ಈರುಳ್ಳಿ, ಬೆಳ್ಳುಳ್ಳಿ ಅಡುಗೆ ರುಚಿ ಹೆಚ್ಚಿಸೋ ಜೊತೆ ಆರೋಗ್ಯಕ್ಕೂ ಒಳ್ಳೆಯದು.ಆದ್ರೆ ಬೆಲೆಯೇರಿಕೆ ಭಯ ಅಥವಾ ಇನ್ಯಾವುದೋ ಕಾರಣಕ್ಕೆ ಅಡುಗೆಮನೆಯಲ್ಲಿಸಂಗ್ರಹಿಸಿಟ್ಟ ಈರುಳ್ಳಿ,ಬೆಳ್ಳುಳ್ಳಿಯಲ್ಲಿ ಮೊಳಕೆ ಕಾಣಿಸಿಕೊಂಡಾಗ ಸ್ವಲ್ಪ ಆತಂಕ ಸಹಜ.ಹಾಗಾದ್ರೆ ಮೊಳಕೆಯೊಡೆದ ಈರುಳ್ಳಿ, ಬೆಳ್ಳುಳ್ಳಿಯನ್ನುತಿನ್ನಬಹುದಾ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ಅಡುಗೆಮನೆಯಲ್ಲಿಈರುಳ್ಳಿ,ಬೆಳ್ಳುಳ್ಳಿ ಇಲ್ಲವೆಂದ್ರೆ ಆ ದಿನದ ಅಡುಗೆಗೆ ಸುವಾಸನೆ,ರುಚಿ ಎರಡೂ ಕಡಿಮೆ.ಸಾಂಬಾರೇ ಇರಲಿ,ಪಲ್ಯವೇ ಇರಲಿ,ಸಾಮಾನ್ಯವಾಗಿ ಪಾತ್ರೆಗೆ ಮೊದಲು ಬೀಳೋ ಪದಾರ್ಥಗಳೆಂದ್ರೆ ಈರುಳ್ಳಿ ಹಾಗೂ ಬೆಳ್ಳುಳ್ಳಿ. ಇವೆರಡೂ ಅಡುಗೆ ರುಚಿ ಮತ್ತು ಪರಿಮಳವನ್ನು ಮಾತ್ರ ಹೆಚ್ಚಿಸೋದಿಲ್ಲ,ಬದಲಿಗೆ ಆರೋಗ್ಯಕ್ಕೂ ಹಲವು ವಿಧಗಳಲ್ಲಿ ಪ್ರಯೋಜನಕಾರಿ. ಈರುಳ್ಳಿಯಲ್ಲಿ ವಿಟಮಿನ್ ಸಿ,ಬಿ6,ಪೊಟ್ಯಾಸಿಯಂ ಹಾಗೂ ಫೋಲೆಟ್ ಹೇರಳವಾಗಿದೆ.ಬೆಳ್ಳುಳ್ಳಿಯಲ್ಲಿ ವಿಟಮಿನ್ ಸಿ,ವಿಟಮಿನ್ ಬಿ 6, ಥಿಯಮಿನ್, ಪೊಟ್ಯಾಸಿಯಂ, ಕ್ಯಾಲ್ಸಿಯಂ, ಫೊಸ್ಪರಸ್, ತಾಮ್ರ ಹಾಗೂ ಮ್ಯಾಂಗನೀಸ್ ಯಥೇಚ್ಛವಾಗಿದೆ.ಈರುಳ್ಳಿ ಹಾಗೂ ಬೆಳ್ಳುಳ್ಳಿ ನಿತ್ಯದ ಅಡುಗೆಯಲ್ಲಿಪ್ರಮುಖ ಸ್ಥಾನ ಹೊಂದಿರೋ ಕಾರಣ ಸಹಜವಾಗಿಯೇ ನಾವು ಅಡುಗೆಮನೆಯಲ್ಲಿ ಇವುಗಳನ್ನುಅಗತ್ಯಕ್ಕಿಂತ ತುಸು ಹೆಚ್ಚೇ ಸಂಗ್ರಹಿಸಿಟ್ಟುಕೊಂಡಿರುತ್ತೇವೆ.ಆದ್ರೆ ದೀರ್ಘಕಾಲ ಅಡುಗೆಮನೆಯಲ್ಲಿ ಸಂಗ್ರಹಿಸಿಟ್ಟ ಈರುಳ್ಳಿ ಹಾಗೂ ಬೆಳ್ಳುಳ್ಳಿಯಲ್ಲಿ ಹಸಿರು ಬಣ್ಣದ ಮೊಳಕೆ ಕುಡಿಯೊಡೆದಿರೋದನ್ನುನೀವು ಗಮನಿಸಿರುತ್ತೀರಿ.
1 ಕೆಜಿ ಪನೀರ್‌ಗೆ 5 ರೂಪಾಯಿ: ಪನೀರ್ ಹಳ್ಳಿ ಗೊತ್ತಾ..?
ಚಿಗುರೊಡೆಯಲು ಕಾರಣವೇನು?
ಈರುಳ್ಳಿ ಹಾಗೂ ಬೆಳ್ಳುಳ್ಳಿ ಮೊಳಕೆಯೊಡೆಯಲು ಮುಖ್ಯ ಕಾರಣ ತೇವಾಂಶ. ಇವೆರಡು ಮೊಳಕೆಯೊಡೆದು ಗಿಡವಾಗೋದು ನೈಸರ್ಗಿಕ ಪ್ರಕ್ರಿಯೆಯಾಗಿದ್ದು,ಇದ್ರಲ್ಲಿ ಗಾಬರಿಪಡೋ ಸಂಗತಿಯಂತೂ ಇಲ್ಲ. ಪ್ರತಿ ಬೀಜವೂ ತನಗೆ ಸೂಕ್ತವಾದ ಪರಿಸರ ಸಿಕ್ಕ ತಕ್ಷಣ ಮೊಳಕೆಯೊಡೆಯುವಂತೆ ಈರುಳ್ಳಿ ಹಾಗೂ ಬೆಳ್ಳುಳ್ಳಿಯಲ್ಲೂ ಈ ಬೆಳವಣಿಗೆ ಘಟಿಸುತ್ತೆ.
ಕುಡಿಯೊಡೆದ ಈರುಳ್ಳಿ, ಬೆಳ್ಳುಳ್ಳಿ ಸೇವಿಸಬಹುದಾ?
ಖಂಡಿತಾ ಸೇವಿಸಬಹುದು.ಮೊಳಕೆಯೊಡೆದ ಬಳಿಕ ಇವೆರಡೂ ಸ್ವಲ್ಪ ಮೆತ್ತಗಾಗುತ್ತವೆ ಅನ್ನೋದು ಬಿಟ್ರೆ ವಿಷಕಾರಿ ಅಥವಾ ಆರೋಗ್ಯಕ್ಕೆ ಹಾನಿಕಾರಕವಂತೂ ಅಲ್ಲವೇ ಅಲ್ಲ.ಅದ್ರಲ್ಲೂ ಮೊಳಕೆ ತುಂಬಾ ಚಿಕ್ಕದಿದ್ರಂತೂ ಬಳಕೆಗೆ ಯೋಗ್ಯ ಎಂದೇ ಪರಿಗಣಿಸಬಹುದು.ಕೆಲವರಂತೂ ಹೆಚ್ಚಿನ ಪ್ರೋಟೀನ್ ಇರುತ್ತೆ ಎಂಬ ಕಾರಣಕ್ಕೆ ಉದ್ದೇಶಪೂರ್ವಕವಾಗಿ ಮೊಳಕೆಯನ್ನೇ ತಿನ್ನುತ್ತಾರೆ. ಕೆಲವೊಂದು ಸಲಾಡ್‌ಗಳಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿಯ ಮೊಳಕೆಯನ್ನು ಕೂಡ ಬಳಸುತ್ತಾರಂತೆ. ಇನ್ನು ರುಚಿ ವಿಷಯಕ್ಕೆ ಬಂದ್ರೆ ಮೊಳಕೆಯೊಡೆದ ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಹಸಿಯಾಗಿಯೇ ತಿಂದ್ರೆ ಸ್ವಲ್ಪಕಹಿ ಅನುಭವಕ್ಕೆ ಬರುತ್ತೆ ಅನ್ನೋದೇನೋ ನಿಜ. ಆದ್ರೆ ಕೆಲವರಂತೂ ಮೊಳಕೆಯೊಡೆದ ಈರುಳ್ಳಿ ಹಾಗೂ ಬೆಳ್ಳುಳ್ಳಿಯ ರುಚಿಯನ್ನು ತುಂಬಾನೇ ಇಷ್ಟಪಡ್ತಾರೆ.
ಬುದ್ಧ ಬೌಲ್ ಎಂದರೇನು? ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ?
ಕುಡಿಯನ್ನು ಏನ್ ಮಾಡ್ಬಹುದು?
ನೀವು ಮೊಳಕೆಯನ್ನು ತಿನ್ನಲು ಇಷ್ಟಪಡಲ್ಲ ಅಂತಾದ್ರೆ ಅದನ್ನು ಕತ್ತರಿಸಿ ತೆಗೆಯಿರಿ. ಈರುಳ್ಳಿ ಹಾಗೂ ಬೆಳ್ಳುಳ್ಳಿಯ ಒಳಭಾಗದಲ್ಲಿಯೂ ಮೊಳಕೆಯ ಉಳಿಕೆಗಳಿರುತ್ತವೆ, ಅವನ್ನು ಕೂಡ ಬೇರ್ಪಡಿಸಿ ಬಳಸಿ. ಈರುಳ್ಳಿಯ ಒಳ ಪದರದಲ್ಲಿರೋ ಮೊಳಕೆಯನ್ನು ತೆಗೆದು ನಿಮ್ಮ ಮನೆಯ ಗಾರ್ಡನಲ್ಲಿರೋ ಕುಂಡದಲ್ಲಿ ಹಾಕಿ ಈರುಳ್ಳಿ ಗಿಡ ಬೆಳೆಯಬಹುದು.
ಕುಡಿಯೊಡೆಯದಂತೆ ಸಂಗ್ರಹಿಸಿಡೋದು ಹೇಗೆ?
ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ತಂಪಾದ, ಒಣಗಿದ, ಉತ್ತಮ ಗಾಳಿಯಾಡೋ ಕತ್ತಲ ಪ್ರದೇಶದಲ್ಲಿ ಶೇಖರಿಸಿಡಬೇಕು. ಇದ್ರಿಂದ ಮೊಳಕೆ ಬರೋದನ್ನು ತಪ್ಪಿಸಬಹುದು. ಬೆಳ್ಳುಳ್ಳಿಯನ್ನು ಬಿಡಿಸಿ ಅದರ ಎಸಳುಗಳನ್ನು ಗಾಳಿಯಾಡೋ ಕತ್ತಲ ಪ್ರದೇಶದಲ್ಲಿಟ್ಟರೆ, ಮೊಳಕೆ ಬರೋದಿಲ್ಲ. ಇನ್ನು ಮೊಳಕೆ ಬಂದಿರೋ ಈರುಳ್ಳಿ ಹಾಗೂ ಬೆಳ್ಳುಳ್ಳಿ ಬೇಗ ಕೆಡುತ್ತವೆ. ಹೀಗಾಗಿ ಇವುಗಳನ್ನು ಆದಷ್ಟು ಬೇಗ ಬಳಸೋದು ಒಳ್ಳೆಯದು. ಇವನ್ನು ಯಾವುದೇ ಕಾರಣಕ್ಕೂ ಇತರ ತರಕಾರಿಗಳು ಹಾಗೂ ಹಣ್ಣುಗಳ ಜೊತೆ ಇಡಬೇಡಿ. ಏಕೆಂದ್ರೆ ಇವು ಹಣ್ಣಾಗೋ ಸಮಯದಲ್ಲಿ ಎಥೆಲೆನ್ ಗ್ಯಾಸ್ ಬಿಡುಗಡೆಯಾಗುತ್ತೆ, ಇದು ಈರುಳ್ಳಿ ಹಾಗೂ ಬೆಳ್ಳುಳ್ಳಿ ಬೇಗ ಮೊಳಕೆಯೊಡೆಯಲು ಕಾರಣವಾಗುತ್ತೆ.
ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದರೆ ಕುಕ್ಕರ್‌ನಲ್ಲಿ ಪರ್ಫೆಕ್ಟ್ ಕಿಚಡಿ ರೆಡಿ!
ನಿತ್ಯ ಸೇವನೆ ಆರೋಗ್ಯಕರ
ಪ್ರತಿದಿನ ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಸೇವಿಸೋದ್ರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ. ಕೆಂಪುರಕ್ತ ಕಣಗಳ ಉತ್ಪಾದನೆ, ನರ ಹಾಗೂ ಕಿಡ್ನಿಗಳ ಕಾರ್ಯನಿರ್ವಹಣೆಗೆ ನೆರವು ನೀಡುತ್ತವೆ. ಹೃದಯದ ಆರೋಗ್ಯಕ್ಕೂ ಒಳ್ಳೆಯದು. ಕ್ಯಾನ್ಸರ್ ವಿರುದ್ಧ ಹೋರಾಡೋ ಅಂಶಗಳೂ ಇವುಗಳಲ್ಲಿವೆ. ಜೀರ್ಣಕ್ರಿಯೆಗೆ ಸಹಕಾರಿಯಾಗಿರೋ ಜೊತೆ ಬ್ಯಾಕ್ಟೀರಿಯದ ವಿರುದ್ಧ ಹೋರಾಡೋ ಗುಣವನ್ನು ಕೂಡ ಹೊಂದಿದೆ. ಗಟ್ಟಿಮುಟ್ಟಾದ ಮೂಳೆ ನಿಮ್ಮದಾಗಲು ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಅಗತ್ಯವಾಗಿ ಸೇವಿಸಬೇಕು. ಇನ್ನು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಕೂಡ ಇವೆರಡು ನೆರವು ನೀಡುತ್ತವೆ. ರಕ್ತ ಶುದ್ಧೀಕರಣಕ್ಕೆ ಈರುಳ್ಳಿಯಷ್ಟು ಉತ್ತಮ ಔಷಧ ಬೇರಿಲ್ಲ ಎನ್ನುತ್ತದೆ ಆಯುರ್ವೇದ. ಇನ್ನು ಈರುಳ್ಳಿ ಹಾಗೂ ಬೆಳ್ಳುಳ್ಳಿ ಎರಡೂ ಉಷ್ಣಕಾರಕ, ಹೀಗಾಗಿ ಇವನ್ನು ಅತಿಯಾಗಿ ತಿನ್ನೋದು ಒಳ್ಳೆಯದ್ದಲ್ಲ ಎಂಬ ವಾದವೂ ಇದೆ.