
ದುಬೈ(ನ.26) ಭಾರತೀಯರು ಪ್ರತಿ ದಿನ ಕನಿಷ್ಠ 3 ರಿಂದ 5 ಬಾರಿ ಟೀ ಕುಡಿಯುತ್ತಾರೆ. ಕೆಲವರು ಇನ್ನೂ ಹಚ್ಚು. ಮನೆಯಲ್ಲೇ ಆಗಲಿ, ಹೊರಗೆ ಆಗಲಿ ಭಾರತೀಯರ ದಿನ ಆರಂಭಗೊಳ್ಳುವುದೇ ಟೀ ಅಥವಾ ಕಾಫಿಯಿಂದ. 15 ರೂಪಾಯಿ, ಕೆಫೆ ಸೇರಿದಂತೆ ಇತರೆಡೆ 100 ರಿಂದ ಸಾವಿರ ರೂಪಾಯಿ ಬೆಲೆಯ ಟೀ, ಕಾಫಿ ಇದೆ. ಆದರೆ ಭಾರತೀಯ ಮೂಲದ ಸುಚೇತಾ ಶರ್ಮಾ ನಡೆಸುತ್ತಿರುವ ಬೊಹೊ ಕೆಫೆಯಲ್ಲಿ ಒಂದು ಕಪ್ ಗೋಲ್ಡ್ ಚಾಯ್ ಬೆಲೆ ಬರೋಬ್ಬರಿ 1 ಲಕ್ಷ ರೂಪಾಯಿ. ಹೌದು, 1 ಲಕ್ಷ ರೂಪಾಯಿ, ಇದರಲ್ಲಿ ಚೌಕಾಸಿ ಇಲ್ಲ.
ದುಬೈನಲ್ಲಿ ಬೊಹೊ ಕೆಫೆ ಅನ್ನೋ ರೆಸ್ಟೋರೆಂಟ್ ನಡೆಸುತ್ತಿರುವ ಸುಚೇತಾ ಶರ್ಮಾ ಹೊಸ ಗೋಲ್ಡ್ ಚಾಯ್ ಪರಿಚಯಿಸಿದ್ದಾರೆ. ಇದರ ಬೆಲೆ ಮಾತ್ರ ದುಬಾರಿ. ಇದು ಚಿನ್ನ ಲೇಪಿತ ಚಾಯ್. ಅತ್ಯುತ್ತಮ ಸ್ವಾದವುಳ್ಳ ಟೀಯನ್ನು ನೀಡಲಾಗುತ್ತದೆ. ಈ ಚಹಾ ಮೇಲೆ 24 ಕಾರೆಟ್ ಗೋಲ್ಡ್ ತೆಳು ಪದರವನ್ನು ಸೇರಿಸಲಾಗುತ್ತದೆ. ಹೀಗಾಗಿ ಚಿನ್ನ ಲೇಪಿತ ಚಾಯ್ ಇದು. ಇಲ್ಲಿ ಗೋಲ್ಡ್ ಚಾಯ್ ಆರ್ಡರಿ ಮಾಡಿದರೆ ಹಲವು ವಿಶೇಷತೆಗಳಿವೆ. ಗೋಲ್ಡ್ ಚಾಯ್‌ನ್ನು ಸಂಪೂರ್ಣ ಶುದ್ಧ ಬೆಳ್ಳಿ ಲೋಟದಲ್ಲಿ ನೀಡಲಾಗುತ್ತದೆ. ಇದರ ಜೊತೆಗೆ ಕ್ರೊಯಿಸ್ಯಾಂಟ್ ತಿನಿಸನ್ನು ನೀಡಲಾಗುತ್ತದೆ.
ಟಾಟಾ ಒಡೆತನದ ಮುಂಬೈನ ಐಷಾರಾಮಿ ತಾಜ್ ಹೊಟೆಲ್‌ನಲ್ಲಿ ಟೀ ಬೆಲೆ ಎಷ್ಟು?
ಇನ್ನು ಚಹಾ ಬೇಡ ಎಂದರೆ ಕಾಫಿ ಕೂಡ ಲಭ್ಯವಿದೆ. ಆದರೆ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಇದು ಸಣ್ಣ ಕೆಫೆಯಾದರೂ ಬೆಲೆ ದುಬಾರಿ. ಇದೀಗ ಬೊಹೊ ಕೆಫೆಯಲ್ಲಿ ಚಾಯ್‌ಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಇಲ್ಲಿ ಟೀ, ಕಾಫಿ ಮಾತ್ರವಲ್ಲ, ಇತರ ಖಾದ್ಯಗಳು ಲಭ್ಯವಿದೆ. ದುಬೈನ DIFC ಎಮಿರೇಟ್ಸ್ ಫಿನಾನ್ಶಿಯಲ್ ಟವರ್‌ನಲ್ಲಿ ಈ ಬೊಹೋ ಕೆಫೆ ಇದೆ.
ಈ ದುಬಾರಿ ಗೋಲ್ಡ್ ಚಾಯ್ ಕುರಿತ ಫುಡ್ ವ್ಲಾಗರ್ ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ. ಈ ವಿಡಿಯೋ ಭಾರಿ ಲೈಕ್ಸ್ ಹಾಗೂ ವೀಕ್ಷಣೆ ಪಡೆದಿದೆ. ಜೊತೆಗೆ ಹಲವರು ಕಮೆಂಟ್ ಮಾಡುತ್ತಿದ್ದಾರೆ. ಒಂದು ಕಪ್ ಚಹಾ ಬೆಲೆ 1 ಲಕ್ಷ ರೂಪಾಯಿ ನಂಬಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಹಲವರು ಟ್ರೋಲ್ ಮಾಡಿದ್ದಾರೆ. ಬೊಹೊ ಕೆಫೆಯಲ್ಲಿ ಗೋಲ್ಡ್ ಚಾಯ್ ಕುಡಿದ ಬಳಿಕ ಬಿಲ್ ತೆಗೆದುಕೊಂಡು ಕಸ್ಟಮ್ಸ್ ಅಧಿಕಾರಿಗಳಿಗೆ ನೀಡಬೇಕು. ಇಲ್ಲದಿದ್ದರೆ ನಿಮ್ಮನ್ನು ಹೊಟ್ಟೆಯೊಳಗೆ ಚಿನ್ನ ಸಾಗಿಸುತ್ತಿದ್ದೀರಿ ಎಂದು ಅರೆಸ್ಟ್ ಮಾಡುತ್ತಾರೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ನಾವು ಕಚೇರಿ ಕೆಳಗೆ ಒಂದಿಬ್ಬರನ್ನು ಕರೆದುಕೊಂಡು ಚಹಾ ಕುಡಿದು ಬರೋಣ ಎಂದು ಹೇಳುತ್ತೇವೆ. ಬಳಿಕ ಅವರ ಚಹಾ ಹಣವನ್ನು ಪಾವತಿಸುತ್ತೇವೆ. ಆದರೆ ಈ 1ಲಕ್ಷ ರೂಪಾಯಿ ಚಹಾ ಕುಡಿಯಲು ಸಾಲ ಮಾಡಬೇಕು, ಇಎಂಐ ಕಟ್ಟಬೇಕಾಗುತ್ತದೆ ಎಂದು ಹಲವರು ಕಮೆಂಟ್ ಮಾಡಿದ್ದರೆ. ಈ ದುಬಾರಿ ಮೊತ್ತ ಪಾವತಿಸಿ ಹಲವರು ಈ ಚಹಾ ಕುಡಿಯುತ್ತಾರೆ. ಯಾರಿಗೆ ದುಡ್ಡಿನ ಮೌಲ್ಯ ಗೊತ್ತಿಲ್ಲವೋ ಅವರೆ ಕುಡಿಯಬೇಕು ಎಂದು ಕಮೆಂಟ್ ಮಾಡಿದ್ದಾರೆ.
ಜಗತ್ತಿನ ದುಬಾರಿ ಚಹಾಗಳಲ್ಲಿ ಬೊಹೊ ಕೆಫೆಯ ಗೋಲ್ಡ್ ಚಾಯ್ ಮುಂಚೂಣಿಯಲ್ಲಿದೆ. ಭಾರತದಲ್ಲಿ ಈ ರೀತಿ ದುಬಾರಿ ಚಹಾ,ಕಾಫಿ ಪರಿಸ್ಥಿತಿ ಬರದೇ ಇರಲಿ ಎಂದು ಹಲವರು ಪ್ರಾರ್ಥಿಸಿದ್ದಾರೆ. ನಿಜಕ್ಕೂ ಈ ಚಹಾಗೆ 1 ಲಕ್ಷ ರೂಪಾಯಿ ಕೊಡಬಹುದಾ? ಜನರಲ್ಲಿ ದುಡ್ಡಿದ ಎಂದ ಮಾತ್ರಕ್ಕೆ ಈ ರೀತಿ ಹೈಟೆಕ್ ಮೋಸ ಮಾಡುವುದು ಸರಿಯೆ ಅನ್ನೋ ಪ್ರಶ್ನೆಗಳನ್ನು ಕೇಳಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.