ಈ ಪೂರಿಗಳನ್ನು ನೀವು ಮನಸೋ ಇಚ್ಚೆ ಹತ್ತಿಪ್ಪತ್ತು ತಿನ್ಬಹುದು.. ಏಕಂದ್ರೆ ಅವನ್ನು ಕರಿದಿದ್ದು ಎಣ್ಣೆಯಲ್ಲಲ್ಲ, ನೀರಲ್ಲಿ! ನೀರಲ್ಲಿ ಕರಿದು ಮಾಡುವ ಎಣ್ಣೆರಹಿತ ಪೂರಿಯ ರೆಸಿಪಿ ವಿಡಿಯೋ ಈಗ ವೈರಲ್ ಆಗಿದೆ.
ಪುರಿ ರುಚಿಕರ ತಿಂಡಿ ಅನ್ನೋದ್ರಲ್ಲಿ ಅನುಮಾನವಿಲ್ಲ, ಆದ್ರೆ ಎಣ್ಣೆಯಲ್ಲಿ ಕರಿದ ಪದಾರ್ಥವಾದ್ದರಿಂದ ಹೆಚ್ಚು ಜನರು ಅದನ್ನು ತಿನ್ನುವುದಿಲ್ಲ. ಕರಿದ ಪದಾರ್ಥ ಒಳ್ಳೇದಲ್ಲ. ಇದು ಸಾಕಷ್ಟು ಅನಾರೋಗ್ಯಕರ ಮತ್ತು ಕ್ಯಾಲೋರಿಗಳಿಂದ ತುಂಬಿರುತ್ತದೆ. ಇದರಿಂದ ಪೂರಿ ತಿಂದವರು ನಂತರ ಗಿಲ್ಟ್‌ನಲ್ಲಿ ಒದ್ದಾಡುತ್ತಾರೆ. ಆದರೆ, ಈ ಪೂರಿಗಳನ್ನು ಆರೋಗ್ಯಕರವಾಗಿ ಮಾಡಲು ಕೂಡಾ ಒಂದು ಮಾರ್ಗವಿದೆ ಎಂದು ತೋರಿಸಿಕೊಟ್ಟಿದೆ ಈ ವಿಡಿಯೋ.
ಹೌದು, ಈ ಪೂರಿಗಳನ್ನು ಎಣ್ಣೆಯಲ್ಲಿ ಕರಿಯುವುದಿಲ್ಲ, ಬದಲಿಗೆ ಕುದಿಯುವ ನೀರಿನಲ್ಲಿ ಹಾಕಿ ತಯಾರಿಸಲಾಗುತ್ತದೆ. ಇದೇನಪ್ಪಾ ಇದು, ಎಣ್ಣೆರಹಿತ ಅಂದ್ರೂ ನಂಬಬಹುದು. ಆದ್ರೆ ನೀರಲ್ಲಿ ಕರಿಯೋದು ಅಂದ್ರೆ ನಂಬೋದು ಕಷ್ಟ ಅನ್ನಿಸ್ತು ಅಲ್ವಾ?
ಎಣ್ಣೆ ಮುಕ್ತ ಪೂರಿಗಳ ವಿಡಿಯೋ ವೈರಲ್
ಇತ್ತೀಚಿನ ದಿನಗಳಲ್ಲಿ ಆಯಿಲ್ ಫ್ರೀ ಪೂರಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಪ್ರಸಿದ್ಧ ಹಾಸ್ಯನಟಿ ಭಾರತಿ ಸಿಂಗ್ ಕೂಡ ಎಣ್ಣೆ ಮುಕ್ತ ಆರೋಗ್ಯಕರ ಪೂರಿಗಳನ್ನು ಪ್ರಯತ್ನಿಸಿದ್ದಾರೆ. ಹಾಗಾಗಿ ನೀವು ಕೂಡ ಎಣ್ಣೆ ರಹಿತ ಪೂರಿಗಳನ್ನು ಮಾಡಲು ಬಯಸಿದರೆ, ಮೊದಲು ಪೂರಿ ಹಿಟ್ಟನ್ನು ಎಂದಿನಂತೆ ತಯಾರಿಸಿಕೊಳ್ಳಿ ಮತ್ತು 10 ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ.
ಎಣ್ಣೆ ರಹಿತ ಪೂರಿಗಳನ್ನು ಹೀಗೆ ಮಾಡಿ
ಎಣ್ಣೆ ರಹಿತ ಪೂರಿಗಳನ್ನು ತಯಾರಿಸಲು, ನೀವು ಬೆರೆಸಿದ ಹಿಟ್ಟಿನಿಂದ ನಿಂಬೆ ಗಾತ್ರದ ಉಂಡೆಗಳನ್ನು ತೆಗೆದುಕೊಳ್ಳಿ. ಮಣೆ ಮೇಲೆ ಈ ಉಂಡೆಯನ್ನು ಸಣ್ಣ ವೃತ್ತಾಕಾರದಲ್ಲಿ ಲಟ್ಟಿಸಿ. ಈಗ ಒಂದು ದೊಡ್ಡ ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ, ನೀರು ಕುದಿಯಲು ಪ್ರಾರಂಭಿಸಿದಾಗ, ಅದರಲ್ಲಿ ಪೂರಿಗಳನ್ನು ಹಾಕಿ ಬೇಯಿಸಲು ಬಿಡಿ. ಪೂರಿಗಳು ನೀರಿನಿಂದ ಮೇಲೆ ಬಂದು ತೇಲುತ್ತವೆ. ಆಗ ಅವುಗಳನ್ನು ತೆಗೆದು ನೇರವಾಗಿ ಏರ್ ಫ್ರೈಯರ್ನಲ್ಲಿ ಹಾಕಿ. ಈ ಪೂರಿಗಳನ್ನು ಎಣ್ಣೆ ಇಲ್ಲದೆ ಏರ್ ಫ್ರೈಯರ್‌ನಲ್ಲಿ 180-190 ಡಿಗ್ರಿ ಸೆಲ್ಸಿಯಸ್‌ನಲ್ಲಿ 3 ರಿಂದ 4 ನಿಮಿಷಗಳ ಕಾಲ ಫ್ರೈ ಮಾಡಿ. ಇದು ಅವುಗಳನ್ನು ಗರಿಗರಿಯಾದ ಮತ್ತು ತುಪ್ಪುಳಿನಂತಿರುವಂತೆ ಮಾಡುತ್ತದೆ. ಈ ಪೂರಿಗಳನ್ನು ಬಿಸಿಬಿಸಿಯಾಗಿ ಸೇವಿಸಿ.
ಇಲ್ಲಿದೆ ವಿಡಿಯೋ