ಹುಣಸೆ ಹುಳಿ ಎಂದ ಕೂಡಲೇ ನಾಲಿಗೆ ಅನಾಯಾಸವಾಗಿ ಚಪ್ ಎನ್ನುತ್ತದೆ. ಅದರ ಹುಳಿ ಇತರೆ ಆಹಾರ ಪದಾರ್ಥಗಳಿಗೆ ರುಚಿ ನೀಡಿ ಚಪ್ಪರಿಸುವಂತೆ ಮಾಡುತ್ತದೆ. ಇನ್ನು ಹುಣಸೆಹುಳಿಯದೇ ಆಹಾರ ತಯಾರಿಸಿದರೆ?
ಹುಣಸೆ ಹಣ್ಣು ಮುಂಚಿನಿಂದಲೂ ಭಾರತೀಯ ಸಾಂಬಾರ ಪದಾರ್ಥಗಳಲ್ಲಿ ಸ್ಥಾನ ಪಡೆದು ಅಡುಗೆಯ ರುಚಿ ಹೆಚ್ಚಿಸಲು ತನ್ನನ್ನು ತಾನು ಕರಗಿಸಿಕೊಳ್ಳುತ್ತಲೇ ಬಂದಿದೆ. ಹಿಂಡಿ ರಸ ತೆಗೆದ ಬಳಿಕವೂ ಹಿತ್ತಾಳೆ ಪಾತ್ರೆಗಳನ್ನು ತೊಳೆಯಲು ಬಳಕೆಯಾಗುತ್ತಿದೆ. ಈ ಹಣ್ಣು, ಎಲೆ, ತೊಗಟೆ ಎಲ್ಲವೂ ಔಷಧಗಳ ತಯಾರಿಕೆಯಲ್ಲಿ ಉಪಯೋಗವಾಗುತ್ತದೆ. ಇದರ ಕಾಂಡ ಗಡುಸಾಗಿರುವುದರಿಂದ ಒನಕೆ, ಚರಕಗಳ ತಯಾರಿಕೆಗೆ ಬಳಕೆಯಾಗುತ್ತದೆ.
ಇಷ್ಟೇ ಅಲ್ಲದೆ, ಹುಣಸೆ ಹಣ್ಣಿನಿಂದ ಆರೋಗ್ಯಕ್ಕೆ ಕೂಡಾ ಹಲವಾರು ಪ್ರಯೋಜನಗಳಿವೆ. ಇದರಲ್ಲಿರುವ ಟಾರ್ಟಾರಿಕ್ ಆಮ್ಲ, ವಿಟಮಿನ್‌ಗಳು, ಆ್ಯಂಟಿ ಆ್ಯಕ್ಸಿಡೆಂಟ್‌ಗಳು ಮತ್ತು ಖನಿಜಗಳು ನೆರಿಗೆಗಳನ್ನು ನಿವಾರಿಸುವ ಜೊತೆಗೆ, ಕೂದಲುದುರುವುದನ್ನು ತಡೆಯಬಲ್ಲವು. ಹುಣಸೆ ಹುಳಿ ಉತ್ತಮ ಫೇಸ್‌ಪ್ಯಾಕ್ ಕೂಡಾ. ಕತ್ತಿನ ಸುತ್ತ ಕಪ್ಪು ನಿವಾರಿಸುವ ಜೊತೆಗೆ ತ್ವಚೆಯನ್ನು ಬೆಳ್ಳಗಾಗಿಸುತ್ತದೆ. ಸಧ್ಯ ಹುಣಸೆ ಹಣ್ಣಿನಿಂದ ತಯಾರಿಸುವ ಎರಡು ರುಚಿಕರ ರೆಸಿಪಿಗಳನ್ನು ನೋಡೋಣ.
--
ಹುಣಸೆ ಹಣ್ಣಿನ ಗೊಜ್ಜು
ಸ್ವಲ್ಪ ಹುಳಿ, ಸ್ವಲ್ಪ ಸಿಹಿ, ಸ್ವಲ್ಪ ಖಾರ ಸೇರಿ ನಾಲಿಗೆಯಲ್ಲಿ ನೀರೂರಿಸುವ ಗೊಜ್ಜು ಹುಣಸೆ ಹಣ್ಣಿನ ಗೊಜ್ಜು. ಅನ್ನಕ್ಕೆ ಕಲೆಸಿ ತಿನ್ನಲು ಬಹಳ ರುಚಿ ಎನಿಸುವ ಈ ಗೊಜ್ಜನ್ನು ಮನೆಯಲ್ಲಿ ಏನೂ ತರಕಾರಿ ಇಲ್ಲದ ದಿನ ಅಥವಾ ಅಡುಗೆ ಮಾಡಲು ಸಮಯವಿಲ್ಲ ಎಂದಾಗ ಫಟಾಫಟ್ ತಯಾರಿಸಬಹುದು.
undefined
ಮುಖದ ಹೊಳಪಿಗೆ ನ್ಯಾಚುರಲ್ ಫೇಸ್‌ವಾಷ್
ಸರ್ವಿಂಗ್ಸ್ : 3
ಬೇಕಾಗುವ ಸಾಮಗ್ರಿಗಳು :
ಹುಣಸೆಹಣ್ಣು ಒಂದು ಉಂಡೆ ಗಾತ್ರ, ನೀರು 1.5 ಕಪ್, ಈರುಳ್ಳಿ 1, ಎಣ್ಣೆ 2 ಚಮಚ, ಸಾಸಿವೆ 1 ಚಮಚ, ಜೀರಿಗೆ 1 ಚಮಚ, ಸಣ್ಣದಾಗಿ ಹೆಚ್ಚಿಕೊಂಡ ಹಸಿ ಮೆಣಸಿನ ಕಾಯಿ 4, ಕರಿಬೇವು ಒಂದು ಮುಷ್ಠಿ, ಇಂಗು 1/4 ಚಮಚ, ಬೆಲ್ಲ 2-4 ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಕಾಯಿ ಸ್ವಲ್ಪ, ಕೊತ್ತಂಬರಿ ಸೊಪ್ಪು ಸ್ವಲ್ಪ.
ಮಾಡುವ ವಿಧಾನ :
ಪಾತ್ರೆಗೆ ಹುಣಸೆ ಹಣ್ಣನ್ನು ಹಾಕಿ ಅರ್ಧ ಕಪ್ ಬಿಸಿ ನೀರನ್ನು ಸೇರಿಸಿ ನೆನೆಯಲು ಬಿಡಿ. ಹತ್ತು ನಿಮಿಷದ ಬಳಿಕ ಇದನ್ನು ಚೆನ್ನಾಗಿ ಕಿವುಚಿ ರಸ ತೆಗೆದುಕೊಳ್ಳಿ.
ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ ಬಿಸಿ ಮಾಡಿ ಸಾಸಿವೆ, ಜೀರಿಗೆ ಸೇರಿಸಿ ಚಟಪಟಗುಟ್ಟುವವರೆಗೆ ಹುರಿಯಿರಿ. ಇದಕ್ಕೆ ಹಸಿಮೆಣಸು, ಕರಿಬೇವು, ಇಂಗು ಒಂದೊಂದಾಗಿ ಹಾಕುತ್ತಾ ಘಮ ಹೊಮ್ಮುತ್ತಿದ್ದಂತೆ ಸ್ಟೌವ್ ಆರಿಸಿ.
ಬಟ್ಟಲಿನಲ್ಲಿ ಹುರಿದ ಹಸಿಮೆಣಸು, ಹೆಚ್ಚಿದ ಹಸಿಈರುಳ್ಳಿ, ಕರಿಬೇವನ್ನು ಕೈಯಿಂದ ಚೆನ್ನಾಗಿ ಕಲಸಿ. ಇದಕ್ಕೆ ಒಗ್ಗರಣೆ ಹಾಕಿ. ಹುಣಸೆ ರಸವನ್ನು ಸೇರಿಸಿ. ಬಳಿಕ ಬೆಲ್ಲ ಸೇರಿಸಿ. ಬಳಿಕ ಒಂದು ಲೋಟ ನೀರು ಸೇರಿಸಿ ಕದಡಿ. ಕಾಯಿ ಹಾಗೂ ಉಪ್ಪು ಸೇರಿಸಿ ಹತ್ತು ನಿಮಿಷ ಕುದಿಯಲು ಬಿಡಿ. ಕೊನೆಯಲ್ಲಿ ಸಣ್ಣದಾಗಿ ಕತ್ತರಿಸಿಟ್ಟುಕೊಂಡ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ರುಚಿಯಾದ ಹುಣಸೆ ಗೊಜ್ಜು ಸವಿಯಲು ಸಿದ್ಧ. ರುಚಿ ಹೆಚ್ಚಿಸಲು ಹಸಿಮೆಣಸಿನಕಾಯಿ ಜೊತೆ ಬೆಳ್ಳುಳ್ಳಿ ಎಸಳನ್ನು ಹುರಿಯಬಹುದು.
---
ಹುಣಸೆ ಚಟ್ನಿ
ಹುಣಸೆ ಹಣ್ಣಿನ ಚಟ್ನಿಯನ್ನು ಸಾಮಾನ್ಯವಾಗಿ ಚಾಟ್ಸ್‌ಗಳಲ್ಲಿ ಬಳಸಲಾಗುತ್ತದೆ. ಆದರೆ ಇದು ಆಲೂ ಸಮೋಸ, ಆಲೂ ಟಿಕ್ಕಿ ಮುಂತಾದವಕ್ಕೆ ಕೂಡಾ ನೆಂಚಿಕೊಳ್ಳಲು ಸರಿಯಾದ ಕಾಂಬಿನೇಶನ್.
ಪಿತ್ತ ಕೆದರಿದರೆ ಹುಣಸೆ ರಸ ಮದ್ದು. ಮೂಲವ್ಯಾಧಿಗೂ ರಾಮಬಾಣ
ಸರ್ವಿಂಗ್ಸ್ 1 ಜಾರ್
ಬೇಕಾಗುವ ಸಾಮಗ್ರಿಗಳು :
ಅರ್ಧ ಕಪ್ ಬೀಜರಹಿತ ಹುಣಸೆಹುಳಿ, ಅರ್ಧ ಕಪ್ ಸೀಡ್‌ಲೆಸ್ ಡೇಟ್ಸ್, 2 ಲೋಟ ನೀರು, ಅರ್ಧ ಕಪ್ ಬೆಲ್ಲ, ಅರ್ಧ ಚಮಚ ಜೀರಿಗೆ ಪುಡಿ, 1 ಚಮಚ ಕೊತ್ತಂಬರಿ ಪುಡಿ, ಅರ್ಧ ಚಮಚ ಮೆಂತ್ಯೆ ಪುಡಿ, 1 ಚಮಚ ಕೆಂಪುಮೆಣಸಿನ ಪುಡಿ, ಅರ್ಧ ಚಮಚ ಒಣಶುಂಠಿ ಪುಡಿ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ :
ದೊಡ್ಡ ಬಾಣಲೆಯೊಂದರಲ್ಲಿ ಹುಣಸೆಹುಳಿ, ಬೆಲ್ಲ ಹಾಗೂ ಡೇಟ್ಸ್ ತೆಗೆದುಕೊಳ್ಳಿ. ಇದಕ್ಕೆ 2 ಲೋಟ ನೀರು ಹಾಕಿ. ಎಲ್ಲವನ್ನು ಸೌಟಿನಲ್ಲಿ ಚೆನ್ನಾಗಿ ಮಿಕ್ಸ್ ಮಾಡಿ 10 ನಿಮಿಷ ಕಾಲ ಕುದಿಸಿ.
ಇದಕ್ಕೆ ಮೆಂತ್ಯೆ ಪುಡಿ, ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ಮೆಣಸಿನ ಪುಡಿ, ಒಣಶುಂಠಿ ಪುಡಿ ಹಾಗೂ ಉಪ್ಪು ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಹುಣಸೆ ಹಾಗೂ ಡೇಟ್ಸ್‌ನ್ನು ಚೆನ್ನಾಗಿ ಮ್ಯಾಶ್ ಮಾಡಿ. ಇದನ್ನು ಮತ್ತೆರಡು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ. ಈ ಮಿಕ್ಸ್ಚರ್ ತಣ್ಣಗಾಗಲು ಬಿಡಿ. ತಣ್ಣಗಾದ ಮಿಕ್ಸ್ಚರನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ಬ್ಲೆಂಡ್ ಮಾಡಿ. ಇದನ್ನು ಬೇಕಿದ್ದರೆ ಸೋಸಿ ಸ್ಮೂತ್ ಪೇಸ್ಟ್ ಉಳಿಸಿಕೊಳ್ಳಬಹುದು. ಅಲ್ಲಿಗೆ ಹುಣಸೆಹುಳಿ ಚಟ್ನಿ ರೆಡಿ.