ಹಳ್ಳಿ ಸ್ಟೈಲ್‌ನಲ್ಲಿ ಗಂಟಿಲ್ಲದೆ ಮೃದುವಾದ ರಾಗಿ ಮುದ್ದೆ ಮಾಡುವುದು ಹೇಗೆ? ಪರ್ಫೆಕ್ಟ್ ಅಳತೆ, ಸೀಕ್ರೆಟ್ ಟಿಪ್ಸ್ ಇಲ್ಲಿದೆ

Published : Aug 26, 2026, 09:44 PM IST
Perfect Ragi Mudde Recipe

ಸಾರಾಂಶ

Ragi Mudde Recipe: ರಾಗಿ ಮುದ್ದೆ ಮಾಡುವಾಗ ಪದೇ ಪದೇ ಗಂಟಾಗುತ್ತಿದೆಯೇ? ಹಾಗಿದ್ದರೆ ಈ ಟ್ರಿಕ್ ಫಾಲೋ ಮಾಡಿ..ಕೈಗೆ ಅಂಟಲ್ಲ, ಹೋಟೆಲ್ ಮುದ್ದೆಯಂತೆ ಶೈನಿಂಗ್ ಇರುತ್ತೆ..ಕೇವಲ 5 ನಿಮಿಷದಲ್ಲಿ ಗಂಟಿಲ್ಲದ ರಾಗಿ ಮುದ್ದೆ ತಯಾರಿಸಲು ವಿಶೇಷ ಟಿಪ್ಸ್ ಮತ್ತು ಟ್ರಿಕ್ಸ್ ಇಲ್ಲಿದೆ ನೋಡಿ..

ರಾಗಿ ಮುದ್ದೆ ಕರ್ನಾಟಕದ ಸಾಂಪ್ರದಾಯಿಕ ಮತ್ತು ಅತ್ಯಂತ ಪೌಷ್ಟಿಕ ಆಹಾರಗಳಲ್ಲಿ ಒಂದು. ಆದರೆ, ರಾಗಿ ಮುದ್ದೆ ಮಾಡುವುದು ಅಂದುಕೊಂಡಷ್ಟು ಸುಲಭವಲ್ಲ. ಸ್ವಲ್ಪ ಹದ ತಪ್ಪಿದರೆ ಮುದ್ದೆ ಗಂಟಾಗುವುದು ಅಥವಾ ಸರಿಯಾಗಿ ಬೇಯದಿರುವುದು ಸಾಮಾನ್ಯ. ಆದರೆ ಈ ಒಂದು ವಿಶೇಷ ವಿಧಾನವನ್ನು ಅನುಸರಿಸಿದರೆ, ಹೊಸದಾಗಿ ಕಲಿಯುವವರು ಕೂಡ ಅತಿ ಸುಲಭವಾಗಿ, ಗಂಟಿಲ್ಲದಂತೆ ಸಾಫ್ಟ್ ಆದ ಮುದ್ದೆಯನ್ನು ತಯಾರಿಸಬಹುದು.

ವಿಶೇಷ ಟ್ರಿಕ್

ರಾಗಿ ಮುದ್ದೆ ಪರ್ಫೆಕ್ಟ್ ಆಗಿ ಬರಲು ಮೊದಲು ಗಮನಿಸಬೇಕಾದ್ದು ಅಳತೆ. ಎರಡು ಗ್ಲಾಸ್ ನೀರಿಗೆ ಸರಿಯಾಗಿ ಒಂದು ಗ್ಲಾಸ್ ರಾಗಿ ಹಿಟ್ಟನ್ನು ತೆಗೆದುಕೊಳ್ಳುವುದು ಸೂಕ್ತವಾದ ಪ್ರಮಾಣ.

ಹಾಗೆಯೇ ನೀರು ಕುದಿಯುವ ಮೊದಲು, ಒಂದು ಟೇಬಲ್ ಸ್ಪೂನ್ ರಾಗಿ ಹಿಟ್ಟನ್ನು ಸ್ವಲ್ಪ ನೀರಿನಲ್ಲಿ ಗಂಟಿಲ್ಲದಂತೆ ಕಲಸಿಕೊಂಡು ಕುದಿಯುವ ನೀರಿಗೆ ಸೇರಿಸಬೇಕು. ಇದರೊಂದಿಗೆ ಅರ್ಧ ಟೀ ಸ್ಪೂನ್ ತುಪ್ಪವನ್ನು ಸೇರಿಸುವುದು ಈ ವಿಧಾನದ 'ಸೀಕ್ರೆಟ್' ಆಗಿದೆ. ತುಪ್ಪ ಸೇರಿಸುವುದರಿಂದ ಮುದ್ದೆ ಕೈಗೆ ಅಂಟುವುದಿಲ್ಲ ಮತ್ತು ನೋಡಲು ಅತ್ಯಂತ ಶೈನಿಂಗ್ ಆಗಿರುತ್ತದೆ. ಮತ್ಯಾಕೆ ತಡ ಪರ್ಫೆಕ್ಟ್ ಆಗಿ ರಾಗಿ ಮುದ್ದೆ ಮಾಡುವುದು ಹೇಗೆಂದು ನೋಡೋಣ ಬನ್ನಿ..

ಮಾಡುವ ವಿಧಾನ ಹೀಗಿದೆ

ದಪ್ಪ ತಳದ ಪಾತ್ರೆ ಬಳಕೆ: ಮುದ್ದೆ ತಿರುಗಿಸಲು ಅನುಕೂಲವಾಗುವಂತೆ ಹ್ಯಾಂಡಲ್ ಇರುವ ಕುಕ್ಕರ್ ಅಥವಾ ದಪ್ಪ ತಳದ ಪಾತ್ರೆಯನ್ನು ಬಳಸಿ.

ಬೇಯಿಸುವ ಕ್ರಮ: ಮೊದಲು ನೀರಿಗೆ ಉಪ್ಪು, ತುಪ್ಪ ಮತ್ತು ಕಲಸಿಟ್ಟ ರಾಗಿ ಹಿಟ್ಟಿನ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಕುದಿಸಿ. ನೀರು ಕುದಿಯಲು ಆರಂಭಿಸಿದಾಗ ಒಂದು ಗ್ಲಾಸ್ ರಾಗಿ ಹಿಟ್ಟನ್ನು ಹಾಕಿ, ಒಮ್ಮೆ ಲಘುವಾಗಿ ಕೈಯಾಡಿಸಿ ತಕ್ಷಣ ಮುಚ್ಚಳ ಮುಚ್ಚಿ (ಲಿಡ್ ಇಟ್ಟು).

ಹಬೆಯಲ್ಲಿ ಬೇಯಿಸುವುದು: ಮೀಡಿಯಂ ಫ್ಲೇಮ್‌ನಲ್ಲಿ 2-3 ನಿಮಿಷ ಹಬೆಯಲ್ಲಿ ಬೇಯಲು ಬಿಡಿ. ಹೀಗೆ ಮಾಡುವುದರಿಂದ ಹಿಟ್ಟು ಸಂಪೂರ್ಣವಾಗಿ ಬೇಯುತ್ತದೆ ಮತ್ತು ಗಂಟು ಆಗುವ ಸಾಧ್ಯತೆ ಶೇ. 100 ರಷ್ಟು ಇರುವುದಿಲ್ಲ.

ಮುದ್ದೆ ತಿರುಗಿಸುವುದು (ಹುಟ್ಟು ಹಾಕುವುದು): ನಂತರ ಉರಿಯನ್ನು ಕಡಿಮೆ ಮಾಡಿ (Low Flame), ಮರದ ಕೋಲು ಅಥವಾ ಸ್ಟೀಲ್ ಸೌಟಿನಿಂದ ಗಂಟಿಲ್ಲದಂತೆ ಚೆನ್ನಾಗಿ ಮಿಕ್ಸ್ ಮಾಡಿ.

ಹಳ್ಳಿ ಶೈಲಿಯ ಸಂಪ್ರದಾಯ

ಮುದ್ದೆ ತಯಾರಾದ ನಂತರ ಕೈಯನ್ನು ನೀರಿನಲ್ಲಿ ತೇವ ಮಾಡಿಕೊಂಡು, ನಿಮಗೆ ಬೇಕಾದ ಗಾತ್ರದಲ್ಲಿ ಉಂಡೆಗಳನ್ನು ಮಾಡಿಕೊಳ್ಳಿ. ಹಳ್ಳಿಗಳಲ್ಲಿ ಮುದ್ದೆ ಮಾಡಿದ ನಂತರ ಪಾತ್ರೆಯ ತಳದಲ್ಲಿ ಉಳಿಯುವ ಗಟ್ಟಿಯಾದ ಪದರಕ್ಕೆ (ತಳ ಹಿಡಿದ ಹಿಟ್ಟು) ನೀರು ಹಾಕಿ, ಈರುಳ್ಳಿ, ಹಸಿಮೆಣಸಿನಕಾಯಿ, ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ 'ಗಂಜಿ'ಯಂತೆ ಮಾಡಿ ಕುಡಿಯುವ ಪದ್ಧತಿ ಇಂದಿಗೂ ಇದೆ. ಇದು ಹೊಟ್ಟೆಯನ್ನು ತಂಪಾಗಿಸುತ್ತದೆ ಎಂಬುದು ಹಿರಿಯರ ನಂಬಿಕೆ.

ಈ ಪರ್ಫೆಕ್ಟ್ ರಾಗಿ ಮುದ್ದೆಯನ್ನು ಬಿಸಿಬಿಸಿಯಾದ ಬೇಳೆ ಸಾರು ಅಥವಾ ನಾನ್-ವೆಜ್ ಸಾಂಬಾರ್ ಜೊತೆ ಸವಿಯಲು ಅತ್ಯಂತ ರುಚಿಕರವಾಗಿರುತ್ತದೆ.

ನೆನಪಿಡಿ...

ಹಿಟ್ಟಿನ ತಾಜಾತನ: ರಾಗಿ ಹಿಟ್ಟು ತುಂಬಾ ಹಳೆಯದಾಗಿದ್ದರೆ ಮುದ್ದೆ ಸ್ವಲ್ಪ ಕಹಿಯಾಗಿ ಅಥವಾ ಬಣ್ಣ ಕಪ್ಪಾಗಿ ಬರಬಹುದು. ಮುದ್ದೆ ರುಚಿಯಾಗಿರಲು ಆದಷ್ಟು ತಾಜಾ ಹಿಟ್ಟನ್ನು ಬಳಸಿ.

ಹಿಟ್ಟು ಜರಡಿ ಹಿಡಿಯಿರಿ: ಹಿಟ್ಟನ್ನು ಬಳಸುವ ಮುನ್ನ ಜರಡಿ ಹಿಡಿಯುವುದರಿಂದ ಅದರಲ್ಲಿರುವ ಚಿಕ್ಕ ಸಣ್ಣ ಗಂಟುಗಳು ಅಥವಾ ಕಸ ದೂರವಾಗುತ್ತದೆ, ಇದರಿಂದ ಮುದ್ದೆ ಇನ್ನಷ್ಟು ಮೃದುವಾಗಿ ಬರುತ್ತದೆ.

ಬಿಸಿನೀರಿನ ಬ್ಯಾಕಪ್: ಮುದ್ದೆ ತಿರುಗಿಸುವಾಗ ಒಂದು ವೇಳೆ ಹಿಟ್ಟು ಹೆಚ್ಚಾಗಿ ಮುದ್ದೆ ತುಂಬಾ ಗಟ್ಟಿಯಾದರೆ, ಪಕ್ಕದಲ್ಲಿ ಸ್ವಲ್ಪ ಕುದಿಯುವ ನೀರನ್ನು ಸಿದ್ಧವಾಗಿಟ್ಟುಕೊಳ್ಳಿ. ಗಟ್ಟಿಯಾದಾಗ ಸ್ವಲ್ಪ ಬಿಸಿನೀರು ಚಿಮುಕಿಸಿ ಹದ ಸರಿಪಡಿಸಬಹುದು (ತಣ್ಣೀರು ಬಳಸಬೇಡಿ).

ಸರಿಯಾಗಿ ಬೆಂದಿದೆ ಎಂದು ತಿಳಿಯುವುದು ಹೇಗೆ?: ಮುದ್ದೆ ಬೆಂದಿದೆಯೇ ಎಂದು ಪರೀಕ್ಷಿಸಲು ಕೈಯನ್ನು ನೀರಿನಲ್ಲಿ ಅದ್ದಿ ಮುದ್ದೆಯನ್ನು ಮುಟ್ಟಿ ನೋಡಿ. ಹಿಟ್ಟು ಕೈಗೆ ಅಂಟದಿದ್ದರೆ ಮುದ್ದೆ ಪೂರ್ತಿ ಬೆಂದಿದೆ ಎಂದರ್ಥ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕುಕ್ಕರ್ ಬಳಸದೆ, ರೆಡಿಮೇಡ್ ಮಸಾಲೆ ಇಲ್ಲದೆ ಪಾತ್ರೆಯಲ್ಲೇ ಮಾಡಿ ಮಂಡ್ಯ ಸ್ಟೈಲ್ ನಾಟಿ ಕೋಳಿ ಸಾರು
Curd Benefits: ದಿನಾ ಮೊಸರು ತಿಂದ್ರೆ ಸಿಗುವ ಆರೋಗ್ಯ ಪ್ರಯೋಜನಗಳಿವು