ಕುಕ್ಕರ್ ಬಳಸದೆ, ರೆಡಿಮೇಡ್ ಮಸಾಲೆ ಇಲ್ಲದೆ ಪಾತ್ರೆಯಲ್ಲೇ ಮಾಡಿ ಮಂಡ್ಯ ಸ್ಟೈಲ್ ನಾಟಿ ಕೋಳಿ ಸಾರು

Published : Sep 15, 2026, 09:04 PM IST
Mandya nati koli saaru

ಸಾರಾಂಶ

Mandya nati koli saaru: ಮಂಡ್ಯ ಶೈಲಿಯ ನಾಟಿಕೋಳಿ ಸಾರಿನ ಅಸಲಿ ರುಚಿಗೆ ಅವರು ಮನೆಯಲ್ಲೇ ಕೈಯಾರೆ ಕುಟ್ಟಿ ತಯಾರಿಸುವ ಸಾಂಪ್ರದಾಯಿಕ ಸಾಂಬಾರ್ ಪುಡಿಯೇ ಮುಖ್ಯ ಗುಟ್ಟು. ಮತ್ಯಾಕೆ ತಡ, ಮಾಡೋ ವಿಧಾನ ನೋಡೋಣ ಬನ್ನಿ..

ಮಂಡ್ಯದ ಕಡೆ ಕಾಲಿಟ್ಟರೆ ಸಾಕು, ಹಳ್ಳಿ ಮನೆಗಳ ಒಲೆಯ ಮೇಲೆ ಕುದಿಯುತ್ತಿರುವ ನಾಟಿಕೋಳಿ ಸಾರಿನ ಘಮಲು ಮೂಗಿಗೆ ಬಡಿಯದೆ ಇರದು! ರುಚಿಯ ಜೊತೆಗೆ ಆರೋಗ್ಯಕ್ಕೂ ಹಿತವಾಗಿರುವ, ಅಜ್ಜಿಯ ಕಾಲದ, ಸಾಂಪ್ರದಾಯಿಕ ವಿಧಾನದಲ್ಲೇ ಸಿದ್ಧವಾಗುವ ಮಂಡ್ಯ ಸ್ಪೆಷಲ್ ನಾಟಿಕೋಳಿ ಸಾರಿನ ರೆಸಿಪಿಯೆಂದರೆ ಆಹಾರ ಪ್ರಿಯರಿಗೆ ಎಲ್ಲಿಲ್ಲದ ಪ್ರೀತಿ. ಅಂದಹಾಗೆ ಯಾವುದೇ ರೆಡಿಮೇಡ್ ಮಸಾಲೆ ಇಲ್ಲದೆ, ಹಳ್ಳಿ ಶೈಲಿಯಲ್ಲೇ ಕಲ್ಲಿನಲ್ಲಿ ರುಬ್ಬಿದ ಮಸಾಲೆ ಬಳಸಿ ತಯಾರಿಸುವ ಈ ಘಮಘಮಿಸುವ ಸಾರಿನ ಸಂಪೂರ್ಣ ಪಾಕವಿಧಾನ ಇಲ್ಲಿದೆ.

ಮಂಡ್ಯ ಶೈಲಿಯ ನಾಟಿಕೋಳಿ ಸಾರಿಗೆ ಬೇಕಾಗುವ ಸಾಮಗ್ರಿಗಳು

ನಾಟಿಕೋಳಿ ಮಾಂಸ – 1 ಕೆ.ಜಿ.

ಒಗ್ಗರಣೆಗೆ
ಅಡುಗೆ ಎಣ್ಣೆ – 3 ರಿಂದ 4 ಚಮಚ
ಈರುಳ್ಳಿ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ – 2 ಚಮಚ (ಕಲ್ಲಿನಲ್ಲಿ ರುಬ್ಬಿದ್ದು)
ಅರಿಶಿನ ಪುಡಿ – ½ ಚಮಚ
ಟೊಮೆಟೊ – 1 (ಹೆಚ್ಚಿದ್ದು)
ಹಸಿ ಕೊತ್ತಂಬರಿ ಸೊಪ್ಪು – ಸ್ವಲ್ಪ (ಹೆಚ್ಚಿದ್ದು)
ಉಪ್ಪು – ರುಚಿಗೆ ತಕ್ಕಷ್ಟು

ಮಸಾಲೆ ರುಬ್ಬಿಕೊಳ್ಳಲು

ತೆಂಗಿನಕಾಯಿ ತುರಿ – 1 ಕಪ್
ಈರುಳ್ಳಿ – 1 (ಮಧ್ಯಮ ಗಾತ್ರದ್ದು)
ಬೆಳ್ಳುಳ್ಳಿ – 8 ರಿಂದ 10 ಎಸಳು
ಶುಂಠಿ – 1 ಇಂಚು
ಚಕ್ಕೆ ಮತ್ತು ಲವಂಗದ ಪುಡಿ – 1 ರಿಂದ 1½ ಚಮಚ
ಹಸಿ ಕೊತ್ತಂಬರಿ ಸೊಪ್ಪು – ಸ್ವಲ್ಪ

ಖಾರ ಹಾಗೂ ಸಾರಿನ ಹದಕ್ಕೆ

ಸಾಂಬಾರ್‌ಪುಡಿ (ಮನೆಯಲ್ಲೇ ತಯಾರಿಸಿದ್ದು)– 2 ರಿಂದ3 ಚಮಚ (ಖಾರಕ್ಕೆ ತಕ್ಕಷ್ಟು)
ನೀರು – ಸಾರಿನ ಹದಕ್ಕೆ ಅಗತ್ಯವಿರುವಷ್ಟು

ಈ ನಾಟಿಕೋಳಿ ಸಾರಿನ ಅದ್ಭುತ ರುಚಿಗೆ ಅವರು ಮನೆಯಲ್ಲೇ ಸಾಂಪ್ರದಾಯಿಕವಾಗಿ ತಯಾರಿಸಿದ ಸಾಂಬಾರ್ ಪುಡಿಯೇ ಮುಖ್ಯ ಕಾರಣವಾಗಿದೆ. ಇದಕ್ಕಾಗಿ ಕಡ್ಲೆಕಾಳು, ಕೊತ್ತಂಬರಿ ಕಾಳು (ಧನಿಯಾ), ಅರಿಶಿನ ಹಾಗೂ ಮೂರು ಬಗೆಯ ಒಣ ಮೆಣಸಿನಕಾಯಿಗಳಾದ ಉತ್ತಮ ಬಣ್ಣ ನೀಡುವ ಬ್ಯಾಡಗಿ, ಖಾರ ನೀಡುವ ಗುಂಟೂರು ಮತ್ತು ಸ್ಥಳೀಯ ಕೆಮ್ಮಣ್ಣು ಮೆಣಸಿನಕಾಯಿಗಳನ್ನು ಬಳಸಲಾಗುತ್ತದೆ. ಈ ಎಲ್ಲಾ ಪದಾರ್ಥಗಳನ್ನು ಹದವಾಗಿ ಹುರಿದುಕೊಂಡು, ಮಿಕ್ಸಿಗೆ ಹಾಕುವ ಬದಲು ಒರಳಿನಲ್ಲಿ ಹಾಕಿ ಕೈಯಾರೆ ಕುಟ್ಟಿ ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಲಾಗುತ್ತದೆ. ಹೀಗೆ ಮನೆಯಲ್ಲೇ ಶುದ್ಧವಾಗಿ ಸಿದ್ಧಪಡಿಸಿದ ಸಾಂಬಾರ್ ಪುಡಿಯೇ ಸಾರಿಗೆ ನೈಜ ಹಳ್ಳಿ ಶೈಲಿಯ ಘಾಟು, ಕೆಂಪು ಬಣ್ಣ ಮತ್ತು ಅಸಲಿ ರುಚಿಯನ್ನು ತಂದುಕೊಡುತ್ತದೆ.

ತಯಾರಿಸುವ ಸರಳ ಹಂತಗಳು

ಮಾಂಸ ಫ್ರೈ ಮಾಡಿಕೊಳ್ಳಿ
ಪಾತ್ರೆಗೆ ಎಣ್ಣೆ ಹಾಕಿ. ಕಲ್ಲಿನಲ್ಲಿ ರುಬ್ಬಿದ ಶುಂಠಿ-ಬೆಳ್ಳುಳ್ಳಿ-ಈರುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ನಂತರ ಸ್ವಚ್ಛಗೊಳಿಸಿದ ನಾಟಿಕೋಳಿ ಮಾಂಸ, ಅರಿಶಿನ, ಹೆಚ್ಚಿದ ಟೊಮೆಟೊ, ಕೊತ್ತಂಬರಿ ಸೊಪ್ಪು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಬಾಡಿಸಿ, ಮಾಂಸ ನೀರು ಬಿಟ್ಟು ಬೇಯಲು ಬಿಡಿ.

ಮಸಾಲೆ ಅರೆದುಕೊಳ್ಳಿ
ತುರಿದ ತೆಂಗಿನಕಾಯಿ, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಕೊತ್ತಂಬರಿ ಸೊಪ್ಪು ಮತ್ತು ಚಕ್ಕೆ-ಲವಂಗದ ಪುಡಿಯನ್ನು ಮಿಕ್ಸಿ ಅಥವಾ ರುಬ್ಬುವ ಕಲ್ಲಿನಲ್ಲಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ.

ಸಾರು ಕುದಿಯಲು ಬಿಡಿ
ಹುರಿದ ಮಾಂಸಕ್ಕೆ ರುಬ್ಬಿದ ಮಸಾಲೆ, ಮನೆಯ ಸಾಂಬಾರ್ ಪುಡಿ ಹಾಗೂ ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿ ಚೆನ್ನಾಗಿ ಬೆರೆಸಿ.

ಕುಕ್ಕರ್ ಬಳಸದೆ ಪಾತ್ರೆಯಲ್ಲೇ ಮಾಂಸ ಮೆತ್ತಗಾಗುವವರೆಗೆ ಕುದಿಸಿ, ಕೊನೆಯಲ್ಲಿ ಮೇಲೆ ಸಣ್ಣಗೆ ಹೆಚ್ಚಿದ ಹಸಿ ಕೊತ್ತಂಬರಿ ಸೊಪ್ಪನ್ನು ಉದುರಿಸಿ ಕೆಳಗಿಳಿಸಿದರೆ ಬಿಸಿಬಿಸಿ ರಾಗಿ ಮುದ್ದೆಗೆ ಹೇಳಿಮಾಡಿಸಿದ ನಾಟಿಕೋಳಿ ಸಾರು ಸವಿಯಲು ಸಿದ್ಧ!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Curd Benefits: ದಿನಾ ಮೊಸರು ತಿಂದ್ರೆ ಸಿಗುವ ಆರೋಗ್ಯ ಪ್ರಯೋಜನಗಳಿವು
ತಳ್ಳೋ ಗಾಡಿ ಮೇಲೆ ಸಿಗೋ ತರಹ ಚುರುಮುರಿ ಮನೆಯಲ್ಲೇ ಮಾಡೋದು ಹೇಗೆ? ಇಲ್ಲಿದೆ ಸೀಕ್ರೆಟ್