ದಿನಾಂಕ ಮುಗಿದ ಆಹಾರವನ್ನು ಯಾರೇ ಮಾರಾಟ ಮಾಡ್ತಿದ್ದರೂ ಅದು ಅಪರಾಧ. ನೀವು ಅದರ ವಿರುದ್ಧ ಕೋರ್ಟ್ ಗೆ ಹೋಗ್ಬಹುದು. ನಿಮ್ಮ ಬಳಿ ಸಾಕ್ಷ್ಯವಿದ್ದಲ್ಲಿ ಕಂಪನಿ ವಿರುದ್ಧ ಕೋರ್ಟ್ ಸೂಕ್ತ ಕ್ರಮಕೈಗೊಳ್ಳುತ್ತದೆ.
ಡೇಟ್ ಬಾರ್ ಆಗಿರುವ ವಸ್ತುಗಳನ್ನು ಬಳಸ್ಬಾರದು, ಸೇವನೆ ಮಾಡಬಾರದು. ಇದ್ರಿಂದ ನಾನಾ ಸಮಸ್ಯೆ ಶುರುವಾಗುತ್ತದೆ. ಅಲರ್ಜಿ, ಹೊಟ್ಟೆ ನೋವು ಸೇರಿದಂತೆ ಕೆಲ ಸಮಸ್ಯೆಯಿಂದ ಜನರು ಆಸ್ಪತ್ರೆ ಸೇರಬೇಕಾಗುತ್ತದೆ. ಹಾಗಾಗಿ ಪ್ರತಿ ವಸ್ತು ಖರೀದಿ ವೇಳೆಯೂ ಕೊನೆ ದಿನಾಂಕವನ್ನು ಪರೀಕ್ಷೆ ಮಾಡಿ ಎನ್ನಲಾಗುತ್ತದೆ. ಈಗ ಎಲ್ಲ ವಸ್ತುಗಳ ಮೇಲೆ ಕೊನೆ ದಿನಾಂಕ ನಮೂದಿಸೋದು ಕಡ್ಡಾಯವಾಗಿದೆ. ಇದ್ರ ನಡುವೆಯೇ ಅನೇಕ ಕಂಪನಿಗಳು ಜನರಿಗೆ ಮೋಸ ಮಾಡುತ್ತವೆ. ವಸ್ತುಗಳು ಮಾರಾಟವಾಗಿಲ್ಲ ಎಂದಾಗ ಅದಕ್ಕೆ ಹೊಸ ದಿನಾಂಕದ ಲೇಬಲ್ ಹಚ್ಚಿ ವಸ್ತುಗಳನ್ನು ಮಾರಾಟ ಮಾಡುತ್ತವೆ. ಹೀಗೆ ಜನರಿಗೆ ಮೋಸ ಮಾಡುತ್ತಿದ್ದ ಸೂಪರ್ ಮಾರ್ಕೆಟ್ ಒಂದು ದಂಡ ತೆರುವಂತಾಗಿದೆ. ಲಾಸ್ಟ್ ಡೇಟ್ ಮೇಲೆ ಹೊಸ ಸ್ಟಿಕ್ಕರ್ ಅಂಟಿಸಿ ಗ್ರಾಹಕರಿಗೆ ನೀಡಿದ್ದಲ್ಲದೆ ಅದನ್ನು ಪ್ರಶ್ನಿಸಿದ ಗ್ರಾಹಕನಿಗೆ ಯಾವುದೆ ಉತ್ತರ ನೀಡದೆ ನಿರ್ಲಕ್ಷ್ಯ ಮಾಡಿದ್ದ ಕಾರಣ ಗ್ರಾಹಕರ ಕೋರ್ಟ್ ದಂಡ ವಿಧಿಸಿದೆ.
ಡೇಟ್ ಬಾರ್ (Expiry ) ವಸ್ತು ನೀಡಿ ದಂಡ ತೆತ್ತ ಸೂಪರ್ ಮಾರ್ಕೆಟ್ (Supermarket) : ಘಟನೆ ಬೆಂಗಳೂರಿ (Bangalore) ನಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ಸೂಪರ್ ಮಾರ್ಕೆಟ್ ನಲ್ಲಿ ಓಟ್ಸ್ ಖರೀದಿ ಮಾಡಿದ್ದಾನೆ. ಅದನ್ನು ಸೇವನೆ ಮಾಡ್ತಿದ್ದಂತೆ ಫುಡ್ ಪಾಯಿಸನ್ ಆಗಿದೆ. ಓಟ್ಸ್ ಪ್ಯಾಕೇಟ್ ಮೇಲೆ ಕಣ್ಣು ಹಾಯಿಸಿದಾಗ ಸತ್ಯ ಹೊರಬಿದ್ದಿದೆ. ಈ ಬಗ್ಗೆ ಸೂಪರ್ ಮಾರ್ಕೆಟ್ ಯಾವುದೆ ಪ್ರತಿಕ್ರಿಯೆ ನೀಡಲಿಲ್ಲ. ಆ ನಂತ್ರ ಗ್ರಾಹಕರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ವ್ಯಕ್ತಿಗೆ ಕೊನೆಗೂ ನ್ಯಾಯ ಸಿಕ್ಕಿದೆ. ಕೋರ್ಟ್ ಸೂಪರ್ ಮಾರ್ಕೆಟ್ ಗೆ 10 ಸಾವಿರ ರೂಪಾಯಿ ದಂಡ ಪಾವತಿ ಮಾಡುವಂತೆ ಸೂಚನೆ ನೀಡಿದೆ.
undefined
ಪರಪ್ಪ ಹೆಸರಿನ ವ್ಯಕ್ತಿ ಜಯನಗರದಲ್ಲಿರುವ ನಾಮದಾರಿ ಸೂಪರ್ ಮಾರ್ಕೆಟ್ ನಲ್ಲಿ ಕೆಲವೊಂದು ವಸ್ತುಗಳನ್ನು ಖರೀದಿ ಮಾಡಿದ್ದ. ಅದ್ರಲ್ಲಿ 925 ರೂಪಾಯಿ ಓಟ್ಸ್ ಕೂಡ ಸೇರಿತ್ತು. ಮನೆಗೆ ತಂದು ಓಟ್ಸ್ ತಿಂದ ನಂತ್ರ ಪರಪ್ಪ ಆರೋಗ್ಯ ಹದಗೆಟ್ಟಿತ್ತು. ವೈದ್ಯರು ಇದನ್ನು ಫುಡ್ ಪಾಯಿಜಸ್ ಎಂದಿದ್ದರು. ಈ ನಂತ್ರ ಪರಪ್ಪ, ಓಟ್ಸ್ ನ ಕೊನೆ ದಿನಾಂಕವನ್ನು ಪರೀಕ್ಷೆ ಮಾಡಿದ್ದಾನೆ. ಅಲ್ಲಿ ಅಂಟಿಸಿದ್ದ ಸ್ಟಿಕ್ಕರ್ ಪ್ರಕಾರ ಕೊನೆ ದಿನಾಂಕ ಮುಗಿದಿರಲಿಲ್ಲ. ಆದ್ರೆ ಸ್ಟಿಕ್ಕರ್ ಮೇಲೆ ಸ್ಟಿಕ್ಕರ್ ಅಂಟಿಸಲಾಗಿತ್ತು. ಹಳೆ ಸ್ಟಿಕ್ಕರ್ ಪ್ರಕಾರ, ಓಟ್ಸ್ ಕೊನೆ ದಿನಾಂಕ ಈಗಾಗಲೇ ಮುಗಿದಿತ್ತು. ಸೂಪರ್ ಮಾರ್ಕೆಟ್ ನಲ್ಲಿದ್ದ ಕೆಲ ಓಟ್ಸ್ ಪ್ಯಾಕೆಟ್ ಮೇಲೆ ಕೂಡ ಇದನ್ನೇ ಮಾಡಲಾಗಿತ್ತು. ಈ ಬಗ್ಗೆ ಪರಪ್ಪ, ಸೂಪರ್ ಮಾರ್ಕೆಟ್ ಸಿಬ್ಬಂದಿಯನ್ನು ಕೇಳಿದ್ದಾನೆ. ಆದ್ರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಹಾಗಾಗಿ ಪರಪ್ಪ, ಗ್ರಾಹಕರ ಕೋರ್ಟ್ ಮೆಟ್ಟಿಲೇರಿದ್ದ. ಅಲ್ಲಿ ನ್ಯಾಯಕ್ಕಾಗಿ ಅರ್ಜಿ ಸಲ್ಲಿಸಿದ್ದನಲ್ಲದೆ ಹೊಸ ಸ್ಟಿಕ್ಕರ್ ಅಂಟಿಸಿರುವ ಬಗ್ಗೆ ದಾಖಲೆ ನೀಡಿದ್ದ. ಕಂಪನಿ ತಪ್ಪು ಸಾಕ್ಷ್ಯ ಸಮೇತ ಹೊರಬಿದ್ದ ನಂತ್ರ ಬೆಂಗಳೂರಿನ ಗ್ರಾಹಕರ ಕೋರ್ಟ್ ಸೂಪರ್ ಮಾರ್ಕೆಟ್ ಗೆ ದಂಡ ವಿಧಿಸಿದೆ. ಕೋರ್ಟ್, 925 ರೂಪಾಯಿ ಓಟ್ಸ್ ಪ್ಯಾಕೆಟ್ ಗೆ 5 ಸಾವಿರ ರೂಪಾಯಿ ರೀಫಂಡ್ ನೀಡುವಮತೆ ಸೂಚನೆ ನೀಡಿದೆ. ಅಲ್ಲದೆ ಕೋರ್ಟ್ – ಕಚೇರಿ ಕೆಲಸದಲ್ಲಿ ಪರಪ್ಪನಿಗೆ ಖರ್ಚಾದ ಹಣವನ್ನು ಸೂಪರ್ ಮಾರ್ಕೆಟ್ ಭರಿಸಬೇಕು ಎಂದಿದ್ದಲ್ಲದೆ 5 ಸಾವಿರ ರೂಪಾಯಿ ಖರ್ಚಿನ ಹಣ ನೀಡುವಂತೆ ಆದೇಶ ನೀಡಿದೆ.
ಗ್ರಾಹಕರ ಕೋರ್ಟ್ ಗೆ ದೂರು ನೀಡೋದು ಹೇಗೆ? : ಗ್ರಾಹಕರ ವೇದಿಕೆಯ ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ನೀವು ನಿಮ್ಮ ದೂರನ್ನು ಸಲ್ಲಿಸಬಹುದು. 1800114000 ಅಥವಾ 08368711588 ಅಥವಾ 1915ಗೆ ಕರೆ ಮಾಡಬೇಕು. ರಾಷ್ಟ್ರೀಯ ರಜಾದಿನಗಳನ್ನು ಹೊರತುಪಡಿಸಿ ಎಲ್ಲಾ ವಾರದ ದಿನಗಳಲ್ಲಿ ಇದು ಕೆಲಸ ಮಾಡುತ್ತದೆ.