ಈರುಳ್ಳಿ ಇಲ್ಲದೆ ಮಸಾಲೆ ಆಹಾರಕ್ಕೆ ರುಚಿ ಇಲ್ಲ ಬಿಡಿ. ಈರುಳ್ಳಿ ಹಾಕಿದ್ರೆ ಅದ್ರ ಮಜವೇ ಬೇರೆ. ಅದ್ರಲ್ಲೂ ಹಸಿ ಈರುಳ್ಳಿ ಆಹಾರದ ಸುವಾಸನೆ ಕೂಡ ಹೆಚ್ಚಿಸುತ್ತೆ. ಆದ್ರೆ ಎಲ್ಲರಿಗೂ ಈ ಈರುಳ್ಳಿ ಆಗಿಬರಲ್ಲ.
ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟದಲ್ಲಿ ನಾವು ಏನೆ ತಿನ್ನಲಿ, ಈರುಳ್ಳಿಯಂತೂ ಸ್ಥಾನ ಪಡೆದಿರುತ್ತದೆ. ದೋಸೆಯಿಂದ ಹಿಡಿದು ಫಾಸ್ಟ್ ಫುಡ್ ವರೆಗೆ ಎಲ್ಲದಕ್ಕೂ ಈರುಳ್ಳಿ ಬಳಕೆ ಮಾಡಲಾಗುತ್ತದೆ. ನೆಚ್ಚಿಕೊಳ್ಳೋಕೆ ಈರುಳ್ಳಿ ಇದ್ರೆ ಸಾಕು, ಮೊಸರನ್ನ ಕೂಡ ತಿನ್ನಬಹುದು ಎನ್ನುವವರಿದ್ದಾರೆ. ಪ್ರತಿಯೊಬ್ಬರ ಮನೆಯ ಅಡುಗೆ ಮನೆಯಲ್ಲಿ ಸ್ಥಾನ ಪಡೆದಿರುವ ಈರುಳ್ಳಿಗೆ ವಿಶೇಷ ಸ್ಥಾನ ನೀಡಲಾಗಿದೆ. ಈರುಳ್ಳಿ ಇಲ್ದೆ ಅಡುಗೆ ಕಷ್ಟ ಎನ್ನುವವರು ಈರುಳ್ಳಿ ಪ್ರಯೋಜನದ ಜೊತೆ ನಷ್ಟದ ಬಗ್ಗೆಯೂ ಮಾಹಿತಿ ಹೊಂದಿರಬೇಕು. ಎಲ್ಲ ಆಹಾರದಂತೆಯೇ ಈರುಳ್ಳಿ ಕೂಡ ಅತಿಯಾದ್ರೆ ವಿಷದಂತೆ ಕೆಲಸ ಮಾಡುತ್ತದೆ. ನಾವಿಂದು ಈರುಳ್ಳಿ ಲಾಭದ ಜೊತೆ ನಷ್ಟದ ಬಗ್ಗೆಯೂ ನಿಮಗೆ ಮಾಹಿತಿ ನೀಡ್ತೇವೆ.
ಈರುಳ್ಳಿ (Onion) ಯಲ್ಲಿ ಕಂಡುಬರುವ ಪೋಷಕಾಂಶ (Nutrient) ಯಾವುದು ಗೊತ್ತಾ? : ಈರುಳ್ಳಿಯಲ್ಲಿ ಸೋಡಿಯಂ, ಪೊಟ್ಯಾಸಿಯಮ್, ಫೋಲೇಟ್‌ಗಳು, ವಿಟಮಿನ್ ಎ, ಸಿ ಮತ್ತು ಇ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ ಮತ್ತು ರಂಜಕ ಕಂಡುಬರುತ್ತದೆ. ಈರುಳ್ಳಿ ಉರಿಯೂತ ನಿವಾರಕ, ಅಲರ್ಜಿ ನಿವಾರಕ, ಆ್ಯಂಟಿ ಆಕ್ಸಿಡೆಂಟ್ ಮತ್ತು ಆ್ಯಂಟಿ ಕಾರ್ಸಿನೋಜೆನಿಕ್ ಗುಣಗಳನ್ನು ಹೊಂದಿದೆ. ಈರುಳ್ಳಿಯನ್ನು ಇದೇ ಕಾರಣಕ್ಕೆ ಸೂಪರ್ ಫುಡ್ ಎಂದೂ ಕರೆಯಲಾಗುತ್ತದೆ.
Summer Food: ಬೇಸಿಗೆಯಲ್ಲಿ ಈ ಜ್ಯೂಸ್ ಸೇವಿಸಿ ಕೂಲ್ ಆಗಿ
ಈರುಳ್ಳಿ ಸೇವನೆಯಿಂದ ಆಗುವ ಲಾಭಗಳೇನು? :
ಹೃದಯ (Heart) ದ ಆರೋಗ್ಯ (Health) : ಈರುಳ್ಳಿಯಲ್ಲಿ ಫ್ಲೇವನಾಯ್ಡ್ ಗಳು ಕಂಡು ಬರುವ ಕಾರಣ ಇದು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ನೆರವಾಗುತ್ತದೆ. ಈರುಳ್ಳಿಯಲ್ಲಿರುವ ಥಿಯೋ ಸಲ್ಫೈಟ್ಸ್ ರಕ್ತವನ್ನು ಸ್ಥಿರಗೊಳಿಸಲು ಕೆಲಸ ಮಾಡುತ್ತದೆ. ಹಾಗಾಗಿ ಈರುಳ್ಳಿ ಹೃದಯಾಘಾತ ಹಾಗೂ ಹೃದಯಕ್ಕೆ ಸಂಬಂಧಿಸಿದ ಅಪಾಯವನ್ನು ತಡೆಯುವ ಕೆಲಸ ಮಾಡುತ್ತದೆ.
ಕ್ಯಾನ್ಸರ್ ತಡೆಯಲು ಈರುಳ್ಳಿ ಪ್ರಯೋಜನಕಾರಿ : ಈರುಳ್ಳಿಯಲ್ಲಿರುವ ಅನೇಕ ಗುಣಲಕ್ಷಣಗಳು ಕ್ಯಾನ್ಸರ್ ವಿರುದ್ಧ ಹೋರಾಡಲು ನೆರವಾಗುತ್ತವೆ. ಈರುಳ್ಳಿಯಲ್ಲಿರುವ ಗಂಧಕದ ಜೀವಕೋಶಗಳ ಸರಿಯಾದ ಬೆಳವಣಿಗೆಗೆ ನೆರವಾಗುತ್ತದೆ.
Mango Benefit : ಮಧುಮೇಹಿಗಳಿಗೆ ಮಾವು ನಿಷಿದ್ಧ, ಆದ್ರೆ ಹೀಗ್ ತಿನ್ನಬಹುದು!
ಕೂದಲಿನ ಬೆಳವಣಿಗೆಗೆ ಈರುಳ್ಳಿ ಸಹಕಾರಿ : ಕೂದಲಿನ ಆರೋಗ್ಯಕ್ಕೆ ಈರುಳ್ಳಿ ಸಹಕಾರಿ. ಕೂದಲಿಗೆ ಬಲ ನೀಡುವ ಕೆಲಸವನ್ನು ಈರುಳ್ಳಿ ಮಾಡುತ್ತದೆ. ಈರುಳ್ಳಿಯಲ್ಲಿರುವ ಆಂಟಿಬ್ಯಾಕ್ಟೀರಿಯಲ್, ಆಂಟಿಫಂಗಲ್ ಮತ್ತು ಆಂಟಿಆಕ್ಸಿಡೆಂಟ್ ಕೂದಲಿನ ಸೌಂದರ್ಯ ಹೆಚ್ಚಿಸುತ್ತದೆ. ಕೂದಲು ದಪ್ಪವಾಗಲು ಈರುಳ್ಳಿ ಬಳಸುವಂತೆ ತಜ್ಞರು ಸಲಹೆ ನೀಡ್ತಾರೆ. ತಲೆ ಹೊಟ್ಟಿಗೂ ಇದು ಮದ್ದು.
ಈರುಳ್ಳಿಂದ ಇದೆ ಈ ಎಲ್ಲ ನಷ್ಟ : ಸಾಕಷ್ಟು ಔಷಧಿ ಗುಣವನ್ನು ಹೊಂದಿರುವ ಈರುಳ್ಳಿ ಕೂಡ ಆರೋಗ್ಯ ಹದಗೆಡಿಸುವ ಕೆಲಸ ಮಾಡುತ್ತದೆ.
ಗ್ಯಾಸ್ ಗೆ ಕಾರಣ : ಈರುಳ್ಳಿಯನ್ನು ನಾವು ಹೇಗೆ ಸೇವನೆ ಮಾಡ್ತೇವೆ ಎಂಬುದು ಮುಖ್ಯವಾಗುತ್ತದೆ. ಹಸಿ ಈರುಳ್ಳಿಯನ್ನು ಅತಿಯಾಗಿ ಸೇವನೆ ಮಾಡಿದ್ರೆ ಹೊಟ್ಟೆ ಕೆಡುತ್ತದೆ. ಗ್ಯಾಸ್ ಸಮಸ್ಯೆ ತಲೆದೂರುತ್ತದೆ. ಅಸಿಡಿಟಿ, ವಾಕರಿಕೆ ಮತ್ತು ಹೊಟ್ಟೆ ನೋವಿನಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಗ್ಯಾಸ್ ಸಮಸ್ಯೆ ನಿಮಗಿದೆ ಎಂದಾದ್ರೆ ಹಸಿ ಈರುಳ್ಳಿ ಸೇವಿಸುವ ಸಹವಾಸಕ್ಕೆ ಹೋಗ್ಬೇಡಿ.
ಸಕ್ಕರೆ ಮಟ್ಟ ಕಡಿಮೆ ಇದ್ರೆ ಈರುಳ್ಳಿ ಬಳಸಬೇಡಿ : ನಮ್ಮ ರಕ್ತದಲ್ಲಿ ಸಕ್ಕರೆ ಮಟ್ಟ ಕಡಿಮೆಯಿದೆ ಎಂದಾದ್ರೆ ನೀವು ಈರುಳ್ಳಿ ತಿನ್ನದೆ ಇರುವುದು ಒಳ್ಳೆಯದು. ಈರುಳ್ಳಿಯ ಅತಿಯಾದ ಸೇವನೆಯಿಂದ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚು ಕಡಿಮೆಯಾಗಬಹುದು. ಸಕ್ಕರೆ ಪ್ರಮಾಣ ಕಡಿಮೆಯಾದ್ರೆ ಮೂರ್ಛೆ ಹೋಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಬಳಸುವ ಮುನ್ನ ವೈದ್ಯರ ಸಲಹೆ ಪಡೆಯಿರಿ.
ಗರ್ಭಾವಸ್ಥೆಯಲ್ಲಿ ಎಚ್ಚರ : ಗರ್ಭಿಣಿಯರಿಗೆ ಗ್ಯಾಸ್, ಎದೆಯುರಿ ಮತ್ತು ವಾಂತಿ ಸಮಸ್ಯೆ ಸಾಮಾನ್ಯವಾಗಿರುತ್ತದೆ. ಹೊಟ್ಟೆಯಲ್ಲಿನ ಸಮಸ್ಯೆ ಮಗುವಿನ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ಗರ್ಭಿಣಿಯರು ಈರುಳ್ಳಿಯನ್ನು ಕಡಿಮೆ ಪ್ರಮಾಣದಲ್ಲಿ ತಿನ್ನಬೇಕು.