ಬ್ರಾಯ್ಲರ್ ಕೋಳಿಗಿಂತ ಅದ್ಭುತ ರುಚಿ ಮತ್ತು ಆರೋಗ್ಯಕ್ಕೆ ಹೆಚ್ಚು ಒಳಿತಾಗುವ ನಾಟಿ ಕೋಳಿ ತಿನ್ನಲು ಅನೇಕರು ಇಷ್ಟಪಡುತ್ತಾರೆ. ಈ ವಾರ ನಿಮ್ಮ ಮನೆಯಲ್ಲೂ ಮಾಂಸಾಹಾರ ಮಾಡಲು ಪ್ಲಾನ್ ಮಾಡಿದ್ದೀರಾ? ಹಾಗಿದ್ದರೆ ಈ ಬಾರಿ ಭಿನ್ನವಾಗಿ ನಾಟಿ ಕೋಳಿ ಸಾರು ಮಾಡಿ ನೋಡಿ.
ಈ ಹಳ್ಳಿ ಶೈಲಿಯ ಚಿಕನ್ ಕರಿಯ ವಿಶೇಷತೆಯೆಂದರೆ, ಆಗಷ್ಟೇ ತಾಜಾ ಮಸಾಲೆ ಪದಾರ್ಥಗಳನ್ನು ಹುರಿದು, ಅರೆದು ಬೇಯಿಸುವುದು. ಅದಕ್ಕಾಗಿಯೇ ಇದರ ರುಚಿ ಅದ್ಭುತವಾಗಿರುತ್ತದೆ. ಇದು ಬಿಸಿ ಅನ್ನಕ್ಕೆ ಮಾತ್ರವಲ್ಲದೆ ಇಡ್ಲಿ, ದೋಸೆ, ಚಪಾತಿ, ಪೂರಿಗಳಿಗೂ ಪರ್ಫೆಕ್ಟ್ ಕಾಂಬಿನೇಷನ್.
ಮಸಾಲೆಗೆ: ಎಣ್ಣೆ - 1 ಚಮಚ, ಕಾಳುಮೆಣಸಿನ ಪುಡಿ - 1 ಚಮಚ, ಸೋಂಪು - ಅರ್ಧ ಚಮಚ, ಧನಿಯಾ - 1 ಚಮಚ, ಲವಂಗ - 6, ದಾಲ್ಚಿನ್ನಿ - ಅರ್ಧ ಇಂಚು, ಮೆಂತ್ಯ - 1/8 ಚಮಚ, ಜೀರಿಗೆ - 1 ಚಮಚ, ಈರುಳ್ಳಿ - ಕಾಲು ಕಪ್, ಹಸಿಮೆಣಸಿನಕಾಯಿ - 10, ಶುಂಠಿ - 1 ಇಂಚು, ಬೆಳ್ಳುಳ್ಳಿ - 10 ಎಸಳು, ಕಾಯಿತುರಿ - ಅರ್ಧ ಕಪ್, ಕೊತ್ತಂಬರಿ ಸೊಪ್ಪು - ಕಾಲು ಕಪ್.
ಇತರ ಪದಾರ್ಥಗಳು: ನಾಟಿ ಕೋಳಿ - ಅರ್ಧ ಕೆಜಿ, ಎಣ್ಣೆ - 3 ಚಮಚ, ಕರಿಬೇವು - 2 ಎಸಳು, ಈರುಳ್ಳಿ - ಅರ್ಧ ಕಪ್, ಟೊಮೆಟೊ - 2, ಅರಿಶಿನ ಪುಡಿ - ಅರ್ಧ ಚಮಚ, ಉಪ್ಪು - ರುಚಿಗೆ ತಕ್ಕಷ್ಟು.
ಮೊದಲು ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ ಒಣ ಮಸಾಲೆಗಳೊಂದಿಗೆ ಬೆಳ್ಳುಳ್ಳಿ, ಶುಂಠಿ ಹಾಕಿ. ಮಸಾಲೆಗಳು ಸುವಾಸನೆ ಬೀರಿ, ಬೆಳ್ಳುಳ್ಳಿ ಕಂದು ಬಣ್ಣಕ್ಕೆ ಬರುವವರೆಗೆ 3-4 ನಿಮಿಷ ಸಣ್ಣ ಉರಿಯಲ್ಲಿ ಹುರಿದು ಪ್ಲೇಟ್‌ಗೆ ಹಾಕಿಕೊಳ್ಳಿ.
ಅದೇ ಬಾಣಲೆಯಲ್ಲಿ ಈರುಳ್ಳಿ, ಹಸಿಮೆಣಸಿನಕಾಯಿ ಹಾಕಿ ಮೃದುವಾಗುವವರೆಗೆ ಹುರಿದು ತಣ್ಣಗಾಗಲು ಬಿಡಿ. ನಂತರ ಕಾಯಿತುರಿ, ಕೊತ್ತಂಬರಿ ಸೊಪ್ಪನ್ನು ಕೆಲವು ಸೆಕೆಂಡುಗಳ ಕಾಲ ಹುರಿದು ತಣ್ಣಗಾಗಿಸಿ. ಇವೆಲ್ಲವನ್ನೂ ಮಿಕ್ಸಿಗೆ ಹಾಕಿ, ಒಂದು ಕಪ್ ನೀರು ಸೇರಿಸಿ ನಯವಾದ ಪೇಸ್ಟ್ ಮಾಡಿ.
ನಂತರ ಸ್ಟವ್ ಮೇಲೆ ಕುಕ್ಕರ್ ಇಟ್ಟು ಎಣ್ಣೆ ಹಾಕಿ. ಅದಕ್ಕೆ ಕರಿಬೇವು, ಈರುಳ್ಳಿ, ಟೊಮೆಟೊ ಸೇರಿಸಿ. ಉಪ್ಪು, ಅರಿಶಿನ ಹಾಕಿ ಕೆಲವು ನಿಮಿಷ ಹುರಿಯಿರಿ.
ಈಗ ತೊಳೆದ ನಾಟಿ ಕೋಳಿ ಮಾಂಸವನ್ನು ಹಾಕಿ ಚೆನ್ನಾಗಿ ಕೈಯಾಡಿಸಿ. ನಂತರ ಅರೆದ ಮಸಾಲೆ ಪೇಸ್ಟ್ ಮತ್ತು ಚಿಕನ್ ಬೇಯಲು ಅಗತ್ಯವಿರುವಷ್ಟು ನೀರನ್ನು ಸೇರಿಸಿ. ಕುಕ್ಕರ್ ಮುಚ್ಚಳ ಮುಚ್ಚಿ, ಸುಮಾರು ಅರ್ಧ ಗಂಟೆಗಳ ಕಾಲ ಸಣ್ಣ ಉರಿಯಲ್ಲಿ ಬೇಯಿಸಿ.
ಗ್ರೇವಿ ಚೆನ್ನಾಗಿ ಕುದಿದು, ಮಾಂಸ ಬೆಂದ ನಂತರ ಸ್ಟವ್ ಆಫ್ ಮಾಡಿ. ಈಗ ರುಚಿಕರವಾದ ನಾಟಿ ಕೋಳಿ ಸಾರು ಸವಿಯಲು ಸಿದ್ಧ!
ಮಾಂಸವನ್ನು ಮೃದುಗೊಳಿಸಲು (To Soften Nati Koli)
ನಾಟಿ ಕೋಳಿ ಮಾಂಸ ಬ್ರಾಯ್ಲರ್ ಕೋಳಿಗಿಂತ ಸ್ವಲ್ಪ ಗಟ್ಟಿಯಾಗಿರುತ್ತದೆ. ಆದ್ದರಿಂದ ಇದನ್ನು ಬೇಯಿಸುವಾಗ ಕನಿಷ್ಠ 4 ರಿಂದ 5 ವಿಸಿಲ್ ಕೂಗಿಸಿ ಅಥವಾ ಕುಕ್ಕರ್ ಬದಲಿಗೆ ಪಾತ್ರೆಯಲ್ಲಿ ಮಾಡುವುದಾದರೆ ಅರ್ಧ ಟೀಸ್ಪೂನ್ ಹಸಿ ಪಪ್ಪಾಯಿ ಪೇಸ್ಟ್ ಅಥವಾ ಸ್ವಲ್ಪ ಲಿಂಬೆರಸ ಹಾಕಿ 15 ನಿಮಿಷ ಮ್ಯಾರಿನೇಟ್ ಮಾಡಿ ಇಟ್ಟರೆ ಮಾಂಸ ಬೇಗನೆ ಸಾಫ್ಟ್ ಆಗುತ್ತದೆ.
ಮಸಾಲೆ ಹುರಿಯುವಾಗ ಎಚ್ಚರ (Perfect Masala Roasting)
ಒಣ ಮಸಾಲೆಗಳನ್ನು (ಧನಿಯಾ, ಜೀರಿಗೆ, ಲವಂಗ ಇತ್ಯಾದಿ) ಹುರಿಯುವಾಗ ಸಣ್ಣ ಉರಿಯಲ್ಲಿ (Low Flame) ಮಾತ್ರ ಹುರಿಯಿರಿ. ಮಸಾಲೆ ಸ್ವಲ್ಪ ಸೀದರೂ ಇಡೀ ಸಾರಿನ ರುಚಿ ಕಹಿ ಆಗಿಬಿಡುತ್ತದೆ.
ಕಾಯಿತುರಿ ಪ್ರಮಾಣ (Coconut Proportion)
ನಾಟಿ ಕೋಳಿ ಸಾರಿಗೆ ಕಾಯಿತುರಿ ಅಥವಾ ಕೊಬ್ಬರಿಯನ್ನು ಹೆಚ್ಚು ಹಾಕಬೇಡಿ. ಕಾಯಿ ಜಾಸ್ತಿಯಾದರೆ ಚಿಕನ್ ಒರಿಜಿನಲ್ ಫ್ಲೇವರ್ ಮರೆಯಾಗಿ, ಸಾರು ಕೇವಲ ಕಾಯಿ ಮಸಾಲೆಯಂತೆ ರುಚಿಕೊಡುತ್ತದೆ. ತರಕಾರಿ ಸಾರಿಗೆ ಬಳಸುವುದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಕಾಯಿ ಬಳಸಿ.
ತುಪ್ಪ ಅಥವಾ ನಾಟಿ ಹಸುವಿನ ಬೆಣ್ಣೆ (Final Touch)
ಸಾರು ಸಂಪೂರ್ಣವಾಗಿ ಬೆಂದು ಸ್ಟವ್ ಆಫ್ ಮಾಡುವ 2 ನಿಮಿಷ ಮುಂಚೆ ಒಂದು ಚಮಚ ಶುದ್ಧ ತುಪ್ಪ ಅಥವಾ ಬೆಣ್ಣೆಯನ್ನು ಮೇಲಿಂದ ಹಾಕಿ ಕೈಯಾಡಿಸಿದರೆ, ಹಳ್ಳಿ ಶೈಲಿಯ ನಾಟಿ ಕೋಳಿ ಸಾರಿನ ಘಮ ಹಾಗೂ ರುಚಿ ದುಪ್ಪಟ್ಟಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.