ಹಸಿ ಕೋಳಿ ಮಾಂಸ ತಿಂದಿದ್ದಾನೆ ಇವ್ನು? ಅಷ್ಟಕ್ಕೂ ಏನು ಸಾಧಿಸಲು ಹೊರಟಿದ್ದಾನೆ ಇವನು ?

By Suvarna NewsFirst Published Feb 5, 2024, 2:53 PM IST
Highlights

ಆಹಾರದಲ್ಲಿ ಪ್ರಯೋಗ ಓಕೆ. ಆದ್ರೆ ಆರೋಗ್ಯ ಕೆಡಿಸಿಕೊಳ್ಳುವಂತಹ ಹುಚ್ಚಾಟ ಯಾಕೆ ಗೊತ್ತಿಲ್ಲ. ಹಸಿ ಮಾಂಸ ತಿನ್ಬೇಡಿ, ಸರಿಯಾಗಿ ಬೇಯಿಸಿ ಆಹಾರ ತಿನ್ನಿ ಅಂತಾ ತಜ್ಞರು ಸಲಹೆ ನೀಡ್ತಿದ್ದರೂ ಈ ವ್ಯಕ್ತಿ ಕಿವಿಗೆ ಅದು ಬೀಳ್ತಿಲ್ಲ. ಹಸಿ ಕೋಳಿ ಮಾಂಸ ಕಚ್ಚಿ ಕಚ್ಚಿ ತಿಂತಿದ್ದಾನೆ ಈತ. 
 

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗೋಕೆ ಜನರು ಏನೇನೋ ಕಸರತ್ತು ಮಾಡ್ತಾರೆ. ಕೆಲವೊಮ್ಮೆ ಇದೇ ಅವರ ಜೀವಕ್ಕೆ ಕುತ್ತು ತಂದಿದ್ದಿದೆ. ಎತ್ತರದ ಕಟ್ಟಡದ ಮೇಲೆ ಅಥವಾ ಪರ್ವತದ ಮೇಲೆ ನಿಂತು ಫೋಟೋಕ್ಕೆ ಫೋಸ್ ನೀಡೋದ್ರಿಂದ ಹಿಡಿದು ತನ್ನದೇ ಸಮಾಧಿ ತೆಗೆದು ಅಲ್ಲಿ ವಾರಗಟ್ಟಲೆ ಉಳಿದು ಅನುಭವ ಹಂಚಿಕೊಂಡ ಜನರವರೆಗೆ ಅನೇಕರನ್ನು ನೀವು ಸಾಮಾಜಿಕ ಜಾಲತಾಣದಲ್ಲಿ ಕಾಣಬಹುದು. ಆಹಾರದಲ್ಲೂ ಅನೇಕ ಪ್ರಯೋಗ ಸಾಮಾನ್ಯ. ಆದ್ರೆ ಈ ವ್ಯಕ್ತಿ ಒಂದೇ ಬಾರಿ ಅತಿ ಹೆಚ್ಚು ಆಹಾರ ತಿಂದೋ ಅಥವಾ ವಿಚಿತ್ರ ಕಾಂಬಿನೇಷನ್ ನಲ್ಲಿ ಆಹಾರ ಸೇವನೆ ಮಾಡಿಯೋ ಸುದ್ದಿ ಆಗ್ತಿಲ್ಲ. ಈತ ಹಸಿ ಮಾಂಸ ಸೇವನೆ ಮಾಡಿ ಚರ್ಚೆಗೆ ಬಂದಿದ್ದಾನೆ.

ಅನಾದಿಕಾಲದಲ್ಲಿ ಜನರು ಹಸಿ ಮಾಂಸ (Raw Meat) ವನ್ನು ಹಾಗೆ ತಿನ್ನುತ್ತಿದ್ದರು ಅಂತಾ ನಾವು ಓದಿದ್ದೇವೆ. ಈಗ ಹಸಿ ಮಾಂಸ ಸೇವನೆ ಬಹಳ ಅಪಾಯಕಾರಿ ಎಂದು ತಜ್ಞರು ಹೇಳ್ತಾರೆ. ಮಾಂಸ ಇರಲಿ ಕೆಲ ತರಕಾರಿಯನ್ನೂ ಬೇಯಿಸದೆ ತಿನ್ನಬಾರದು ಎಂದು ಸಲಹೆ ನೀಡ್ತಾರೆ. ಹಾಗಿರುವಾಗ ಈ ವ್ಯಕ್ತಿ ಕೋಳಿ (chicken) ಮಾಂಸವನ್ನು ಬೇಯಿಸದೆ ಹಸಿ ಹಸಿಯಾಗಿ ತಿನ್ನುತ್ತಿದ್ದಾನೆ.

ಲೈಫ್‌ಸ್ಟೈಲ್‌ಲ್ಲಿ ಈ ರೀತಿ ಚೇಂಜ್ ಮಾಡ್ಕೊಂಡ್ರೆ ನಿಮ್ಗೆ ವಯಸ್ಸಾಗ್ತಿದ್ರೂ ಗೊತ್ತೇ ಆಗಲ್ಲ!

ವ್ಯಕ್ತಿಯ ಹೆಸರು ಜಾನ್. ಆತ ಕಳೆದ 17 ದಿನಗಳಿಂದ ಕೋಳಿ ಮಾಂಸವನ್ನು ಹಸಿಯಾಗಿ ಸೇವನೆ ಮಾಡ್ತಿದ್ದಾನೆ. ಇನ್ಸ್ಟಾಗ್ರಾಮ್ (Instagram) ನಲ್ಲಿ ಪ್ರತಿ ದಿನ ಹಸಿ ಮಾಂಸ ತಿನ್ನುವ ವಿಡಿಯೋವನ್ನು ಹಂಚಿಕೊಳ್ತಿದ್ದಾನೆ. ಆತ ಮಾಂಸದ ಜೊತೆ ಬೇರೆ ಬೇರೆ ಮಸಾಲೆಯನ್ನು ಸೇರಿಸಿ ತಿನ್ನುತ್ತಾನೆ.

ಕಳೆದ 17 ದಿನಗಳಿಂದ ಹಸಿ ಕೋಳಿ ಮಾಂಸ ತಿನ್ನುತ್ತಿರುವ ಈತ, ಹೊಟ್ಟೆ ನೋವು ಬರುವವರೆಗೂ ಹೀಗೆ ಆಹಾರ ತಿನ್ನುತ್ತೇನೆ ಎಂದಿದ್ದಾನೆ. ಹಸಿ ಮಾಂಸ ತಿನ್ನೋದು, ಅಷ್ಟೊಂದು ಅಪಾಯಕಾರಿಯಲ್ಲ ಎಂದು ಜಾನ್ ಹೇಳಿದ್ದಾನೆ. ಹಸಿ ಮಾಂಸ ತಿನ್ನಲು ಶುರು ಮಾಡಿದಾಗಿನಿಂದ ಜಾನ್ ಅನಾರೋಗ್ಯಕ್ಕೆ ಒಳಗಾಗಿಲ್ಲವಂತೆ. ಒಂದ್ವೆಳೆ ಹೊಟ್ಟೆ ನೋವು ಕಾಣಿಸಿಕೊಂಡ್ರೂ ಅದು ಸಾಮಾನ್ಯ ನೋವಾಗಿರುತ್ತದೆ. ನನಗೆ ಯಾವುದನ್ನು ಮಾಡಬೇಡ ಎನ್ನುತ್ತಾರೋ ಅದನ್ನು ಮಾಡಲು ಇಷ್ಟ ಎಂದು ಜಾನ್ ಹೇಳಿದ್ದಾನೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಹಸಿ ಮಾಂಸ ಸೇವನೆ ಮಾಡದಂತೆ ಅನೇಕರು ಸಲಹೆ ನೀಡುತ್ತಿದ್ದಾರೆ. ಹಸಿ ಮಾಂಸ ಆರೋಗ್ಯ ಹಾಳು ಮಾಡುತ್ತೆ ಎಂಬ ಮಾತಿನಲ್ಲಿ ಎಷ್ಟು ಸತ್ಯ ಇದೆ ಎಂಬುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ ಎಂದು ಜಾನ್ ಹೇಳಿದ್ದಾನೆ.  

ಹಸಿ ಮಾಂಸ ಸೇವನೆ ಮಾಡುವ ಪ್ರಯೋಗಕ್ಕೆ ಇಳಿದಿದ್ದು ಜಾನ್ ಮಾತ್ರವಲ್ಲ. ಈ ಹಿಂದೆಯೂ ಕೆಲವರು ಈ ಪ್ರಯೋಗ ಮಾಡಿದ್ದರು. ಬ್ಯಾಕ್ಟೀರಿಯಾ ಬೆಳೆದು, ನಾನು ಸಾಯುವವರೆಗೆ ಹಸಿ ಮಾಂಸ ಸೇವನೆ ಮಾಡ್ತೇನೆ ಎಂದು ಯುಟ್ಯೂಬ್ ನಲ್ಲಿ ವ್ಯಕ್ತಿಯೊಬ್ಬ ಹೇಳಿದ್ದ. ಸುಮಾರು ಎರಡು ನೂರು ದಿನಗಳವರೆಗೆ ಆತ ಹಸಿಮಾಂಸ ಸೇವನೆ ಮಾಡಿದ್ದ. ಆದ್ರೆ ನಂತ್ರ ಬೇಸರಗೊಂಡ ಆತ, ತನ್ನ ಕೆಲಸವನ್ನು ಕೈಬಿಟ್ಟಿದ್ದ.

ಬೆಳಗ್ಗೆದ್ದು ಬರೀ ಹೊಟ್ಟೆಗೆ ಪಪ್ಪಾಯಿ ತಿಂದ್ರೆ ಆರೋಗ್ಯಕ್ಕೆ ಎಷ್ಟೊಂದು ಲಾಭವಿದೆ ನೋಡಿ

ಹಸಿ ಮಾಂಸ ಸೇವನೆಯಿಂದ ಆಗುವ ಅಡ್ಡಪರಿಣಾಮಗಳು : ಹಸಿ ಮಾಂಸ ಸೇವನೆ ಮಾಡಿದಾಗ ಬ್ಯಾಕ್ಟೀರಿಯಾ, ವೈರಸ್‌ಗಳು, ಪರಾವಲಂಬಿಗಳು ನಿಮ್ಮ ದೇಹವನ್ನು ಸೇರುತ್ತವೆ. ವಾಕರಿಕೆ, ವಾಂತಿ, ಅತಿಸಾರ, ಹೊಟ್ಟೆ ಸೆಳೆತ, ಜ್ವರ ಮತ್ತು ತಲೆನೋವು ಇದರಿಂದ ಕಾಣಿಸಿಕೊಳ್ಳುತ್ತದೆ.  ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾದ ಸೋಂಕು ಸಾಲ್ಮೊನೆಲ್ಲಾ ಎಂಬ ರೋಗವನ್ನು ಉಂಟುಮಾಡುತ್ತದೆ. ಲಿಸ್ಟೇರಿಯಾ ಮೊನೊಸೈಟೊಜೆನ್ಸ್ ದನ ಮತ್ತು ಕೋಳಿಗಳಲ್ಲಿ ಕಂಡುಬರುವ ಬ್ಯಾಕ್ಟೀರಿಯಾ ಆಗಿದ್ದು, ಇದು ದೇಹವನ್ನು ಸೇರುವ ಅಪಾಯವಿರುತ್ತದೆ. ಹಸಿ ಮಾಂಸವನ್ನು ಸೇವಿಸುವುದರಿಂದ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದು ಕ್ಯಾಂಪಿಲೋಬ್ಯಾಕ್ಟರ್ ಬ್ಯಾಕ್ಟೀರಿಯಾದ ಅಪಾಯವನ್ನು ಉಂಟುಮಾಡುತ್ತದೆ. ಇದು ಸಾಮಾನ್ಯವಾಗಿ ಕೋಳಿ ಮತ್ತು ಜಾನುವಾರುಗಳ ಜೀರ್ಣಾಂಗದಲ್ಲಿ ಕಂಡುಬರುತ್ತದೆ.

click me!