ಅಬ್ಬಬ್ಬಾ, ಇಲ್ಲಿರುವಷ್ಟು ಆಹಾರ ವೆರೈಟಿ ಎಲ್ಲೂ ಸಿಗಲಿಕ್ಕಿಲ್ಲ ಎಂದು ಭಾರತಕ್ಕೆ ಬಂದ ಪ್ರತಿಯೊಬ್ಬರೂ ಬಾಯಿ ಚಪ್ಪರಿಸುತ್ತಾ ಹೇಳಿಯೇ ತೀರುತ್ತಾರೆ. ಅಷ್ಟೆಲ್ಲ ವೆರೈಟಿಯ ರುಚಿಯಾದ ಆಹಾರಗಳಿದ್ದೂ, ಒಂದಿಷ್ಟು ಚಿತ್ರವಿಚಿತ್ರ ಆಹಾರಗಳೂ ಇಲ್ಲಿ ದೊರೆಯುತ್ತವೆ. ಅವು ಬಹುಷಃ ಜಗತ್ತಿನ ಬೇರೆಲ್ಲೂ ಇರಲಾರದಂಥವು.
ಚಿತ್ರವಿಚಿತ್ರವಾದ ಅಡುಗೆ, ಆಹಾರ ಎಂದ ಕೂಡಲೇ ನೆನಪಾಗುವುದೇ ಚೀನಾ. ಅವರು ಬಿಡಿ, ನಾಯಿಯಿಂದ ಹಿಡಿದು ಹಾವುಚೇಳುಗಳವರೆಗೂ ಬಿಡುವವರಲ್ಲ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಮಸಾಲೆಗೆ, ರುಚಿಗೆ, ಸಸ್ಯಾಹಾರಕ್ಕೆ, ವೈವಿಧ್ಯತೆಗೆ ಹೆಸರಾದ ಭಾರತದಲ್ಲಿ ಕೂಡಾ ಒಂದಿಷ್ಟು ವಿಭಿನ್ನವಾದ, ಊಹಿಸಲಸಾಧ್ಯವಾದ ತಿಂಡಿತಿನಿಸುಗಳಿವೆ. ಕೆಲ ಭಾಗಗಳಲ್ಲಿ ಅವು ಸರ್ವೇ ಸಾಮಾನ್ಯವಾಗಿಯೂ ಇವೆ ಎಂದರೆ ಆಶ್ಚರ್ಯವಾದೀತು.
ಈ ಕೆಲ ತಿನಿಸುಗಳು ಭಾರತದಲ್ಲಿ ಮಾತ್ರ ಕಾಣಸಿಗಲು ಸಾಧ್ಯ.
ಈರುಳ್ಳಿ ಹಲ್ವಾ
ಈರುಳ್ಳಿ ಕಣ್ಣಲ್ಲಿ ನೀರು ಬರಿಸೋದೇನೋ ಹೌದು. ಆದ್ರೆ ಇದರಿಂದ ಬಾಯಲ್ಲಿ ನೀರೂರಿಸುವಂಥ ಹಲ್ವಾ ತಯಾರಿಸೋಕೆ ಸಾಧ್ಯಾನಾ? ಕಲ್ಪನೆಗೂ ನಿಲುಕುತ್ತಿಲ್ಲ ಅಲ್ಲವೇ ? ಆದರೆ, ಇಂಥದ್ದೊಂದು ಸಿಹಿತಿಂಡಿ ನಮ್ಮ ದೇಶದಲ್ಲೇ ಸಿಗುತ್ತದೆ. ಹೌದು, ಕ್ಯಾರೆಟ್ ಹಲ್ವಾ, ಕುಂಬಳಕಾಯಿ ಹಲ್ವಾವನ್ನು ನಾವು ಸವಿಯುವಷ್ಟೇ ಸಲೀಸಾಗಿ ಕೆಲವರು ಈರುಳ್ಳಿ ಹಲ್ವಾವನ್ನು ಸವಿಯುತ್ತಾರೆ. ಈರುಳ್ಳಿಯನ್ನು ಬೆಣ್ಣೆಯಲ್ಲಿ ಚೆನ್ನಾಗಿ ಫ್ರೈ ಮಾಡಿ, ಬಳಿಕ ಸಣ್ಣ ಉರಿಯಲ್ಲಿ ಬೇಯಿಸಿ, ನಂತರ ಹಾಲು ಹಾಗೂ ಸಕ್ಕರೆ ಸೇರಿಸಿ ಪಾಕ ಬರಿಸಲಾಗುತ್ತದೆ!
ಖೋರಿಸಾ
ಇದು ಅಸ್ಸಾಂನಲ್ಲಿ ಸಿಕ್ಕಾಪಟ್ಟೆ ಜನಪ್ರಿಯ. ಬಿದಿರಿನ ಕಳಲೆಯನ್ನು ಕತ್ತರಿಸಿ, ಅಥವಾ ಅದನ್ನು ಉಪ್ಪಿನಕಾಯಿಯಾಗಿಸಿ ಇಲ್ಲವೇ ಅದನ್ನು ಕೊಳೆಸಿ ಬಳಸಲಾಗುತ್ತದೆ. ಮಲೆನಾಡಿನ ಭಾಗಗಳಲ್ಲಿ ಕೂಡಾ ಕಳಲೆಯ ಆಹಾರಗಳನ್ನು ಕಾಣಬಹುದು.
ಅಧ್ಯಾತ್ಮ, ತತ್ವಜ್ಞಾನದೊಂದಿಗೆ ಕನೆಕ್ಟ್ ಮಾಡುತ್ತೆ ಭಾರತೀಯ ಆಹಾರ ...
ಕಪ್ಪು ಅನ್ನ
ಕುಚ್ಚಿಗೆ ಅಕ್ಕಿ ಅಥವಾ ಕೆಂಪು ಬಣ್ಣದ ಅಕ್ಕಿ ದಕ್ಷಿಣ ಭಾರತದಲ್ಲಿ ಹೇಗೆ ಜನಪ್ರಿಯತೆ ಪಡೆದು ಬಳಸಲ್ಪಡುತ್ತವೋ, ಹಾಗೆಯೇ ಮಣಿಪುರ, ಕೇರಳ ಹಾಗೂ ಉತ್ತರ ಬಂಗಾಳದಲ್ಲಿ ಕಪ್ಪು ಬಣ್ಣದ ಅಕ್ಕಿಯನ್ನು ಬಳಸಲಾಗುತ್ತದೆ. ಇದು ಬಹಳ ಪೋಷಕಸತ್ವಗಳನ್ನು ಹೊಂದಿದ್ದು, ಮ್ಯಾಜಿಕ್ ರೈಸ್ ಎಂಬ ಹೆಸರು ಪಡೆದಿದೆ.
ಫಾನ್ ಪ್ಯುಟ್
ನಮಗೆಲ್ಲರಿಗೂ ಆಲೂಗಡ್ಡೆ ಇಷ್ಟವೇ. ಅದನ್ನು ಬೇಯಿಸಿ, ಕಾವಲಿಗೆ ಹಾಕಿ, ಕರಿದು, ಸಾಂಬಾರ್ ಮಾಡಿ, ಪಲ್ಯ ಮಾಡಿ- ಹೇಗೇ ರೂಪ ಕೊಟ್ಟರೂ ಆಲೂಗಡ್ಡೆಯ ರುಚಿಗೆ ಮತ್ಯಾವುದೂ ಸಾಟಿಯಾಗಲಾರದು. ಆದರೆ, ಈ ಆಲೂಗಡ್ಡೆಯನ್ನು ಭಾರತದ ಪೂರ್ವ ಭಾಗಗಳಲ್ಲಿ ಇನ್ನೂ ಒಂದು ವಿಶೇಷ ರೀತಿಯಲ್ಲಿ ಬಳಸುತ್ತಾರೆ. ಹೇಗೆ ಅಂತೀರಾ, ಮಣ್ಣಲ್ಲೇ ಆಲೂಗಡ್ಡೆಗಳನ್ನು ಕೊಳೆಯಲು ಬಿಟ್ಟು, ಅವು ಕೊಳೆತ ಬಳಿಕ ಹೊರತೆಗೆದು ಮಸಾಲೆ ಹಾಕಿಕೊಂಡು ಸೇವಿಸಲಾಗುತ್ತದೆ.
ಬೇನಾಮಿ ಖೀರ್
ನೀವು ಅಕ್ಕಿ, ಬೇಳೆ, ತರಕಾರಿಗಳು, ಹಣ್ಣುಗಳು ಮುಂತಾದವುಗಳಿಂದ ಖೀರ್ ತಯಾರಿಸಿ ಪಾಕಪ್ರಾವೀಣ್ಯತೆ ಮೆರೆದಿರಬಹುದು. ಆದರೆ, ಬೆಳ್ಳುಳ್ಳಿಯಿಂದ ಖೀರ್ ಮಾಡುವ ಕಲೆ ನಿಮ್ಮಲ್ಲಿದೆಯೇ? ಕೇಳಿಯೇ ವಾಕರಿಕೆ ಬರುತ್ತಿದೆಯೇ? ಆದರೆ, ಇದೇನು ಕಲ್ಪನೆಯಲ್ಲ. ಇಂಥದೊಂದು ಬೇನಾಮಿ ಖೀರ್ ಅಸ್ತಿತ್ವದಲ್ಲಿದೆ. ಬೆಳ್ಳುಳ್ಳಿಯನ್ನು ಚೆನ್ನಾಗಿ ಜಜ್ಜಿ ಗಂಟೆಗಳ ಕಾಲ ಹಾಲಿನಲ್ಲಿ ಬೇಯಿಸಿ, ಬಳಿಕ ಸಕ್ಕರೆ, ಡ್ರೈಫ್ರೂಟ್‌ಗಳನ್ನೆಲ್ಲ ಹಾಕಿ ಬೆಳ್ಳುಳ್ಳಿ ಖೀರ್ ತಯಾರಿಸುತ್ತಾರೆ. ಹಬ್ಬಕ್ಕೆ ಈರುಳ್ಳಿ ಬೆಳ್ಳುಳ್ಳಿ ವರ್ಜ್ಯವಾಗಿರುವದರಿಂದ ಇತರೆ ದಿನಗಳನ್ನು ವಿಶೇಷವಾಗಿಸಲು ಇಂಥದೊಂದು ಸ್ಪೆಶಲ್ ರೆಸಿಪಿ ಪ್ರಯತ್ನಿಸಿ ನೋಡಬಹುದು.
ಅತಿ ಹೆಚ್ಚು ಹುಡುಕಾಡಿದ ಆಹಾರಗಳಲ್ಲಿ ಮಸಾಲೆದೋಸೆಗೆ ಸ್ಥಾನ-ಮಾನ, ಜೈ...
ಕೆಂಪಿರುವೆ ಚಟ್ನಿ
ಮರಗಳ ಮೇಲೆ ಕೆಂಪಿರುವೆಗಳು ಸಾಲಿನಲ್ಲಿ ಸಾಗುವುದನ್ನು ನೋಡುತ್ತಿದ್ದರೇ ಮೈಯ್ಯಲ್ಲಿ ಕೆಂಪು ಬಕ್ಕೆಗಳೆದ್ದಂತಾಗುತ್ತದಲ್ಲವೇ ? ಸ್ವರ ಹೋದವರಿಗೆ ಕೆಂಪಿರುವ ಬಾಯಿಗೆ ಹಾಕಿಕೋ, ಸ್ವರ ಸರಿಯಾಗುತ್ತದೆ ಎಂದು ತಮಾಷೆ ಮಾಡುವುದೂ ಉಂಟು. ಆದರೆ, ಇಂಥ ಈ ಇರುವೆಗಳನ್ನು ನೋಡಿದರೆ ಬಾಯಲ್ಲಿ ನೀರೂರುತ್ತದೆ ಚತ್ತೀಸ್‌ಗಢದ ಸ್ಥಳೀಯ ಬುಡಕಟ್ಟಿನವರಿಗೆ. ಹೌದು, ಅವರು ಈ ಕೆಂಜಗದ ಗೂಡಿನಿಂದ ಸಾವಿರಾರು ಕೆಂಪಿರುವೆಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಕಲ್ಲಿನಲ್ಲಿ ಅರೆದು ಛಪ್ರಾ ಎಂಬ ಚಟ್ನಿ ತಯಾರಿಸುತ್ತಾರೆ. ಹುಳಿಹುಳಿಯಾಗಿರುವ ಈ ಚಟ್ನಿ ಅನ್ನಕ್ಕೆ ಬಹಳ ಸೊಗಸಾಗಿರುತ್ತದೆಯಂತೆ!
ನಾಹ್ಕಮ್
ಇದು ನೋಡಲು ಮೀನಿನಿಂದ ತಯಾರಿಸಿದ ಸಾಮಾನ್ಯ ತಿನಿಸಿನಂತೆ ಕಾಣುತ್ತದೆ. ಆದರೆ ಗ್ಯಾರೋ ಬುಡಕಟ್ಟಿನ ಜನತೆ ಈ ಸಾಮಾನ್ಯ ಮೀನನ್ನು ಒಣಗಿಸಿ, ಉಪ್ಪು ಹಾಕಿ, ಬೂದಿ ಹಾಗೂ ತರಕಾರಿಗಳನ್ನು ಸೇರಿಸಿ ತಯಾರಿಸುತ್ತಾರೆ. ಬಹಳ ಭಯಂಕರವಾದ ವಾಸನೆಯುಳ್ಳ ತಿನಿಸಿದು.
ಎರಿ ಪೋಲು ಸಿಲ್ಕ್‌ವಾರ್ಮ್
ಅಸ್ಸಾಂನಲ್ಲಿ ರೇಶ್ಮೆ ಹುಳುಗಳು ಕಂಡರೆ ಸಾಕು, ಬಾಯಲ್ಲಿ ನೀರು ಬರುತ್ತದೆಯಂತೆ. ಈ ರೇಶ್ಮೆಹುಳುಗಳಿಂದ ತಯಾರಿಸುವ ಎರಿ ಪೋಲು ಎಂಬ ಆಹಾರ ಅಸ್ಸಾಂ ರಾಜ್ಯದ ಹೆಮ್ಮೆಯ ಆಹಾರವಾಗಿದ್ದು, ಇದು ಬಾಯಲ್ಲಿಟ್ಟರೆ ಕರಗುವುದಂತೆ.
ಫ್ರೈಡ್ ಸ್ನೇಲ್ಸ್
ಬಸವನಹುಳು ನೋಡಿದರೆ ಅಸಹ್ಯ ಎನಿಸುತ್ತದೆ ಅಲ್ಲವೇ? ಆ ಸಿಂಬಳ ಸಿಂಬಳ ಮೈ, ಒದ್ದೆ ಮುದ್ದೆಯಾಗಿ ವಿಚಿತ್ರ ರೂಪದಿಂದ ಮೈ ಝುಂ ಎನಿಸುತ್ತವೆ ಈ ಹುಳುಗಳು. ಆದರೆ ಒಡಿಶಾದಲ್ಲಿ ಮಾತ್ರ ಇವನ್ನು ಒಟ್ಟುಗೂಡಿಸಿ ಬಾಣಲೆಗೆ ಹಾಕಿ ಹುರಿದು ಖಾರ ಹಾಕಿ ಫ್ರೈಡ್ ರೈಸ್ ಜೊತೆ ಸೇರಿಸಿ ಕೊಡುತ್ತಾರೆ.