ಗ್ಯಾಸ್ ಮೇಲೆ ಕ್ಯಾಪ್ಸಿಕಂ ಸುಟ್ಟು ಮೊಸರು ಸೇರಿಸಿ ಮಾಡಿದ ಈ ಚಟ್ನಿ ರೊಟ್ಟಿ, ಚಪಾತಿ, ದೋಸೆ, ಇಡ್ಲಿಗೆ ಬೆಸ್ಟ್ ಕಾಂಬಿನೇಶನ್

Published : Sep 17, 2026, 05:28 PM IST
Easy chutney recipes kannada

ಸಾರಾಂಶ

Easy chutney recipes kannada: ದಿನನಿತ್ಯ ಮಾಡುವ ಚಟ್ನಿಗಳನ್ನು ತಿಂದು ಬೇಸರವಾಗಿದ್ದರೆ, ಹೋಟೆಲ್ ಶೈಲಿಯ ಡಿಫರೆಂಟ್ ರುಚಿ ನೀಡುವ 'ಕ್ಯಾಪ್ಸಿಕಂ ಮೊಸರು ಚಟ್ನಿ' ಒಮ್ಮೆ ಟ್ರೈ ಮಾಡಿ. ಗ್ಯಾಸ್ ಮೇಲೆ ಕ್ಯಾಪ್ಸಿಕಂ ಸುಟ್ಟು, ಮೊಸರಿನೊಂದಿಗೆ ಬೆರೆಸಿ ಮಾಡುವ ಈ ಕ್ರೀಮಿ ಚಟ್ನಿ ಚಪಾತಿ, ರೊಟ್ಟಿ ಮತ್ತು ಸ್ಯಾಂಡ್‌ವಿಚ್‌ಗೆ ಬೆಸ್ಟ್ ಕಾಂಬಿನೇಷನ್. ಮಾಡುವ ಸುಲಭ ವಿಧಾನ ಇಲ್ಲಿದೆ.

ದಿನಾ ಅದೇ ಟೊಮ್ಯಾಟೊ, ಕಾಯಿ ಚಟ್ನಿ ಅಥವಾ ಕಡಲೆಕಾಯಿ ಚಟ್ನಿ ತಿಂದು ಬೋರ್ ಆಗಿದ್ಯಾ? ಹಾಗಾದರೆ ಈ ಬಾರಿ ಕೊಂಚ ಡಿಫರೆಂಟ್ ಆಗಿ, ಅದ್ಭುತ ರುಚಿ ನೀಡುವ ‘ಕ್ಯಾಪ್ಸಿಕಂ ಮೊಸರು ಚಟ್ನಿ’ (Roasted Capsicum Curd Chutney) ಟ್ರೈ ಮಾಡಿ ನೋಡಿ. ಅಡುಗೆ ಮಾಡಲು ಹೆಚ್ಚು ಸಮಯವಿಲ್ಲದಿದ್ದಾಗ ಕ್ಷಣಾರ್ಧದಲ್ಲಿ ಮಾಡಬಹುದಾದ ಅತ್ಯಂತ ರುಚಿಕರವಾದ ರೆಸಿಪಿ ಇದು.

ಕ್ಯಾಪ್ಸಿಕಂ ಅನ್ನು ನೇರವಾಗಿ ಬೆಂಕಿಯ ಮೇಲೆ ಸುಡುವುದರಿಂದ ಬರುವ ಘಮಘಮಿಸುವ ಸ್ಮೋಕಿ ಫ್ಲೇವರ್ (Smoky Flavor) ಮತ್ತು ಮೊಸರು ನೀಡುವ ಕ್ರೀಮಿ ಟೆಕ್ಸ್ಚರ್ ಈ ಚಟ್ನಿಯ ರುಚಿಯನ್ನು ದುಪ್ಪಟ್ಟು ಮಾಡುತ್ತದೆ. ಈ ಚಟ್ನಿಯನ್ನು ಬಿಸಿ ಬಿಸಿ ರೊಟ್ಟಿ, ಚಪಾತಿ, ಪರೋಟ ಜೊತೆ ಸವಿಯಬಹುದು, ಬ್ರೆಡ್ ಸ್ಯಾಂಡ್‌ವಿಚ್‌ಗೆ ಸ್ಪ್ರೆಡ್ ಆಗಿ ಹಚ್ಚಬಹುದು ಅಥವಾ ಈವ್ನಿಂಗ್ ಸ್ನ್ಯಾಕ್ಸ್‌ಗೆ ಡಿಪ್ (Dip) ರೀತಿಯಲ್ಲೂ ಬಳಸಬಹುದು!

ಬೇಕಾಗುವ ಸಾಮಗ್ರಿಗಳು

ಕ್ಯಾಪ್ಸಿಕಂ (ದಪ್ಪ ಮೆಣಸಿನಕಾಯಿ) - 1 ಅಥವಾ 2
ಎಣ್ಣೆ - 1 ಚಮಚ
ಈರುಳ್ಳಿ - ಅರ್ಧ ಕಪ್ (ಕತ್ತರಿಸಿದ್ದು)
ಬೆಳ್ಳುಳ್ಳಿ ಎಸಳು - 4 ರಿಂದ 5
ಹಸಿರು ಮೆಣಸಿನಕಾಯಿ - 3 ರಿಂದ 4 (ಖಾರಕ್ಕೆ ತಕ್ಕಷ್ಟು)
ಕಡಲೆಕಾಯಿ ಬೀಜ (ಶೇಂಗಾ) - 2 ಚಮಚ
ಕೊತ್ತಂಬರಿ ಸೊಪ್ಪು - ಒಂದು ಹಿಡಿ
ಗಟ್ಟಿ ಮೊಸರು (ಹುಳಿಯಿಲ್ಲದ ಕಮ್ಮನೆಯ ಮೊಸರು) - ಅರ್ಧ ಕಪ್
ಕಾಳುಮೆಣಸು - 5 ರಿಂದ 6
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ಸರಳ ವಿಧಾನ

ಕ್ಯಾಪ್ಸಿಕಂ ಸುಟ್ಟಿಕೊಳ್ಳಿ
ಮೊದಲಿಗೆ ಕ್ಯಾಪ್ಸಿಕಂ ಅನ್ನು ನೇರವಾಗಿ ಗ್ಯಾಸ್ ಸ್ಟೌವ್ ಉರಿಯ ಮೇಲೆ ಇಟ್ಟು ಎಲ್ಲಾ ಕಡೆ ತಿರುಗಿಸುತ್ತಾ ಸುಟ್ಟುಕೊಳ್ಳಿ. ಅದರ ಮೇಲ್ಮೈ ಕಪ್ಪಾಗುವವರೆಗೆ ಚೆನ್ನಾಗಿ ಸುಡಬೇಕು. (ಹೀಗೆ ಮಾಡುವುದರಿಂದ ಚಟ್ನಿಗೆ ಅದ್ಭುತವಾದ ಸ್ಮೋಕಿ ಫ್ಲೇವರ್ ಸಿಗುತ್ತದೆ). ನಂತರ ಅದನ್ನು ತೆಗೆದಿಟ್ಟು ಪೂರ್ತಿ ತಣ್ಣಗಾಗಲು ಬಿಡಿ. ತಣ್ಣಗಾದ ಮೇಲೆ ಮೇಲಿನ ಕಪ್ಪು ಸಿಪ್ಪೆಯನ್ನು ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿಟ್ಟುಕೊಳ್ಳಿ.

ಮಸಾಲೆ ಹುರಿಯಿರಿ
ಈಗ ಬಾಣಲೆಯಲ್ಲಿ 1 ಚಮಚ ಎಣ್ಣೆ ಕಾಯಿಸಿ, ಈರುಳ್ಳಿ, ಬೆಳ್ಳುಳ್ಳಿ ಮತ್ತು ಹಸಿಮೆಣಸಿನಕಾಯಿ ಹಾಕಿ ಹಸಿ ವಾಸನೆ ಹೋಗುವವರೆಗೆ 2-3 ನಿಮಿಷ ಹುರಿಯಿರಿ.

ನಂತರ ಅದಕ್ಕೆ ಕಡಲೆಕಾಯಿ ಬೀಜಗಳನ್ನು ಹಾಕಿ ಇನ್ನೆರಡು ನಿಮಿಷ ಫ್ರೈ ಮಾಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಕೆಲವೇ ಸೆಕೆಂಡು ಬಾಡಿಸಿ ಗ್ಯಾಸ್ ಆಫ್ ಮಾಡಿ, ಮಿಶ್ರಣವನ್ನು ತಣ್ಣಗಾಗಲು ಬಿಡಿ.

ರುಬ್ಬುವ ವಿಧಾನ
ಮಿಕ್ಸಿ ಜಾರ್‌ಗೆ ಹುರಿದ ಈರುಳ್ಳಿ-ಶೇಂಗಾ ಮಿಶ್ರಣ, ಸುಟ್ಟು ಕತ್ತರಿಸಿದ ಕ್ಯಾಪ್ಸಿಕಂ ತುಂಡುಗಳು, ಮೊಸರು, ಕಾಳುಮೆಣಸು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ನೀರು ಹಾಕದೆ ಎಲ್ಲವನ್ನೂ ನುಣ್ಣಗೆ ಬೆಣ್ಣೆಯಂತೆ ಕ್ರೀಮಿಯಾಗಿ ರುಬ್ಬಿಕೊಳ್ಳಿ.

ಅಷ್ಟೇ, ಬಾಯಲ್ಲಿ ನೀರೂರಿಸುವ ಘಮಘಮಿಸುವ ಕ್ಯಾಪ್ಸಿಕಂ ಮೊಸರು ಚಟ್ನಿ ಸವಿಯಲು ಸಿದ್ಧ!

ಇದು ಗಮನದಲ್ಲಿರಲಿ

ಸುಟ್ಟ ಕ್ಯಾಪ್ಸಿಕಂ ನೀರಿನಲ್ಲಿ ತೊಳೆಯಬೇಡಿ
ಕ್ಯಾಪ್ಸಿಕಂ ಸುಟ್ಟ ನಂತರ ಅದರ ಕಪ್ಪು ಸಿಪ್ಪೆ ತೆಗೆಯಲು ನೀರಿನಲ್ಲಿ ತೊಳೆಯುವ ತಪ್ಪು ಮಾಡಬೇಡಿ. ನೀರಿನಲ್ಲಿ ತೊಳೆದರೆ ಅದರ ನೈಜ ಸ್ಮೋಕಿ ಫ್ಲೇವರ್ (ಹೊಗೆಯ ಘಮ) ಹೊರಟುಹೋಗುತ್ತದೆ. ಕೈಯಿಂದ ಅಥವಾ ಟಿಶ್ಯೂ ಪೇಪರ್‌ನಿಂದ ಸಿಪ್ಪೆ ಸುಲಿದುಕೊಳ್ಳಿ.

ಕ್ಯಾಪ್ಸಿಕಂಗೆ ಎಣ್ಣೆ ಸವರಿ ಸುಡಿ
ಗ್ಯಾಸ್ ಮೇಲೆ ಇಡುವ ಮುನ್ನ ಕ್ಯಾಪ್ಸಿಕಂಗೆ ಒಂದೆರಡು ಹನಿ ಎಣ್ಣೆ ಸವರಿ ನಂತರ ಸುಟ್ಟರೆ, ಸಿಪ್ಪೆ ತುಂಬಾ ಸುಲಭವಾಗಿ ಮತ್ತು ವೇಗವಾಗಿ ಸುಲಿದು ಬರುತ್ತದೆ.

ಹುಳಿ ಮೊಸರು ಬಳಸಬೇಡಿ
ಈ ಚಟ್ನಿಗೆ ಅತಿಯಾಗಿ ಹುಳಿಯಾದ ಮೊಸರು ಹಾಕಿದರೆ ಚಟ್ನಿ ರುಚಿ ಕೆಡುತ್ತದೆ. ಸದಾ ತಾಜಾ, ಗಟ್ಟಿಯಾದ ಮೊಸರನ್ನೇ ಬಳಸಿ. ಆಗಲೇ ಚಟ್ನಿ ಕ್ರೀಮಿಯಾಗಿ ಬರುತ್ತದೆ.

ಬಿಸಿ ಇರುವಾಗ ಮೊಸರು ಸೇರಿಸಬೇಡಿ
ಹುರಿದ ಈರುಳ್ಳಿ-ಶೇಂಗಾ ಮಿಶ್ರಣ ಮತ್ತು ಸುಟ್ಟ ಕ್ಯಾಪ್ಸಿಕಂ ಸಂಪೂರ್ಣವಾಗಿ ತಣ್ಣಗಾದ ಮೇಲೆಯೇ ಮೊಸರು ಹಾಕಿ ರುಬ್ಬಬೇಕು. ಸ್ವಲ್ಪ ಬಿಸಿ ಇದ್ದರೂ ಮೊಸರು ಒಡೆದು ಹೋಗಿ (Curdle ಆಗಿ) ಚಟ್ನಿ ನೀರಾಗುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಹೊಟೇಲ್‌ನಂತೆ ಪರ್ಫೆಕ್ಟ್‌ ಆಗಿ ಪನ್ನೀರ್‌ ಕಟ್‌ ಆಗ್ಬೇಕಾ? ಈ ಟ್ರಿಕ್ಸ್‌ ಫಾಲೋ ಮಾಡಿ
Chicken Cooking Tips: ಚಿಕನ್ ಸಾರು ರುಚಿ ಬರ್ತಿಲ್ವಾ? ಬಾಯಿ ಚಪ್ಪರಿಸುವಂತೆ ಸಾರು ಮಾಡುವ ಮುನ್ನ ಈ ತಪ್ಪುಗಳನ್ನು ಮಾಡೋದು ನಿಲ್ಲಿಸಿ