ಫ್ರಿಡ್ಜ್‌ ಇಲ್ಲದ ಹೊಟೇಲ್‌, ಅಡುಗೆಗೆ ದೇಸಿ ತುಪ್ಪ ಬಳಕೆ..ಫುಡ್ ಸಖತ್ ಟೇಸ್ಟ್‌

By Suvarna NewsFirst Published Oct 27, 2022, 12:52 PM IST
Highlights

ಮಧ್ಯರಾತ್ರಿ ಮೀರಿದ ನಂತರವೂ ನಿಮಗೆ ಶುಚಿ-ರುಚಿಯಾದ, ಸರಳ-ಸ್ವಾದಿಷ್ಟ ದಕ್ಷಿಣ ಭಾರತೀಯ ಸಾಂಪ್ರದಾಯಿಕ ಸಸ್ಯಾಹಾರಿ ಊಟ ಸವಿಯಬೇಕೆಂದು ಹಂಬಲವಾಗುತ್ತದೆಯೇ ? ಹಾಗಿದ್ರೆ ಯಾವ್ದೇ ಚಿಂತೆಯಿಲ್ದೆ ನೀವಿಲ್ಲಿಗೆ ವಿಸಿಟ್ ಮಾಡ್ಬೋದು. ಈ ಹೊಟೇಲ್‌ನ ಸ್ಪೆಷಾಲಿಟಿ ಅಂದ್ರೆ ಇಲ್ಲಿ ಅಡುಗೆಗೆ ದೇಸೀ ತುಪ್ಪವನ್ನು ಮಾತ್ರ ಬಳಸ್ತಾರೆ. ಅಷ್ಟೇ ಅಲ್ಲ, ಈ ಹೊಟೇಲ್‌ನಲ್ಲಿ ಫ್ರಿಡ್ಜ್‌ ಬಳಸೋದೆ ಇಲ್ಲ.

ಸಿಲಿಕಾನ್‌ ಸಿಟಿಯಲ್ಲಿ ಹೊಟೇಲ್‌ಗಳಿಗೇನು ಬರಾನ ಹೇಳಿ. ಗಲ್ಲಿಗೆ ನಾಲ್ಕೈದು ಹೊಟೇಲ್‌ಗಳಿರುತ್ತವೆ. ಆದ್ರೆ ಮಧ್ಯರಾತ್ರಿಯಾದ್ರೆ ಸಾಕು ಎಲ್ಲವೂ ಬಾಗಿಲು ಹಾಕಿರುತ್ತೆ. ಹೀಗಾಗಿ ನೈಟ್ ಶಿಫ್ಟ್‌ನಲ್ಲಿ ಕೆಲಸ ಮಾಡೋರು ಆಹಾರ ಸಿಗದೆ ತೊಂದ್ರೆ ಅನುಭವಿಸುವಂತಾಗುತ್ತೆ. ಐಟಿ ಫೀಲ್ಡ್‌ನಲ್ಲಿರೋದು ಈ ಸಮಸ್ಯೆ ಹೆಚ್ಚಾಗಿ ಎದುರಿಸ್ತಾರೆ. ಆದ್ರೆ  ಐಟಿ ವೃತ್ತಿಪರರು ಹೆಚ್ಚು ನೆಲೆಸಿರುವ, ಬೃಹತ್ ಕಂಪೆನಿಗಳು ಹೆಚ್ಚು ಇರುವ ಐಟಿಪಿಎಲ್ ನಲ್ಲಿ ಇನ್ಮುಂದೆ ಆ ಸಮಸ್ಯೆ ಇರಲ್ಲ. ಯಾಕಂದ್ರೆ ಮಧ್ಯರಾತ್ರಿ ಮೀರಿದ ನಂತರವೂ ಇಲ್ಲಿನ  'ದಿ ರಾಮೇಶ್ವರಂ ಕೆಫೆ'ಯಲ್ಲಿ ರುಚಿಕರವಾದ ಊಟ ಲಭ್ಯವಿರಲಿದೆ.

ಬೆಂಗಳೂರಿನಲ್ಲಿ ಮೊಟ್ಟಮೊದಲ ಬಾರಿಗೆ ದಕ್ಷಿಣ ಭಾರತೀಯ ಶೈಲಿಯ (South Indian Style) ಸಸ್ಯಾಹಾರಿ ರೆಸ್ಟೋರೆಂಟ್ ಬೆಳಿಗ್ಗೆ 6.30ರಿಂದ ಮಧ್ಯರಾತ್ರಿ ಮೀರಿ ಒಂದು ಗಂಟೆಯ ವರೆಗೂ ತೆರೆದಿರುತ್ತದೆ. ಐಟಿಪಿಎಲ್ ಮುಖ್ಯ ರಸ್ತೆ, ಬ್ರೂಕ್ಫೀಲ್ಡ್ ನಲ್ಲಿರುವ ದೇಸಿ ತುಪ್ಪದ (Desi ghee) ಹೋಟೆಲ್ ಅಂದರೆ  'ದಿ ರಾಮೇಶ್ವರಂ ಕೆಫೆ ' ಎಂಬ ರೆಸ್ಟೋರೆಂಟ್ ಆರಂಭವಾಗುತ್ತಿದೆ. ಐಟಿ ಉದ್ಯಮಿಗಳು, ಯುವ ಐಟಿ ವೃತ್ತಿಪರರು ರಾತ್ರಿಪಾಳಿ ಕೆಲಸ ಮುಗಿಸಿ ಶುಚಿ-ರುಚಿಯಾದ ದಕ್ಷಿಣ ಭಾರತೀಯ ಸಸ್ಯಾಹಾರಿ ಊಟ ಸವಿಯಬೇಕೆಂದು ಬಯಸಿದರೆ ಈ ರಾಮೇಶ್ವರಂ ಕೆಫೆ ನಿಮ್ಮ ಹೊಟ್ಟೆಯ ಹಸಿವನ್ನು (Hungry) ತಣಿಸುತ್ತದೆ. 

ಬಾಯಲ್ಲಿಟ್ಟರೆ ಕರಗೋ ಬೆಣ್ಣೆ ದೋಸೆ ಬೆಂಗಳೂರಲ್ಲಿ ಎಲ್ಲೆಲ್ಲಾ ಸಿಗುತ್ತೆ ?

`ದಿ ರಾಮೇಶ್ವರಂ ಕೆಫೆ' ವಿಶೇಷತೆಯೇನು ?
ಐಟಿಪಿಎಲ್ ಸುತ್ತಮುತ್ತ ಐಟಿ ವೃತ್ತಿಪರರು ಹೆಚ್ಚು ನೆಲೆಸಿದ್ದು, ಅವರು ತಡರಾತ್ರಿಯವರೆಗೆ ಕೆಲಸ ಮಾಡುತ್ತಿರುತ್ತಾರೆ. ಬಳಿಕ ಹೊರಗೆ ಕುಟುಂಬಸ್ಥರು, ಸ್ನೇಹಿತರ ಜೊತೆ ಹೋಗಿ ಹೊಟೇಲ್ ನಲ್ಲಿ ಊಟ ಮಾಡಬೇಕೆಂದು ಬಯಸುತ್ತಾರೆ. ಅಂಥವರಿಗೆ ಒಂದು ಉತ್ತಮ ದಕ್ಷಿಣ ಭಾರತೀಯ ಶೈಲಿಯ ಸಸ್ಯಾಹಾರಿ ರೆಸ್ಟೋರೆಂಟ್ ಇದಾಗಿದೆ. ಇಲ್ಲಿನ ಜನರ ಬೇಡಿಕೆಗಳು, ಅಗತ್ಯಗಳು ಮತ್ತು ಅವರ ನಾಡಿಮಿಡಿತವನ್ನು ಅರಿತು ಯುವ ಚಾರ್ಟೆರ್ಡ್ ಅಕೌಂಟೆಂಟ್ ಈ ರೆಸ್ಟೋರೆಂಟ್ ಆರಂಭಿಸುತ್ತಿದ್ದಾರೆ. ಅವರೇ ದಿವ್ಯಾ ರಾಘವೇಂದ್ರ ರಾವ್. ಭಾರತೀಯ ಚಾರ್ಟೆರ್ಡ್ ಅಕೌಂಟೆಂಟ್‌ ಸಂಸ್ಥೆಯ ದಕ್ಷಿಣ ಭಾರತೀಯ ಸ್ಥಳೀಯ ಮಂಡಳಿಯ ಬೆಂಗಳೂರು ಶಾಖೆಯ ಉಪಾಧ್ಯಕ್ಷೆಯಾಗಿರುವ ದಿವ್ಯಾ ರಾಘವೇಂದ್ರ ಅವರ ಕನಸಿನ ಕೂಸು ಈ ರಾಮೇಶ್ವರಂ ಕೆಫೆ.

ಶುದ್ಧ ತುಪ್ಪ ಸೇರಿಸಿ ತಯಾರು ಮಾಡುವ ಆಹಾರ
`ದಿ ರಾಮೇಶ್ವರಂ ಕೆಫೆ' ಯಲ್ಲಿ ಹೆಚ್ಚಿನ ತಿಂಡಿ ತಿನಿಸುಗಳನ್ನು ಶುದ್ಧ ತುಪ್ಪ ಹಾಕಿ ತಯಾರು ಮಾಡಲಾಗುತ್ತದೆ. ಭಾರತೀಯ ಆಹಾರ ಪದ್ಧತಿಯಲ್ಲಿ ಮತ್ತು ಸಂಸ್ಕೃತಿಯಲ್ಲಿ ತುಪ್ಪಕ್ಕೆ ವಿಶೇಷ ಸ್ಥಾನವಿದೆ. ಅನೇಕ ರೋಗಗಳನ್ನು ಗುಣಪಡಿಸುವ ಆಯುರ್ವೇದ ಔಷಧಿಯಾಗಿಯೂ ಶುದ್ಧ ದೇಸಿ ತುಪ್ಪವನ್ನು ಬಳಸುತ್ತಾರೆ. ತುಪ್ಪ ಪ್ರತಿ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಜೀರ್ಣ ಸಮಸ್ಯೆಗೆ, ಹಾರ್ಮೋನ್ ಗಳ ಸಮತೋಲನಕ್ಕೆ ದೇಹಕ್ಕೆ (Body) ಸಮಪ್ರಮಾಣದಲ್ಲಿ ತುಪ್ಪ ಸೇವಿಸಿದರೆ ಉತ್ತಮ ಎಂದು ಆಯುರ್ವೇದದಲ್ಲಿ ಹೇಳಲಾಗುತ್ತದೆ. ತುಪ್ಪ ಭಾರತೀಯ ಪಾಕಶಾಲೆಯ ಪರಂಪರೆಯ ದೊಡ್ಡ ಭಾಗವಾಗಿದೆ. 

ರಾಮೇಶ್ವರಂ ಕೆಫೆಯಲ್ಲಿ ಮೂಗಿಗೆ ಘಮಘಮ ಪರಿಮಳ ಬರುವ ಮಸಾಲೆ ದೋಸೆ, ತುಪ್ಪ-ಬೆಣ್ಣೆ ಮಸಾಲೆ ದೋಸೆ, ತುಪ್ಪ ಈರುಳ್ಳಿ ದೋಸೆ, ತುಪ್ಪ ಪೋಡಿ ಇಡ್ಲಿಗಳು, ತುಪ್ಪ ವೆನ್ ಪೊಂಗಲ್, ತುಪ್ಪ ಸಕ್ಕರೆ ಪೊಂಗಲ್, ತುಪ್ಪ ಖಾರಾಬಾತ್, ತುಪ್ಪ ಕೇಸರಿಬಾತ್ ಹೀಗೆ ಇನ್ನೂ ಹಲವು ತಿಂಡಿ-ತಿನಿಸುಗಳು ಲಭ್ಯವಿರಲಿದೆ.

ಕಾಫಿ ಪ್ರಿಯರಾ, ಬೆಂಗಳೂರಿನಲ್ಲಿ ಅತ್ಯುತ್ತಮ ಫಿಲ್ಟರ್ ಕಾಫಿ ಇಲ್ಲಿ ಸಿಗುತ್ತೆ ನೋಡಿ

ಫ್ರಿಡ್ಜ್‌ ಇಲ್ಲದ ಹೋಟೆಲ್​
ಈ ಹೊಟೇಲ್‌ನ ಇನ್ನೊಂದು ಮುಖ್ಯ ವಿಶೇಷತೆಯೆಂದರೆ ಇಲ್ಲಿ ಸೌತ್​ ಇಂಡಿಯನ್​ ಫುಡ್​​ ಮಾತ್ರ ಲಭ್ಯವಿದೆ. ಅಷ್ಟೇ ಅಲ್ಲ ಈ ಹೊಟೇಲ್‌ನಲ್ಲಿ ಫ್ರಿಡ್ಜ್ ಇಲ್ಲ. ಯಾವುದೇ ಚಟ್ನಿ 2 ಗಂಟೆ ಮಾತ್ರ ಹೋಟೆಲ್​​ನಲ್ಲಿರುತ್ತದೆ. ಅಬ್ಸುಲ್​ ಕಲಾಂನವರಿಗೆ ಈ ಹೋಟೆಲ್‌ನ್ನು ಅರ್ಪಿಸಲಾಗಿದೆ. ಅವರ ನೆನಪಿಗಾಗಿ ಅವರ ಹುಟ್ಟೂರು ರಾಮೇಶ್ವರಂ ಹೆಸರು ಇಟ್ಟಿದ್ದೇವೆ. ಎಣ್ಣೆ (Oil) ತುಂಬಾ ಕಡಿಮೆ ಬಳಸುತ್ತೇವೆ. ಎಲ್ಲದಕ್ಕೂ ತುಪ್ಪವನ್ನೇ ಹೆಚ್ಚು ಬಳಕೆ ಮಾಡುತ್ತೇವೆ. ಪುಳಿಯೋಗರೆ, ಕೊಟ್ಟೆ ಪೊಂಗಲ್​​, ಒಬ್ಬಟ್ಟು, ಸಕ್ಕರೆ ಪೊಂಗಲ್​ನಂಥ ದೇಸಿ ದಕ್ಷಿಣ ಭಾರತೀಯ ತಿನಿಸಿಗೆ ಆದ್ಯತೆ ನೀಡುತ್ತೇವೆ ಎಂದು ದಿವ್ಯಾ ರಾಘವೇಂದ್ರ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮೂರನೇ ಔಟ್‌ಲೆಟ್‌
ರಾಮೇಶ್ವರ ಕೆಫೆ ಹೊಟೇಲ್‌ ಆರಂಭವಾಗಿರುವುದು ಇದೇ ಮೊದಲ ಬಾರಿಯಲ್ಲ. 2021ರಲ್ಲಿಯೇ ಇಂದಿರಾನಗರದಲ್ಲಿ ಮೊದಲ ಶಾಖೆಯನ್ನು (Outlet) ತೆರೆಯಲಾಗಿತ್ತು. ನಂತರ ವೈಟ್​ಫೀಲ್ಡ್​​​ನಲ್ಲಿ ಆರಂಭಿಸಲಾಯಿತು. ಬಳಿಕ ಈಗ 3 ನೇ ಔಟ್​ಲೆಟ್​ನ್ನು ವೈಟ್‌ಫೀಲ್ಡ್‌ನಲ್ಲಿ ಆರಂಭಿಸಲಾಗುತ್ತಿದೆ. IMA ನಲ್ಲಿ ಓದಿದ್ದು, ಚಾರ್ಟೆಡ್​ ಅಕೌಂಟೆಂಟ್ ಆಗಿರುವ ದಿವ್ಯಾ ರಾಘವೇಂದ್ರ ಈ ವಿಶಿಷ್ಟ ಶೈಲಿಯ ಹೊಟೇಲ್‌ ಹಿಂದಿರುವ ರೂವಾರಿ. 

ನಾವಿಲ್ಲಿ ತೆರೆಯುತ್ತಿರುವ ರೆಸ್ಟೋರೆಂಟ್ ಖಂಡಿತವಾಗಿಯೂ ಯಶಸ್ವಿಯಾಗುತ್ತದೆ ಎಂದು ಭಾವಿಸುತ್ತೇವೆ. ಏಕೆಂದರೆ ಇದು ಗ್ರಾಹಕರಿಗೆ (Customers) ಸ್ವಾದಿಷ್ಟ ಮಾತ್ರವಲ್ಲ ಪೌಷ್ಟಿಕಾಂಶಯುಕ್ತ ಸಸ್ಯಾಹಾರಿ (Vegetarian) ಆಹಾರವನ್ನು ಕೂಡ ಪೂರೈಸುತ್ತದೆ. ನಮ್ಮದೇ ಆದ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ಮತ್ತು ನಮ್ಮ ದೇಹವನ್ನು ಚೆನ್ನಾಗಿ ಪೋಷಿಸಲು ನಮ್ಮ ಪೂರ್ವಜರಿಂದ ಕಲಿತ ಶ್ರೀಮಂತ ಸಮತೋಲಿತ ಆಹಾರ ಸವಿಯಲು ಸಹಾಯ ಮಾಡುತ್ತದೆ ಎಂದು ದಿವ್ಯಾ ರಾಘವೇಂದ್ರ ರಾವ್ ಹೇಳುತ್ತಾರೆ.

click me!