ಮನೆಯಲ್ಲೇನು ದಿನಾ ಗೃಹಪ್ರವೇಶ ಇರುತ್ತಾ, ದಿನಾ ಹಾಲುಕ್ಕಿಸೋಕೆ? ಇಲ್ಲಾ ತಾನೇ? ಹಾಗಿದ್ರೆ ಮತ್ಯಾಕೆ ಪದೇ ಪದೆ ಹಾಲುಕ್ಕಿಸ್ತೀರಾ? ಅದು ಉಕ್ಕದಂತೆ ನೋಡಿಕೊಳ್ಳಲು ಇಲ್ಲಿವೆ ಟ್ರಿಕ್ಸ್..
ಅದೇನೋ ಗೊತ್ತಿಲ್ಲ, ಹಾಲಿನ ಪಾತ್ರೆ ಎದುರು ನಿಂತು ಅದನ್ನೇ ಎಷ್ಟು ಹೊತ್ತು ದಿಟ್ಟಿಸಿದರೂ ಉಕ್ಕದ ಹಾಲು(milk), ಯಾರದೋ ಫೋನ್ ಬಂತೆಂದೋ, ಸಕ್ಕರೆ ತೆಗೆದಿಟ್ಟುಕೊಳ್ಳೋಣ ಎಂದೋ ಒಂದೇ ಒಂದು ಕ್ಷಣ ಕಣ್ಣು ಅತ್ತಿತ್ತ ತಿರುಗಿಸುವಷ್ಟರಲ್ಲಿ ಉಕ್ಕಿ ಹರಿದಿರುತ್ತದೆ. ಅಷ್ಟೊತ್ತು ಕಾದಿದ್ದೂ ವೇಸ್ಟು, ಜೊತೆಗೆ ಆಮೇಲೆ ಸ್ಟವ್, ಸ್ಲ್ಯಾಬ್, ಪಾತ್ರೆ ಎಲ್ಲವನ್ನೂ ಕ್ಲೀನ್ ಮಾಡುತ್ತಾ ಕೂರುವ ಗೋಳು ಬೇರೆ. ಅದರೊಂದಿಗೆ, ಹಾಲುಕ್ಕಿಸಿದರೆ ಚಂದ್ರನ ದೋಷ ಕಾಡುತ್ತದೆ ಎಂದು ಬೈಯುವ ಅತ್ತೆ! ಸಾಕಪ್ಪಾ ಸಾಕು, ಪ್ರತಿ ಬಾರಿ ಎಚ್ಚರ ಹೆಚ್ಚಿಸಿದರೂ ಹಾಲಿನ ತುಂಟತನವೇ ಗೆಲ್ಲುತ್ತದೆ ಎನ್ನುವವರು ನೀವಾಗಿದ್ದರೆ ನಿಮ್ಮನ್ನು ಈ ಸಮಸ್ಯೆಯಿಂದ ಪಾರು ಮಾಡುವ ಟ್ರಿಕ್ಸ್‌ಗಳು ನಮ್ಮಲ್ಲಿವೆ. ಯಾವುದಕ್ಕೂ ಒಮ್ಮೆ ಮುಂಚೆಯೇ ನಮಗೆ ಥ್ಯಾಂಕ್ಸ್ ಹೇಳಿ ಮುಂದೆ ಓದಿ.
ಬೆಣ್ಣೆಯ ತುಂಡು
ಮನೆಯಲ್ಲಿ ಬೆಣ್ಣೆ(butter) ಇರಬೇಕಲ್ಲ, ಮೊದಲು ಅದನ್ನು ತೆಗೆದು ಹಾಲಿನ ಪಾತ್ರೆ(vessel)ಯ ಕಟ್ಟಿನ ಸುತ್ತ ಹಚ್ಚಿ ತಿಕ್ಕಿ. ನಂತರ ಪಾತ್ರೆಗೆ ಹಾಲು ಸುರಿದು ಕಾಯಲು ಬಿಡಿ. ಈಗ ಬೇಕಿದ್ದರೆ ನೀವು ಹಾಲ್‌ಗೆ ಹೋಗಿ ಕಾಲು ಮೇಲೆ ಕಾಲು ಹಾಕಿಕೊಂಡು ಕುಳಿತು ಫೋನಾದರೂ ನೋಡಬಹುದು, ಪೇಪರ್ ಆದರೂ ಓದಬಹುದು. ಏಕೆಂದರೆ ಕಾಲು ಕಾದ ನಂತರ ಖಂಡಿತಾ ಉಕ್ಕಲಾರದು.
ನೀರು(water)
ಹಾಲಿಗೆ ನೀರು ಸೇರಿಸುವುದರಲ್ಲಿ ನೀವು ಎಕ್ಸ್‌ಪರ್ಟ್ ಇರಬಹುದು. ಆದರೆ, ಯಾವ ಸಂದರ್ಭದಲ್ಲಿ ನೀರು ಸೇರಿಸಬೇಕೆಂಬುದು ತುಂಬಾ ಮುಖ್ಯ. ಹೌದು, ನೆಂಟರು ಬಂದಾಗ ಸೇರಿಸಬೇಕು ಎಂಬ ನಿಮ್ಮ ಉತ್ತರವೂ ಸರಿಯೇ! ಆದರೆ, ನಾನೀಗ ಹೇಳುತ್ತಿರುವುದು ಹಾಲು ಉಕ್ಕದಂತೆ ಮಾಡಲು ಯಾವಾಗ ನೀರು ಸೇರಿಸಬೇಕೆಂಬ ಬಗ್ಗೆ. ಹಾಲಿನ ಖಾಲಿ ಪಾತ್ರೆಗೆ ಕೊಂಚ ನೀರು ಸೇರಿಸಿ. ನಂತರ ಹಾಲು ಹಾಕಿ ಕಾಯಲು ಒಲೆಯ ಮೇಲಿಡಿ. ಇನ್ನು ಅದು ಒಲೆಯ ಮೇಲೆ ಬೀಳುವ ಭಯವಿಲ್ಲದೆ ಬೇರೆ ಅಡುಗೆ ಮಾಡುವುದರಲ್ಲಿ ನಿರತರಾಗಿ.
Junk Foodನಿಂದ ದೂರ ಇರೋಕೆ ಈ ಟಿಪ್ಸ್ ಫಾಲೋ ಮಾಡಿ..
ಅಲ್ಲಾಡ್ಸಿ
ಅಲ್ಲಾಡ್ಸು ಅಲ್ಲಾಡ್ಸು ಅಂತ ಬಾಟ್ಲು ಅಲ್ಲಾಡ್ಸೋದು ಗಂಡಸ್ರಿಗಾಯ್ತು. ಅದ್ಕೆ ಠಕ್ಕರ್ ಕೊಡ್ಬೇಕಲ್ವಾ, ನೀವು ಪಾತ್ರೆ ಅಲ್ಲಾಡ್ಸಿ. ಹೌದು, ಹಾಲು ಕಾದ ಕೂಡಲೇ ಸ್ಟವ್ ಆಫ್ ಮಾಡುವ ಬದಲು, ಪಾತ್ರೆಯನ್ನು ಕೊಂಚ ಎತ್ತಿ ಅಲ್ಲಾಡ್ಸಿ. ಹಾಲು ತನ್ನೆಲ್ಲ ಬೆದರಿಕೆ, ಆರ್ಭಟ ನಿಲ್ಲಿಸಿ ತೆಪ್ಪಗೆ ಕೆಳಗೆ ಹೋಗಿ ಕೂರುತ್ತದೆ.
undefined
ನೀರು
ನೀರಿನ ಟ್ರಿಕ್ ಆಗ್ಲೇ ಹೇಳಿದ್ರಲ್ಲ ಅಂದ್ರಾ? ನೆನಪಿದೆ.. ಆದ್ರೆ ಈ ಟ್ರಿಕ್ ಸ್ವಲ್ಪ ಡಿಫ್ರೆಂಟ್. ಹಾಲಿಗೆ ನೀರು ಹಾಕುವಷ್ಟು ಜುಗ್ಗರಲ್ಲ ನಾವು ಎಂದು ವಾದಿಸುವವರಿಗೆ ಇದು. ಕಾಯುತ್ತಿರುವ ಹಾಲಿನ ಮೇಲೆ ಕೊಂಚ ನೀರಿನ ಹನಿಗಳನ್ನು ಚಿಮುಕಿಸಿ. ಕೂಡಲೇ ಹಾಲು ಹಾವು ಹೆಡೆ ಮಡಚಿಕೊಂಡಂತೆ ಭುಸ್ ಗಿಸ್ ಎಲ್ಲ ಬಿಟ್ಟು ಟುಸ್ಸ್.. ಎನ್ನುತ್ತದೆ.
Ande ka Halwa: ಮೊಟ್ಟೆ ಹಲ್ವಾ ತಿಂದಿದ್ದೀರಾ ?
ಮರದ ಸೌಟು(wooden spatula)
ಹಾಲಿನ ಪಾತ್ರೆ ಮರದ್ದೋ, ಅಲ್ಯೂಮಿನಿಯಂನದೋ ಅಥವಾ ಸ್ಟೀಲ್‌ನದ್ದೇ ಆಗಿರಲಿ, ಕುದಿಯುವ ಹಾಲಿನ ಸೊಕ್ಕನ್ನು ಇಳಿಸುವ ಶಕ್ತಿ ಮರದ ಸೌಟಿಗಿದೆ. ಹೌದು, ಹೇಗೆ ಲಟ್ಟಣಿಗೆ ನೋಡಲು ನಿಮ್ಮ ಪತಿರಾಯ ಎಗರಾಡುವುದು ಬಿಟ್ಟು ತಣ್ಣಗಾಗುವರೋ, ಹಾಗೆಯೇ ಮರದ ಸೌಟನ್ನು ಪಾತ್ರೆಯ ಮೇಲೆ ಅಡ್ಡವಾಗಿಟ್ಟರೆ ಹಾಲು ಅದನ್ನು ನೋಡಿ ತೆಪ್ಪಗಾಗುತ್ತದೆ.
ದೊಡ್ಡ ಪಾತ್ರೆ
ಒಂದ ಲೀಟರ್ ಹಾಲಿಗೆ ಅದನ್ನು ಪೂರ್ತಿ ತುಂಬಿಕೊಳ್ಳುವ ಪಾತ್ರೆಯಲ್ಲಿಟ್ಟು ಉಕ್ಕಲು ಚಾಲೆಂಜ್ ಮಾಡಿದರೆ ಅದೊಂದು ಸವಾಲೇ ಅಲ್ಲ. ಹಾಲಿನ ಅಳತೆಯ ಎರಡು ಪಟ್ಟು ದೊಡ್ಡ ಪಾತ್ರೆಯಿಟ್ಟು, ತಾಕತ್ತಿದ್ದರೆ ಈಗ ಉಕ್ಕು ಎನ್ನಿ ನೋಡೋಣ. ಎಗರಿ ಎಗರಿ ಸುಸ್ತಾಗಿ ಕುಸಿಯುವುದು ಹಾಲು.
ಸ್ಟವ್
ನಿಮ್ ಕೈಯಿಂದ ಹಾಲುಕ್ಕುವುದು ತಪ್ಪಿಸಲು ಸಾಧ್ಯವೇ ಆಗುವುದಿಲ್ಲ ಎಂದರೆ ಸೋಲೊಪ್ಪಿಕೊಂಡು ಸ್ಟವ್‌ಗೆ ಅದನ್ನು ನಿಯಂತ್ರಿಸಲು ಹೇಳಿ ಉರಿಯನ್ನು ಸಣ್ಣ ಮಾಡಿಡಿ. ಹಾಲು ಉಕ್ಕುವುದು ಬಿಟ್ಟು ಕಮ್ಮನೆ ಕಾದು ರುಚಿ ಹೆಚ್ಚಿಸಿಕೊಳ್ಳುತ್ತದೆ.
ಏನಿಷ್ಟು ಸುಲಭವಾದ ಟ್ರಿಕ್ಸ್ ಹೇಳಿ ಬೆನ್ನು ತಟ್ಟಿಕೊಳ್ಳುತ್ತಿದ್ದೀರಾ ಎನ್ನಬೇಡಿ. ಇದೂ ಕೂಡಾ ಗೊತ್ತಿಲ್ಲದೆ ಹಾಲು ಉಕ್ಕಿಸುತ್ತಿದ್ದಿರಲ್ಲಾ ಅದಕ್ಕೇನನ್ನೋಣ?!