ತರಕಾರಿ – ಹಣ್ಣುಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಬರೀ ಹಣ್ಣುಗಳು ಮಾತ್ರವಲ್ಲ ಅದ್ರ ಕಾಯಿಗಳು ಕೂಡ ಅನೇಕ ಪೌಷ್ಟಿಕಾಂಶವನ್ನು ಹೊಂದಿದೆ. ಪಪ್ಪಾಯಿ ಈ ಲಿಸ್ಟ್ ನಲ್ಲಿ ಸೇರಿದೆ. ಕಾಯಿಂದ ಕೂಡ ಅನೇಕ ಅಡುಗೆ ಮಾಡ್ಬಹುದು.
ಪಪ್ಪಾಯಿ ಹಣ್ಣು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದ್ರ ಸೇವನೆಯಿಂದ ಜೀರ್ಣಕ್ರಿಯೆ ಸುಧಾರಿಸುವ ಜೊತೆಗೆ ಅನೇಕ ಸಮಸ್ಯೆಗಳು ದೂರವಾಗುತ್ತವೆ. ಆರೋಗ್ಯ ಚೆನ್ನಾಗಿರಬೇಕೆಂದ್ರೆ ದಿನಕ್ಕೆ ಒಂದು ಬೌಲ್ ಪಪ್ಪಾಯ ತಿನ್ನಬೇಕು ಎಂದು ವೈದ್ಯರು ಸಲಹೆ ನೀಡ್ತಾರೆ. ಕೆಲವರಿಗೆ ಪಪ್ಪಾಯ ಹಣ್ಣು ಇಷ್ಟವಾಗುವುದಿಲ್ಲ. ಪಪ್ಪಾಯಿಯನ್ನು ನಾವು ಅನೇಕ ವಿಧಗಳಲ್ಲಿ ಸೇವನೆ ಮಾಡಬಹುದು. ನೀವು ಪಪ್ಪಾಯ ಹಣ್ಣನ್ನು ಹಾಗೆ ತಿನ್ನಬಹುದು. ಇಲ್ಲವೆ ಜ್ಯೂಸ್ ಮಾಡಿ ಕೂಡ ಕುಡಿಯಬಹುದು. ಪಪ್ಪಾಯಿ ಹಣ್ಣು ಮಾತ್ರವಲ್ಲ ಕಾಯಿಯನ್ನು ಕೂಡ ನೀವು ಸೇವನೆ ಮಾಡಬಹುದು. ಪಪ್ಪಾಯಿ ಕಾಯಿಯಲ್ಲಿ ಬಗೆ ಬಗೆ ರೆಸಿಪಿ ಸಿದ್ಧಪಡಿಸಬಹುದು. ಆದ್ರೆ ಬಹುತೇಕರು ಪಪ್ಪಾಯಿ ಪಲ್ಯವನ್ನು ಮಾತ್ರ ಮಾಡಿರ್ತಾರೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಇಷ್ಟವಾಗುವ ಪಪ್ಪಾಯಿ ಕಾಯಿಯ ರೆಸಿಪಿ ಇಲ್ಲಿದೆ.
ಪಪ್ಪಾಯಿ (Papaya) ಕಾಯಿಯಿಂದ ಮಾಡಿ ಈ ಅಡುಗೆ :
ಪಪ್ಪಾಯಿ ಕಾಯಿಯಿಂದ ಮಾಡಿ ಕಟ್ಲೆಟ್ (Cutlet) : ಪಪ್ಪಾಯಿ ಕಾಯಿಯಿಂದ ನೀವು ಕಟ್ಲೆಟ್ ತಯಾರಿಸಬಹುದು. ಇದು ತುಂಬಾ ರುಚಿಯಾಗಿರುತ್ತದೆ. ಮಕ್ಕಳು ಕೂಡ ಇದನ್ನು ಇಷ್ಟಪಟ್ಟು ತಿನ್ನುತ್ತಾರೆ. ಪಪ್ಪಾಯಿ ಕಾಯಿಯಿಂದ ಕಟ್ಲೆಟ್ ಮಾಡೋದು ಹೇಗೆ ಗೊತ್ತಾ?
ಪಪ್ಪಾಯಿ ಕಾಯಿ ಕಟ್ಲೆಟ್ ತಯಾರಿಸಲು ಬೇಕಾಗುವ ವಸ್ತು : ಪಪ್ಪಾಯಿ ಕಾಯಿ 1, ರುಚಿಗೆ ತಕ್ಕಷ್ಟು ಉಪ್ಪು, ಗರಂ ಮಸಾಲಾ ಅರ್ಧ ಚಮಚ, ಅರಿಶಿನದ ಪುಡಿ ಅರ್ಧ ಚಮಚ, ಕೆಂಪು ಮೆಣಸಿನ ಪುಡಿ ಸ್ವಲ್ಪ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಅರ್ಧ ಚಮಚ, ಬ್ರೆಡ್ ತುಂಡುಗಳು, ಉದ್ದಿನ ಹಿಟ್ಟು ಎರಡು ಚಮಚ, ಕೊತ್ತಂಬರಿ ಸೊಪ್ಪು ( ಸಣ್ಣದಾಗಿ ಹೆಚ್ಚಿದ್ದು) ಮೆಣಸಿನಕಾಯಿ, ಕೊತ್ತಂಬರಿ ಪುಡಿ, ಕರಿಯಲು ಎಣ್ಣೆ.
ಪಪ್ಪಾಯಿ ಕಾಯಿಯಿಂದ ಕಟ್ಲೆಟ್ ಮಾಡುವುದು ಹೇಗೆ ? : ಕಟ್ಲೆಟ್ ಮಾಡಲು ಮೊದಲು ಪಪ್ಪಾಯಿ ಕಾಯಿಯ ಸಿಪ್ಪೆ ತೆಗೆದು ತುರಿದುಕೊಳ್ಳಬೇಕು. ತುರಿದ ಪಪ್ಪಾಯಿಗೆ ಗರಂ ಮಸಾಲ, ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ರುಚಿಗೆ ತಕ್ಕಂತೆ ಉಪ್ಪು ಸೇರಿಸಿ ಮಿಕ್ಸ್ ಮಾಡಬೇಕು. ಇದಕ್ಕೆ ಉದ್ದಿನ ಹಿಟ್ಟನ್ನು ಸೇರಿಸಿ. ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ, ಮಿಶ್ರಣವನ್ನು ಸಣ್ಣ ಉಂಡೆಯಾಗಿ ಮಾಡಿ ನಂತ್ರ ಸ್ವಲ್ಪ ಚಪ್ಪಟೆ ಮಾಡಿ. ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾಗ್ತಿದ್ದಂತೆ ಕಟ್ಲೆಟ್ನ್ನು ಬ್ರೆಡ್ ತುಂಡುಗಳಲ್ಲಿ ಅದ್ದಿ ಫ್ರೈ ಮಾಡಿ. ಗೋಲ್ಡನ್ ಬಣ್ಣ ಬರುವವರೆ ಫ್ರೈ ಮಾಡಿ. ಇದನ್ನು ಕೆಚಪ್ ಅಥವಾ ಚಟ್ನಿಯೊಂದಿಗೆ ಸೇವಿಸಿ.
ಚಳಿಗಾಲದಲ್ಲಿ ದಿನಕ್ಕೊಂದು ಕಿತ್ತಳೆ ತಿಂದ್ರೆ ಅಜೀರ್ಣದ ಸಮಸ್ಯೆ ಕಾಡಲ್ಲ
ಪಪ್ಪಾಯಿ ಕಾಯಿ ಹಲ್ವಾ (Halwa) : ಪಪ್ಪಾಯಿ ಕಾಯಿಯಿಂದ ನೀವು ಹಲ್ವಾ ಕೂಡ ಮಾಡಬಹುದು. ಇದಕ್ಕೆ ಪಪ್ಪಾಯಿ ಕಾಯಿ, ಅರ್ಧ ಲೀಟರ್ ಹಾಲು, ಅರ್ಧ ಕಪ್ ಸಕ್ಕರೆ, ಎರಡು ಚಮಚ ತುಪ್ಪ, ಚಿಟಿಕೆ ಏಲಕ್ಕಿ ಪುಡಿ ಮತ್ತು ಡ್ರೈ ಫ್ರೂಟ್ಸ್ (Dry fruits) ಬಳಕೆ ಮಾಡಿ.
ಪಪ್ಪಾಯಿ ಕಾಯಿಂದ ಮಾಡಿ ರೈತಾ : ಪಪ್ಪಾಯಿ ಕಾಯಿಯಿಂದ ರೈತಾ ಮಾಡಲು ಪಪ್ಪಾಯಿ ಕಾಯಿ, ಹುರಿದ ಜೀರಿಗೆ ಪುಡಿ, ಕೆಂಪು ಮೆಣಸಿನ ಪುಡಿ, ಮೊಸರು, ದಾಳಿಂಬೆ ಬೀಜಗಳು, ಉಪ್ಪು, ಚಾಟ್ ಮಸಾಲಾ ಬೇಕಾಗುತ್ತದೆ.
ಮೊದಲು ಪಪ್ಪಾಯಿ ತೊಳೆದು ಸಿಪ್ಪೆ ತೆಗೆದುಕೊಳ್ಳಬೇಕು. ನಂತರ ಅದನ್ನು ತುರಿಯಬೇಕು. ಮೊಸರಿಗೆ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ ಮಾಡಬೇಕು. ನಂತ್ರ ಹುರಿದ ಜೀರಿಗೆ, ಕೆಂಪು ಮೆಣಸಿನ ಪುಡಿ ಸೇರಿಸಬೇಕು. ಮೊಸರಿಗೆ ತುರಿದ ಪಪ್ಪಾಯಿ ಸೇರಿಸಬೇಕು. ನಂತ್ರ ಚಾಟ್ ಮಸಾಲಾ ಹಾಗೂ ದಾಳಿಂಬೆ ಬೀಜವನ್ನು ಹಾಕಿ ಮಿಕ್ಸ್ ಮಾಡಬೇಕು.
ಟೀ ಕುಡಿದ್ರೆ ಬೊಜ್ಜು ಹೆಚ್ಚುತ್ತಾ? ಅಷ್ಟಕ್ಕೂ ಏನಿರಲಿದೆ ಇದರಲ್ಲಿ ತೂಕ ಹೆಚ್ಚಿಸೋ ಅಂಶ?
ಪಪ್ಪಾಯಿ ಕಾಯಿ ಹಲ್ವಾ ಮಾಡೋದು ಹೇಗೆ ?: ಮೊದಲು ಪಪ್ಪಾಯಿ ಕಾಯಿ ಸಿಪ್ಪೆ ತೆಗೆದು ತುರಿದುಕೊಳ್ಳಿ. ನಂತರ ಬಾಣಲೆಯಲ್ಲಿ ದೇಸಿ ತುಪ್ಪವನ್ನು ಬಿಸಿ ಮಾಡಿ. ಅದಕ್ಕೆ ತುರಿದ ಪಪ್ಪಾಯಿ ಹಾಕಿ ಹುರಿಯಿರಿ. ಗೋಲ್ಡನ್ ಬ್ರೌನ್ ಬಣ್ಣಕ್ಕೆ ಬಂದ ನಂತ್ರ ಬಿಸಿ ಇರುವ ಹಾಲನ್ನು ಅದಕ್ಕೆ ಹಾಕಿ ಚೆನ್ನಾಗಿ ಬೇಯಿಸಿ. ಹಾಲು ದಪ್ಪವಾಗುವವರೆಗೆ ಇದನ್ನು ಬೇಯಿಸಬೇಕು. ನಂತ್ರ ಸಕ್ಕರೆಯನ್ನು ಸೇರಿಸಬೇಕು. ಸಕ್ಕರೆ ಮಿಶ್ರಣವನ್ನು ಮತ್ತಷ್ಟು ದಪ್ಪಗೆ ಮಾಡುತ್ತದೆ. ನಂತ್ರ ಅದಕ್ಕೆ ಏಲಕ್ಕಿ ಪುಡಿ ಸೇರಿಸಿ, ತುಪ್ಪದಲ್ಲಿ ಹುರಿದ ಡ್ರೈ ಫ್ರೂಟ್ಸ್ ಸೇರಿಸಿ ಗ್ಯಾಸ್ ಬಂ ಮಾಡಿ. ಬಿಸಿ ಬಿಸಿ ಪಪ್ಪಾಯಿ ಹಲ್ವಾ ರೆಡಿ.