ಕಚೇರಿಯಿಂದ ಕೆಲಸ ಮಾಡುವಾಗ ತಿನ್ನಲು ಸೂಕ್ತವಾದ ಆಹಾರ ಯಾವುದು ?

By Suvarna News  |  First Published Apr 24, 2022, 4:20 PM IST

ದೇಶಾದ್ಯಂತ ವರ್ಕ್‌ ಫ್ರಂ ಹೋಮ್‌ (Work from Home) ಕೆಲಸದ ಶೈಲಿ ಮುಗಿದು ವರ್ಕ್‌ ಫ್ರಂ ಆಫೀಸ್‌ (Work From Office) ಶುರುವಾಗುತ್ತಿದೆ. ಒತ್ತಡ, ಆತಂಕದ ನಡುವೆ ಒಲ್ಲದ ಮನಸ್ಸಿನಿಂದಲೇ ಎಲ್ಲರೂ ಆಫೀಸ್ ಕೆಲಸಕ್ಕೆ ಮರಳುತ್ತಿದ್ದಾರೆ. ಇಷ್ಟು ದಿನ ಮನೆಯಲ್ಲಿ ಆರೋಗ್ಯಕರ ಆಹಾರ (Healthy Food)ವನ್ನು ತಿಂದಿದ್ದಾಯ್ತು. ಹಾಗಿದ್ರೆ ಕಚೇರಿಯಿಂದ ಕೆಲಸ ಮಾಡುವಾಗ ತಿನ್ನಲು ಸೂಕ್ತವಾದ ಆಹಾರ ಯಾವುದು. ನಾವ್ ಹೇಳ್ತಿವಿ.


ಕಛೇರಿ (Office)ಗಳನ್ನು ಪುನಃ ತೆರೆಯುವುದರೊಂದಿಗೆ, ಉದ್ಯೋಗಿಗಳು (Employees) ಈಗ ಕ್ರಮೇಣ ಸಾಮಾನ್ಯ ಕೆಲಸದ ದಿನಚರಿಗೆ ಮರಳುತ್ತಿದ್ದಾರೆ. ವರ್ಕ್‌ ಫ್ರಂ ಹೋಮ್‌ ಬಿಟ್ಟು ವರ್ಕ್‌ ಫ್ರಂ ಆಫೀಸ್‌ ಕ್ರಮಕ್ಕೆ ಒಗ್ಗಿಕೊಳ್ಳಲು ಯತ್ನಿಸುತ್ತಿದ್ದಾರೆ. ಕೊರೋನಾ ಮೊದಲಿನ ಸಾಮಾನ್ಯ ಸ್ಥಿತಿಗೆ ಈ ಹಂತಹಂತವಾಗಿ ಮರಳಲು ಎಲ್ಲರೂ ತಯಾರಿ ನಡೆಸುತ್ತಿರುವಾಗ, ನಮ್ಮ ಮೆದುಳು ಮತ್ತು ದೇಹವನ್ನು ಆರೋಗ್ಯಕರವಾಗಿಡಬೇಕಾದುದು ಮುಖ್ಯ. ಹೀಗಾಗಿ ಆಹಾರದಲ್ಲಿ ಪೌಷ್ಟಿಕಾಂಶವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇಷ್ಟು ದಿನ ಮನೆಯಲ್ಲಿ ಆರೋಗ್ಯಕರ ಆಹಾರ (Healthy Food)ವನ್ನು ತಿಂದಿದ್ದಾಯ್ತು. ಹೀಗಾಗಿ ಈಗ ಆಫೀಸಿಗೆ ಬಂದು ಹಾಳು ಮೂಳು ತಿಂದು ಆರೋಗ್ಯ ಹದಗೆಡಿಸಿಕೊಳ್ಳೋ ಕೆಲಸ ಮಾಡಬೇಡಿ. ಕಚೇರಿಯಿಂದ ಕೆಲಸ ಮಾಡುವಾಗ ಆರೋಗ್ಯಕರವಾಗಿ ತಿನ್ನುವುದು ಹೇಗೆ ತಿಳಿಯೋಣ.

ಒತ್ತಡದ ಜೀವನದಿಂದಾಗಿ ಜನರು ಸಮಾಧಾನವಾಗಿ ಕುಳಿತು ಊಟ ಮಾಡುವ ಕಾಲ ಹೋಯಿತು. ತರಾತುರಿಯಾಗಿ ಕೈಗೆ ಸಿಕ್ಕಿದ ಬ್ರೆಡ್, ಬನ್ ಗಳನ್ನು ತಿಂದು ಕಚೇರಿಗೆ ಧಾವಿಸುತ್ತಾರೆ. ಇದರಿಂದಾಗಿ ಕೆಲಸದ ಮೇಲೆ ಏಕಾಗ್ರತೆ ಕೊಡಲು ಸಾಧ್ಯವಾಗುವುದಿಲ್ಲ. ಆಫೀಸಿನಲ್ಲಿಯೂ ಕ್ಯಾಂಟೀನ್ ನಲ್ಲಿ ಸಿಕ್ಕ ಫುಡ್, ಅಥವಾ ಆನ್‌ಲೈನ್‌ನಲ್ಲಿ ಫುಡ್‌ ತರಿಸಿ ತಿನ್ನುವ ಕಾರನ ಆರೋಗ್ಯ ಸಮಸ್ಯೆ (Health Problem) ಕಾಣಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚು. 

Latest Videos

undefined

Work From Office: ಮರಳಿ ಆಫೀಸ್‌ಗೆ ಹೋಗಲು ಸಿದ್ಧತೆ ಹೇಗಿರಲಿ

ಕಚೇರಿಯಿಂದ ಕೆಲಸ ಮಾಡುವಾಗ ಸಮಯಕ್ಕೆ ಸರಿಯಾಗಿ ಆರೋಗ್ಯಕರವಾಗಿ ತಿನ್ನಬೇಕಾದುದು ಅತೀ ಅಗತ್ಯ. ಅನಾರೋಗ್ಯಕರವಾದ ತಿಂಡಿಗಳು ನಿಧಾನವಾಗಿ ಕಾಯಿಲೆಗಳನ್ನು ಸೃಷ್ಟಿಸುವ ಕಾರಣ ಸಮತೋಲಿತವಾದ ಆಹಾರಗಳನ್ನು ಸೇವನೆ ಮಾಡಬೇಕು. ಸುಲಭ ಮತ್ತು ಪೌಷ್ಟಿಕ ಆಹಾರಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಇಂತಹ ಆಹಾರಗಳು ನಿಮ್ಮ ಹೊಟ್ಟೆಯನ್ನು ತುಂಬಿಸಿ, ಆರೋಗ್ಯವನ್ನು ಕಾಪಾಡುತ್ತದೆ. ಕಚೇರಿಯಿಂದ ಬಿಡುವಿಲ್ಲದೆ ಕೆಲಸ ಮಾಡುವಾಗ ನೀವು ನಿಮ್ಮ ಆಹಾರದ ಆಯ್ಕೆಗಳ ಬಗ್ಗೆ ನೀವು ಸ್ಮಾರ್ಟ್ ಆಗಿರಬೇಕು. ಆಹಾರದಲ್ಲಿ ಪ್ರೋಟೀನ್, ಕೊಬ್ಬುಗಳು ಮತ್ತು ಕಾರ್ಬೋಹೈಡ್ರೇಟ್‌ಗಳ ಸರಿಯಾದ ಸಂಯೋಜನೆ ಇದೆಯಾ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು.

ಕಚೇರಿಯಿಂದ ಕೆಲಸ ಮಾಡುವಾಗ ಆರೋಗ್ಯಕರ ಆಹಾರ ಯಾವುದು ?

ಆರೋಗ್ಯಕರ ಪಾನೀಯಗಳು
ನೀವು ಕಛೇರಿಯನ್ನು ತಲುಪಿದ ನಂತರ ಪಾನಕ, ಎಳನೀರು, ಓಟ್ಸ್ ಬನಾನಾ ಶೇಕ್‌ನಂತಹ ಆರೋಗ್ಯಕರ ಪಾನೀಯದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿ. ಕೆಫೀನ್ ಅನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ಪ್ರಯತ್ನಿಸಿ. ನಿಗದಿತ ಸಮಯದಲ್ಲಿ ನಿಮ್ಮ ಊಟವನ್ನು ಮಾಡಿ. ಸಾಧ್ಯವಾದರೆ, ಇತರರೊಂದಿಗೆ ತಿನ್ನುವುದನ್ನು ತಪ್ಪಿಸಿ. ಏಕೆಂದರೆ ಎಲ್ಲರ ಜೊತೆ ಕುಳಿತು ತಿನ್ನುವಾಗ ನೀವು ಹೆಚ್ಚು ತಿನ್ನುತ್ತೀರಿ. ನಿಮ್ಮ ಊಟ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್ ಮತ್ತು ಫೈಬರ್‌ನಂತಹ ಅಗತ್ಯ ಪೋಷಕಾಂಶಗಳನ್ನು ಹೊಂದಿರಬೇಕು. ಊಟದಲ್ಲಿ ಮೊಟ್ಟೆ, ಸೌತೆಕಾಯಿಯನ್ನು ಸೇವಿಸುವುದು ಒಳ್ಳೆಯದು. ಇದು ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸುತ್ತದೆ.

ಬೀದಿಬದಿಯಲ್ಲಿ ಡಾಕ್ಟರ್‌ ಫುಡ್‌ ಸ್ಟಾಲ್‌ ! ಜಸ್ಟ್‌ 40 ರೂ. ಸಿಗುತ್ತೆ ವೆರೈಟಿ ಊಟ

ಓಟ್ಸ್ ಅನ್ನು ಋತುಮಾನದ ಹಣ್ಣುಗಳು ಮತ್ತು ಮೊಸರುಗಳೊಂದಿಗೆ ಬೆರೆಸುವುದು ಸಹ ಆರೋಗ್ಯಕರ ಆಹಾರವಾಗಿದೆ ಸಾಧ್ಯವಾದಷ್ಟು ಚಿಪ್ಸ್, ಫ್ರೈಸ್ ಮೊದಲಾದ ಹೊರಗಿನ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ. ಬಿಡುವಿಲ್ಲದ ಕೆಲಸದ ದಿನದ ನಂತರ, ನೀವು ಸಂಜೆ ಒಂದು ಲೋಟ ತಾಜಾ ಹಣ್ಣಿನ ರಸ ಅಥವಾ ಒಂದು ಕಪ್ ಹಸಿರು ಚಹಾವನ್ನು ಸೇವಿಸಬಹುದು ಎಂದು ಕೋಲ್ಕತ್ತಾದ ಪೌಷ್ಟಿಕತಜ್ಞರಾದ ಸೋಹಿನಿ ಸೀಲ್ ಶಾ ಹೇಳುತ್ತಾರೆ.

ಸಲಾಡ್‌ ಹೆಚ್ಚು ಸೇವಿಸಿ
ವಿಶೇಷವಾಗಿ ಕಛೇರಿಯಲ್ಲಿ, ನಿಮ್ಮ ದೇಹವನ್ನು ಶಕ್ತಿ ಮತ್ತು ಅಗತ್ಯ ಪೋಷಕಾಂಶಗಳೊಂದಿಗೆ ಇಂಧನಗೊಳಿಸಲು ಆರೋಗ್ಯಕರ, ಸಮಯೋಚಿತ ಆಹಾರ ಸೇವಿಸುವುದು ಮುಖ್ಯ.  ಪ್ರೋಟೀನ್ ಮತ್ತು ಕ್ಯಾಲ್ಸಿಯಂನಿಂದ ಸಮೃದ್ಧವಾಗಿರುವ ಸೌತೆಕಾಯಿ, ಟೊಮೊಟೊ, ಕ್ಯಾರೆಟ್‌, ಬ್ರೊಕೊಲಿ, ಓಟ್ಸ್, ಮೊಳಕೆ ಕಟ್ಟಿದ ಸಲಾಡ್‌ (Salad)ನಂತಹ ಆಹಾರಗಳನ್ನು ಆಯ್ಕೆ ಮಾಡಿಕೊಳ್ಳಿ. ಕಚ್ಚಾ ತರಕಾರಿಯ ಜೊತೆಗೆ ಮೊಸರನ್ನು ಸೇರಿಸಿ ಸೇವನೆ ಮಾಡಬಹುದು. ಹಿಂದೆ, ನಾವು ಮನೆಯಿಂದ ಕೆಲಸ ಮಾಡುವಾಗ ಆರೋಗ್ಯಕರವಾಗಿ ತಿನ್ನಲು ಸಾಧ್ಯವಾಗಿತ್ತು. ಅದು ಈಗ ಕಷ್ಟ, ಆದರೆ ಹೊರಗಿನ ಆಹಾರವನ್ನು ತಿನ್ನುವ ಅಭ್ಯಾಸವಾವನ್ನು ಕಡಿಮೆ ಮಾಡಬಹುದು. ಮಧ್ಯಾಹ್ನದ ಸಮಯದಲ್ಲಿ ಋತುಮಾನದ ಹಣ್ಣುಗಳನ್ನು ಸೇವಿಸುವುದು ಅತ್ಯಗತ್ಯ. ಮಧ್ಯಾಹ್ನದ ಊಟಕ್ಕೆ ನಾನು ಸಬ್ಜಿ, ರೊಟ್ಟಿ ಮತ್ತು ದಹಿ ತಿನ್ನಲು ಇಷ್ಟಪಡುತ್ತೇನೆ. ನಾನು ಅದರೊಂದಿಗೆ ಒಂದು ಲೋಟ ಹಸಿರು ಸಲಾಡ್ ಅನ್ನು ಸಹ ತಿನ್ನುತ್ತೇನೆ ಎಂದು ಆಹಾರತಜ್ಞೆ ಪರೋಮಿತಾ ಹೇಳುತ್ತಾರೆ.

ಸರಿಯಾದ ಸಮಯಕ್ಕೆ ತಿನ್ನುವುದು ಮುಖ್ಯ
ಕಚೇಯಿಂದ ಕೆಲಸ ಮಾಡುವಾಗ ನಿರ್ದಿಷ್ಟ ಸಮಯದಲ್ಲಿ ತಿನ್ನುವುದು ಮುಖ್ಯವಾಗಿದೆ ಎಂದು ಸಹ ಪರೋಮಿತಾ ಸೇರಿಸುತ್ತಾರೆ. ನಾನು ಇಲ್ಲಿಯವರೆಗೆ ಕಚೇರಿಯಲ್ಲಿ ನಿರ್ವಹಿಸುತ್ತಿದ್ದೇನೆ. ಊಟಕ್ಕೆ, ನಾನು ಪೋಹಾ, ಚಿಕನ್ ಸಲಾಡ್‌ಗಳು, ಮನೆಯಲ್ಲಿ ತಯಾರಿಸಿದ ಸ್ಯಾಂಡ್‌ವಿಚ್‌ಗಳು, ಅನ್ನ-ಕರಿ ಅಥವಾ ಸೂಪ್ (Soup) ಸೇವಿಸಲು ಆದ್ಯತೆ ನೀಡುತ್ತೇನೆ. ಊಟದ ನಂತರ ಹಣ್ಣುಗಳು ಮತ್ತು ದಹಿಗಳ ಬಟ್ಟಲು ಹೊಂದಿರುವುದು ಅತ್ಯಗತ್ಯ. ಇದು ಫಿಟ್ ಆಗಿರಲು ಮತ್ತು ದೀರ್ಘ ವಿಸ್ತೃತ ಗಂಟೆಗಳ ಕಾಲ ಕೆಲಸ ಮಾಡಲು ಬಹಳಷ್ಟು ಸಹಾಯ ಮಾಡುತ್ತದೆ. ಸಾಯಂಕಾಲ ನನಗೆ ಹಸಿವಾದರೆ, ನಾನು ಒಣ ಹಣ್ಣುಗಳು ತಿನ್ನುತ್ತೇನೆ ಎಂದು ತಿಳಿಸುತ್ತಾರೆ.

ಬೆಲ್ಲದಿಂದ ತಯಾರಿಸಿದ ಸಿಹಿತಿಂಡಿ ಸೇವನೆ ಒಳ್ಳೆಯದು
ಬಹುತೇಕರಿಗೆ ಊಟದಲ್ಲಿ ಸಿಹಿ ಇಲ್ಲದಿದ್ದರೆ, ಊಟ ಅಪೂರ್ಣ ಎಂಬ ಭಾವನೆ ಹೊಂದಿರುತ್ತಾರೆ. ಅಂತವರು ಆರೋಗ್ಯಕರವಾದ ಸಿಹಿಯನ್ನು ಬಾಕ್ಸ್‌ನಲ್ಲಿ ಸೇರಿಸಿ. ತೆಂಗಿನ ಹಾಲಿನಿಂದ ತಯಾರಿಸಿದ ಪಾಯಸ ಅಥವಾ ಪೌಷ್ಟಿಕ ಆಹಾರವಾದ ರಾಗಿಯಿಂದ ತಯಾರಿಸಿದ ಲಡ್ಡುಗಳನ್ನು ತೆಗೆದುಕೊಂಡು ಹೋಗಿ. ಆದಷ್ಟು ಸಕ್ಕರೆಯ ಬದಲಾಗಿ ಬೆಲ್ಲ (Jaggery)ವನ್ನು ಬೆರಸಿದ ಸಿಹಿ ತಿಂಡಿಗಳನ್ನು ಸೇವನೆ ಮಾಡಿ. 

ಕುರುಕಲು ತಿಂಡಿ ಸೇವನೆ ಒಳ್ಳೆಯದಲ್ಲ
ಕೆಲಸದ ಸಮಯದಲ್ಲಿ ಕುರುಕಲು ತಿಂಡಿಯನ್ನು ತಿನ್ನುವುದನ್ನು ಕೆಲವರು ರೂಢಿಸಿಕೊಂಡಿರುತ್ತಾರೆ. ಅಂತವರು ಸಂಸ್ಕರಿಸಿದ ಆಹಾರಗಳನ್ನು ತಿನ್ನುವ ಬದಲಾಗಿ ದೇಹಕ್ಕೆ ಶಕ್ತಿಯನ್ನು ಒದಗಿಸುವ ಒಣ ಹಣ್ಣುಗಳನ್ನು ಸೇವನೆ ಮಾಡಿ.

click me!