
ಮನೆಗೆ ದಿಢೀರ್ ಆಗಿ ಗೆಸ್ಟ್ ಯಾರಾದ್ರೂ ಬರ್ತಿದ್ದಾರೆ ಅಂದ್ರೆ ಎಲ್ಲರಿಗೂ ಗಾಬರಿಯಾಗೋ ಪರಿಸ್ಥಿತಿ. ಸ್ಪೆಷಲ್ ಆಗಿ ಏನ್ ಅಡುಗೆ ಮಾಡೋದಪ್ಪಾ ಅಂತ ಯೋಚನೆ ಮಾಡೀನೆ ತಲೆಕೆಟ್ಟು ಹೋಗುತ್ತೆ. ಹೀಗಿದ್ದಾಗ ಫಟಾಫಟ್ ಆಗಿ ರೆಡಿಯಾಗೋ ರೆಸಿಪಿ (Recipe) ಏನಿದ್ಯಾಪ್ಪ ಅಂತ ಹುಡುಕ್ತೀವಿ. ಇಲ್ಲಿದೆ ನೋಡಿ ಕ್ಷಣಾರ್ಧದಲ್ಲಿ ಮಾಡಬಹುದಾದ ಕೆಲವು ವಿಶೇಷವಾದ ಹಲ್ವಾ ಪಾಕವಿಧಾನಗಳು. ಇದನ್ನು ಮಾಡಲು ಹೆಚ್ಚು ಪದಾರ್ಥಗಳ ಅಗತ್ಯವೂ ಇಲ್ಲ. ಮನೆಯಲ್ಲೇ ಇರುವ ಕೆಲವು ಹಣ್ಣುಗಳನ್ನು ಬಳಸಿಕೊಂಡು ಸುಲಭವಾಗಿ ಈ ಹಲ್ವಾ (Halwa)ಗಳನ್ನು ತಯಾರಿಸಬಹುದು.
ಆ್ಯಪಲ್ ಹಲ್ವಾ
ದಿನಕ್ಕೊಂದು ಸೇಬು (Apple) ತಿಂದರೆ ವೈದ್ಯರಿಂದ ದೂರವಿರಬಹುದು ಅನ್ನೋ ಮಾತೇ ಇದೆ. ಹೀಗಾಗಿ ಹೆಚ್ಚಿನವರು ಪ್ರತಿನಿತ್ಯ ಆ್ಯಪಲ್ ತಿನ್ನುವುದನ್ನು ರೂಢಿ ಮಾಡಿಕೊಂಡಿರುತ್ತಾರೆ. ಆದರೆ ಆ್ಯಪಲ್ ನ್ನು ಹಾಗೆಯೇ ತಿನ್ನಲು ಇಷ್ಟಪಡದವರು.ಆ್ಯಪಲ್ ಜ್ಯೂಸ್, ಆಪಲ್ ಕಸ್ಟರ್ಡ್ ಮಾಡಿ ತಿನ್ನುತ್ತಾರೆ. ಇಂಥವರು ತಮ್ಮ ಪಟ್ಟಿಗೆ ಆ್ಯಪಲ್ ಹಲ್ವಾ ಕೂಡಾ ಸೇರಿಸಿಕೊಳ್ಳಬಹುದು. ಕ್ಯಾರೆಟ್ ಹಲ್ವಾ ಹಾಗೂ ಸೋರೆಕಾಯಿ ಹಲ್ವಾ ನಿಮ್ಮ ಫೇವರಿಟ್ ಆಗಿದ್ದರೆ, ನೀವು ಆ್ಯಪಲ್ ಹಲ್ವಾವನ್ನು ಕೂಡಾ ಇಷ್ಟಪಡೋದು ಖಂಡಿತ.
ಪತಿ ಚಂದನ್ ಶೆಟ್ಟಿಗೆ ಕ್ಯಾರೆಟ್ ಹಲ್ವ ಮಾಡಿಕೊಟ್ಟ ನಿವೇದಿತಾ ಗೌಡ!
ಆಪಲ್ ಹಲ್ವಾ ಆರೋಗ್ಯಕ್ಕೂ ಸಹ ಅತ್ಯುತ್ತಮವಾಗಿದೆ. ಇದನ್ನು ತಯಾರಿಸಲು ಮೊದಲಿಗೆ ಸೇಬನ್ನು ತುಂಡು ಮಾಡಿ, ಮಿಕ್ಸಿಯಲ್ಲಿ ಗ್ರೈಂಡ್ ಮಾಡಿ ಈ ಪೇಸ್ಟ್ನ್ನು ತುಪ್ಪದಲ್ಲಿ ಹುರಿಯಿರಿ. ಇದಕ್ಕೆ ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಆಗಾಗ ತುಪ್ಪವನ್ನು ಸೇರಿಸಿ ಪಾಕ ಬರುವ ವರೆಗೆ ಮಿಕ್ಸ್ ಮಾಡುತ್ತಾ ಇರಿ. ಇದು ಸಂಪೂರ್ಣವಾಗಿ ಬೆಂದು ಪಾಕದ ಹದ ಬಂದ ಕೂಡಲೇ ತುಪ್ಪವನ್ನು ಬಿಡಲು ಶುರು ಮಾಡುತ್ತದೆ, ನಂತರ ಈ ಮಿಶ್ರಣಕ್ಕೆ ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿಯನ್ನು ಸೇರಿಸಿ. ಮೇಲಿನಿಂದ ಏಲಕ್ಕಿ ಪುಡಿ ಹಾಕಿಕೊಳ್ಳಿ. ಈಗ ರುಚಿಯಾದ ಆಪಲ್ ಹಲ್ವಾ ಸವಿಯಲು ಸಿದ್ಧ.
ಡ್ರೈ ಫ್ರೂಟ್ ಹಲ್ವಾ
ನಿಮಗಿಷ್ಟವಿರುವ, ಮನೆಯಲ್ಲಿ ಲಭ್ಯವಿರುವ ಡ್ರೈ ಫ್ರೂಟ್ಸ್‌ಗಳನ್ನು ಸೇರಿಸಿ ಈ ಡ್ರೈ ಫ್ರೂಟ್ (Dry Fruit) ಹಲ್ವಾ ತಯಾರಿಸಬಹುದಾಗಿದೆ. ಗೋಡಂಬಿ, ಖರ್ಜೂರ, ದ್ರಾಕ್ಷಿ, ಬಾದಾಮಿ ಮೊದಲಾದವುಗಳನ್ನು ಈ ಹಲ್ವಾ ತಯಾರಿಸಲು ಬಳಸಬಹುದು. ಖರ್ಜೂರವನ್ನು ಸೇರಿಸಿದರೆ ನೀವು ಸಕ್ಕರೆ ಕಡಿಮೆ ಪ್ರಮಾಣದಲ್ಲಿ ಹಾಕಿಕೊಳ್ಳಬೇಕು. ಇಲ್ಲದಿದ್ದರೆ ಹಲ್ವಾ ಹೆಚ್ಚು ಸಿಹಿಯಾಗುವ ಸಾಧ್ಯತೆ ಇದೆ.
Ande ka Halwa: ಮೊಟ್ಟೆ ಹಲ್ವಾ ತಿಂದಿದ್ದೀರಾ ?
ಡ್ರೈ ಫ್ರೂಟ್ ಹಲ್ವಾ ತಯಾರಿಸಲು ನೀವು ಆಯ್ಕೆ ಮಾಡಿಕೊಳ್ಳುವ ಹಣ್ಣುಗಳನ್ನು ಜೋಡಿಸಿ. ಖರ್ಜೂರ (Dates) ತೆಗೆದುಕೊಳ್ಳುವುದಾದರೆ ಮೊದಲೇ ಬೀಜ ತೆಗದು ಬಿಡಿಸಿಟ್ಟುಕೊಂಡು ಮಿಕ್ಸಿಗೆ ಹಾಕಿ ಸ್ಪಲ್ಪ ಗ್ರೈಂಡ್ ಮಾಡಿಟ್ಟುಕೊಳ್ಳಿ. ಈಗ ಬಾಣಲೆಗೆ ತುಪ್ಪ ಹಾಕಿಕೊಂಡು ಎಲ್ಲಾ ಡ್ರೈ ಫ್ರೂಟ್ಸ್ ಇದಕ್ಕೆ ಸೇರಿಸಿ ಹುರಿಯಿರಿ. ಒಣಹಣ್ಣುಗಳು ನಸುಕಂದು ಬಣ್ಣ ಬರುವವರೆಗೆ ಈ ವಿಧಾನವನ್ನು ಮುಂದುವರಿಸಿ. ಖರ್ಜೂರದ ಚೂರುಗಳು, ಸಕ್ಕರೆಯನ್ನು ಸೇರಿಸಿ ತುಪ್ಪ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಮೇಲಿನಿಂದ ಏಲಕ್ಕಿ ಪುಡಿ ಸೇರಿಸಿದರೆ ಡ್ರೈ ಫ್ರೂಟ್ ಹಲ್ವಾ ಸಿದ್ಧ.
ಪಪ್ಪಾಯಿ ಹಲ್ವಾ
ಟೇಸ್ಟಿ ಹಲ್ವಾ ಆಗಿ ಪರಿವರ್ತಿಸಬಹುದಾದ ರುಚಿಕರ ಹಣ್ಣುಗಳಲ್ಲೊಂದು ಪಪ್ಪಾಯಿ (Papaya). ಇದನ್ನು ತಯಾರಿಸಲು ನೀವು ಕಚ್ಚಾ ಪಪ್ಪಾಯಿ ಅಥವಾ ಮಾಗಿದ ಪಪ್ಪಾಯಿಯನ್ನು ಬಳಸಬಹುದು, ವ್ಯತ್ಯಾಸವೆಂದರೆ ಮಾಗಿದ ಪಪ್ಪಾಯಿಗೆ ಸ್ವಲ್ಪ ಸಕ್ಕರೆಯ ಅಗತ್ಯವಿರುತ್ತದೆ, ಏಕೆಂದರೆ ಹಣ್ಣು ತುಂಬಾ ಸಿಹಿಯಾಗಿರುತ್ತದೆ. ಹಸಿ ಪಪ್ಪಾಯಿ ಬೇಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು ಹೆಚ್ಚು ಸಕ್ಕರೆ ಬೇಕಾಗುತ್ತದೆ.
ಪಪ್ಪಾಯಿ ಹಲ್ವಾ ತಯಾರಿಸಲು ಮೊದಲಿಗೆ ಪಪ್ಪಾಯಿಯನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿಕೊಂಡು ತುಪ್ಪದಲ್ಲಿ ಚೆನ್ನಾಗಿ ಹುರಿಯಿರಿ. ಇದು ಸಾಕಷ್ಟು ಮೆತ್ತಗಾಗಿ ಪೇಸ್ಟ್ ರೂಪಕ್ಕೆ ಬರುತ್ತದೆ. ಇದಕ್ಕೆ ಸಕ್ಕರೆ, ತುಪ್ಪ ಸೇರಿಸಿ ಪಾಕ ಮಾಡುತ್ತಾ ಹೋಗಿ. ಮಿಶ್ರಣದಿಂದ ತುಪ್ಪ ಬಿಡಲು ಆರಂಭವಾದಾಗ ದ್ರಾಕ್ಷಿ, ಗೋಡಂಬಿ , ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.