ಕ್ಯಾರೆಟ್ ಹಲ್ವಾ, ಗೋಧಿ ಹಲ್ವಾ ಬಿಟ್ಟು ಈ ಬಾರಿ ಸಿಹಿ ಗೆಣಸಿನ ಹಲ್ವಾ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

Published : Nov 21, 2026, 08:56 PM IST
Sweet Potato Halwa

ಸಾರಾಂಶ

Sweet Potato Halwa: ಚಳಿಗಾಲದಲ್ಲಿ ಸಿಹಿ ತಿನ್ನಬೇಕೆನಿಸಿದರೆ ಸಿಹಿ ಗೆಣಸಿನ ಹಲ್ವಾ ಒಮ್ಮೆ ತಯಾರಿಸಿ ನೋಡಿ. ನಾರಿನಂಶ, ವಿಟಮಿನ್ ಎ ಮತ್ತು ಪೊಟ್ಯಾಶಿಯಂನಿಂದ ಸಮೃದ್ಧವಾಗಿರುವ ಈ ರುಚಿಕರವಾದ ಹಲ್ವಾವನ್ನು ಮಾಡೋದು ಸುಲಭ. ಇದರ ಸರಳ ರೆಸಿಪಿ ಮತ್ತು ಆರೋಗ್ಯಕರ ಪ್ರಯೋಜನ ತಿಳಿಯಿರಿ.

ಚಳಿಗಾಲಕ್ಕೆ ಬೆಸ್ಟ್ ಸಿಹಿಗೆಣಸಿನ ಹಲ್ವಾ

ನೀವು ಯಾವಾಗಲೂ ರವೆ ಅಥವಾ ಕ್ಯಾರೆಟ್ ಹಲ್ವಾವನ್ನೇ ಮಾಡುತ್ತೀರಾ? ಈ ಬಾರಿ ಭಿನ್ನವಾದ ಹಲ್ವಾ ತಯಾರಿಸಲು ಬಯಸಿದರೆ, ಸಿಹಿ ಗೆಣಸಿನ ಹಲ್ವಾ ಅತ್ಯುತ್ತಮ ಆಯ್ಕೆ. ಇದನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಇದನ್ನು ಇಷ್ಟಪಡುತ್ತಾರೆ. ಚಳಿಗಾಲದ ಸಮಯದಲ್ಲಿ ಸಿಹಿ ಗೆಣಸಿನ ಹಲ್ವಾ ಮಾಡಿದರೆ ರುಚಿಯೂ ಹೆಚ್ಚು, ಆರೋಗ್ಯಕ್ಕೂ ಉತ್ತಮ. ಸಿಹಿ ಗೆಣಸಿನ‌ನಲ್ಲಿ ಹೇರಳ ಪ್ರಮಾಣದಲ್ಲಿ ನಾರಿನಂಶ, ವಿಟಮಿನ್ ಎ, ಪೊಟ್ಯಾಶಿಯಂ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಕಂಡುಬರುತ್ತವೆ. ಇವು ದೇಹಕ್ಕೆ ಶಕ್ತಿ ನೀಡುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತವೆ.

ಬೇಕಾಗುವ ಸಾಮಗ್ರಿಗಳು

  • ಸಿಹಿ ಗೆಣಸು – 500 ಗ್ರಾಂ
  • ಹಾಲು – 2 ಕಪ್
  • ತುಪ್ಪ – 3 ದೊಡ್ಡ ಚಮಚ
  • ಸಕ್ಕರೆ – ½ ಕಪ್ (ರುಚಿಗೆ ತಕ್ಕಷ್ಟು)
  • ಏಲಕ್ಕಿ ಪುಡಿ – ½ ಸಣ್ಣ ಚಮಚ
  • ಗೋಡಂಬಿ – 10-12
  • ಬಾದಾಮಿ – 8-10
  • ಒಣದ್ರಾಕ್ಷಿ – 1 ದೊಡ್ಡ ಚಮಚ
  • ಪಿಸ್ತಾ – ಅಲಂಕಾರಕ್ಕಾಗಿ

ತಯಾರಿಸುವ ವಿಧಾನ

  1. ಮೊದಲಿಗೆ ಸಿಹಿ ಗೆಣಸನ್ನು ಚೆನ್ನಾಗಿ ತೊಳೆದುಕೊಳ್ಳಿ. ನಂತರ ಕುಕ್ಕರ್‌ನಲ್ಲಿ 2-3 ಸೀಟಿ ಬರುವವರೆಗೆ ಬೇಯಿಸಿಕೊಳ್ಳಿ. ಬೆಂದ ನಂತರ ಸಿಹಿ ಗೆಣಸು ತಣ್ಣಗಾಗಲು ಬಿಡಿ ಮತ್ತು ಅದರ ಸಿಪ್ಪೆಯನ್ನು ತೆಗೆಯಿರಿ. ಈಗ ಅವುಗಳನ್ನು ಚೆನ್ನಾಗಿ ಮ್ಯಾಶ್ ಮಾಡಿಕೊಳ್ಳಿ ಅಥವಾ ತುರಿದುಕೊಳ್ಳಿ.
  2. ದಪ್ಪ ತಳವಿರುವ ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ. ಅದಕ್ಕೆ ಗೋಡಂಬಿ ಮತ್ತು ಬಾದಾಮಿ ಹಾಕಿ ತಿಳಿ ಚಿನ್ನದ ಬಣ್ಣ ಬರುವವರೆಗೆ ಹುರಿದು ತೆಗೆದಿಡಿ. ಈಗ ಅದೇ ತುಪ್ಪಕ್ಕೆ ಮ್ಯಾಶ್ ಮಾಡಿದ ಸಿಹಿ ಗೆಣಸು ಹಾಕಿ ಮಧ್ಯಮ ಉರಿಯಲ್ಲಿ 5-7 ನಿಮಿಷಗಳ ಕಾಲ ಹುರಿಯಿರಿ. ಇದರಿಂದ ಸಿಹಿ ಗೆಣಸಿನ‌ ಹಸಿ ವಾಸನೆ ಹೋಗುತ್ತದೆ ಮತ್ತು ಅದರ ರುಚಿ ಹೆಚ್ಚಾಗುತ್ತದೆ.
  3. ನಂತರ ಬಾಣಲೆಗೆ ಹಾಲು ಹಾಕಿ ನಿರಂತರವಾಗಿ ಕೈಯಾಡಿಸುತ್ತಾ ಬೇಯಿಸಿ. ಹಾಲು ನಿಧಾನವಾಗಿ ಗಟ್ಟಿಯಾಗಲು ಪ್ರಾರಂಭಿಸಿದಾಗ ಸಕ್ಕರೆ ಸೇರಿಸಿ. ಸಕ್ಕರೆ ಹಾಕಿದ ನಂತರ ಮಿಶ್ರಣ ಸ್ವಲ್ಪ ತೆಳುವಾಗಬಹುದು. ಆದ್ದರಿಂದ ನಿರಂತರವಾಗಿ ಕೈಯಾಡಿಸುತ್ತಿರಿ. ಸ್ವಲ್ಪ ಸಮಯದ ನಂತರ ಹಲ್ವಾ ಗಟ್ಟಿಯಾಗಲು ಪ್ರಾರಂಭಿಸುತ್ತದೆ.
  4. ಈಗ ಇದಕ್ಕೆ ಏಲಕ್ಕಿ ಪುಡಿ, ಒಣದ್ರಾಕ್ಷಿ ಮತ್ತು ಹುರಿದ ಡ್ರೈ ಫ್ರುಟ್ಸ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಹಲ್ವಾ ಬಾಣಲೆಯ ತಳವನ್ನು ಬಿಡುವವರೆಗೆ ಬೇಯಿಸಿ. ನಂತರ ಗ್ಯಾಸ್ ಆಫ್ ಮಾಡಿ. ಮೇಲಿನಿಂದ ಪಿಸ್ತಾ ಹಾಕಿ ಅಲಂಕರಿಸಿ. ಈಗ ಸಿಹಿ ಗೆಣಸಿನ ಹಲ್ವಾ ಸವಿಯಲು ರೆಡಿ.

ಸಿಹಿ ಗೆಣಸಿನ ಹಲ್ವಾ ತಿನ್ನುವುದರಿಂದ ಆಗುವ ಪ್ರಯೋಜನಗಳು

ಸಿಹಿ ಗೆಣಸಿನ ಹಲ್ವಾ ಕೇವಲ ರುಚಿಕರವಾದ ಖಾದ್ಯವಲ್ಲ, ಪೌಷ್ಟಿಕಾಂಶಗಳಿಂದಲೂ ಕೂಡಿದೆ. ಸಿಹಿ ಗೆಣಸಿನ‌ನಲ್ಲಿರುವ ನಾರಿನಂಶ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ವಿಟಮಿನ್ ಎ ಕಣ್ಣಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ನೈಸರ್ಗಿಕ ಕಾರ್ಬೋಹೈಡ್ರೇಟ್‌ಗಳು ದೇಹಕ್ಕೆ ದೀರ್ಘಕಾಲದವರೆಗೆ ಶಕ್ತಿಯನ್ನು ಒದಗಿಸುತ್ತವೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪ್ರತಿದಿನ ಇಡ್ಲಿ, ದೋಸೆ ತಿಂದು ಬೇಸರವಾಗಿದೆಯಾ? ಒಮ್ಮೆ ಈ ಆರೋಗ್ಯಕರ, ರುಚಿಕರ ರಾಗಿ ಉಪ್ಪಿಟ್ಟು ಮಾಡಿ ನೋಡಿ!
ಗರಿಗರಿಯಾದ ರಾಗಿ-ಹೆಸರುಬೇಳೆ ದೋಸೆ ಹೀಗೆ ಮಾಡಿ.. ಹೋಟೆಲ್ ರುಚಿ ಏನೇನೂ ಅಲ್ಲ ಈ ದೋಸೆ ತಿಂದ್ರೆ!