ಚೋಲೆ ಬಟೋರೆಗೆ ಕಾಬುಲ್ ಕಡಲೆಯ ಪಲ್ಯ ಮಾಡಲು ಗ್ಯಾಸ್ ಮೇಲೆ ಇಟ್ಟ ಇಬ್ಬರು ಯುವಕರು ಬೆಳಗಾಗುವಷ್ಟರಲ್ಲಿ ಹೆಣವಾದರು. ಆಗಿದ್ದೇನು?
ಈ ಮರೆವು ಎನ್ನುವುದು ತುಂಬಾ ಜನರಿಗೆ ಇರುವ ಬಹುದೊಡ್ಡ ಶಾಪವೇ. ಅದೂ ಅಡುಗೆ ಮಾಡುವಾಗ ಗೃಹಿಣಿಯರು ಈ ಮರೆವು ಎನ್ನುವ ಸಮಸ್ಯೆಗೆ ಒಳಗಾಗುವುದು ಸಹಜವೇ ಆಗಿದೆ. ಎರಡು-ಮೂರು ಪದಾರ್ಥಗಳನ್ನು ಒಟ್ಟಿಗೇ ಮಾಡುವ ಸಮಯದಲ್ಲಿ, ಯಾವ ಪದಾರ್ಥಕ್ಕೆ ಏನು ಹಾಕಿದೆ ಎಂದು ಮರೆತು ಹೋಗುವುದು, ಗಡಿಬಿಡಿಯಲ್ಲಿ ಗ್ಯಾಸ್ ಆಫ್ ಮಾಡದೇ ಬರುವುದು, ಅಡುಗೆ ಮಾಡುವಾಗ ಅದಕ್ಕೆ ಬೇಕಾಗುವ ಸಾಮಗ್ರಿ ತರಲು ಹೊರಗೆ ಬರುವಷ್ಟರಲ್ಲಿ ಏನು ತರಲು ಬಂದಿದ್ದು ಎಂದು ಮರೆತೇ ಹೋಗುವುದು, ಫ್ರಿಜ್ ತೆಗೆದಿದ್ದರೂ ಯಾಕೆ ಅದನ್ನು ತೆಗೆದೆ ಎಂದು ಮರೆಯುವುದು... ಹೀಗೆ ಅಡುಗೆ ಮನೆಯ ಮರೆವಿಗೆ ಹಲವಾರು ಮಂದಿ, ಅದರಲ್ಲಿಯೂ ಹೆಚ್ಚಾಗಿ ಮಹಿಳೆಯರು ಒಳಗಾಗುವುದು ಇದೆ. ಆದರೆ ಇದೇ ಮರೆವು ಇಬ್ಬರು ಯುವಕರ ಪ್ರಾಣವನ್ನೇ ಬಲಿ ತೆಗೆದಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ನೊಯ್ಡಾದ ಬಸಾಯಿ ಗ್ರಾಮದಲ್ಲಿ ನಡೆದ ದುರಂತದಲ್ಲಿ ಉಪೇಂದ್ರ (22) ಮತ್ತು ಶಿವಂ (23) ಎಂಬ ಯುವಕರು ರಾತ್ರಿ ಬೆಳಗಾಗುವುದರಲ್ಲಿ ಹೆಣವಾಗಿದ್ದಾರೆ! ಇವರು ಚೋಲೇ ಬಟೋರೆ ಅಂಗಡಿಯನ್ನು ನಡೆಸುತ್ತಿದ್ದರು. ಅದಕ್ಕಾಗಿ ರಾತ್ರಿ ಚೋಲೆ ಅಂದರೆ ಕಾಬುಲ್ ಕಡಲೆಯನ್ನು ಬೇಯಿಸಲು ಗ್ಯಾಸ್ ಮೇಲೆ ಇಟ್ಟಿದ್ದಾರೆ. ದಿನವಿಡೀ ದುಡಿದು ಸುಸ್ತಾಗಿದ್ದರಿಂದಲೋ ಏನೋ, ಇಬ್ಬರೂ ಯುವಕರು ನಿದ್ದೆಗೆ ಜಾರಿದ್ದಾರೆ. ಈ ಸಮಯದಲ್ಲಿ ಗ್ಯಾಸ್ ಆನ್ ಆಗಿಯೇ ಇತ್ತು. ಪಾತ್ರೆಯಲ್ಲಿದ್ದ ನೀರೆಲ್ಲಾ ಮುಗಿದು ಪಾತ್ರ ಸುಟ್ಟುಹೋಗಿ ಗ್ಯಾಸ್ ವಾಸನೆ ಬಂದರೂ ಈ ಯುವಕರಿಗೆ ಅರಿವೇ ಇಲ್ಲ. ಗ್ಯಾಸ್ ಮೇಲೆ ನೀರೆಲ್ಲಾ ಚೆಲ್ಲಿದ್ದರಿಂದ ಗ್ಯಾಸ್ ಆಫ್ ಆಗಿ ಮನೆ ತುಂಬಾ ವಿಷದ ಹೊಗೆ ತುಂಬಿಕೊಂಡಿದೆ.
ಅಕೌಂಟ್ಗೆ ಅಚಾನಕ್ ದುಡ್ಡು ಬಂದ್ರೆ ಕೂಡ್ಲೇ ಬ್ಯಾಲೆನ್ಸ್ ಚೆಕ್ ಮಾಡ್ಲೇಬೇಡಿ! ಇದು ಹೊಸ ಸ್ಕ್ಯಾಮ್- ಡಿಟೇಲ್ಸ್ ಇಲ್ಲಿದೆ...
ಬೆಳಗಾಗುವಷ್ಟರಲ್ಲಿ, ಇಬ್ಬರೂ ಯುವಕರು ಹೆಣವಾಗಿದ್ದಾರೆ. ಗ್ಯಾಸ್ ವಾಸನೆಯಿಂದ ಬೆಳಿಗ್ಗೆ ಅಕ್ಕಪಕ್ಕದವರಿಗೆ ಸಂದೇಹ ಬಂದು ಪೊಲೀಸರಿಗೆ ವಿಷಯ ತಿಳಿಸಿದಾಗ, ಪೊಲೀಸರು ಮನೆಯ ಬಾಗಿಲು ಒಡೆದು ಹತ್ತಿರದ ಆಸ್ಪತ್ರೆಗೆ ಯುವಕರನ್ನು ಕರೆದೊಯ್ದರು. ಆದರೆ ಅದಾಗಲೇ ಯುವಕರು ಸಾವನ್ನಪ್ಪಿದ್ದರು. ನೋಯ್ಡಾ ಸೆಕ್ಟರ್ 39 ರ ಜಿಲ್ಲಾ ಆಸ್ಪತ್ರೆಯಲ್ಲಿ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದರು. ಅವರ ದೇಹಗಳ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಪೊಲೀಸರು ಅವರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
"ಮನೆಯ ಬಾಗಿಲು ಮುಚ್ಚಿದ್ದರಿಂದ, ಕೋಣೆಯಲ್ಲಿ ಆಮ್ಲಜನಕದ ಕೊರತೆ ಉಂಟಾಯಿತು. ಮನೆಯಲ್ಲಿ ಹೆಚ್ಚಿನ ಪ್ರಮಾಣದ ಇಂಗಾಲದ ಮಾನಾಕ್ಸೈಡ್ ಸೇರಿಕೊಂಡು ಯುವಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಮದು ನೋಯ್ಡಾ ಕೇಂದ್ರ ವಲಯದ ಸಹಾಯಕ ಪೊಲೀಸ್ ಆಯುಕ್ತ ರಾಜೀವ್ ಗುಪ್ತಾ ಹೇಳಿದ್ದಾರೆ. ವಿಷಪೂರಿತ ಹೊಗೆಯ ಸೇವನೆ ಸಾವಿಗೆ ಕಾರಣ ಎಂದಿದ್ದಾರೆ. ಕಾರ್ಬನ್ ಮಾನಾಕ್ಸೈಡ್ ವಾಸನೆಯಿಲ್ಲದ ವಿಷಕಾರಿ ಅನಿಲವಾಗಿದೆ. ಕಾರುಗಳು ಅಥವಾ ಟ್ರಕ್‌ಗಳು, ಒಲೆಗಳು, ಓವನ್‌ಗಳು, ಗ್ರಿಲ್‌ಗಳು ಮತ್ತು ಜನರೇಟರ್‌ಗಳಲ್ಲಿ ಇಂಧನವನ್ನು ಸುಡುವಾಗ ಇದು ಹೊರಸೂಸುತ್ತದೆ. ಇಂಥ ಸಂದರ್ಭದಲ್ಲಿ ಅದರ ಸೇವನೆ ಅಪಾಯಕಾರಿ ಎಂದು ಅವರು ತಿಳಿಸಿದರು. ಆದ್ದರಿಂದ ಅಡುಗೆ ಮಾಡುವ ಸಂದರ್ಭದಲ್ಲಿ ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಕಡಿಮೆಯೇ ಎನ್ನಲಾಗುತ್ತದೆ.
ಅಗ್ನಿ ದುರಂತದಲ್ಲಿ ನಾನು ಬದುಕಿದ್ದೇ ಪವಾಡ: ಬಾಲಿವುಡ್ ನಟಿ ಪ್ರೀತಿ ಜಿಂಟಾ ಭಾವುಕ ನುಡಿ ಕೇಳಿ...