Amruthadhare Serial : ಮೂಗು ಮುಚ್ಚಿಕೊಂಡು ಟೇಸ್ಟಿ ಚಿಕನ್ ಕರಿ ಮಾಡ್ತಿದ್ದಾಳೆ ಭೂಮಿ.. ರೆಸಿಪಿ ಇಲ್ಲಿದೆ.

By Suvarna News  |  First Published Aug 4, 2023, 5:49 PM IST

ಚಿಕನ್ ಅಂದ್ರೆ ಕೆಲವರಿಗೆ ಪಂಚಪ್ರಾಣ. ಚಿಕನ್ ಕರಿ ಹೆಸರು ಕೇಳಿದ್ರೆ ಬಾಯಲ್ಲಿ ನೀರು ಬರುತ್ತೆ ಅನ್ನೋರು ಚಿಕನ್ ಕರಿ ಮಾಡೋಕೆ ಬರಲ್ಲಾ ಅಂತಾ ಬೇಸರಪಟ್ಟುಕೊಳ್ತಾರೆ. ಅಂಥವರಿಗೆ ಸುಲಭ ರೆಸಿಪಿ ಇಲ್ಲಿದೆ.
 


ವೆಜ್ ಹಾಗೂ ನಾನ್ ವೆಜ್ ವಿಷ್ಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುತ್ವೆ. ನಾನ್ ವೆಜ್ ತಿನ್ನದೆ ಇರೋರಿಗೆ ಅದನ್ನು ಮಾಡೋದು ಎಷ್ಟು ಕಷ್ಟ ಅನ್ನೋದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ನಾನ್ ವೆಜ್ ತಿನ್ನೋರು, ಇವಳ್ಯಾಕೆ ಇಷ್ಟೆಲ್ಲ ನಾಟಕ ಮಾಡ್ತಾಳೆ, ಅದ್ರಲ್ಲಿ ಏನಿದೆ ಅಂತಾ ಸುಲಭವಾಗಿ ಹೇಳ್ಬಹುದು. ಹುಟ್ಟಿನಿಂದ ವೆಜ್ ತಿಂದು ಜೀವನ ಸಾಗಿಸುತ್ತಿರೋರಿಗೆ ಏಕಾಏಕಿ ನಾನ್ ವೆಜ್ ಅಡುಗೆ ಮಾಡು ಅಂದ್ರೆ ಕಷ್ಟವಾಗುತ್ತೆ. ಗಂಡನ ಮನೆಯಲ್ಲಿ ಅಥವಾ ಗಂಡ ನಾನ್ ವೆಜ್ ತಿನ್ನೋನಾದ್ರೆ ಆತನಿಗಾಗಿ ಅಡುಗೆ ಕಲಿಲೇಬೇಕು. ನಮ್ಮಲ್ಲಿ ಕೆಲ ಮಹಿಳೆಯರು ನಾನ್ ವೆಜ್ ತಿನ್ನದೆ ಹೋದ್ರೂ ಅದನ್ನು ಮಾಡೋದು ಹೇಗೆ ಅಂತಾ ಕಲಿತಿದ್ದಾರೆ. ಕೇವಲ ಗಂಡ ಅಥವಾ ಮಕ್ಕಳು, ಮನೆಯವರಿಗಾಗಿ. ಇದಕ್ಕೆ ಝೀ ಕನ್ನಡದಲ್ಲಿ ಬರ್ತಿರುವ ಅಮೃತಧಾರೆ ಧಾರಾವಾಹಿಯೂ ಹೊರತಾಗಿಲ್ಲ. ಮುಂದೆ ಪತಿಯಾಗಲಿರುವ ಗೌತಮ್ ಗಾಗಿ ಚಿಕನ್ ಕರಿ ಕಲಿಯಲು ಶುರು ಮಾಡಿದ್ದಾಳೆ ಭೂಮಿ. ಚಿಕನ್ ಕೈನಲ್ಲಿ ಮುಟ್ಟೋಕೆ ಕಷ್ಟಪಡ್ತಿರುವ ಭೂಮಿ, ಮೂಗು ಮುಚ್ಚಿಕೊಂಡು ಅಡುಗೆ ಮಾಡುವ ಯತ್ನ ನಡೆಸುತ್ತಿದ್ದಾಳೆ. ಗೌತಮ್ ಗೆ ಇಷ್ಟವಾಗಿರುವ ಚಿಕನ್ ಕರಿಯನ್ನು ನೀವೂ ಮನೆಯಲ್ಲಿ ಸುಲಭವಾಗಿ ಮಾಡ್ಬಹುದು. ನಾವಿಂದು ಚಿಕನ್ ಕರಿ ರೆಸಿಪಿ ಹೇಳ್ತೇವೆ.

ಚಿಕನ್ (Chicken) ಕರಿ (Curry) ಮಾಡೋದು ಹೇಗೆ? : ಚಿಕನ್ ಕರಿ ನಮ್ಮ ಭಾರತದ ಒಂದು ಸಾಂಪ್ರದಾಯಿಕ ಆಹಾರ. ಕೋಳಿ ಮಾಂಸಕ್ಕೆ ಸಾಕಷ್ಟು ಮಸಾಲೆ, ಈರುಳ್ಳಿ, ಟೊಮೊಟೊ ಹಾಕಿ ಮಾಡುವಂತಹ ತಿಂಡಿ. ಇದು ಭಾರತದಲ್ಲೇ ಹುಟ್ಟಿದ ಆಹಾರವೆಂದು ನಂಬಲಾಗಿದೆ.  

Tap to resize

Latest Videos

ನಿಂಬೆ, ಮಾವಿನ ಚಿತ್ರಾನ್ನ ತಿಂದು ಬೇಜಾರಾಗಿದ್ಯಾ, ಈ ಸ್ಪೆಷಲ್‌ ವೀಳ್ಯದೆಲೆ ಚಿತ್ರಾನ್ನ ಟ್ರೈ ಮಾಡಿ

ಚಿಕನ್ ಕರಿ ಮಾಡಲು ಬೇಕಾಗುವ ಸಾಮಾನುಗಳು : ಆರು ಜನರಿಗೆ ನೀವು ಚಿಕನ್ ಕರಿ ಮಾಡ್ತಿದ್ದೀರಿ ಅಂದ್ರೆ ಈ ಕೆಳಗಿನ ಅಳತೆಯಂತೆ ಸಾಮಾನುಗಳನ್ನು ತೆಗೆದುಕೊಳ್ಳಿ.
ಚಿಕನ್ - 1 ಕೆಜಿ 250 ಗ್ರಾಂ  
ಈರುಳ್ಳಿ  - 5
ಟೊಮೆಟೊ -  2
ಹಸಿರು ಮೆಣಸಿನಕಾಯಿ - 2
ಬೆಳ್ಳುಳ್ಳಿ  - 10
ಶುಂಠಿ ತುಂಡು - 1 ಇಂಚು
ಸಾಸಿವೆ ಎಣ್ಣೆ  -  100 ಗ್ರಾಂ 
ಬೇವಿನ ಎಲೆ - 2
ಹಸಿರು ಏಲಕ್ಕಿ - 4
ದಾಲ್ಚಿನ್ನಿ ಕಡ್ಡಿ  - 1
ಕರಿಮೆಣಸು -  ನಾಲ್ಕರಿಂದ ಐದು
ಲವಂಗ  - ನಾಲ್ಕರಿಂದ ಐದು
ಜೀರಿಗೆ  - ½ ಚಮಚ
ಒಣ ಕೆಂಪು ಮೆಣಸಿನಕಾಯಿ - 2
ಅರಿಶಿನ ಪುಡಿ - 1/2 ಚಮಚ
ಕೆಂಪು ಮೆಣಸಿನ ಪುಡಿ - 1.5 ಟೀಚಮಚ  
ಕೊತ್ತಂಬರಿ ಪುಡಿ - 2  ಚಮಚ
ಉಪ್ಪು - 1  ಚಮಚ
ಕಾಶ್ಮೀರಿ ಕೆಂಪು ಮೆಣಸಿನಕಾಯಿ - 1 ಚಮಚ
ಗರಂ ಮಸಾಲಾ - 1 ಚಮಚ
ಕಸೂರಿ ಮೇಥಿ - 1  ಚಮಚ

ಚಿಕನ್ ಕರಿ ಮಾಡುವ ವಿಧಾನ :  ಮೊದಲು ಚಿಕನ್ ತುಂಡುಗಳನ್ನು ಸ್ವಚ್ಛಗೊಳಿಸಿಕೊಂಡು ಚೆನ್ನಾಗಿ ತೊಳೆಯಬೇಕು. ಇತ್ತ ಶುಂಠಿ ಬೆಳ್ಳುಳ್ಳಿಯನ್ನು ಸ್ವಚ್ಛಗೊಳಿಸಿ ಮತ್ತು ಗ್ರೈಂಡರ್ನಲ್ಲಿ ಪೇಸ್ಟ್ ಮಾಡಿಕೊಳ್ಳಿ. ಈರುಳ್ಳಿಯನ್ನು ಸಣ್ಣದಾಗಿ ಕತ್ತರಿಸಿಕೊಳ್ಳಬೇಕು. ಟೊಮೆಟೊ ಮತ್ತು  ಹಸಿರು ಮೆಣಸಿನಕಾಯಿಯನ್ನು  ಕೂಡ ನೀವು ಹೆಚ್ಚಿಕೊಳ್ಳಬೇಕು. ನಂತ್ರ   ಗ್ಯಾಸ್ ಆನ್ ಮಾಡಿ ಅದ್ರ ಮೇಲೆ ಒಂದು ಬಾಣಲೆ ಇಡಿ. ಅದಕ್ಕೆ ಅರ್ಧ ಕಪ್ ಸಾಸಿವೆ ಎಣ್ಣೆಯನ್ನು ಹಾಕಿ. ಸಾಸಿವೆ ಎಣ್ಣೆ ಬಿಸಿಯಾದ ನಂತ್ರ ಅದಕ್ಕೆ ಎರಡು ಬೇವಿನ ಎಲೆ, ನಾಲ್ಕು ಹಸಿರು ಏಲಕ್ಕಿಗಳನ್ನು ಹಾಕಿ. ಒಂದು ತುಂಡು ದಾಲ್ಚಿನ್ನಿ, ನಾಲ್ಕು ಲವಂಗ, ನಾಲ್ಕು ಕರಿಮೆಣಸು, ಒಂದು ಟೀಚಮಚ ಜೀರಿಗೆ

ಮತ್ತು ಎರಡು ಒಣ ಕೆಂಪು ಮೆಣಸಿನಕಾಯಿಗಳನ್ನು ಸೇರಿಸಿ ಮತ್ತು ಅವುಗಳನ್ನು 20-30 ಸೆಕೆಂಡುಗಳ ಕಾಲ ಕೈ ಆಡಿಸಿ. ನಂತರ ಅದರಲ್ಲಿ ಕತ್ತರಿಸಿದ ಈರುಳ್ಳಿ ಹಾಕಿ ಮತ್ತು ಈರುಳ್ಳಿ ತಿಳಿ ಗೋಲ್ಡನ್ ಬ್ರೌನ್ ಆಗುವವರೆಗೆ ಬೇಯಿಸಿ. ಈರುಳ್ಳಿ ಹೊಂಬಣ್ಣಕ್ಕೆ ತಿರುಗಿದಾಗ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಹಾಕಿ 2 ನಿಮಿಷ ಬೇಯಿಸಿ.  ನಂತರ ಚಿಕನ್ ಸೇರಿಸಿ ಮತ್ತು 7-8 ನಿಮಿಷ ಫ್ರೈ ಮಾಡಿ. ಇದರಿಂದ ಚಿಕನ್ ಬಣ್ಣವು ಬಿಳಿ ಬಣ್ಣಕ್ಕೆ ಬದಲಾಗುತ್ತದೆ. ಗ್ಯಾಸ್ ಒಲೆ ಉರಿ ಮಧ್ಯಮ ಗಾತ್ರದಲ್ಲಿರುವಂತೆ ನೋಡಿಕೊಳ್ಳಬೇಕು.  

ನಂತರ ನೀವು ಅರ್ಧ ಚಮಚ ಅರಿಶಿನ ಪುಡಿಯನ್ನು ಚಿಕನ್ ಕರಿ ಮಿಶ್ರಣಕ್ಕೆ ಹಾಕಬೇಕು.  ಒಂದೂವರೆ ಚಮಚ ಕೆಂಪು ಮೆಣಸಿನ ಪುಡಿ, ಎರಡು ಚಮಚ ಕೊತ್ತಂಬರಿ ಪುಡಿ, ಒಂದು ಚಮಚ ಉಪ್ಪು ಮತ್ತು ಒಂದು ಟೀಚಮಚ ಕಾಶ್ಮೀರಿ ಕೆಂಪು ಮೆಣಸಿನಕಾಯಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.  

ಎಲ್ಲ ಮಸಾಲೆ ಹಾಕಿದ ಮೇಲೆ 7-8 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಇದನ್ನು ಫ್ರೈ ಮಾಡಬೇಕು. ನಂತ್ರ ಈ ಮಿಶ್ರಣಕ್ಕೆ ಟೊಮೊಟೊ ಹಾಕ್ಬೇಕು. ಚೆನ್ನಾಗಿ ಎಲ್ಲವನ್ನು ಮಿಕ್ಸ್ ಮಾಡಿ ಬಾಣಲೆಗೆ ಪ್ಯಾನ್ ಮುಚ್ಚಿ ಆರೇಳು ನಿಮಿಷ ಕುದಿಸಿ. ಈ ಸಂದರ್ಭದಲ್ಲಿ ಟೊಮೊಟೊ ನೀರು ಬಿಡುವ ಕಾರಣ ಎಲ್ಲ ಮಸಾಲೆ ಚಿಕನ್ ಗೆ ಸರಿಯಾಗಿ ಬೆರೆಯುತ್ತದೆ. ಚಿಕನ್ ಶೇಕಡಾ 80ರಷ್ಟು ಬೆಂದ ನಂತ್ರ ಅದಕ್ಕೆ ಗರಂ ಮಸಾಲ ಮತ್ತು ಕಸೂರಿ ಮೇಥಿಯನ್ನು ಹಾಕಿ. ಒಂದು ನಿಮಿಷ ಮುಚ್ಚಿ ಬೇಯಿಸಿ ನಂತ್ರ ಗ್ಯಾಸ್ ಆಫ್ ಮಾಡಿ. ರುಚಿರುಚಿ ಚಿಕನ್ ಕರಿ ಸರ್ವ್ ಮಾಡೋಕೆ ಸಿದ್ದ. 

click me!