ಎಳ್ಳು, ತೆಂಗಿನಕಾಯಿ, ಶುಂಠಿ, ಬೆಳ್ಳುಳ್ಳಿ ಮುಂತಾದ ಪದಾರ್ಥಗಳಿಂದ ಈ ಚಟ್ನಿ ತಯಾರಿಸಲಾಗುತ್ತದೆ. ಇದು ಇಡ್ಲಿ, ದೋಸೆ, ಪಡ್ಡು, ಪೊಂಗಲ್, ಪುರಿ ಮತ್ತು ಲೆಮನ್ ರೈಸ್ ಜೊತೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ತೆಂಗಿನಕಾಯಿ ಇಲ್ಲದಿದ್ದಾಗ ಈ ಚಟ್ನಿ ಉತ್ತಮ ಪರ್ಯಾಯ.
Idli Chutney Recipe: ಇಡ್ಲಿ, ದೋಸೆ, ಪಡ್ಡು ಅಂದ್ರೆ ಅದರ ಜೊತೆ ತೆಂಗಿನಕಾಯಿ ಚಟ್ನಿ ಒಳ್ಳೆಯ ಕಾಂಬಿನೇಷನ್ ಆಗುತ್ತದೆ. ಆದ್ರೆ ಒಂದೇ ರೀತಿಯ ಚಟ್ನಿ ತಿಂದು ಬೇಸರವಾಗಿರುವ ಜನತೆಗೆ ಹೊಸ ರೆಸಿಪಿಯನ್ನ ನಿಮಗಾಗಿ ತಂದಿದ್ದೇವೆ. ಈ ಚಟ್ನಿಯೂ ಸಹ ಅದ್ಭುತವಾದ ರುಚಿಯನ್ನು ಹೊಂದಿದ್ದು, ಕೆಲವೇ ನಿಮಿಷಗಳಲ್ಲಿಯೇ ಇದನ್ನು ಸಿದ್ಧಪಡಿಸಬಹುದಾಗಿದೆ. ಈ ಚಟ್ನಿಯನ್ನು ಲೆಮನ್ ರೈಸ್, ಪೊಂಗಲ್, ಪುರಿಗೂ ಒಳ್ಳೆಯ ಕಾಂಬಿನೇಷನ್ ಆಗುತ್ತದೆ. ಮನೆಯಲ್ಲಿ ತೆಂಗಿನಕಾಯಿ ಇಲ್ಲದಿದ್ದಾಗ ಈ ಚಟ್ನಿಯನ್ನು ಮಾಡಿಕೊಳ್ಳಬಹುದಾಗಿದೆ. ಶುಂಠಿ ಮತ್ತು ಬೆಳ್ಳುಳ್ಳಿ ಕಡ್ಡಾಯವಾಗಿ ಸೇರಿಸಬೇಕು. ಇದರಿಂದ ಚಟ್ನಿಯಯ ಸ್ವಾದ ಹೆಚ್ಚಾಗುತ್ತದೆ. ಎಳ್ಳು ಬಳಸಿ ಈ ಚಟ್ನಿಯನ್ನು ಮಾಡಬಹುದು. ಮನೆಗೆ ಅತಿಥಿಗಳು ಬಂದಾಗ ಅಥವಾ ರಜಾದಿನಗಳಲ್ಲಿ ಈ ಚಟ್ನಿಯನ್ನು ಮಾಡಬಹುದು.
ಎಳ್ಳು ಚಟ್ನಿ ಮಾಡಲು ಬೇಕಾಗುವ ಸಾಮಾಗ್ರಿಗಳು:
ಎಳ್ಳು - 1/4 ಕಪ್
ತೆಂಗಿನಕಾಯಿ - 1/2 ಕಪ್
ಬೆಳ್ಳುಳ್ಳಿ - 4 ಎಸಳು
ಶುಂಠಿ - 1 ತುಂಡು
ಒಣಮೆಣಸಿನಕಾಯಿ - 7
ಹುಣಸೆಹಣ್ಣು - 1 ನಿಂಬೆ ಗಾತ್ರದಷ್ಟು
ಎಣ್ಣೆ - ಬೇಕಾದಷ್ಟು
ಸಾಸಿವೆ - 1/2 ಚಮಚ
ಉದ್ದಿನಬೇಳೆ - 1 ಚಮಚ
ಕರಿಬೇವು - 1 ಕಟ್ಟು
ಇಂಗು - 1 ಚಿಟಿಕೆ
ಎಳ್ಳು ಚಟ್ನಿ ಮಾಡುವ ವಿಧಾನ:
ತೆಂಗಿನಕಾಯಿ ತುರಿದು ಇಟ್ಕೊಳ್ಳಿ. ಶುಂಠಿ ಮತ್ತು ಬೆಳ್ಳುಳ್ಳಿ ಎಸಳುಗಳನ್ನು ಸಣ್ಣಗೆ ಹೆಚ್ಚಿಟ್ಕೊಳ್ಳಿ. ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಕಾಯಿಸಿ. ಎಣ್ಣೆ ಕಾದ್ಮೇಲೆ, ಎಳ್ಳನ್ನು ಹಾಕಿ ಒಲೆ ಲೋ ಫೇಮ್‌ನಲ್ಲಿ ಇಟ್ಟು ಹುರಿಯಿರಿ. ಎಳ್ಳು ಹುರಿದು ಚೆನ್ನಾಗಿ ವಾಸನೆ ಬಂದ್ಮೇಲೆ, ಅದಕ್ಕೆ ಹೆಚ್ಚಿಟ್ಟುಕೊಂಡಿರುವ ಶುಂಠಿ ಮತ್ತು ಬೆಳ್ಳುಳ್ಳಿ ಹಾಕಿ ಘಮ ಘಮ ವಾಸನೆ ಹೋಗೋವರೆಗೂ ಹುರಿಯಿರಿ. ಶುಂಠಿ ಬೆಳ್ಳುಳ್ಳಿ ಪಚ್ಚ ವಾಸನೆ ಹೋದ್ಮೇಲೆ, ಹುಣಸೆಹಣ್ಣು ಹಾಕಿ ಹುರಿಯಿರಿ.
ಈಗ ಒಣಮೆಣಸಿನಕಾಯಿ ಮತ್ತು ತುರಿದ ತೆಂಗಿನಕಾಯಿ ಹಾಕಿ ಹುರಿದು ಬಾಣಲೆಯಿಂದ ಇಳಿಸಿಟ್ಟು ಆರಲು ಬಿಡಿ. ಬಾಣಲೆಯಲ್ಲಿರುವ ಮಿಶ್ರಣ ಚೆನ್ನಾಗಿ ಆರಿದ್ಮೇಲೆ ಅದನ್ನು ಮಿಕ್ಸಿ ಜಾರಿಗೆ ಹಾಕಿ ಸ್ವಲ್ಪ ಉಪ್ಪು ಮತ್ತು ನೀರು ಹಾಕಿ ರುಬ್ಬಿಕೊಳ್ಳಿ.
ಇದನ್ನೂ ಓದಿ: ಒಂದೇ ರೀತಿಯ ಇಡ್ಲಿ ತಿಂದು ಬೇಸರವಾಗಿದ್ಯಾ? ಇಲ್ಲಿದೆ ಟೇಸ್ಟ್ ಹೆಚ್ಚಿಸೋ ಟಿಪ್ಸ್
ರುಬ್ಬಿದ ಚಟ್ನಿಯನ್ನು ಒಂದು ಬಟ್ಟಲಿಗೆ ತೆಗೆದಿಟ್ಟುಕೊಳ್ಳಿ. ಒಂದು ಸಣ್ಣ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಕಾಯಿಸಿ. ಕಾದ್ಮೇಲೆ ಸಾಸಿವೆ, ಉದ್ದಿನಬೇಳೆ, ಕರಿಬೇವು ಹಾಕಿ ಒಗ್ಗರಣೆ ಮಾಡಿ. ಒಗ್ಗರಣೆಯನ್ನು ಚಟ್ನಿಗೆ ಹಾಕಿ ಬಡಿಸಿದರೆ ರುಚಿಕರವಾದ ಎಳ್ಳು ಚಟ್ನಿ ರೆಡಿಯಾಗುತ್ತದೆ. (ಬೇಕಿದ್ರೆ ಚಟ್ನಿಯಾದ್ಮೇಲೆ ಸಣ್ಣದಾಗಿ ಕತ್ತರಿಸಿಕೊಂಡಿರುವ ಕೋತಂಬರಿ ಸೊಪ್ಪು ಸೇರಿಸಿಕೊಳ್ಳಬಹುದು)
ತೆಂಗಿನಕಾಯಿ ಚಟ್ನಿ ಮಾಡುವ ವಿಧಾನ
ರುಬ್ಬಿಕೊಂಡಿರುವ ಹಸಿ ತೆಂಗಿನಕಾಯಿಗೆ ಸಾಸವೆ, ಜೀರಿಗೆ, ಮೆಣಸಿನಕಾಯಿ, ಇಂಗು, ಕರಿಬೇವು ಮತ್ತು ಹಸಿಮೆಣಕಾಯಿ ಸೇರಿಸಿದ ಒಗ್ಗರಣೆ ಹಾಕಿದ್ರೆ ಕಾಯಿ ಚಟ್ನಿ ಸಿದ್ಧವಾಗುತ್ತದೆ. ಕೆಲವರು ಕಡಲೆಬೀಜ (ಶೇಂಗಾ) ಚಟ್ನಿಯನ್ನು ಮಾಡಿಕೊಳ್ಳುತ್ತಾರೆ. ಚಟ್ನಿಗೆ ಹುಣಸೆ ಹಣ್ಣು ಬಳಕೆ ಮಾಡಿದರೆ ರುಚಿ ತುಂಬಾ ಸ್ಪೆಷಲ್ ಆಗಿರುತ್ತದೆ.
ಇದನ್ನೂ ಓದಿ: ಸೂಪರ್ ಟೇಸ್ಟಿಯಾಗಿರೋ ಕಾಂಚೀಪುರಂ ಇಡ್ಲಿ, ಎರಡು ತಿನ್ನೋರು, ನಾಲ್ಕು ತಿಂತಾರೆ!