
ಗೋವಾದ ಮಪುಸ್ಸಾದಲ್ಲಿ ಗೋಬಿ ಮಂಚೂರಿ ನಿಷೇಧಿಸಿದ್ದು ಗೊತ್ತೇ ಇದೆ. ಇದೀಗ ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿಯಲ್ಲಿ ಮಕ್ಕಳ ನೆಚ್ಚಿನ ಕಾಟನ್ ಕ್ಯಾಂಡಿಯನ್ನು ನಿಷೇಧಿಸಲಾಗಿದೆ.
ಅರೆ, ಬಾಯಲ್ಲಿಟ್ಟರೆ ಕರಗುವ, ಗುಲಾಬಿ ಬಣ್ಣದ ಮೋಡದಂತೆ ಆಕರ್ಷಕವಾಗಿ ಕಾಣುವ ಕಾಟನ್ ಕ್ಯಾಂಡಿಯನ್ನು ನಿಷೇಧಿಸಲು ಕಾರಣವೇನು?
ಆಹಾರ ಸುರಕ್ಷತಾ ಅಧಿಕಾರಿಗಳು ಕಾಟನ್ ಕ್ಯಾಂಡಿ ತಯಾರಿಕೆಯಲ್ಲಿ ಹಾನಿಕಾರಕ ರಾಸಾಯನಿಕವನ್ನು ಬಳಸಿರುವುದನ್ನು ಪತ್ತೆ ಹಚ್ಚಿದ ನಂತರ ಪುದುಚೇರಿ ಅದರ ಮಾರಾಟವನ್ನು ನಿಷೇಧಿಸಿದೆ. ಆದರೆ, ಕಾಟನ್ ಕ್ಯಾಂಡಿ ಮಾರಾಟ ಮಾಡುವವರು ಆಹಾರ ಸುರಕ್ಷತಾ ಇಲಾಖೆಯಿಂದ ಗುಣಮಟ್ಟದ ಪ್ರಮಾಣ ಪತ್ರ ಪಡೆದರೆ ಮಾರಾಟ ಮಾಡಬಹುದು.
ವಿಷಕಾರಿ ವಸ್ತುಗಳ ಬಳಕೆ
ಹೌದು, ಕಾಟನ್ ಕ್ಯಾಂಡಿ ತಯಾರಿಕೆಗೆ ವಿಷಕಾರಿ ವಸ್ತುವನ್ನು ಬಳಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಪುದುಚೇರಿ ಅದರ ಮಾರಾಟವನ್ನು ನಿಷೇಧಿಸಿದೆ. ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ತಮಿಳಿಸೈ ಸೌಂದರರಾಜನ್ ಅವರು ಹೊರಡಿಸಿದ ಆದೇಶದಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ಕೇಂದ್ರಾಡಳಿತ ಪ್ರದೇಶದಲ್ಲಿ ಮಾರಾಟವಾಗುತ್ತಿದ್ದ ಕಾಟನ್ ಕ್ಯಾಂಡಿಯಲ್ಲಿ ‘ರೋಡಮೈನ್-ಬಿ’ ಎಂಬ ಹಾನಿಕಾರಕ ರಾಸಾಯನಿಕ ಅಂಶವನ್ನು ಪರೀಕ್ಷೆಗೆ ಒಳಪಡಿಸಿ ಕಂಡುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಕಾಟನ್ ಕ್ಯಾಂಡಿ ಮಾರಾಟ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
'ಗುಣಮಟ್ಟದ ಪ್ರಮಾಣ ಪತ್ರ ಪಡೆಯದವರು ತಕ್ಷಣ ಆಹಾರ ಸುರಕ್ಷತಾ ಇಲಾಖೆಯನ್ನು ಸಂಪರ್ಕಿಸಿ ಅದನ್ನು ಪಡೆದುಕೊಳ್ಳಬಹುದು. ಬಳಿಕ ಕಾಟನ್ ಕ್ಯಾಂಡಿ ಮಾರಾಟ ಆರಂಭಿಸಬಹುದು. ಆಹಾರ ಸುರಕ್ಷತಾ ಪ್ರಮಾಣ ಪತ್ರ ಎಷ್ಟು ಬೇಗ ಸಿಗುತ್ತದೋ ಅಷ್ಟು ಬೇಗ ವ್ಯಾಪಾರ ಆರಂಭಿಸಬಹುದು. ಅಲ್ಲಿಯವರೆಗೆ ಕಾಟನ್ ಕ್ಯಾಂಡಿ ಮಾರಾಟವನ್ನು ನಿಷೇಧಿಸಲಾಗಿದೆ. ಈ ನಿಮಯ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು,' ಎಂದು ಆದೇಶದಲ್ಲಿ ತಿಳಿಸಲಾಗಿದೆ.
ವಿಡಿಯೋ ಮನವಿಯಲ್ಲಿ ಸೌಂದರರಾಜನ್, 'ಬಣ್ಣದ ಸೇರ್ಪಡೆಗಳನ್ನು ಹೊಂದಿರುವ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ನೀಡಬಾರದು ಎಂಬುದು ಜನರು ತಿಳಿದಿರಬೇಕು' ಎಂದಿದ್ದಾರೆ.
ಸರ್ಜನ್‍ನಿಂದ ಐಎಎಸ್ ಅಧಿಕಾರಿವರೆಗೆ; ರೂಪದಲ್ಲೂ, ವಿದ್ಯೆಯಲ್ಲೂ ಸರಸ್ವತಿ ಈ ರೇಣು
ರೋಡಮೈನ್ ಬಿ
ರೋಡಮೈನ್ ಬಿ, ಸಾಮಾನ್ಯವಾಗಿ RhB ಎಂದು ಹೇಳುವ ಇದು ರಾಸಾಯನಿಕ ಸಂಯುಕ್ತವಾಗಿದ್ದು ಅದು ಬಣ್ಣವಾಗಿ ಕಾರ್ಯ ನಿರ್ವಹಿಸುತ್ತದೆ. ಇದು ನೀರಿನಲ್ಲಿ ಕರಗುವ ಬಣ್ಣವಾಗಿದ್ದು, ಅದರ ಪ್ರಕಾಶಮಾನವಾದ ಗುಲಾಬಿ ಬಣ್ಣಕ್ಕೆ ಹೆಸರುವಾಸಿಯಾಗಿದೆ.
ರೋಡಮೈನ್ ಬಿ ಮನುಷ್ಯರಿಗೆ ವಿಷಕಾರಿಯಾಗಿದೆ ಮತ್ತು ಸೇವಿಸಿದರೆ ಜೀವಕೋಶಗಳು ಮತ್ತು ಅಂಗಾಂಶಗಳ ಮೇಲೆ ಆಕ್ಸಿಡೇಟಿವ್ ಒತ್ತಡವನ್ನು ಉಂಟು ಮಾಡಬಹುದು. ಆಹಾರದೊಂದಿಗೆ ಬೆರೆಸಿದಾಗ ಇದು ವಿಶೇಷವಾಗಿ ಅಪಾಯಕಾರಿಯಾಗಿದೆ. ಕಾಲಾನಂತರದಲ್ಲಿ ಯಕೃತ್ತಿನ ಹಾನಿ, ಗೆಡ್ಡೆಗಳು ಮತ್ತು ಕ್ಯಾನ್ಸರ್‌ಗೆ ಕಾರಣವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.