ಬರೀ ಬೇಯಿಸಿದ ಮೊಟ್ಟೆ ತಿಂದು ಬೇಸರವಾಗಿದ್ಯಾ? ಈ ರೀತಿ ಮಾಡಿ ನೋಡಿ, ಹತ್ತು ತುತ್ತು ಎಕ್ಸ್ಟ್ರಾ ತಿನ್ನದಿದ್ರೆ ಕೇಳಿ

Published : Mar 29, 2026, 03:25 PM IST
egg

ಸಾರಾಂಶ

Easy egg recipes for home: ಪ್ರತಿದಿನ ಅದೇ ಬೇಯಿಸಿದ ಮೊಟ್ಟೆ ತಿಂದು ಬೇಸರವಾಗಿದೆಯೇ?, ಹಾಗಾದರೆ ಈ ಸಣ್ಣ ಬದಲಾವಣೆ ಮಾಡಿ ನೋಡಿ. ಅಡುಗೆ ಮನೆಯಲ್ಲಿರೋ ಸಾಧಾರಣ ಮಸಾಲೆಯಲ್ಲೇ ಮೊಟ್ಟೆಗೆ ಹೊಸ ರುಚಿ ನೀಡಬಹುದು. ಈ ರೀತಿ ಒಮ್ಮೆ ಮಾಡಿದರೆ, ಮೊಟ್ಟೆ ಬೇಡ ಅನ್ನೋರು ಕೂಡ ಚಪ್ಪರಿಸಿ ತಿನ್ನುತ್ತಾರೆ. ಒಂದು ತುತ್ತು ತಿನ್ನೋ ಜಾಗದಲ್ಲಿ ಹತ್ತು ತುತ್ತು ತಿನ್ನುವಷ್ಟು ರುಚಿಯಾಗಿರೋ ಈ ' Chilli Oil Eggs' ರೆಸಿಪಿ ನಿಮಗಾಗಿ ಇಲ್ಲಿದೆ. 

ರೋಗ್ಯಕ್ಕೆ ಮೊಟ್ಟೆ ಒಳ್ಳೆಯದು ಸರಿ. ಆದರೆ ಪ್ರತಿದಿನ ಒಂದೇ ರೀತಿ ಬೇಯಿಸಿದ ಮೊಟ್ಟೆ ತಿನ್ನುವುದೆಂದರೆ ಸ್ವಲ್ಪ ಕಷ್ಟವೇ. ಆದರೆ ಮನೆಯಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುವಂತೆ ಮೊಟ್ಟೆಯ ರುಚಿಯನ್ನು ಹೇಗೆ ಹೆಚ್ಚಿಸಬಹುದು ಎಂಬುದಕ್ಕೆ ಇಲ್ಲಿದೆ ಒಂದು ಅದ್ಭುತ ಐಡಿಯಾ. ಖ್ಯಾತ ಶೆಫ್ ಸಂಜೀವ್ ಕಪೂರ್ ಅವರು ಹಂಚಿಕೊಂಡಿರುವ ಈ ಸುಲಭವಾದ 'ಚಿಲ್ಲಿ ಆಯಿಲ್ ಎಗ್ಸ್' ವಿಧಾನವು ನಿಮ್ಮ ಅಡುಗೆ ಮನೆಯಲ್ಲಿ ಹೊಸ ಹವಾ ಸೃಷ್ಟಿಸುವುದರಲ್ಲಿ ಸಂಶಯವೇ ಇಲ್ಲ ಬಿಡಿ.

ಮನೆಯಲ್ಲೇ ಮಾಡಿ ಸ್ಪೈಸಿ ಮೊಟ್ಟೆ ಮಸಾಲೆ!

ಆರೋಗ್ಯದ ದೃಷ್ಟಿಯಿಂದ ಮೊಟ್ಟೆ ಒಂದು ಅದ್ಭುತ ಆಹಾರ. ಒಂದು ದೊಡ್ಡ ಮೊಟ್ಟೆಯಲ್ಲಿ ಸುಮಾರು 6.3 ಗ್ರಾಂನಷ್ಟು ಪ್ರೊಟೀನ್ ಇರುತ್ತದೆ. ಆದ್ದರಿಂದಲೇ ತೂಕ ಇಳಿಸಿಕೊಳ್ಳುವವರು ಅಥವಾ ಸ್ನಾಯುಗಳ ಬೆಳವಣಿಗೆ ಬಯಸುವವರು ದಿನಾ ಮೊಟ್ಟೆ ತಿನ್ನುತ್ತಾರೆ. ಆದರೆ ದಿನವೂ ಬರೀ ಬಾಯ್ಲ್ಡ್ ಎಗ್ಸ್ ತಿಂದರೆ ಮನಸ್ಸಿಗೆ ತೃಪ್ತಿ ಸಿಗುವುದಿಲ್ಲ. ಅದಕ್ಕಾಗಿಯೇ ರುಚಿಕರವಾದ ಮಸಾಲೆ ಬಳಸಿ ಮೊಟ್ಟೆಯ ವಿಶೇಷ ಖಾದ್ಯವನ್ನು ಸಿದ್ಧಪಡಿಸಬಹುದು. ಇದು ಬೆಳಗಿನ ಟಿಫಿನ್ ಅಥವಾ ಸಾಯಂಕಾಲದ ಕಾಫಿ ಸಮಯಕ್ಕೆ ಹೇಳಿ ಮಾಡಿಸಿದ ಸ್ನ್ಯಾಕ್ಸ್.

ಬೇಕಾಗುವ ಸಾಮಗ್ರಿಗಳು
ಮೊಟ್ಟೆ:4
ಹಸಿಮೆಣಸಿನಕಾಯಿ:6 ರಿಂದ 7 (ಸಣ್ಣದಾಗಿ ಹೆಚ್ಚಿದ್ದು)
ಎಣ್ಣೆ:ಅರ್ಧ ಕಪ್
ಬೆಳ್ಳುಳ್ಳಿ:8 ರಿಂದ 10 ಎಸಳು (ಸಣ್ಣದಾಗಿ ಹೆಚ್ಚಿದ್ದು)
ಶುಂಠಿ:1 ಇಂಚು (ತುರಿದಿದ್ದು)
ಹಸಿ ಈರುಳ್ಳಿ (Spring Onions):3 (ಸಣ್ಣದಾಗಿ ಹೆಚ್ಚಿದ್ದು)
ಕೊರಿಯನ್ ನೂಡಲ್ಸ್ ಮಸಾಲಾ:2 ಚಮಚ (ರುಚಿಗಾಗಿ)
ಬಿಳಿ ಎಳ್ಳು:2 ಚಮಚ
ವಿನೆಗರ್:2 ಚಮಚ
ಉಪ್ಪು:ರುಚಿಗೆ ತಕ್ಕಷ್ಟು

ಮಾಡುವ ಸುಲಭ ವಿಧಾನ

ಪರ್ಫೆಕ್ಟ್ ಆಗಿ ಮೊಟ್ಟೆ ಬೇಯಿಸಿ
ಮೊದಲು ಒಂದು ಅಗಲವಾದ ಪಾತ್ರೆಯಲ್ಲಿ ನೀರು ಹಾಕಿ ಮೊಟ್ಟೆಗಳನ್ನು 12 ನಿಮಿಷ ಬೇಯಿಸಿ.

ಶೆಫ್ ಟಿಪ್ಸ್
ಬೆಂದ ತಕ್ಷಣ ಮೊಟ್ಟೆಯನ್ನು ಐಸ್ ನೀರಿಗೆ ಅಥವಾ ತಣ್ಣೀರಿಗೆ ಹಾಕಿ. ಇದರಿಂದ ಸಿಪ್ಪೆ ಸುಲಭವಾಗಿ ಬರುತ್ತದೆ ಮತ್ತು ಮೊಟ್ಟೆಯ ಹಳದಿ ಭಾಗ ಕಪ್ಪಾಗುವುದಿಲ್ಲ. ಸಿಪ್ಪೆ ತೆಗೆದ ನಂತರ ಮೊಟ್ಟೆಯನ್ನು ಉದ್ದಕ್ಕೆ ಎರಡು ಭಾಗವಾಗಿ ಕತ್ತರಿಸಿ.

ಮಸಾಲೆ ತಯಾರಿಸಲು
ಒಂದು ಬೌಲ್‌ನಲ್ಲಿ ಸಣ್ಣದಾಗಿ ಹೆಚ್ಚಿದ ಬೆಳ್ಳುಳ್ಳಿ, ಶುಂಠಿ, ಹಸಿಮೆಣಸಿನಕಾಯಿ ಮತ್ತು ಹಸಿ ಈರುಳ್ಳಿಯನ್ನು ಹಾಕಿಕೊಳ್ಳಿ. ಇದಕ್ಕೆ ಸ್ವಲ್ಪ ವಿನೆಗರ್ ಸೇರಿಸಿ.

ಚಿಲ್ಲಿ ಆಯಿಲ್ ಮ್ಯಾಜಿಕ್
ಈಗ ಒಂದು ಪುಟ್ಟ ಪ್ಯಾನ್‌ನಲ್ಲಿ ಎಣ್ಣೆಯನ್ನು ಹೊಗೆ ಬರುವಂತೆ ಕಾಯಿಸಿ. ಈ ಕಾದ ಎಣ್ಣೆಯನ್ನು ನೇರವಾಗಿ ಮಸಾಲೆ ತಯಾರಿಸಿದ ಬೌಲ್‌ಗೆ ಸುರಿಯಿರಿ. ಎಣ್ಣೆ ಹಾಕಿದಾಗ ಬರುವ ಆ ಘಮವೇ ಈ ಖಾದ್ಯದ ಜೀವಾಳ! ನಂತರ ಇದಕ್ಕೆ ನೂಡಲ್ಸ್ ಮಸಾಲಾ, ಬಿಳಿ ಎಳ್ಳು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ.

ಸರ್ವಿಂಗ್
ಈಗ ಕತ್ತರಿಸಿಟ್ಟ ಮೊಟ್ಟೆಗಳ ಮೇಲೆ ಈ ಮಸಾಲೆಯುಕ್ತ ಎಣ್ಣೆಯನ್ನು ಚಮಚದಿಂದ ಹರಡಿ. ಬಿಸಿ ಬಿಸಿಯಾಗಿ ಸವಿಯಿರಿ.

ಗೃಹಿಣಿಯರಿಗಾಗಿ ವಿಶೇಷ ಕಿಚನ್ ಟಿಪ್ಸ್ (Kitchen Tips)
ಮೊಟ್ಟೆ ಒಡೆಯದಂತೆ ತಡೆಯಲು
ಮೊಟ್ಟೆ ಬೇಯಿಸುವಾಗ ನೀರಿಗೆ ಅರ್ಧ ಚಮಚ ಉಪ್ಪು ಅಥವಾ ಸ್ವಲ್ಪ ವಿನೆಗರ್ ಹಾಕಿದರೆ ಮೊಟ್ಟೆ ಬೇಗನೆ ಒಡೆಯುವುದಿಲ್ಲ ಮತ್ತು ಸಿಪ್ಪೆ ಸುಲಭವಾಗಿ ಬರುತ್ತದೆ.

ಮಸಾಲೆಯ ರುಚಿ ಹೆಚ್ಚಿಸಲು
ಒಂದು ವೇಳೆ ನಿಮ್ಮ ಬಳಿ ಕೊರಿಯನ್ ನೂಡಲ್ಸ್ ಮಸಾಲಾ ಇಲ್ಲದಿದ್ದರೆ, ಮನೆಯಲ್ಲಿರುವ ಮ್ಯಾಗಿ ಮಸಾಲಾ ಅಥವಾ ಗರಂ ಮಸಾಲಾದ ಜೊತೆಗೆ ಸ್ವಲ್ಪ ಕೆಂಪು ಮೆಣಸಿನ ಪುಡಿ ಬಳಸಬಹುದು.

ಹಸಿ ಈರುಳ್ಳಿ ಫ್ರೆಶ್ ಆಗಿರುತ್ತೆ
ಹಸಿ ಈರುಳ್ಳಿ (Spring Onions) ಬೇಗ ಬಾಡಿ ಹೋಗದಂತೆ ತಡೆಯಲು, ಅದನ್ನು ತಂದ ತಕ್ಷಣ ಪೇಪರ್‌ನಲ್ಲಿ ಸುತ್ತಿ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಗಾಳಿ ಹೋಗದಂತೆ ಇಟ್ಟರೆ ಒಂದು ವಾರ ತಾಜಾವಾಗಿರುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸೌತೆಕಾಯಿಯ ಸಕತ್​ ಟೇಸ್ಟಿ ಹೊಸ ರೆಸಿಪಿ ಈ ಬೇಸಿಗೆಗಾಗಿ: ಖ್ಯಾತ ಷೆಫ್​ ಕುನಾಲ್ ಕಪೂರ್ ಹೇಳಿದ್ದಾರೆ ನೋಡಿ
Leftovers: ರಾತ್ರಿ ಉಳಿದ ಅನ್ನ, ಚಿಕನ್, ಪಿಜ್ಜಾ ತಿನ್ನುವ ಮುನ್ನ ಎಚ್ಚರ! ಫುಡ್ ಪಾಯ್ಸನಿಂಗ್ ಅಪಾಯ ಕಾದಿದೆ