Black Chickpea Dosa: ಪ್ರತಿದಿನ ಒಂದೇ ರೀತಿಯ ತಿಂಡಿ ತಿಂದು ಬೇಸರವಾಗಿದೆಯೇ? ಹಾಗಾದರೆ ಪ್ರೋಟೀನ್ ಭರಿತ ಕಪ್ಪು ಕಡಲೆ ದೋಸೆಯನ್ನು ಒಮ್ಮೆ ಟ್ರೈ ಮಾಡಿ. ಇದಕ್ಕೆ ಅಕ್ಕಿ, ಉದ್ದಿನ ಬೇಳೆ ಬೇಕಾಗಿಲ್ಲ. ಸುಲಭವಾಗಿ ತಯಾರಿಸಬಹುದಾದ ಈ ಗರಿಗರಿಯಾದ ದೋಸೆಗೆ ಪುದೀನಾ, ಕೊತ್ತಂಬರಿ ಮತ್ತು ಸೌತೆಕಾಯಿಯಿಂದ ಮಾಡಿದ ಮೊಸರಿನ ಚಟ್ನಿ ಅದ್ಭುತ ಕಾಂಬಿನೇಷನ್. ಇಲ್ಲಿದೆ ಮಾಡುವ ಸುಲಭ ವಿಧಾನ ಇಲ್ಲಿದೆ!
ಬೆಳಗ್ಗಿನ ಉಪಹಾರಕ್ಕೆ ರುಚಿಯಾದ ಕಪ್ಪು ಕಡಲೆ ದೋಸೆ
ದೋಸೆ ಭಾರತೀಯ ಮನೆಗಳಲ್ಲಿ ಹೆಚ್ಚು ಇಷ್ಟಪಡುವ ಬೆಳಗಿನ ಉಪಾಹಾರಗಳಲ್ಲಿ ಒಂದಾಗಿದೆ. ಇದನ್ನು ಸಾಮಾನ್ಯವಾಗಿ ಸಾಂಬಾರ್ ಮತ್ತು ತೆಂಗಿನಕಾಯಿ ಚಟ್ನಿಯೊಂದಿಗೆ ತಿನ್ನಲು ಇಷ್ಟಪಡುತ್ತಾರೆ. ಸಾಮಾನ್ಯವಾಗಿ ಅಕ್ಕಿ ಮತ್ತು ಉದ್ದಿನ ಬೇಳೆಯಿಂದ ದೋಸೆ ತಯಾರಿಸಲಾಗುತ್ತದೆ. ಆದರೆ ಪ್ರತಿದಿನ ಒಂದೇ ರೀತಿಯ ತಿಂಡಿ ತಿಂದು ಬೇಸರವಾಗಿದ್ದರೆ ಮತ್ತು ಹೊಸದನ್ನು ಪ್ರಯತ್ನಿಸಲು ಬಯಸಿದರೆ ಕಪ್ಪು ಕಡಲೆಯಿಂದ ತಯಾರಿಸುವ ದೋಸೆ ಬೆಸ್ಟ್. ಇದು ರುಚಿಯ ಜೊತೆ ಹೈ ಪ್ರೊಟೀನ್ ನಿಂದ ಕೂಡಿರುತ್ತೆ. ಮಾಡೋದು ಹೇಗೆ ನೋಡೋಣ.
ಕಪ್ಪು ಕಡಲೆ ದೋಸೆ ತಯಾರಿಸಲು ಬೇಕಾಗುವ ಪದಾರ್ಥಗಳು
½ ಕಪ್ ಕಪ್ಪು ಕಡಲೆ
½ ಕಪ್ ರವೆ
¼ ಕಪ್ ಮೊಸರು
1 ಇಂಚು ಶುಂಠಿಯ 3 ತೆಳುವಾದ ತುಂಡುಗಳು
2 ಹಸಿಮೆಣಸಿನಕಾಯಿ
6-7 ಬೆಳ್ಳುಳ್ಳಿ ಎಸಳುಗಳು
1 ಸಣ್ಣ ಚಮಚ ಜೀರಿಗೆ
1 ಹಿಡಿ ಕೊತ್ತಂಬರಿ ಸೊಪ್ಪು
1 ಕರಿಬೇವಿನ ಕೊಂಬೆ
1 ಕಪ್ ನೀರು
ರುಚಿಗೆ ತಕ್ಕಷ್ಟು ಉಪ್ಪು
ಅಗತ್ಯಕ್ಕೆ ತಕ್ಕಷ್ಟು ಎಣ್ಣೆ
ಮೊಸರಿನ ಚಟ್ನಿ ತಯಾರಿಸಲು ಬೇಕಾಗುವ ಪದಾರ್ಥಗಳು
1 ಕಪ್ ಗಟ್ಟಿಯಾದ ಮೊಸರು
1 ಸಣ್ಣ ಸೌತೆಕಾಯಿ
5 ಬೆಳ್ಳುಳ್ಳಿ ಎಸಳುಗಳು
2 ಹಸಿಮೆಣಸಿನಕಾಯಿ
1 ಸಣ್ಣ ಚಮಚ ಜೀರಿಗೆ
1 ಹಿಡಿ ಪುದೀನಾ ಎಲೆಗಳು
1 ಹಿಡಿ ಕೊತ್ತಂಬರಿ ಸೊಪ್ಪು
1 ಚಿಟಿಕೆ ಅರಿಶಿನ
ರುಚಿಗೆ ತಕ್ಕಷ್ಟು ಉಪ್ಪು
1 ದೊಡ್ಡ ಚಮಚ ಸಾಸಿವೆ ಎಣ್ಣೆ (ಬೇಕಿದ್ದಲ್ಲಿ)
ಕಪ್ಪು ಕಡಲೆ ದೋಸೆ ತಯಾರಿಸುವುದು ಹೇಗೆ?
ಕಪ್ಪು ಕಡಲೆಯನ್ನು ಹಿಂದಿನ ರಾತ್ರಿ ನೀರಿನಲ್ಲಿ ನೆನೆಸಿಡಿ. ಮರುದಿನ ಬೆಳಗ್ಗೆ ಅದರಲ್ಲಿರುವ ನೀರನ್ನು ಬಸಿಯಿರಿ.
ಈಗ ಮಿಕ್ಸರ್ ಜಾರ್‌ಗೆ ನೆನೆಸಿದ ಕಡಲೆ, ಶುಂಠಿ, ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಜೀರಿಗೆ, ಉಪ್ಪು, ಕೊತ್ತಂಬರಿ ಸೊಪ್ಪು, ರವೆ, ಮೊಸರು, ಕರಿಬೇವು ಮತ್ತು ನೀರನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
ಹಿಟ್ಟಿನ ಹದದ ಬಗ್ಗೆ ಗಮನವಿರಲಿ. ಹಿಟ್ಟು ತುಂಬಾ ಗಟ್ಟಿಯಾಗಿಯೂ ಇರಬಾರದು ಅಥವಾ ತುಂಬಾ ತೆಳುವಾಗಿಯೂ ಇರಬಾರದು.
ಈಗ ಸಿದ್ಧಪಡಿಸಿದ ಹಿಟ್ಟನ್ನು ಕನಿಷ್ಠ 20 ನಿಮಿಷಗಳ ಕಾಲ ಮುಚ್ಚಿಡಿ.
ನಂತರ ಗ್ಯಾಸ್ ಮೇಲೆ ದೋಸೆ ತವಾವನ್ನು ಬಿಸಿ ಮಾಡಿ. ಅಗತ್ಯವಿದ್ದರೆ ಸ್ವಲ್ಪ ಎಣ್ಣೆ ಸವರಿಕೊಳ್ಳಿ. ತವಾದ ಮಧ್ಯಭಾಗಕ್ಕೆ ಒಂದು ಸೌಟು ಹಿಟ್ಟನ್ನು ಹಾಕಿ, ವೃತ್ತಾಕಾರವಾಗಿ ತೆಳುವಾಗಿ ಹರಡಿ.
ಈಗ ದೋಸೆಯ ಅಂಚುಗಳ ಸುತ್ತ ಸ್ವಲ್ಪ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬೇಯಲು ಬಿಡಿ.
ದೋಸೆಯ ಕೆಳಭಾಗ ಚಿನ್ನದ ಬಣ್ಣಕ್ಕೆ ತಿರುಗಿ ಗರಿಗರಿಯಾದಾಗ ಅದನ್ನು ತವಾದಿಂದ ತೆಗೆದುಹಾಕಿ.
ಮೊಸರಿನ ಚಟ್ನಿ ತಯಾರಿಸುವ ವಿಧಾನ
ಚಟ್ನಿ ತಯಾರಿಸಲು ಮೊದಲಿಗೆ ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಜೀರಿಗೆ ಮತ್ತು ಉಪ್ಪನ್ನು ರುಬ್ಬುವ ಕಲ್ಲು ಅಥವಾ ಮಿಕ್ಸರ್‌ನಲ್ಲಿ ಹಾಕಿ ರುಬ್ಬಿಕೊಳ್ಳಿ.
ಈಗ ಇದಕ್ಕೆ ಪುದೀನಾ ಎಲೆಗಳು, ಕೊತ್ತಂಬರಿ ಸೊಪ್ಪು ಮತ್ತು ಒಂದು ಚಿಟಿಕೆ ಅರಿಶಿನ ಸೇರಿಸಿ ಮತ್ತೊಮ್ಮೆ ಚೆನ್ನಾಗಿ ರುಬ್ಬಿಕೊಳ್ಳಿ.
ನಂತರ ಒಂದು ಬಟ್ಟಲಿನಲ್ಲಿ ಮೊಸರನ್ನು ತೆಗೆದುಕೊಂಡು ಅದಕ್ಕೆ ಸಿದ್ಧಪಡಿಸಿದ ಚಟ್ನಿಯ ಮಿಶ್ರಣವನ್ನು ಸೇರಿಸಿ.
ಈಗ ಸೌತೆಕಾಯಿಯನ್ನು ತುರಿದು ಅದಕ್ಕೆ ಹಾಕಿ. ಬೇಕಿದ್ದರೆ ಒಂದು ದೊಡ್ಡ ಚಮಚ ಸಾಸಿವೆ ಎಣ್ಣೆಯನ್ನೂ ಸೇರಿಸಿ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ.
ಈಗ ರುಚಿಕರವಾದ ಮೊಸರಿನ ಚಟ್ನಿ ರೆಡಿ. ಬಿಸಿಬಿಸಿಯಾದ ಕಪ್ಪು ಕಡಲೆ ದೋಸೆ ಜೊತೆ ಮೊಸರಿನ ಚಟ್ನಿ ಸರ್ವ್ ಮಾಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.