನು ಮಗುಚಿ ಹಾಕಿ. ಈಗ ಮುಚ್ಚಳ ಮುಚ್ಚದೆ ಮಧ್ಯಮ ಉರಿಯಲ್ಲಿ (Medium Flame) ಇನ್ನೊಂದು ಬದಿ ಕೆಂಪಗಾಗುವವರೆಗೆ 5-8 ನಿಮಿಷ ಬೇಯಿಸಿ.

*ಮಸಾಲೆ ಪೂರ್ತಿಯಾಗಿ ಚಿಕನ್‌ಗೆ ಅಂಟಿಕೊಂಡು, ತುಂಡುಗಳು ರೋಸ್ಟ್ ಆದಂತೆ ಕಂಡಾಗ ಒಲೆ ಆರಿಸಿ.

ವಿಶೇಷ ಟಿಪ್: ರೆಸ್ಟೋರೆಂಟ್‌ನಂತೆ 'ಸ್ಮೋಕಿ ಫ್ಲೇವರ್' (Smoky Flavor) ಬರಲು

ಏರ್ ಫ್ರೈಯರ್ ಇಲ್ಲದಿದ್ದಾಗ ಇದ್ದಿಲಿನ ವಾಸನೆ (Smoky taste) ಬರಲು ಈ ಪುಟ್ಟ ಟ್ರಿಕ್ ಬಳಸಿ

ಚಿಕನ್ ಪೂರ್ತಿ ಬೆಂದ ನಂತರ, ಪ್ಯಾನ್‌ನ ಮಧ್ಯದಲ್ಲಿ ಒಂದು ಸಣ್ಣ ಬಟ್ಟಲು ಇಡಿ.

ಒಂದು ತುಂಡು ಇದ್ದಿಲನ್ನು (Charcoal) ಕೆಂಪಗಾಗುವವರೆಗೆ ಸುಟ್ಟು ಆ ಬಟ್ಟಲಿನಲ್ಲಿ ಇಡಿ.

ಇದ್ದಿಲಿನ ಮೇಲೆ ಅರ್ಧ ಚಮಚ ತುಪ್ಪ ಅಥವಾ ಬೆಣ್ಣೆ ಹಾಕಿದ ತಕ್ಷಣ ಹೊಗೆ ಬರುತ್ತದೆ. ಕೂಡಲೇ ಪ್ಯಾನ್ ಮೇಲೆ ಗಟ್ಟಿಯಾಗಿ ಮುಚ್ಚಳ ಮುಚ್ಚಿ 5 ನಿಮಿಷ ಬಿಡಿ.

ಹೀಗೆ ಮಾಡುವುದರಿಂದ ಎಣ್ಣೆಯಿಲ್ಲದಿದ್ದರೂ ನಿಮ್ಮ ಮಲೈ ಚಿಕನ್ ತಂದೂರಿ ಅಥವಾ ರೆಸ್ಟೋರೆಂಟ್‌ನಲ್ಲಿ ಸಿಗುವಂತೆಯೇ ಅದ್ಭುತವಾದ ಸ್ಮೋಕಿ ವಾಸನೆಯಿಂದ ಕೂಡಿರುತ್ತದೆ!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಸಾಲಾ ಟೀ ಮಾಡ್ತಾರೆ, ಆದ್ರೆ ಮಸಾಲಾ ಕಾಫಿ ಯಾಕೆ ಮಾಡಲ್ಲ? ಈ 'ಮಹಾನ್ ರಹಸ್ಯ'ಕ್ಕೆ ಉತ್ತರ ಇಲ್ಲಿದೆ ನೋಡಿ!
60 ವರ್ಷಗಳಿಂದ ಒಂದು ರೂ.ಗೆ ಊಟ ನೀಡ್ತಿರೋ 80ರ ವೃದ್ಧ: ಬಡತನದಲ್ಲಿಯೂ ಹೃದಯ ಶ್ರೀಮಂತಿಕೆ