ರಾಗಿ ಗಂಜಿಗೆ ಮಸಾಲಾ ಟ್ವಿಸ್ಟ್ ನೀಡಿದ್ದಾರೆ ನಟ ಜಗ್ಗೇಶ್ ಅವರ ಪತ್ನಿ ಪರಿಮಳ ಜಗ್ಗೇಶ್. ಈ ಮಸಾಲಾ ರಾಗಿ ಗಂಜಿ ತಯಾರಿಸುವುದು ಹೇಗೆ, ಇದರ ಆರೋಗ್ಯ ಲಾಭಗಳೇನು?
ಸಾಮಾನ್ಯವಾಗಿ ಫಟಾಫಟ್ ತಯಾರಿಯಾಗಬೇಕು ಹಾಗೂ ಹೊಟ್ಟೆ ತಣ್ಣಗಿರಬೇಕು ಎಂದಾಗ ರಾಗಿ ಗಂಜಿ ಮಾಡಿ ಕುಡಿವ ಅಭ್ಯಾಸ ಹಲವರಿಗೆ. ರಾಗಿ ಅಂಬಲಿ ಎಂದು ಸಾಮಾನ್ಯವಾಗಿ ಕರೆವ ಇದಕ್ಕೇ ಮಸಾಲಾ ಟ್ವಿಸ್ಟ್ ಕೊಟ್ರೆ ಹೇಗಿರುತ್ತೆ?
ಆರೋಗ್ಯಕರ ಮತ್ತು ರುಚಿಕರವಾದ ಈ ಹೊಸ ರೆಸಿಪಿಯನ್ನು ಹೇಗೆ ಮಾಡುವುದೆಂದು ಹೇಳಿಕೊಟ್ಟಿದ್ದಾರೆ ಪರಿಮಳ ಜಗ್ಗೇಶ್. ಅವರು ಈ ರೆಸಿಪಿಯು ತೂಕ ಇಳಿಸಬೇಕೆನ್ನುವವರಿಗೆ, ಶುಗರ್ ನಿರ್ವಹಣೆಗೆ, ಪಿಸಿಒಡಿ ಸಮಸ್ಯೆ ಇರುವವರಿಗೆ ಸಹಾಯಕವಾಗಿದೆ ಎಂದಿದ್ದಾರೆ. ಮತ್ತೇಕೆ ತಡ, ಕಾರ್ಬೋಹೈಡ್ರೇಟ್ಸ್, ಪ್ರೋಟೀನ್, ಫೈಬರ್ ಹಾಗೂ ಉತ್ತಮ ಫ್ಯಾಟ್‌ನಿಂದ ಸಮೃದ್ಧವಾಗಿರುವ ಈ ಮಸಾಲಾ ರಾಗಿ ಅಂಬಲಿಯನ್ನು ನಿಮ್ಮ ಡಯಟ್‌ಗೆ ಸೇರಿಸಿಕೊಳ್ಳಿ.
ಬೇಕಾಗುವ ವಸ್ತುಗಳು
ರಾಗಿ ಹಿಟ್ಟು 50 ಗ್ರಾಂ
3 ಲೋಟ ನೀರು
ಅರ್ಧ ಚಮಚ ಜೀರಿಗೆ
ಸಣ್ಣದಾಗಿ ಹೆಚ್ಚಟ್ಟುಕೊಂಡ ಈರುಳ್ಳಿ
ತುರಿದುಕೊಂಡ ಕ್ಯಾರೆಟ್
ಹಸಿಮೆಣಸಿನಕಾಯಿ
ಅರ್ಧ ಚಮಚ ಶುಂಠಿ ಪುಡಿ
ಸ್ವಲ್ಪ ಕೊತ್ತಂಬರಿ ಸೊಪ್ಪು
ನಿಂಬೆರಸ
ಉಪ್ಪು
ಮೊಸರು
ಗೋಡಂಬಿ ಪುಡಿ
undefined
ತಯಾರಿ ವಿಧಾನ
50 ಗ್ರಾಂ ರಾಗಿ ಹಿಟ್ಟಿಗೆ 1 ಲೋಟ ನೀರು ಹಾಕಿ ಅದನ್ನು ಗಂಟಿಲ್ಲದ ಹಾಗೆ ಚೆನ್ನಾಗಿ ಕಲೆಸಿ. ನಂತರ ಪಾತ್ರೆಯಲ್ಲಿ 2 ಲೋಟ ನೀರು ಬಿಸಿಗಿಟ್ಟು ಅದಕ್ಕೆ ಅರ್ಧ ಚಮಚ ಜೀರಿಗೆ ಹಾಕಬೇಕು. ಅದು ಕುದಿ ಬರುತ್ತಿದ್ದಂತೆಯೇ ಅದಕ್ಕೆ ತಯಾರಿಸಿಟ್ಟುಕೊಂಡ ರಾಗಿ ನೀರನ್ನು ಸೇರಿಸಿ. ಗಂಟು ಬರದ ಹಾಗೆ ತಿರುವುತ್ತಾ, ಇದಕ್ಕೆ ಸಣ್ಣದಾಗಿ ಹೆಚ್ಚಿರುವ ಈರುಳ್ಳಿ, ಹಸಿ ಮೆಣಸಿನಕಾಯಿ, ಸ್ವಲ್ಪ ಕ್ಯಾರೆಟ್, ಶುಂಠಿ, ಕೊತ್ತಂಬರಿ, ನಿಂಬೆರಸ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಮಧ್ಯಮ ಉರಿಯಲ್ಲಿ ನಾಲ್ಕೈದು ನಿಮಿಷ ಬೇಯಿಸಿ. ತಣ್ಣಗಾದ ಬಳಿಕ ಈ ರಾಗಿ ಗಂಜಿಗೆ ಮೇಲಿನಿಂದ ಈರುಳ್ಳಿ ಹಾಗೂ ಕ್ಯಾರೆಟ್‌ನಿಂದ ಅಲಂಕಾರ ಮಾಡಿ ಮತ್ತು ಗೋಡಂಬ ಪುಡಿಯನ್ನು ಉದುರಿಸಿ. ಇದಕ್ಕೆ ಸ್ವಲ್ಪ ಮೊಸರು ಸೇರಿಸಿಕೊಂಡರೆ ಮಸಾಲಾ ರಾಗಿ ಗಂಜಿ ರೆಡಿ.