ಆಹಾ! ರುಚಿಕರವಾದ ಥಾಲಿ ಊಟಕ್ಕೆ ಫೇಮಸ್ ಬೆಂಗಳೂರಿನ ಈ 8 ಸ್ಥಳಗಳು

Published : May 13, 2025, 11:09 AM ISTUpdated : May 13, 2025, 11:19 AM IST
ಆಹಾ! ರುಚಿಕರವಾದ ಥಾಲಿ ಊಟಕ್ಕೆ ಫೇಮಸ್ ಬೆಂಗಳೂರಿನ ಈ 8 ಸ್ಥಳಗಳು

ಸಾರಾಂಶ

ಬೆಂಗಳೂರಿನ ಜನಪ್ರಿಯ ಥಾಲಿ ರೆಸ್ಟೋರೆಂಟ್‌ಗಳ ಪರಿಚಯ. ಎಂಪೈರ್‌ನಲ್ಲಿ ಮಾಂಸಾಹಾರಿ ಥಾಲಿ, ನಂದಿನಿ ಡಿಲಕ್ಸ್‌ನಲ್ಲಿ ಆಂಧ್ರ ಶೈಲಿ, ಕಾಮತ್‌ನಲ್ಲಿ ಉತ್ತರ ಕರ್ನಾಟಕದ ರುಚಿ, ಗ್ರಾಮೀಣ್‌ನಲ್ಲಿ ಸಸ್ಯಾಹಾರಿ ಉತ್ತರ ಭಾರತೀಯ ಥಾಲಿ, ನಾಗಾರ್ಜುನದಲ್ಲಿ ಆಂಧ್ರ ಥಾಲಿ, ಹಳ್ಳಿಮನೆಯಲ್ಲಿ ಕರ್ನಾಟಕದ ಸಾಂಪ್ರದಾಯಿಕ ಊಟ, ಕರ್ನಾಟಿಕ್‌ನಲ್ಲಿ ದಕ್ಷಿಣ ಭಾರತದ ಸಸ್ಯಾಹಾರಿ ಥಾಲಿ ಮತ್ತು MTRನಲ್ಲಿ ಕರ್ನಾಟಕದ ವಿಶೇಷ ತಿಂಡಿ ಥಾಲಿ ಲಭ್ಯ.

ನೀವು ಬೆಂಗಳೂರಿಗರಾಗಿದ್ದರೆ ಅಥವಾ ಬೆಂಗಳೂರಿಗೆ ಬಂದು ಹೋಗುತ್ತಿದ್ದರೆ ಸದಾ ಹೋಟೆಲ್‌ ಅಥವಾ ರೆಸ್ಟೋರೆಂಟ್‌ಗಳು ಜನಜಂಗುಳಿಯಿಂದ ಕೂಡಿರುವುದನ್ನು ಗಮನಿಸಿರುತ್ತೀರಿ. ಅದರಲ್ಲೇನು ವಿಶೇಷ...?, ಮಹಾನಗರಿಯಲ್ಲಿ ಬ್ಯೂಸಿ ಲೈಫ್ ಸ್ಟೈಲ್ ಮಧ್ಯೆ ಹೆಚ್ಚಿನವರು ಊಟಕ್ಕೆ ಅವಲಂಬಿಸಿರುವುದೇ ಹೋಟೆಲ್‌ಗಳನ್ನು ಅಲ್ಲವೇ ಅಂದುಕೊಳ್ಳಬಹುದು. ಆದರೆ ನಾವಿಂದು ಹೇಳಲು ಹೊರಟಿರುವುದು ಕೇವಲ ಹೋಟೆಲ್‌ ಬಗ್ಗೆ ಅಲ್ಲ, ಆ ಹೋಟೆಲ್‌ಗಳ ವಿಶೇಷತೆಯ ಬಗ್ಗೆ. ಇಲ್ಲಿನ ಊಟ ಮಾಮೂಲಿ ಊಟವಲ್ಲ, ನೀವು ಬಯಸಿದಕ್ಕಿಂತ ಹೆಚ್ಚಿನದನ್ನು ನೋಡಬಹುದು. ಅಂದರೆ ಒಂದೇ ತಟ್ಟೆಯಲ್ಲಿ ವಿವಿಧ ಫ್ಲೇವರ್‌ನ ಬಗೆಬಗೆಯ ಖಾದ್ಯಗಳನ್ನು ಸವಿಯಬಹುದು. ಇಲ್ಲಿನ ಊಟ ಸವಿದ ಮಂದಿ ಸ್ವರ್ಗಕ್ಕೆ ಮೂರೇ ಗೇಣು ಅಂತಾರೆ. ಹೌದು, ಉತ್ತರ ಭಾರತದ ಖಾದ್ಯಗಳಿಂದ ಹಿಡಿದು ದಕ್ಷಿಣ ಭಾರತದ ಮನೆ ಊಟಗಳವರೆಗೆ ವೈವಿಧ್ಯಮಯವಾದ ರುಚಿಕರವಾದ ಥಾಲಿಯನ್ನು ಒದಗಿಸುತ್ತವೆ ಈ ಹೋಟೆಲ್‌ಗಳು. ಮತ್ತೇಕೆ ತಡ ಥಾಲಿ ಪ್ರಿಯರ ಹೊಟ್ಟೆ ಚುರುಗುಡುತ್ತಿದ್ದರೆ ಬೆಂಗಳೂರಿನಲ್ಲಿರುವ ಫುಲ್ ಥಾಲಿ ಸವಿಯಬಹುದಾದ ಆ ರೆಸ್ಟೋರೆಂಟ್‌ಗಳು ಎಲ್ಲಿವೆ ನೋಡೋಣ....  

ಎಂಪೈರ್ ರೆಸ್ಟೋರೆಂಟ್ (Empire Restaurant) 
ಎಂಪೈರ್ ರೆಸ್ಟೋರೆಂಟ್ ಬೆಂಗಳೂರಿನಲ್ಲಿ ಆಹಾರ ಪ್ರಿಯರ ನೆಚ್ಚಿನ ತಾಣಗಳಲ್ಲಿ ಒಂದಾಗಿದೆ. ಇಲ್ಲಿ ತಡರಾತ್ರಿಯೂ ನಿಮಗೆ ಸರ್ವಿಸ್ ಕೊಡಲಾಗುತ್ತದೆ. ಈ ರೆಸ್ಟೋರೆಂಟ್‌ನಲ್ಲಿ ಜನರಿಗೆ ಮಾಂಸಾಹಾರಿ ಆಹಾರವೆಂದರೆ ಬಹಳ ಇಷ್ಟ. ಚಿಕನ್ ಥಾಲಿಯಲ್ಲಿ ತುಪ್ಪದ ಅನ್ನ, ಕಾಯಿನ್ ಪರೋಟಾ, ಕಬಾಬ್‌, ಚಿಲ್ಲಿ ಚಿಕನ್, ಬಟರ್ ಚಿಕನ್, ಚಿಕನ್ ವರವಲ್ ಮತ್ತು ಇನ್ನೂ ಹೆಚ್ಚಿನ ವೈಶಿಷ್ಟ್ಯ ಅಡುಗೆಗಳನ್ನು ಕಾಣಬಹುದು. ಇದರ ಒಳಾಂಗಣ ನೋಡಲು ಭಾರೀ ಸಿಂಪಲ್. ಇಲ್ಲಿನ ವಾತಾವರಣ ನೋಡಿದರೆ ಯಾವಾಗಲೂ ಯುವ ಪೀಳಿಗೆ ಜನರೇ ಒಳಗೆ ಮತ್ತು ಹೊರಗೆ ಓಡಾಡುವುದನ್ನು ಕಾಣಬಹುದು. 

ಸ್ಥಳ: 103, ಇಂಡಸ್ಟ್ರಿಯಲ್ ಏರಿಯಾ, 5ನೇ ಬ್ಲಾಕ್, ಜ್ಯೋತಿ ನಿವಾಸ್ ಕಾಲೇಜು ಹತ್ತಿರ, ಕೋರಮಂಗಲ 5ನೇ ಬ್ಲಾಕ್, ಬೆಂಗಳೂರು
ಸಮಯ: ಬೆಳಗ್ಗೆ 11 ರಿಂದ ಬೆಳಗ್ಗೆ 2 ರವರೆಗೆ

ನಂದಿನಿ ಡೀಲಕ್ಸ್ (Nandhini Deluxe) 
ಬೆಂಗಳೂರಿನ ನಂದಿನಿ ಡಿಲಕ್ಸ್  ಅಂದ್ರೆ ಪ್ರತಿಯೊಬ್ಬರಿಗೂ ನೆನಪಾಗುವುದು ಆಂಧ್ರ ಸ್ಟೈಲ್ ಅಡುಗೆ. ಹೌದು, ಇದು ಆಂಧ್ರ ಊಟಕ್ಕೆ ಹೆಸರುವಾಸಿಯಾಗಿದ್ದು, ಈ ರೆಸ್ಟೋರೆಂಟ್‌ನಲ್ಲಿ  ಬಾಳೆ ಎಲೆಗಳಲ್ಲಿ ಊಟ ಬಡಿಸಲಾಗುತ್ತದೆ. ಮೀಲ್ಸ್ ಥಾಲಿಯಲ್ಲಿ ಹೊಟ್ಟೆ ತುಂಬಾ ಅನ್ನ, ಸಾಂಬಾರ್, ರಸಂ, ದಾಲ್, ಮೊಸರು, ಮಜ್ಜಿಗೆ, ವಿಶೇಷ ಆಂಧ್ರ ಚಟ್ನಿ, ಕರಮ್ ಪೋಡಿ ಮತ್ತು ಆಂಧ್ರ ಉಪ್ಪಿನಕಾಯಿ ಸೇರಿವೆ. ರೆಸ್ಟೋರೆಂಟ್‌ ಅನ್ನು 1989 ರಲ್ಲಿ ಎನ್. ಆನಂದ ಅವರು ಸ್ಥಾಪಿಸಿದರು. ಬೆಂಗಳೂರು ನಗರದಾದ್ಯಂತ 15 ಮಳಿಗೆಗಳನ್ನು ಹೊಂದಿರುವ  ನಂದಿನಿ ಡಿಲಕ್ಸ್‌ನಲ್ಲಿ ಫ್ಯಾಮಿಲಿ ಸಮಾರಂಭಗಳು ಮತ್ತು ಕಾರ್ಪೊರೇಟ್ ಕಾರ್ಯಕ್ರಮಗಳಿಗೆ ಅನುಗುಣವಾಗಿ ಥಾಲಿ ಸಿದ್ಧವಾಗುತ್ತದೆ.  

ಸ್ಥಳ: 114/2, ಲಾಲ್ ಬಾಗ್ ಕೋಟೆ ರಸ್ತೆ, ಮಿನರ್ವ ಸರ್ಕಲ್, ಬಸವನಗುಡಿ, ಬೆಂಗಳೂರು
ಸಮಯ: ಬೆಳಗ್ಗೆ 11 ರಿಂದ ರಾತ್ರಿ 11 ರವರೆಗೆ

ಕಾಮತ್ ರೆಸ್ಟೋರೆಂಟ್ (Kamat Restaurant) 
ಕಾಮತ್ ಬೆಂಗಳೂರಿನ ಉತ್ತರ ಕರ್ನಾಟಕದ ಪಾಕಪದ್ಧತಿಗೆ  ಹೆಸರುವಾಸಿಯಾಗಿದೆ. ಈ ರೆಸ್ಟೋರೆಂಟ್‌ನಲ್ಲಿ ಸಾಂಪ್ರದಾಯಿಕ ಥಾಲಿಯಲ್ಲಿ ಜೋಳದ ರೊಟ್ಟಿ, ಬದನೆಕಾಯಿ ಕರಿ ಮತ್ತು ಕಾಳುಗಳು ಹೀಗೆ ಅನೇಕ ವಿಶೇಷತೆಗಳಿವೆ. ಆದರೆ ಇಲ್ಲಿಗೆ ಬಂದವರು ಹೆಚ್ಚು ಇಷ್ಟಪಡುವುದು ವಿಶಿಷ್ಟವಾದ ಸಾಸ್‌ಗಳು, ವಡೆ, ಇಡ್ಲಿ ಮತ್ತು ದೋಸೆಗಳನ್ನು ಒಳಗೊಂಡಿರುವ ದಕ್ಷಿಣ ಭಾರತದ ಥಾಲಿ. ಇಲ್ಲಿನ ವಾತಾವರಣ ನೋಡಿದರೆ ಕರ್ನಾಟಕದ ಸಾಂಸ್ಕೃತಿಕ ಪರಂಪರೆ ಎದ್ದು ಕಾಣುತ್ತದೆ. ಹಳ್ಳಿಗಾಡಿನ ಶೈಲಿ, ಮನೆಯ ಊಟದ ಅನುಭವಕ್ಕಾಗಿ ಒಮ್ಮೆಯಾದರೂ ಇಲ್ಲಿಗೆ ಭೇಟಿ ನೀಡಿ. 

ಸ್ಥಳ: ಲಾಬಿ ಬಿಲ್ಡಿಂಗ್, ಜೆಸಿ ರಸ್ತೆ, ಸಿ ಬ್ಲಾಕ್, ನಾಗರತ್‌ಪೇಟೆ, ಬೆಂಗಳೂರು
ಸಮಯ: ಬೆಳಗ್ಗೆ 10 ರಿಂದ ರಾತ್ರಿ 11 ರವರೆಗೆ

ಗ್ರಾಮೀಣ್ (Gramin) 
ಬೆಂಗಳೂರಿನ ಹೃದಯಭಾಗದಲ್ಲಿರುವ ಗ್ರಾಮೀಣ್, ರುಚಿಕರವಾದ ಸಸ್ಯಾಹಾರಿ ಉತ್ತರ ಭಾರತೀಯ ಥಾಲಿಗೆ ಜನಪ್ರಿಯ. ಇಲ್ಲಿನ ವಾತವರಣ ನೋಡುವುದಕ್ಕೆ ಬಹಳ ಸರಳವಾಗಿ ಕಂಡರೂ ಊಟಕ್ಕೆ ಸೂಕ್ತವಾಗಿದೆ. ಅಲಂಕಾರವು ಗ್ರಾಮೀಣ ಭಾಗವನ್ನೇ ಒತ್ತಿಹೇಳುತ್ತದೆ. ಈ ಕಾಸ್ಮೋಪಾಲಿಟನ್ ನಗರದ ಹೃದಯಭಾಗದಲ್ಲಿಯೇ  ಮನೆಯ ವಾತವರಣ ಹಾಗೂ ಊಟ ಸಿಗಬೇಕೆಂದರೆ ಗ್ರಾಮೀಣ್‌ಗೆ ಮುಲಾಜಿಲ್ಲದೆ ಬನ್ನಿ. ಸಸ್ಯಾಹಾರಿ ಥಾಲಿಯಲ್ಲಿ  ಪನೀರ್ ಸಬ್ಜಿ, ದಾಲ್, ಫುಲ್ಕಾಸ್ ಮತ್ತು ಸಿಹಿ ತಿನಿಸುಗಳನ್ನು ಒಟ್ಟಿಗೆ ಕೊಡಲಾಗುತ್ತದೆ. 

ಸ್ಥಳ: 140, ಗ್ರೌಂಡ್, ರಹೇಜಾ ಆರ್ಕೇಡ್, 139, ಗಣಪತಿ ದೇವಸ್ಥಾನ ರಸ್ತೆ, ದಿ ಫೋರಂ (ನೆಕ್ಸಸ್) ಮಾಲ್ ಹತ್ತಿರ, 7ನೇ ಬ್ಲಾಕ್, ಕೋರಮಂಗಲ, ಬೆಂಗಳೂರು
ಸಮಯ: ಮಧ್ಯಾಹ್ನ 12 ರಿಂದ 3:30 ರವರೆಗೆ ಮತ್ತು ಸಂಜೆ 7 ರಿಂದ 11 ರವರೆಗೆ

ನಾಗಾರ್ಜುನ (Nagarjuna) 
ಇದು ಕೂಡ ಆಂಧ್ರ ಸ್ಟೈಲ್ ಅಡುಗೆಗೆ ಹೆಸರುವಾಸಿ. ನಾಗಾರ್ಜುನದ ಥಾಲಿಯು  ಸಾಂಬಾರ್, ಅನ್ನ, ದಾಲ್ (ಪಪ್ಪು), ಆವಕೈ (ಮಾವಿನ ಉಪ್ಪಿನಕಾಯಿ) ಮತ್ತು ಪೋಡಿಯೊಂದಿಗೆ ಹಬ್ಬದ ಊಟವನ್ನೇ ಕೊಡುತ್ತದೆ. ಜೊತೆಗೆ ತುಪ್ಪ ಮತ್ತು ಮೊಸರನ್ನು ಮನಸ್ಸುಪೂರ್ವಕವಾಗಿ ಬಡಿಸಲಾಗುತ್ತದೆ. ಇದು ಶಾಂತ ಮತ್ತು ಕುಟುಂಬ ಸ್ನೇಹಿ ಸೆಟ್ಟಿಂಗ್ ಅನ್ನು ಒಳಗೊಂಡಿದ್ದು, ಬಾಳೆ ಎಲೆಗಳು ಮತ್ತು ಹಸಿರು ಎಲೆಗಳನ್ನು ಅನುಕರಿಸುವ ಒಳಾಂಗಣಗಳು ಆಂಧ್ರ ಮೀಲ್ಸ್ ನಿಜವಾದ ಫೀಲ್ ಕೊಡುತ್ತದೆ. 

ಸ್ಥಳ: 174/1, 1ನೇ ಮಹಡಿ, ದೊರೆಸಾನಿಪಾಳ್ಯ, ಬಿಜಿ ರಸ್ತೆ, ಬಿಳೇಕಹಳ್ಳಿ, ಬೊಮ್ಮನಹಳ್ಳಿ, ಬಿಟಿಎಂ, ಬೆಂಗಳೂರು
ಸಮಯ: ಮಧ್ಯಾಹ್ನ 12 ರಿಂದ 3:45 ರವರೆಗೆ ಮತ್ತು ಸಂಜೆ 7 ರಿಂದ 10:45 ರವರೆಗೆ

ಹಳ್ಳಿಮನೆ ರೆಸ್ಟೋರೆಂಟ್ (Hallimane Restaurant) 
ಕರ್ನಾಟಕದ ಅಡುಗೆಯ ನಿಜವಾದ ಟೇಸ್ಟ್ ಬೇಕೆನ್ನುವವರು ಹಳ್ಳಿಮನೆಗೆ ಬನ್ನಿ. ಇಲ್ಲಿ ರಾಗಿ ಮುದ್ದೆ, ಬಿಸಿಬೇಳೆ ಬಾತ್, ಕೋಸಂಬರಿ ಮತ್ತು ಸಾಂಪ್ರದಾಯಿಕ ಸಿಹಿತಿಂಡಿಗಳು ಬಹಳ ಜನಪ್ರಿಯ. ಬಾಳೆ ಎಲೆಯಲ್ಲಿ ಬಡಿಸುವ ಈ ಆರೋಗ್ಯಕರ ಊಟವು ಕರ್ನಾಟಕದ ಶ್ರೀಮಂತ ಆಹಾರ ಸಂಸ್ಕೃತಿಯ ನಿಜವಾದ ಸಾರವನ್ನು ಸೆರೆಹಿಡಿಯುತ್ತದೆ. ಬೆಂಗಳೂರಿನ ವಿಂಟೇಜ್ ಬದಿಯಲ್ಲಿರುವ ಇದರ ಒಳಾಂಗಣವು ಹೆಂಚಿನ ಛಾವಣಿಗಳು ಮತ್ತು ನೈಸರ್ಗಿಕ ಇಟ್ಟಿಗೆ ಗೋಡೆ ಹೊಂದಿಸಿ ಹಳ್ಳಿಯ ವಾತವರಣ ಕಲ್ಪಿಸಿದೆ. 

ಸ್ಥಳ: ಸಂಪಿಗೆ ರಸ್ತೆ, 3ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು, ಕರ್ನಾಟಕ 560003
ಸಮಯ: ಬೆಳಗ್ಗೆ 7 ರಿಂದ ರಾತ್ರಿ 10 ರವರೆಗೆ

ಕರ್ನಾಟಿಕ್ (Karnatic) 

ದಕ್ಷಿಣ ಭಾರತದ ಸಸ್ಯಾಹಾರಿ ಪಾಕಪದ್ಧತಿಯಲ್ಲಿ ಪರಿಣಿತಿ ಹೊಂದಿರುವ ಕರ್ನಾಟಿಕ್, ಕರ್ನಾಟಕ ಶೈಲಿಯ ಒಂದು ಪ್ರಸಿದ್ಧ ಉಪಾಹಾರ ಗೃಹವಾಗಿದೆ. ಇಲ್ಲಿನ ಥಾಲಿ ದೋಸೆ, ಕಡುಬು, ಸಾಂಬಾರ್ ಮತ್ತು ರುಚಿಕರವಾದ ತೆಂಗಿನಕಾಯಿ ಆಧಾರಿತ ಕರಿ ಒಳಗೊಂಡಿರುತ್ತದೆ. ವಿಶೇಷವಾದ "ಬಿರಿಯಾನಿ ಥಾಲಿಗಳು" ಲಭ್ಯ. ಹಳದಿ ಬಲ್ಬ್ ಮತ್ತು ಬೆಚ್ಚಗಿನ ಬೆಳಕಿನ ಒಳಾಂಗಣ ಮತ್ತು ಮಣ್ಣಿನ ಗೋಡೆಯ ಮೇಲೆ ವರ್ಣಚಿತ್ರಗಳು ಹಿತವಾದ ಅನುಭವ ನೀಡುತ್ತವೆ. 

ಸ್ಥಳ: 2 ನೇ ಮಹಡಿ, ನಂಬರ್ 30, ಚರ್ಚ್ ಸೇಂಟ್ ಎದುರು. ಎಸ್‌ಬಿಐ ಬ್ಯಾಂಕ್, ಶಾಂತಲಾ ನಗರ, ಅಶೋಕ್ ನಗರ, ಬೆಂಗಳೂರು, ಕರ್ನಾಟಕ 560001
ಸಮಯ: ಮಧ್ಯಾಹ್ನ 12 ರಿಂದ ಬೆಳಿಗ್ಗೆ 11 ರವರೆಗೆ


ಮಾವಳ್ಳಿ ಟಿಫಿನ್ ರೂಮ್ (MTR)
ಬೆಂಗಳೂರಿನ ಪ್ರಸಿದ್ಧ ಉಪಾಹಾರ ಗೃಹವಾದ MTR ನ ಥಾಲಿಯು ಪರಿಮಳಯುಕ್ತ ಪುಲಾವ್, ಚಟ್ನಿಗಳು, ತರಕಾರಿ ಕರಿಗಳು ಮತ್ತು ಪ್ರಸಿದ್ಧ ಫಿಲ್ಟರ್ ಕಾಫಿ ಸೇರಿದಂತೆ ಕರ್ನಾಟಕದ ಖಾದ್ಯಕ್ಕೆ ಹೆಸರುವಾಸಿ. ಸಂಜೆಯ ಥಾಲಿಯು ರವಾ ಇಡ್ಲಿ, ಬೋಂಡಾ ಸೂಪ್, ಅಕ್ಕಿ ರೊಟ್ಟಿ, ಶ್ಯಾವಿಗೆ ಭಾತ್ ಮತ್ತು ಇನ್ನೂ ಹೆಚ್ಚಿನ ರುಚಿಕರ ಖಾದ್ಯ ಒಳಗೊಂಡಿರುತ್ತದೆ. ಇಲ್ಲಿನ ಆಸನ ಮತ್ತು ವಾತಾವರಣ ಸಾಧಾರಣವಾಗಿ ಕಂಡರೂ ಪ್ರಾಚೀನ ಪರಂಪರೆ ಮತ್ತು ಘಮ್ ಎನ್ನುವ ಪರಿಮಳ ಅನುಭವಿಸಲು ಇಲ್ಲಿಗೆ ಬರಲೇಬೇಕು. 

ಸ್ಥಳ: 14, ಲಾಲ್‌ಬಾಗ್ ರಸ್ತೆ, ಬೆಂಗಳೂರು 560027, ಕಬ್ಬನ್ ಪಾರ್ಕ್ ಹತ್ತಿರ
ಸಮಯ: ಬೆಳಗ್ಗೆ 6:30 ರಿಂದ 11 ರವರೆಗೆ ಮತ್ತು ಮಧ್ಯಾಹ್ನ 12:30 ರಿಂದ ರಾತ್ರಿ 9 ರವರೆಗೆ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಸ್ಯಹಾರಿಗಳಾಗಿ ಬದಲಾದ ಬಾಲಿವುಡ್ ತಾರೆಯರು… ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
World Idli Day: ಇಡ್ಲಿ ದಿನದಂದೇ ದೋಸೆ ತಿಂದ ಕಥೆ ನಿಮಗೆ ಗೊತ್ತಾ? ದೀಪಿಕಾ ಪಡುಕೋಣೆ ಈ ಯಡವಟ್ಟು ಮಾಡಿದ್ಯಾಕೆ?