Veg Omelette Recipe: ನೀವು ಮೊಟ್ಟೆಯದೇ ಟೆಕ್ಚರ್ ಮತ್ತು ರುಚಿ ಹೊಂದಿರುವ ಮೊಟ್ಟೆ ರಹಿತ ಆಮ್ಲೆಟ್ ಮಾಡೋದು ಹೇಗೆ ಎಂದು ಯೋಚನೆ ಮಾಡುತ್ತಿದ್ದರೆ, ನೀವು ಸೋಯಾ ವೆಜ್ ಆಮ್ಲೆಟ್ ಟ್ರೈ ಮಾಡಿ. ಸೋಯಾ ಚಂಕ್ಸ್, ಕಡಲೆ ಹಿಟ್ಟಿನಿಂದ ತಯಾರಿಸುವ ಆಮ್ಲೆಟ್ ಹೇಗೆ ತಯಾರಿಸೋದು ಎಂದು ನೋಡೋಣ.
ಮೊಟ್ಟೆ ಇಲ್ಲದೇ ತಯಾರಿಸುವ ವೆಜ್ ಆಮ್ಲೆಟ್
ನೀವು ಸಸ್ಯಾಹಾರಿಯೇ? ಕೆಲವೊಮ್ಮೆ ಸ್ನೇಹಿತರು ಆಮ್ಲೆಟ್ ತಿನ್ನುವುದನ್ನು ನೋಡಿ ಸಸ್ಯಾಹಾರಿ ಪರ್ಯಾಯ ಏನಾದ್ರು ಇದ್ರೆ ಚೆನ್ನಾಗಿರುತ್ತಿತ್ತು ಎಂದು ಬಯಸಿದ್ದೀರಾ? ಜನರು ಹೆಚ್ಚಾಗಿ ಬೇಸನ್ ಚಿಲ್ಲಾ ತಯಾರಿಸುತ್ತಾರೆ. ಅದನ್ನು "ಸಸ್ಯಾಹಾರಿ ಆಮ್ಲೆಟ್" ಎಂದು ಕರೆಯುತ್ತಾರೆ, ಆದರೆ ಅದು ಮೊಟ್ಟೆಯ ಆಮ್ಲೆಟ್‌ನ ರುಚಿ, ವಿನ್ಯಾಸ ಮತ್ತು ಮೃದುತ್ವವನ್ನು ಹೊಂದಿರುವುದಿಲ್ಲ. ಹಾಗಾದರೆ, ಆಮ್ಲೆಟ್‌ನಂತೆ ಕಾಣುವ, ರುಚಿಕರವಾದ ಮತ್ತು ಪ್ರೋಟೀನ್‌ನಿಂದ ತುಂಬಿರುವ ಆಮ್ಲೆಟ್ ಯಾವುದು ಎಂದು ನೀವು ಯೋಚನೆ ಮಾಡುತ್ತಿದ್ದರೆ. ಇಲ್ಲಿದೆ ಸೋಯಾ ಆಮ್ಲೆಟ್ ರೆಸಿಪಿ.
ಸೋಯಾ ಚಂಕ್ಸ್ ಆಮ್ಲೆಟ್ ತಯಾರಿಸುವುದು ಹೇಗೆ?
ಸೋಯಾ ಚಂಕ್ಸ್ ಆಮ್ಲೆಟ್ ತಯಾರಿಸಲು, ಸುಮಾರು 10 ಸೋಯಾ ಚಂಕ್ಸ್ ಅನ್ನು ಬಿಸಿ ನೀರಿನಲ್ಲಿ ಎರಡು ನಿಮಿಷಗಳ ಕಾಲ ನೆನೆಸಿಡಿ. ಮೃದುವಾದ ನಂತರ, ಎಲ್ಲಾ ನೀರನ್ನು ಹೊರಹಾಕಿ ಮತ್ತು ಮಿಕ್ಸರ್‌ನಲ್ಲಿ ಒರಟಾಗಿ ಪುಡಿಮಾಡಿ.(ಇದು ಪೇಸ್ಟ್ ಆಗದಂತೆ ಎಚ್ಚರವಿರಲಿ). ಸ್ವಲ್ಪ ಒರಟಾದ ರಚನೆಯು ಆಮ್ಲೆಟ್ ಗೆ ಪರ್ಫೆಕ್ಟ್ ರುಚಿ, ವಿನ್ಯಾಸವನ್ನು ನೀಡುತ್ತದೆ.
ಮಸಾಲೆಯುಕ್ತ ಸೋಯಾ ಮಿಕ್ಸ್ ಹೀಗೆ ತಯಾರಿಸಿ
ಒಂದು ಪ್ಯಾನ್‌ನಲ್ಲಿ ಎರಡು ಟೀ ಚಮಚ ಎಣ್ಣೆಯನ್ನು ಬಿಸಿ ಮಾಡಿ.
ಸಣ್ಣಗೆ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಮತ್ತು ಹಸಿರು ಮೆಣಸಿನಕಾಯಿಯನ್ನು ಸೇರಿಸಿ, ಲೈಟ್ ಆಗಿ ಹುರಿಯಿರಿ.
ನಂತರ, ಅರಿಶಿನ, ಉಪ್ಪು, ಕೆಂಪು ಮೆಣಸಿನ ಪುಡಿ, ಗರಂ ಮಸಾಲ ಮತ್ತು ಕೊತ್ತಂಬರಿ ಪುಡಿಯನ್ನು ಸೇರಿಸಿ.
ಈಗ, ಒರಟಾಗಿ ಪುಡಿಮಾಡಿದ ಸೋಯಾ ಮತ್ತು ಸಣ್ಣಗೆ ಹೆಚ್ಚಿದ ಟೊಮೆಟೊವನ್ನು ಸೇರಿಸಿ. ಕೈ ಬಿಡದೆ ಮಿಕ್ಸ್ ಮಾಡಿ, ಕೆಲವು ನಿಮಿಷ ಬೇಯಿಸಿ.
ಮಸಾಲೆಗಳು ಚೆನ್ನಾಗಿ ಸೇರಿದ ನಂತರ, ಉರಿಯನ್ನು ಆಫ್ ಮಾಡಿ ಮತ್ತು ಮಿಶ್ರಣವನ್ನು ತಣ್ಣಗಾಗಲು ಬಿಡಿ.
ಎಗ್ ಲೆಸ್ ಆಮ್ಲೆಟ್ ತಯಾರಿಸುವುದು ಸುಲಭ
ಆಮ್ಲೆಟ್ ತರಹದ ನೋಟ ಮತ್ತು ಸಾಫ್ಟ್’ನೆಸ್ ಪಡೆಯಲು ಬ್ಯಾಟರ್ ಅನ್ನು ಸರಿಯಾಗಿ ತಯಾರಿಸುವುದು ಬಹಳ ಮುಖ್ಯ.
ಒಂದು ಬಟ್ಟಲಿನಲ್ಲಿ, 4 ಚಮಚ ಕಡಲೆ ಹಿಟ್ಟು, 2 ಚಮಚ ಅಕ್ಕಿ ಹಿಟ್ಟು ಮತ್ತು 1 ಚಮಚ ಮೈದಾ ಸೇರಿಸಿ. ನಂತರ, ಉಪ್ಪು, ಅರಿಶಿನ ಮತ್ತು ಸ್ವಲ್ಪ ಬೇಕಿಂಗ್ ಪೌಡರ್ ಸೇರಿಸಿ
ಹಿಟ್ಟು ಲೈಟ್ ಮತ್ತು ಗಾಳಿಯಾಡುವಂತೆ ಮಾಡಲು ಬೇಕಿಂಗ್ ಪೌಡರ್ ಸೇರಿಸಿ.
ಈಗ, ನಯವಾದ ಬ್ಯಾಟರ್ ತಯಾರಿಸಲು ನಿಧಾನವಾಗಿ ನೀರನ್ನು ಸೇರಿಸಿ.
ಹಿಟ್ಟು ತುಂಬಾ ದಪ್ಪವಾಗಿರಬಾರದು ಅಥವಾ ತುಂಬಾ ತೆಳ್ಳಗಿರಬಾರದು; ಪ್ಯಾನ್ ನಲ್ಲಿ ಹರಿದಾಡುವ ಹದಕ್ಕೆ ಹಿಟ್ಟು ತಯಾರಿಸಿ.
ತಯಾರಾದ ಹಿಟ್ಟಿಗೆ ನುಣ್ಣಗೆ ಕತ್ತರಿಸಿದ ಹಸಿರು ಮೆಣಸಿನಕಾಯಿ, ಕರಿಬೇವು ಮತ್ತು ತಾಜಾ ಕೊತ್ತಂಬರಿ ಸೊಪ್ಪು ಸೇರಿಸಿ. ಈಗ, ಹಿಂದೆ ತಯಾರಿಸಿದ ಸೋಯಾ ಮಸಾಲಾವನ್ನು ಸಹ ಮಿಶ್ರಣ ಮಾಡಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ; ಅಗತ್ಯವಿದ್ದರೆ ನೀವು ಸ್ವಲ್ಪ ಹೆಚ್ಚು ನೀರನ್ನು ಸೇರಿಸಬಹುದು. ಈಗ ನಿಮ್ಮ ಪರ್ಫೆಕ್ಟ್ ವೆಜ್ ಆಮ್ಲೆಟ್ ಬ್ಯಾಟರ್ ಕೆಲವೇ ನಿಮಿಷಗಳಲ್ಲಿ ರೆಡಿ.
ಕೊನೆಯದಾಗಿ ಇದನ್ನು ಮಾಡಿ
ನಾನ್-ಸ್ಟಿಕ್ ತವಾ ಬಿಸಿ ಮಾಡಿ ಮತ್ತು ಅದಕ್ಕೆ ಎಣ್ಣೆಯನ್ನು ಗ್ರೀಸ್ ಮಾಡಿ. ತವಾ ಮೇಲೆ ಒಂದು ಹಿಟ್ಟನ್ನು ಹರಡಿ.
ಆಮ್ಲೆಟ್ ಅನ್ನು ಕಡಿಮೆ ಉರಿಯಲ್ಲಿ ಬೇಯಿಸುವುದು ಬಹಳ ಮುಖ್ಯ; ಹೆಚ್ಚಿನ ಉರಿಯಲ್ಲಿ ಬೇಯಿಸುವುದರಿಂದ ಹೊರ ಪದರವು ಬೇಗನೆ ಬೇಯಬಹುದು ಮತ್ತು ಒಳಭಾಗವು ಹಸಿಯಾಗಿಯೇ ಉಳಿಯಬಹುದು. ಆದ್ದರಿಂದ, ಗೋಲ್ಡನ್ ಬ್ರೌನ್ ಆಗುವವರೆಗೆ ತಾಳ್ಮೆಯಿಂದ ಎರಡೂ ಬದಿಗಳಲ್ಲಿ ಬೇಯಿಸಿ.
ಆಮ್ಲೆಟ್ ಮೇಲೆ ಸ್ವಲ್ಪ ಕಾದ ಬಳಿಕ ಅದರ ಮೇಲೆ ಕರಿಮೆಣಸಿನ ಪುಡಿ ಮತ್ತು ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆಗಳನ್ನು ಸಿಂಪಡಿಸಿ. ಇದು ಥೇಟ್ ಅಮ್ಲೆಟ್ ನಂತೆ ಕಾಣುತ್ತೆ.
ಕೊನೆಯದಾಗಿ ನೀವು ಅದನ್ನು ಟೊಮೆಟೊ ಸಾಸ್, ಹಸಿರು ಚಟ್ನಿ ಜೊತೆಗೆ ಸರ್ವ್ ಮಾಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.