ಮಕ್ಕಳಿಗಿಷ್ಟವಾಗೋ ಈ 2 ಅಡುಗೆ ನೀವ್ಯಾಕೆ ಟ್ರೈ ಮಾಡ್ಬಾರ್ದು?

By Suvarna NewsFirst Published Jul 6, 2021, 5:14 PM IST
Highlights

ಸಖತ್‌ ರುಚಿಯಾಗಿರೋ ಈ ರೆಸಿಪಿಗಳು ಮಕ್ಕಳ ಬಾಯಾಡಿಸುವಿಕೆಗೂ ಚೆನ್ನಾಗಿರುತ್ತೆ. ತಾವೇ ಮಾಡಿರೋ ತಿನಿಸು ಅನ್ನುವ ಕಾರಣಕ್ಕೆ ಮಕ್ಕಳ ಖುಷಿಯೂ ಹೆಚ್ಚಾಗುತ್ತೆ. ಅಂಥಾ ರೆಸಿಪಿ ಇಲ್ಲಿವೆ.

ಮಕ್ಕಳಿಗೆ ಆನ್‌ ಲೈನ್‌ ಕ್ಲಾಸ್‌ಗಳು ಭರದಿಂದ ನಡೆಯುತ್ತಿವೆ. ಇನ್ನೇನು ಕೆಲವು ದಿನಗಳಲ್ಲಿ ಸ್ಕೂಲ್‌ ಶುರುವಾಗಬಹುದೇನೋ ಅಂತ ಪೋಷಕರು, ಮಕ್ಕಳು ಆ ದಿನಕ್ಕಾಗಿ ಎದುರು ನೋಡ್ತಿದ್ದಾರೆ. ಆದರೆ ಕೊರೋನಾ ಮೂರನೇ ಅಲೆ ಸಖತ್‌ ಡೇಂಜರ್‌ ಅನ್ನೋ ವಿಚಾರ ಪೋಷಕರು ಹಾಗೂ ಮಕ್ಕಳ ಈ ಆಸೆಯನ್ನೂ ಕಮರಿಸಿ ಹಾಕಿದೆ.

ಸೋ, ಮನೇಲಿರೋ ಮಕ್ಕಳಿಗೆ ತಿಂಡಿ ಮಾಡಿ ಕೊಟ್ಟಷ್ಟು ಸಾಕಾಗಲ್ಲ. ಇಲ್ಲಿ ಮಕ್ಕಳನ್ನೂ ತೊಡಗಿಸಿಕೊಂಡು ಮಾಡಬಹುದಾದ ಎರಡು ರೆಸಿಪಿಗಳಿವೆ. ಸಖತ್‌ ರುಚಿಯಾಗಿರೋ ಈ ರೆಸಿಪಿಗಳು ಮಕ್ಕಳ ಬಾಯಾಡಿಸುವಿಕೆಗೂ ಚೆನ್ನಾಗಿರುತ್ತೆ. ತಾವೇ ಮಾಡಿರೋ ತಿನಿಸು ಅನ್ನುವ ಕಾರಣಕ್ಕೆ ಮಕ್ಕಳ ಖುಷಿಯೂ ಹೆಚ್ಚಾಗುತ್ತೆ. ಅಂಥಾ ರೆಸಿಪಿ ಇಲ್ಲಿವೆ.

1. ಫನ್ನಿ ಬಿಸ್ಕೆಟ್ಸ್‌

ಯಾವ ವಯಸ್ಸಿನ ಮಕ್ಕಳಿಗೆ?: ಏಳರಿಂದ ಹನ್ನೆರಡು ವರ್ಷದ ಮಕ್ಕಳು ಈ ರೆಸಿಪಿ ಮಾಡಬಹುದು. ಆದರೆ ಕರಿಯುವ ಕೆಲಸ ದೊಡ್ಡವರೇ ಮಾಡಬೇಕು. ಅದನ್ನು ಮಕ್ಕಳಿಂದ ಮಾಡಿಸುವುದು ಅಪಾಯ. 

ಎಷ್ಟು ಸಮಯ ಬೇಕು?: ಫಾಸ್ಟಾಗಿ ಮಾಡಿದ್ರೆ ಅರ್ಧ ಗಂಟೆಯಲ್ಲಿ ಮುಗಿಯುತ್ತೆ. ಮಕ್ಕಳನ್ನೂ ಇನ್‌ವಾಲ್ವ್ ಮಾಡಬೇಕಿರುವುದರಿಂದ ಕೊಂಚ ಹೆಚ್ಚು ಸಮಯ ಬೇಕಾಗಬಹುದು. ಇದು ಗೋಧಿ ಹಿಟ್ಟಿಂದ ಮಾಡೋ ಪುಟಾಣಿ ಪುಟಾಣಿ ಬಿಸ್ಕೆಟ್ಸ್‌. ಆರೋಗ್ಯಕ್ಕೆ ಹಾನಿಯಲ್ಲ. ಬಾಯಿಗೆ ರುಚಿ.

ಏನೇನು ಬೇಕು?: ಎರಡು ಕಪ್‌ ಗೋಧಿ ಹಿಟ್ಟು, ಚಿರೋಟಿ ರವೆ ಅರ್ಧ ಕಪ್‌, ಎರಡು ಸ್ಪೂನ್‌ ತುಪ್ಪ, ಒಂದು ಕಪ್‌ ಸಕ್ಕರೆ, ಏಲಕ್ಕಿ, ಕರಿಯಲು ಎಣ್ಣೆ, ನೀರು

ಮಾಡೋದು ಹೇಗೆ?: ಮೊದಲಿಗೆ ಸಕ್ಕರೆಯನ್ನು ಮಿಕ್ಸಿ ಜಾರ್‌ಗೆ ಹಾಕಿ ಪುಡಿ ಮಾಡಬೇಕು. ಆಮೇಲೆ ಮುಕ್ಕಾಲು ಕಪ್‌ ನೀರು ಕಾಯಲಿಡಿ. ನೀರು ಇನ್ನೇನು ಕುದಿಯಬೇಕು ಅನ್ನುವಾಗ ಎರಡು ಸ್ಪೂನ್‌ ತುಪ್ಪ ಹಾಕಿ. ಆಮೇಲೆ ಪುಡಿ ಮಾಡಿಟ್ಟ ಸಕ್ಕರೆಯನ್ನು ಈ ನೀರಿಗೆ ಹಾಕಿ. ಸಕ್ಕರೆ ನೀರಲ್ಲಿ ಕರಗಲು ಬಿಡಿ. ಕೊನೆಯಲ್ಲಿ ಇದಕ್ಕೆ ಏಲಕ್ಕಿ ಪುಡಿ ಸೇರಿಸಿ. ಇನ್ನೊಂದು ಬೌಲ್‌ನಲ್ಲಿ ಗೋಧಿ ಹಿಟ್ಟಿಗೆ, ಚಿರೋಟಿ ರವೆ ಮಿಕ್ಸ್ ಮಾಡಿಟ್ಟಿರಿ. ಸಕ್ಕರೆ, ಏಲಕ್ಕಿ, ತುಪ್ಪಹಾಕಿದ ಪಾಕವನ್ನು ಗೋಧಿ ಹಿಟ್ಟಿಗೆ ಸ್ವಲ್ಪ ಸ್ವಲ್ಪವೇ ಹಾಕಿ.

ಚಪಾತಿ ಹಿಟ್ಟಿನಷ್ಟೇ ಹದಕ್ಕೆ ನಾದಿ. ಹದ ಬಂದ ಮೇಲೆ ಹತ್ತು ನಿಮಿಷ ಹಾಗೇ ಬಿಡಿ. ಆಮೇಲೆ ದಪ್ಪಕೆ ಲಟ್ಟಿಸಿ. ಮಕ್ಕಳ ಸ್ಟೀಲ್‌ ವಾಟರ್‌ ಬಾಟಲ್‌ ಮುಚ್ಚಳವನ್ನೋ, ಅಥವಾ ಶಾರ್ಪ್ ಎಡ್ಜ್ ಇರುವ ಬಾಟಲಿ ಮುಚ್ಚಳದಲ್ಲಿ ಒತ್ತಿ. ವಿಭಿನ್ನ ಶೇಪ್‌ಗೆ ಮಕ್ಕಳ ಶಾರ್ಪ್ ಎಡ್ಜ್ ಇರುವ ಮಕ್ಕಳ ಆಟಿಕೆಯನ್ನೂ ತೊಳೆದು ಬಳಸಬಹುದು. ಈಗ ಬಾಣಲೆಯಲ್ಲಿ ಎಣ್ಣೆ ಕಾಯಲಿಡಿ. ಮಕ್ಕಳು ವಿವಿಧ ಶೇಪ್‌ನಲ್ಲಿ ರೆಡಿ ಮಾಡಿಟ್ಟ ಚೂರುಗಳನ್ನು ಎಣ್ಣೆಗೆ ಹಾಕಿ ಹುರಿಯಿರಿ. ಬಂಗಾರದ ಬಣ್ಣಕ್ಕೆ ಬರುವಾಗ ತೆಗೆದು ಟಿಶ್ಯೂ ಹಾಕಿಟ್ಟ ಬಟ್ಟಲಿಗೆ ಹಾಕಿ. ಆರಿದ ಮೇಲೆ ಮಕ್ಕಳು, ದೊಡ್ಡವರೂ ಇದನ್ನು ತಿನ್ನಬಹುದು. ಕೊಂಚ ಶಂಕರಪೋಳೆಯ ಟೇಸ್ಟ್ ನಲ್ಲಿ ಇರುತ್ತದೆ. 

ಪನೀರ್ VS ಮಶ್ರೂಮ್ : ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಬೆಸ್ಟ್? ...

2. ಕುಕ್ಕರ್‌ನಲ್ಲಿ ಮಾಡಬಹುದಾದ ಕೇಕ್:

ಯಾವ ವಯಸ್ಸಿನ ಮಕ್ಕಳಿಗೆ?: ಆರರಿಂದ ಹನ್ನೆರಡು. ಇಲ್ಲೂ ಸ್ಟೌನಲ್ಲಿ ಬೆಂಕಿ ಜೊತೆಗೆ ಕೆಲಸ ಇರುವ ಕಾರಣ ಹಿರಿಯರು ಜೊತೆಗಿರಬೇಕು.
ಎಷ್ಟು ಸಮಯ ಬೇಕು?: ಮುಕ್ಕಾಲರಿಂದ ಒಂದು ಗಂಟೆ.

ಏನೇನು ಬೇಕು?: ಬಾರ್ಬನ್‌ ಬಿಸ್ಕೆಟ್‌ ಎರಡು ಪ್ಯಾಕೇಟ್‌, ಕಾಲು ಕಪ್‌ ಸಕ್ಕರೆ, ಒಂದು ಇನೋ ಪ್ಯಾಕೆಟ್‌, ಹಾಲು ಒಂದು ಕಪ್‌, ಬಟರ್‌ ಪೇಪರ್‌.

ಮಾಡುವುದು ಹೇಗೆ?: ಮೊದಲು ಕುಕ್ಕರ್ ಅಧವಾ ಇಡ್ಲಿ ಪಾತ್ರೆಯ ತಳ ಭಾಗಕ್ಕೆ ನೀರು ಹಾಕಿ ಬಿಸಿಯಾಗಲು ಇಡಿ. ಬಾರ್ಬನ್‌ ಬಿಸ್ಕೆಟ್‌ನ ಒಳಭಾಗದ ಚಾಕ್ಲೇಟ್‌ ಕ್ಲೀಮ್‌ ತೆಗೆದು ಒಂದು ಬೌಲಿಗೆ ಹಾಕಿಟ್ಟಿರಿ. ಉಳಿದ ಬಿಸ್ಕೆಟ್‌ಗಳನ್ನು ಮಿಕ್ಸಿ ಜಾರ್‌ ಗೆ ಹಾಕಿ ಪುಡಿ ಮಾಡಿ. ನಂತರ ಒಂದು ಅಗದ ಬೌಲ್‌ಗೆ ಈ ಪುಡಿ ಮಾಡಿರೋ ಬಿಸ್ಕೆಟ್ಸ್‌ ಹಾಕಿ.  ಸಕ್ಕರೆ ಪುಡಿ ಮಾಡಿ ಈ ಬಿಸ್ಕೆಟ್‌ ಪುಡಿಗೆ ಸೇರಿಸಿ. ಬಳಿಕ ಇದಕ್ಕೆ ಸ್ವಲ್ಪ ಸ್ವಲ್ಪವೇ ಹಾಲು ಸೇರಿಸಿ ಗಟ್ಟಿ ಹದದಲ್ಲಿ ಮಿಕ್ಸ್‌ ಮಾಡಿ. ಹಾಲು ಮತ್ತು ಬಿಸ್ಕೆಟ್‌ ಪುಡಿ ಚೆನ್ನಾಗಿ ಮಿಕ್ಸ್‌ ಆದ ಮೇಲೆ ಇನೋ ಸೇರಿಸಿ ಮತ್ತೆ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಬಟರ್‌ ಪೇಪರ್ ಮೇಲೆ ಚೆನ್ನಾಗಿ ಎಣ್ಣೆ ಸವರಿ ಕಂಟೈನರ್‌ನ ಆಕಾರಕ್ಕೆ ಕತ್ತರಿಸಿ ತಳಭಾಗ ಹಾಗೂ ಬದಿಗಳಿಗೆ ಅಂಟಿಸಿ.

ಈಗ ಸ್ಟೌನ ತಳಭಾಗದಲ್ಲಿ ನೀರು ಕುದಿಯುತ್ತಿರುತ್ತದೆ. ಕುಕ್ಕರ್‌ ಸ್ಟಾಂಡ್‌ ಕೂರಿಸಿ ಅದರ ಮೇಲೆ ಈ ಕಂಟೈನರ್‌ ಇಡಿ. ಮುಚ್ಚಳ ಮುಚ್ಚಿ. ಲಿಡ್‌ ಹಾಕದೇ ಅರ್ಧಗಂಟೆ ಬೇಯಿಸಿ. ಅಷ್ಟೊತ್ತಿಗೆ ಕೇಕ್ ಬೆಂದಿರುತ್ತೆ. ಒಂದು ಟೂತ್ ಪಿಕ್‌ನಿಂದ ಕೇಕ್‌ಅನ್ನು ಚುಚ್ಚಿ ನೋಡಿ. ಅದಕ್ಕೇನೂ ಅಂಟಿಕೊಂಡಿರದಿದ್ದರೆ ಬೆಂದಿದೆ ಅಂತರ್ಥ. ಅಂಟಿಕೊಂಡರೆ ಇನ್ನೂ ಸ್ವಲ್ಪ ಹೊತ್ತು ಬೇಯಿಸಿ. ಆಮೇಲೆ ಹೊರ ತೆಗೆದು ತಣ್ಣಗಾಗಲು ಬಿಡಿ. ತಣ್ಣಗಾದ ಮೇಲೆ ಅದನ್ನು ಕಂಟೈನರ್‌ನಿಂದ ಹೊರತೆಗೆದು ಬಟರ್‌ ಕವರ್‌ ತೆಗೆಯಿರಿ. ಈಗ ಆಗ ತೆಗೆದಿದ್ದ ಕ್ರೀಮ್‌ಅನ್ನು ಕೊಂಚ ಕರಗಿಸಿ ಕೇಕ್‌ ಮೇಲೆ ಟಾಪಿಂಗ್‌ ಮಾಡಿ. ಚಾಕ್ಲೇಟ್‌ ಅಥವಾ ಚಾಕೋ ಪೌಡರ್‌ನಿಂದಲೂ ಟಾಪಿಂಗ್ ಮಾಡಿ ಬೇಕಾದಂತೆ ಅಲಂಕರಿಸಬಹುದು. 

click me!