ದೋಸೆ, ಚಪಾತಿ, ಮುದ್ದೆ, ಅನ್ನಕ್ಕೆ ಹೇಳಿಮಾಡಿಸಿದ 'ಚಿಕನ್ ಸುಕ್ಕ'.. ಮಾಡೋ ಸುಲಭ ವಿಧಾನ ಇಲ್ಲಿದೆ

Published : Oct 17, 2026, 11:26 PM IST
Easy chicken sukka recipe

ಸಾರಾಂಶ

Easy chicken sukka recipe: ದೋಸೆ, ಚಪಾತಿ, ರಾಗಿ ಮುದ್ದೆ ಅಥವಾ ಬಿಸಿಬಿಸಿ ಅನ್ನದ ಜೊತೆಗೆ ನಾಲಿಗೆ ಚಪ್ಪರಿಸಿಕೊಂಡು ತಿನ್ನಲು 'ಚಿಕನ್ ಸುಕ್ಕ'ಗಿಂತ ಬೆಸ್ಟ್ ಕಾಂಬಿನೇಷನ್ ಮತ್ತೊಂದಿಲ್ಲ. ಅಂಗಡಿಯಿಂದ ತಂದ ಪುಡಿಗಳ ಬದಲು, ಮನೆಯಲ್ಲೇ ತಾಜಾ ಮಸಾಲೆಗಳನ್ನು ಹುರಿದು ಅರೆದು ಮಾಡಿದರೆ ಇದರ ರುಚಿ ಹೋಟೆಲ್‌ಗಿಂತಲೂ ಅದ್ಭುತವಾಗಿರುತ್ತದೆ. ಅಂದಹಾಗೆ ಸುಲಭವಾಗಿ ಚಿಕನ್ ಸುಕ್ಕ ಮಾಡೋದು ಹೇಗೆ? ಇಲ್ಲಿದೆ ಕಂಪ್ಲೀಟ್ ರೆಸಿಪಿ.

ಚಿಕನ್ ಪ್ರಿಯರಿಗೆ ಚಿಕನ್ ಸುಕ್ಕ ಎಂದರೆ ಬಾಯಲ್ಲಿ ನೀರೂರುತ್ತದೆ. ರಾಗಿ ಮುದ್ದೆ, ಬಿಸಿ ಅನ್ನ, ಚಪಾತಿ, ಪರೋಟ ಮಾತ್ರವಲ್ಲದೆ ದೋಸೆಗೂ ಇದು ಬೆಸ್ಟ್ ಕಾಂಬಿನೇಷನ್. ಮನೆಯಲ್ಲೇ ಲಭ್ಯವಿರುವ ಮಸಾಲೆಗಳನ್ನು ಹುರಿದು ಅರೆದು ಮಾಡುವ ಈ ಚಿಕನ್ ಸುಕ್ಕದ ರುಚಿ ಹೋಟೆಲ್ ರುಚಿಯನ್ನೂ ಮೀರಿಸುತ್ತದೆ.

ಬೇಕಾಗುವ ಸಾಮಗ್ರಿಗಳು

ಚಿಕನ್ ಬೇಯಿಸಲು
ಚಿಕನ್ - 1 ಕೆ.ಜಿ (ಸ್ವಚ್ಛಗೊಳಿಸಿ ಮಧ್ಯಮ ಗಾತ್ರದಲ್ಲಿ ಕತ್ತರಿಸಿದ್ದು)
ಎಣ್ಣೆ - 5 ರಿಂದ 6 ಟೇಬಲ್ ಸ್ಪೂನ್
ಈರುಳ್ಳಿ - 2 (ಉದ್ದವಾಗಿ ಸಣ್ಣಗೆ ಹೆಚ್ಚಿದ್ದು)
ಕರಿಬೇವಿನ ಸೊಪ್ಪು - ಸ್ವಲ್ಪ
ಅರಿಶಿನ ಪುಡಿ - 1/2 ಟೀ ಸ್ಪೂನ್
ಕಲ್ಲುಪ್ಪು - ರುಚಿಗೆ ತಕ್ಕಷ್ಟು

ಸ್ಪೆಷಲ್ ಡ್ರೈ ಮಸಾಲೆಗೆ
ಎಣ್ಣೆ - 1 ಟೇಬಲ್ ಸ್ಪೂನ್
ಬ್ಯಾಡಗಿ ಒಣಮೆಣಸಿನಕಾಯಿ - 6 ರಿಂದ 7 (ಉತ್ತಮ ಬಣ್ಣಕ್ಕಾಗಿ)
ಗುಂಟೂರು ಒಣಮೆಣಸಿನಕಾಯಿ - 5 (ಖಾರಕ್ಕಾಗಿ)
ಧನಿಯಾ ಕಾಳು - 2.5 ಟೇಬಲ್ ಸ್ಪೂನ್
ಚಕ್ಕೆ - 1 ಇಂಚು
ಲವಂಗ - 5
ಏಲಕ್ಕಿ - 2
ಬಿರಿಯಾನಿ ಎಲೆ - 1 ಸಣ್ಣದು
ಸೋಂಪು - 1/2 ಟೀ ಸ್ಪೂನ್
ಜೀರಿಗೆ - 1/2 ಟೀ ಸ್ಪೂನ್
ಕಾಳುಮೆಣಸು - 1/2 ಟೀ ಸ್ಪೂನ್
ಮೆಂತ್ಯ ಕಾಳು - ಒಂದು ಚಿಟಿಕೆ
ಗಸಗಸೆ - 1 ಟೀ ಸ್ಪೂನ್

ಮಸಾಲೆ ಪೇಸ್ಟ್‌ಗೆ
ಎಣ್ಣೆ - 1 ಟೇಬಲ್ ಸ್ಪೂನ್
ಬೆಳ್ಳುಳ್ಳಿ - 1 ಪೂರ್ತಿ ಗೆಡ್ಡೆ (ಸಿಪ್ಪೆ ಸುಲಿದದ್ದು)
ಶುಂಠಿ - 1 ಇಂಚು
ಈರುಳ್ಳಿ - 1 (ಮಧ್ಯಮ ಗಾತ್ರದ್ದು)
ಟೊಮೆಟೊ - 1 (ಸಣ್ಣ ಗಾತ್ರದ್ದು)
ಹಸಿ ಕೊಬ್ಬರಿ - 3/4 ಕಪ್ (ಕತ್ತರಿಸಿದ್ದು)
ಕೊತ್ತಂಬರಿ ಸೊಪ್ಪು - ಸ್ವಲ್ಪ

ಮಾಡುವ ಸರಳ ವಿಧಾನ

*ಒಂದು ಬಾಣಲೆಗೆ (ಕಡಾಯಿ) 5-6 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ.

*ಇದಕ್ಕೆ ಹೆಚ್ಚಿದ ಈರುಳ್ಳಿ ಮತ್ತು ಕರಿಬೇವಿನ ಸೊಪ್ಪು ಹಾಕಿ, ಈರುಳ್ಳಿ ಹೊಂಬಣ್ಣ (Golden colour) ಬರುವವರೆಗೆ ಹುರಿಯಿರಿ. ನಂತರ ತೊಳೆದಿಟ್ಟ ಚಿಕನ್ ತುಂಡುಗಳನ್ನು ಸೇರಿಸಿ.

*ಇದಕ್ಕೆ 1/2 ಟೀ ಸ್ಪೂನ್ ಅರಿಶಿನ ಮತ್ತು ರುಚಿಗೆ ತಕ್ಕಷ್ಟು ಕಲ್ಲುಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

*ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ (Medium Flame) 15 ನಿಮಿಷಗಳ ಕಾಲ ಬೇಯಲು ಬಿಡಿ (ಚಿಕನ್‌ನಲ್ಲೇ ನೀರು ಬಿಟ್ಟುಕೊಳ್ಳುವುದರಿಂದ ನೀರು ಹಾಕುವ ಅಗತ್ಯವಿಲ್ಲ).

*ಈಗ ಮತ್ತೊಂದು ಪ್ಯಾನ್‌ನಲ್ಲಿ 1 ಚಮಚ ಎಣ್ಣೆ ಹಾಕಿ, ಬ್ಯಾಡಗಿ ಮತ್ತು ಗುಂಟೂರು ಮೆಣಸಿನಕಾಯಿ, ಧನಿಯಾ, ಚಕ್ಕೆ, ಲವಂಗ, ಏಲಕ್ಕಿ, ಬಿರಿಯಾನಿ ಎಲೆ, ಸೋಂಪು, ಜೀರಿಗೆ, ಕರಿಮೆಣಸು ಹಾಗೂ ಸ್ವಲ್ಪ ಮೆಂತ್ಯ ಹಾಕಿ ಸಣ್ಣ ಉರಿಯಲ್ಲಿ ಗರಿಗರಿಯಾಗುವಂತೆ ಹುರಿಯಿರಿ. ಕೊನೆಯಲ್ಲಿ 1 ಚಮಚ ಗಸಗಸೆ ಹಾಕಿ ಒಮ್ಮೆ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ (ಪ್ಯಾನ್ ಬಿಸಿಗೆ ಗಸಗಸೆ ಫ್ರೈ ಆಗುತ್ತದೆ). ಇದನ್ನು ತಣ್ಣಗಾಗಲು ಬಿಡಿ.

*ಅದೇ ಪ್ಯಾನ್‌ಗೆ 1 ಚಮಚ ಎಣ್ಣೆ ಹಾಕಿ ಬೆಳ್ಳುಳ್ಳಿ, ಶುಂಠಿ, ಈರುಳ್ಳಿ, ಟೊಮೆಟೊ ಮತ್ತು ಹಸಿ ಕೊಬ್ಬರಿ ಹಾಕಿ ಈರುಳ್ಳಿ-ಟೊಮೆಟೊ ಮೆತ್ತಗಾಗುವವರೆಗೂ ಹುರಿಯಿರಿ. ನಂತರ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ ಒಲೆ ಆಫ್ ಮಾಡಿ.

*ಮೊದಲು ಮಿಕ್ಸಿ ಜಾರ್‌ಗೆ ಹುರಿದ ಒಣ ಮಸಾಲೆಗಳನ್ನು ಹಾಕಿ ಪುಡಿ ಮಾಡಿಕೊಳ್ಳಿ. ನಂತರ ಇದಕ್ಕೆ ಹುರಿದ ಈರುಳ್ಳಿ-ಕೊಬ್ಬರಿ ಮಿಶ್ರಣವನ್ನು ಸೇರಿಸಿ, ಸ್ವಲ್ಪವೇ ನೀರು ಹಾಕಿ ಗಟ್ಟಿಯಾದ ನುಣ್ಣನೆಯ ಪೇಸ್ಟ್ (ಮಸಾಲೆ) ರುಬ್ಬಿಕೊಳ್ಳಿ.

*15 ನಿಮಿಷ ಬೆಂದ ಚಿಕನ್‌ಗೆ ಈ ರುಬ್ಬಿದ ಮಸಾಲೆಯನ್ನು ಹಾಕಿ ಚೆನ್ನಾಗಿ ಬೆರೆಸಿ. ಜಾರ್ ತೊಳೆದ ಅರ್ಧ ಕಪ್ ನೀರನ್ನು ಮಾತ್ರ ಸೇರಿಸಿ, ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ 8 ರಿಂದ 10 ನಿಮಿಷ ಬೇಯಿಸಿ.

*10 ನಿಮಿಷದ ನಂತರ ಮುಚ್ಚಳ ತೆಗೆದು, 2-3 ನಿಮಿಷಗಳ ಕಾಲ ಕೈಯಾಡಿಸುತ್ತಾ ಫ್ರೈ ಮಾಡಿ. ನಿಮಗೆ ಪೂರ್ತಿ ಡ್ರೈ ಆಗಿ ಬೇಕೆಂದರೆ ನೀರೆಲ್ಲಾ ಆರಿ ಎಣ್ಣೆ ಬಿಡುವವರೆಗೂ 2 ನಿಮಿಷ ಹೆಚ್ಚು ಹುರಿಯಿರಿ.

*ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ತಾಜಾ ಕೊತ್ತಂಬರಿ ಸೊಪ್ಪು ಮತ್ತು ಕರಿಬೇವಿನ ಸೊಪ್ಪು ಉದುರಿಸಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿದರೆ ಘಮಘಮಿಸುವ 'ಚಿಕನ್ ಸುಕ್ಕ' ಸವಿಯಲು ಸಿದ್ಧ!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಟೊಮೆಟೊದಿಂದ ನಿಂಬೆಯವರೆಗೆ… ಅಲ್ಯೂಮಿನಿಯಂ ಪಾತ್ರೆಯಲ್ಲಿ ಈ 5 ಪದಾರ್ಥಗಳನ್ನು ಬೇಯಿಸಬೇಡಿ!
ರಾತ್ರಿ ಹೊತ್ತು ಈ ಹಣ್ಣುಗಳನ್ನು ತಿನ್ಬೇಡಿ; ಅಪ್ಪಿತಪ್ಪಿ ತಿಂದ್ರೆ ಹೀಗಾಗುತ್ತೆ!