ಬೆಂಗಳೂರಲ್ಲಿ ಸಿಕ್ಕಾಪಟ್ಟೆ ಚಳಿ ಶುರುವಾಗಿದೆ. ಸಾಲ್ದು ಅಂತ ಮಳೆಯ ಕಾಟ ಬೇರೆ. ಮೈ ಕೊರೆಯುವ ಚಳಿಗೆ ಬಿಸಿಬಿಸಿಯಾಗಿ ಏನಾದ್ರೂ ತಿನ್ತಾ ಇರ್ಬೇಕು ಅನ್ಸುತ್ತೆ. ಟೀ ಓಕೆ ಜೊತೆಗೆ ತಿನ್ನೋಕೆ ಏನಾದ್ರೂ ಸ್ನ್ಯಾಕ್ಸ್ ಬೇಕಲ್ವಾ ? ಚಳಿಗೆ ತಿನ್ನೋಕೆ ಕೆಲವೊಂದು ಬೆಸ್ಟ್ ಸ್ನ್ಯಾಕ್ಸ್‌ಗಳ ರೆಸಿಪಿ ಇಲ್ಲಿದೆ.
ಬರಹ: ರೇಖಾ ಭಟ್
ಇನ್‌ಸ್ಟಾಗ್ರಾಮ್‌ನಲ್ಲಿ ಭಟ್ಟರ ಅಡುಗೆ ಎಂಬ ಫುಡ್ ಬ್ಲಾಗ್ ಬರೆಯುವ ಉತ್ತರಕನ್ನಡ ಮೂಲದ ರೇಖಾ ಭಟ್ ಅವರ ಅಡುಗೆ ರೆಸಿಪಿಗಳನ್ನು
ಇಷ್ಟಪಡುವ ದೊಡ್ಡ ಸಮೂಹವೇ ಸಾಮಾಜಿಕ ಜಾಲತಾಣದಲ್ಲಿ ಇದೆ. ಅವರ ಬಗೆಬಗೆಯ ಅಡುಗೆಯ ಫೋಟೋಗಳನ್ನು ನೋಡಿದರೆ
ಬಾಯಲ್ಲಿ ನೀರೂರುತ್ತದೆ. ಅಂಥಾ ವಿಶಿಷ್ಟ ಫುಡ್‌ಬ್ಲಾಗರ್ ನೀಡಿರುವ ವಿಶೇಷ ಅಡುಗೆ ರೆಸಿಪಿಗಳು ಇಲ್ಲಿವೆ.
ಕ್ಯಾಬೇಜ್ ಪಕೋಡ
ಬೇಕಾಗುವ ಸಾಮಗ್ರಿ
ಕ್ಯಾಬೇಜ್ - ಅರ್ಧ
ಜೀರಿಗೆ - ಅರ್ಧ ಚಮಚ
ಓಂಕಾಳು - ಅರ್ಧ ಚಮಚ
ಇಂಗು - ಚಿಟಿಕೆ
ಹಸಿಮೆಣಸು - 6-8
ಹಸಿಕೊಬ್ಬರಿ ತುರಿ - 1 ಹಿಡಿ
ಕೊತ್ತಂಬರಿ ಸೊಪ್ಪು - 1 ಹಿಡಿ
ಕರಿಬೇವು - 10-12 ಎಲೆ
ಮೊಸರು -3-4 ಚಮಚ
ಅಡುಗೆ ಸೋಡಾ - ಚಿಟಿಕೆ
ಕಡಲೆ ಹಿಟ್ಟು - 2 ಕಪ್
ಉಪ್ಪು
ಮಾಡುವ ವಿಧಾನ: ಮೊದಲು ಕ್ಯಾಬೇಜನ್ನು ತೊಳೆದು ಉದ್ದುದ್ದ, ಸುಳಿಸುಳಿಯಾಗಿ ಹೆಚ್ಚಿಕೊಳ್ಳಿ.. ಅದಕ್ಕೆ ಜೀರಿಗೆ, ಓಂಕಾಳು, ಚಿಟಿಕೆ ಇಂಗು, ಹಸಿಮೆಣಸು, ಕೊತ್ತಂಬರಿಸೊಪ್ಪು, 1 ಹಿಡಿ ಹಸಿಕೊಬ್ಬರಿ ಹಾಕಿ ಪೇಸ್ಟ್ ಮಾಡಿ ಸೇರಿಸಿ. ಅದಕ್ಕೆ ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು, ಕರಿಬೇವು, ಮಿಕ್ಸ್ ಮಾಡಿಟ್ಟ ಉಪ್ಪು-ಮೊಸರು ಹಾಕಿ ಸೇರಿಸಿ, ಚೆನ್ನಾಗಿ ಕಲಸಿ ನೀರೊಡೆಯುವವರೆಗೆ ಬಿಡಿ. (ಸುಮಾರು ಅರ್ಧ ಗಂಟೆ) ನಂತರ ಚಿಟಿಕೆ ಸೋಡಾ, ಹಿಡಿಯುವಷ್ಟು ಕಡಲೆ ಹಿಟ್ಟು ಹಾಕಿ ನೀರು ಹಾಕದೇ ಪಕೋಡಾ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.ಕಾದ ಎಣ್ಣೆಯಲ್ಲಿ ಕೆಂಪಗೆ ಕರಿದು ತೆಗೆದರೆ ತಣ್ಣನೆಯ ವಾತಾವರಣಕ್ಕೆ ಬಿಸಿಬಿಸಿ ಪಕೋಡ ತಿನ್ನಲು ರೆಡಿ.
National Sandwich Day: ಜಂಕ್‌ಫುಡ್ ಸೈಡಿಗಿಡಿ, ಹೆಲ್ದೀ ಸ್ಯಾಂಡ್‌ವಿಚ್ ತಿನ್ನಿ
ಬೆಣ್ಣೆ ಮುರುಕು
ಬೇಕಾಗುವ ಸಾಮಗ್ರಿ
ಅಕ್ಕಿ ಹಿಟ್ಟು
ಕಡಲೆಹಿಟ್ಟು
ಮೆಣಸಿನಪುಡಿ
ಜೀರಿಗೆ
ಬಿಳಿಎಳ್ಳು
ಓಂಕಾಳು
ಉಪ್ಪು
ಬೆಣ್ಣೆ
ಕರಿಯಲು ಎಣ್ಣೆ
ಮಾಡುವ ವಿಧಾನ: ಒಂದು ಪಾತ್ರೆಗೆ 2 ಕಪ್ ಅಕ್ಕಿಹಿಟ್ಟು, ಅರ್ಧ ಕಪ್ ಕಡಲೆ ಹಿಟ್ಟು, 1 ಚಮಚ ಉಪ್ಪು, ಮೆಣಸಿನಪುಡಿ, ಜೀರಿಗೆ, ಎಳ್ಳು, ಓಂಕಾಳು ತಲಾ ಅರ್ಧ ಚಮಚ ಹಾಕಿ ಕೈಯಾಡಿಸಿ. ಈಗ 2 ಟೇಬಲ್ ಚಮಚದಷ್ಟು ಬೆಣ್ಣೆಯನ್ನು ಬಿಸಿ ಮಾಡಿ ಹಾಕಿ ಹಿಟ್ಟಿನೊಂದಿಗೆ ಚೆನ್ನಾಗಿ ಕಲಸಿ. ಈಗ ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಿ. ಈಗ ಚಕ್ಕುಲಿ ಒರಳಿಗೆ ಹಾಕಿ ಕಾದ ಎಣ್ಣೆ ಬಂಡಿಗೆ ಒತ್ತಿ ಗರಿಯಾಗುವವರೆಗೆ ಕರಿದು ತೆಗೆಯಿರಿ. ಕೊನೆಯಲ್ಲಿ ಕರಿಬೇವನ್ನು ಹುರಿದು ಹಾಕಿ ಗಾಳಿಯಾಡದ ಡಬ್ಬಿಯಲ್ಲಿ ಶೇಖರಿಸಿ.
ಸವತೆಕಾಯಿ ಕರೆ
ಬೇಕಾಗುವ ಸಾಮಗ್ರಿ
ಸವತೆಕಾಯಿ 8-10
ಸೂಜಿಮೆಣಸು/ ಹಸಿಮೆಣಸು ಪೇಸ್ಟ್
ಉಪ್ಪು
ಅಕ್ಕಿಹಿಟ್ಟು - ಮುಕ್ಕಾಲು ಕೆ.ಜಿ (ಅಂದಾಜು)
ಮಾಡುವ ವಿಧಾನ: ಮೊದಲು ಸೌತೆಕಾಯಿಯನ್ನು ಸಿಪ್ಪೆ ತೆಗೆದು ತುರಿದುಕೊಳ್ಳಿ. (ಸಣ್ಣಗೆ ಹೆಚ್ಚಿಕೊಳ್ಳಲೂಬಹುದು) ಈಗ ಅದನ್ನು ನುಣ್ಣಗೆ ರುಬ್ಬಿ ರಸ ತೆಗೆದುಕೊಳ್ಳಿ. ರಸವನ್ನು ಒಲೆಯ ಮೇಲಿಟ್ಟು ಉಪ್ಪು, ಹಸಿಮೆಣಸು/ಸೂಜಿಮೆಣಸಿನ ಪೇಸ್ಟ್ ಸ್ವಲ್ಪ ಹಾಕಿ. ನಂತರ ಇದನ್ನು ಕುದಿಯಲು ಬಿಡಿ. ಒಂದು ಕುದಿ ಬಂದಾಗ ಒಲೆ ಆರಿಸಿ ಹಿಡಿವಷ್ಟು ಅಕ್ಕಿ ಹಿಟ್ಟು ಸೇರಿಸಿ, ಮಗುಚಿ, (ಚಕ್ಕುಲಿ ಹಿಟ್ಟಿನ ಹದಕ್ಕೆ) ಚೆನ್ನಾಗಿ ಬೆರೆಸಿ ಮುಚ್ಚಳ ಮುಚ್ಚಿಡಿ. ಸ್ವಲ್ಪ ತಣ್ಣಗಾದ ಮೇಲೆ ಕೈಯ್ಯಲ್ಲಿ ಚೆನ್ನಾಗಿ ನಾದಿಕೊಳ್ಳಿ. ಈಗ ಚಕ್ಕುಲಿ ಒರಳಿಗೆ ಹಾಕಿ (ಸೇವ್ ಮಾಡುವ ಹಲ್ಲೆ ಹಾಕಿ) ಕಾದ ಎಣ್ಣೆಗೆ ಬಿಟ್ಟು ಕರಿದು ತೆಗೆಯಿರಿ. ಸವತೆಕಾಯಿ ಪರಿಮಳದ, ರುಚಿಯಾದ, ಸಾಂಪ್ರದಾಯಿಕ ತಿಂಡಿ ಸವತೆಕಾಯಿ ಕರೆ ರೆಡಿ. ಇದು ಒಂದು ಸಾಂಪ್ರದಾಯಿಕ ಕುರುಕಲು ತಿಂಡಿ. ಮಲೆನಾಡು, ಕರಾವಳಿ ಭಾಗದಲ್ಲಿ ಹೆಚ್ಚಾಗಿ ಇದನ್ನು ಮಾಡುತ್ತಾರೆ.
ಅಕ್ಕಿಯಿಂದ ಮಾಡಿರೋದಲ್ಲ, ಡಯಾಬಿಟಿಸ್ ಇರೋರು ಇಂಥಾ ಇಡ್ಲಿ ಚಿಂತೆಯಿಲ್ದೆ ತಿನ್ಬೋದು
ಸಿಹಿಗೆಣಸಿನ ಕಟ್ಲೆಟ್
ಬೇಕಾಗುವ ಸಾಮಾಗ್ರಿ
ಸಿಹಿಗೆಣಸು - ದೊಡ್ಡದು 2
ಈರುಳ್ಳಿ 1
ಕೊತ್ತಂಬರಿ ಸೊಪ್ಪು- ಒಂದುಹಿಡಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್ - ಅರ್ಧ ಚಮಚ
ದನಿಯಾ ಪುಡಿ - ಒಂದು ಚಮಚ
ಅಚ್ಚಖಾರದ ಪುಡಿ -ಒಂದು ಚಮಚ
ಮೈದಾಹಿಟ್ಟು, ಕಾರ್ನ್ ಫ್ಲೋರ್ - ತಲಾ 2 ಚಮಚ
ಬ್ರೆಡ್ ಕ್ರಂಪ್‌ಸ್ 4-5 ಚಮಚ
ಉಪ್ಪು
ಎಣ್ಣೆ
ಮಾಡುವ ವಿಧಾನ: ಮೊದಲು ಗೆಣಸನ್ನು (Sweet potato) ತೊಳೆದು ಕುಕ್ಕರಿನಲ್ಲಿ 3 ವಿಷಲ್ ಕೂಗಿಸಿ. ನಂತರ ಬೇಯಿಸಿ, ಸಿಪ್ಪೆ ತೆಗೆದು ಮ್ಯಾಶ್ ಮಾಡಿ. ಅದಕ್ಕೆ ಸಣ್ಣದಾಗಿ ಹೆಚ್ಚಿಕೊಂಡ ಈರುಳ್ಳಿ, ಕೊತ್ತಂಬರಿಸೊಪ್ಪು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ (Ginger garlic paste), ದನಿಯಾಪುಡಿ, ಮೆಣಸಿನಪುಡಿ, ಅರ್ಧ ಕಪ್ ಮೈದಾಹಿಟ್ಟು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮುದ್ದೆ ರೀತಿ ಕಲಸಿಡಿ. ಇನ್ನೊಂದು ಪಾತ್ರೆಯಲ್ಲಿ 2 ಚಮಚ ಮೈದಾಹಿಟ್ಟು, 2 ಚಮಚ ಕಾರ್ನ್ ಫ್ಲೋರ್, ಸ್ವಲ್ಪ ಉಪ್ಪು (Salt), ಸ್ವಲ್ಪ ನೀರು ಹಾಕಿ ತೆಳ್ಳಗಿನ ಸ್ಲರ್ರಿ ರೆಡಿ ಮಾಡಿ. ಈಗ ಗೆಣಸಿನ ಉಂಡೆ ಮಾಡಿ ಕೈಯ್ಯಲ್ಲಿ ಸ್ವಲ್ಪ ತಟ್ಟಿ, ಸ್ಲರ್ರಿ ಒಳಗೆ ಅದ್ದಿ, ಬ್ರೆಡ್ ಕ್ರಂಬ್‌ಸ್ ಮೇಲೆ ಹೊರಳಿಸಿ. ಕಾದ ಪ್ಯಾನ್ ಮೇಲೆ ಎಣ್ಣೆ ಹಾಕಿ ಇದನ್ನು ಇಟ್ಟು ಎರಡೂ ಕಡೆ ಕಡಿಮೆ ಉರಿಯಲ್ಲಿ ಬೇಯಿಸಿ ತೆಗೆಯಿರಿ. ಹೊರಗೆ ಕ್ರಿಸ್ಪಿ, ಒಳಗೆ ಸಾಫ್ಟ್ ಆಗಿರೋ ಗೆಣಸಿನ ಕಟ್ಲೆಟ್ ರೆಡಿ. ಇದಕ್ಕೆ ಖಾರದ ಪುದೀನಾ ಚಟ್ನಿ, ಹಾಗೂ ಕೆಚಪ್ ಒಳ್ಳೆಯ ಕಾಂಬಿನೇಷನ್.