ಸೈಡ್ಸ್‌ ಪ್ಲೀಸ್‌, ಇದು ಚಪಾತಿ, ದೋಸೆ, ಪುಲ್ಕಾಗೆ ಸೈಡ್‌ ಡಿಶ್‌ಗಳು!

By Kannadaprabha NewsFirst Published Dec 13, 2020, 10:10 AM IST
Highlights

ಸುಲಭವಾಗಿ ಮನೆಯಲ್ಲಿಯೇ ಮಾಡಬಹುದಾದ ಚಪಾತಿ, ದೋಸೆ, ಪುಲ್ಕಾಗೆ ಸೈಡ್‌ ಡಿಶ್‌ಗಳ ರೆಸಿಪಿ

ಬೆಂಡಿ ಮಸಾಲಾ

ಬೇಕಾಗುವ ಸಾಮಗ್ರಿ: ಬೆಂಡೆಕಾಯಿ 10-12, ಈರುಳ್ಳಿ 1, ಟೊಮೇಟೊ 1, ಹಸಿಮೆಣಸು 1, ದನಿಯಾ ಪುಡಿ - 1 ಚಮಚ, ಅಚ್ಚ ಖಾರದಪುಡಿ - 1 ಚಮಚ, ಗರಂ ಮಸಾಲಾ/ಕಿಚನ್‌ ಕಿಂಗ್‌ ಮಸಾಲಾ - 1 ಚಮಚ, ಸೋಂಪು ಪುಡಿ - ಮುಕ್ಕಾಲು ಚಮಚ, ಏಲಕ್ಕಿ - 2, ಅರಿಶಿನಪುಡಿ - ಅರ್ಧ ಚಮಚ, ಮೊಸರು - ಅರ್ಧ ಕಪ್‌, ಕೊತ್ತಂಬರಿ ಸೊಪ್ಪು, ಉಪ್ಪು, ಎಣ್ಣೆ.

ತವಾದಿಂದ ದೋಸೆ ಮೇಲೇಳುತ್ತಿಲ್ಲವೇ? ಹಾಗಿದ್ರೆ ಈ ಟೆಕ್ನಿಕ್ ಟ್ರೈ ಮಾಡಿ 

ಮಾಡುವ ವಿಧಾನ

ಒಂದು ಬೌಲಿನಲ್ಲಿ ಧನಿಯಾ ಪುಡಿ, ಅಚ್ಚಖಾರದ ಪುಡಿ, ಅರಿಶಿನ, ಸೋಂಪು ಪುಡಿ ಹಾಗೂ ಗರಂ ಮಸಾಲಾ (ಕಿಚನ್‌ ಕಿಂಗ್‌ ಮಸಾಲಾ)ಗಳನ್ನು ಹಾಕಿ ಸ್ವಲ್ಪ ನೀರು ಸೇರಿಸಿ ಕಲಕಿಡಿ. ಈಗ ಒಂದು ಪ್ಯಾನಿಗೆ 2 ಚಮಚ ಎಣ್ಣೆ ಹಾಕಿ ಹೆಚ್ಚಿಕೊಂಡ ಬೆಂಡೆಕಾಯಿ ಹಾಕಿ, ಸ್ವಲ್ಪ ಉಪ್ಪು ಸೇರಿಸಿ 4-5 ನಿಮಿಷ ಫ್ರೈ ಮಾಡಿ ತೆಗೆದಿಡಿ. ಅದೇ ಪ್ಯಾನಿಗೆ ಮತ್ತೆ ಸ್ವಲ್ಪ ಎಣ್ಣೆ ಹಾಕಿ ಏಲಕ್ಕಿ, ಸಣ್ಣದಾಗಿ ಹೆಚ್ಚಿಕೊಂಡ ಹಸಿಮೆಣಸು ಈರುಳ್ಳಿ, ಟೊಮ್ಯಾಟೊ ಹಾಕಿ ಫ್ರೈ ಮಾಡಿ. ಈಗ ಮಸಾಲೆ ನೀರನ್ನು ಸೇರಿಸಿ ಕುದಿಯಲು ಬಿಡಿ. ಕುದಿಯುತ್ತಿರುವಾಗ ಫ್ರೈ ಮಾಡಿಟ್ಟುಕೊಂಡ ಬೆಂಡೆಕಾಯಿ, ಉಪ್ಪು ಸೇರಿಸಿ ಮುಚ್ಚಳ ಮುಚ್ಚಿ 3-4 ನಿಮಿಷ ಬಿಡಿ. ದಪ್ಪ ಕನ್ಸಿಸ್ಟನ್ಸಿಗೆ ಬಂದಾಗ ಅರ್ಧ ಕಪ್‌ ಮೊಸರು ಸೇರಿಸಿ ಮತ್ತೆ ಕುದಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಗಾರ್ನಿಷ್‌ ಮಾಡಿ, ಪುಲ್ಕಾ, ರೋಟಿ, ಚಪಾತಿಯೊಂದಿಗೆ ಸವ್‌ರ್‍ ಮಾಡಿ. ಪಕ್ಕಾ ಹೊಟೆಲ್‌ ರುಚಿ...

ಹೆಸರುಬೇಳೆ ಬೀನ್ಸ್‌ ಪಲ್ಯ

ಕುಲ್ಚಾ, ರೋಟಿ, ಚಪಾತಿ, ದೋಸೆ ಎಲ್ಲದಕ್ಕೂ ಹೊಂದಿಕೊಳ್ಳುವ ಪ್ರೋಟಿನ್‌ಭರಿತ ಪಲ್ಯ ಇದು.

ಬೇಕಾಗುವ ಸಾಮಗ್ರಿ: ಹೆಸರುಬೇಳೆ 1 ಕಪ್‌, ಬೀನ್ಸ್‌ 20-25, ಈರುಳ್ಳಿ 1, ಅಚ್ಚಖಾರದಪುಡಿ 1 ಚಮಚ, ಜೀರಿಗೆಪುಡಿ 1 ಚಮಚ, ಶುಂಠಿ ತುರಿ, ಹಸಿಕೊಬ್ಬರಿ ತುರಿ ಕೊತ್ತಂಬರಿ ಸೊಪ್ಪು, ಉಪ್ಪು, ಲಿಂಬುರಸ, ಒಗ್ಗರಣೆಗೆ: ಎಣ್ಣೆ, ಸಾಸಿವೆ, ಜೀರಿಗೆ, ಕರಿಬೇವು, ಅರಿಶಿಣ.

ಮಾಡುವ ವಿಧಾನ

ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಕರಿಬೇವು ಸಿಡಿಸಿ, ಶುಂಠಿತುರಿ, ಹೆಚ್ಚಿಕೊಂಡ ಈರುಳ್ಳಿ, ಅರಿಶಿನಪುಡಿ ಹಾಕಿ ಫ್ರೆತ್ರೖ ಮಾಡಿ. ಒಂದು ಗಂಟೆ ನೆನೆಸಿ ನೀರು ಬಸಿದ ಹೆಸರುಬೇಳೆ, ಹೆಚ್ಚಿಕೊಂಡ ಬೀನ್ಸ್‌, ಉಪ್ಪು ಹಾಕಿ ಫ್ರೆತ್ರೖ ಮಾಡಿ, 2 ನಿಮಿಷ ಮುಚ್ಚಿಡಿ. ಸ್ವಲ್ಪ ಬೆಂದಂತಾದಾಗ 1 ಲೋಟ ಬಿಸಿ ನೀರು ಹಾಕಿ ಮತ್ತೆ ಮುಚ್ಚಳ ಮುಚ್ಚಿ ಬೇಯಲು ಬಿಡಿ (4-5 ನಿಮಿಷ, ದೊಡ್ಡ ಉರಿಯಲ್ಲಿ). ಮುಕ್ಕಾಲು ಭಾಗ ಬೆಂದಂತಾದಾಗ ಸ್ವಲ್ಪ ಮೆಣಸಿನಪುಡಿ, ಜೀರಿಗೆ ಪುಡಿ ಹಾಕಿ ಮಿಕ್ಸ್‌ ಮಾಡಿ, ಫ್ರೆತ್ರೖ ಮಾಡಿ. ಕಾಯಿತುರಿ, ಕೊತ್ತಂಬರಿಸೊಪ್ಪಿನಿಂದ ಗಾರ್ನಿಷ್‌ ಮಾಡಿ.

ಸೀಮೆಬದನೆ ಆಲೂ ಕರಿ

ಬೇಕಾಗುವ ಸಾಮಗ್ರಿ: ಸೀಮೆಬದನೆಕಾಯಿ 1, ಆಲೂಗಡ್ಡೆ 1, ಈರುಳ್ಳಿ 1, ತೆಂಗಿನತುರಿ 1 ಕಪ್‌, ಸಾಸಿವೆ 1 ಚಮಚ, ಧನಿಯಾ 2 ಚಮಚ, ಹುಣಸೆಹಣ್ಣು, ಬ್ಯಾಡಗಿ ಮೆಣಸಿನಕಾಯಿ 5-6, ಕೊತ್ತಂಬರಿ ಸೊಪ್ಪು, ಸಾಸಿವೆ, ಜೀರಿಗೆ, ಕರಿಬೇವು, ಅರಿಶಿನಪುಡಿ, ಉಪ್ಪು, ಎಣ್ಣೆ.

ಮಾಡುವ ವಿಧಾನ:

ಸೀಮೆಬದನೆಕಾಯಿ ಹಾಗೂ ಆಲೂವನ್ನು ಸಿಪ್ಪೆ ತೆಗೆದು ಸಣ್ಣದಾಗಿ ಹೆಚ್ಚಿಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಕರಿಬೇವು, ಈರುಳ್ಳಿ, ಅರಿಶಿನ ಹಾಕಿ ಫ್ರೈ ಮಾಡಿ ಹೆಚ್ಚಿಕೊಂಡ ತರಕಾರಿ ಹಾಕಿ, ಉಪ್ಪು, ಸ್ವಲ್ಪ ನೀರು ಹಾಕಿ 3-4 ನಿಮಿಷ ಬೇಯಲು ಬಿಡಿ. ಮಿಕ್ಸಿ ಜಾರಿಗೆ ತೆಂಗಿನತುರಿ, ಸಾಸಿವೆ, ದನಿಯಾ, ಬ್ಯಾಡಗಿ ಮೆಣಸಿನಕಾಯಿ, ಹುಣಸೆ ರಸ, ಕೊತ್ತಂಬರಿ ಸೊಪ್ಪು, ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಈಗ ಫ್ರೈ ಆಗುತ್ತಿರುವ ತರಕಾರಿಗೆ ರುಬ್ಬಿಕೊಂಡಿದ್ದನ್ನು ಹಾಕಿ 3-4 ನಿಮಿಷ ಕುದಿಸಿ, ಕೊತ್ತಂಬರಿ ಸೊಪ್ಪು ಉದುರಿಸಿ ಸವ್‌ರ್‍ ಮಾಡಿ (ದಪ್ಪ ಕನ್ಸಿಸ್ಟನ್ಸಿಯಲ್ಲಿರಲಿ).

ಆಲೂ-ಗೋಬಿ ಮಸಾಲಾ

ಬೇಕಾಗುವ ಸಾಮಗ್ರಿ: ಆಲೂಗಡ್ಡೆ 2, ಹೂಕೋಸು ಅರ್ಧ, ಈರುಳ್ಳಿ 1, ಟೊಮೆಟೊ 2, ಶುಂಠಿ ಅರ್ಧ ಇಂಚು, ದನಿಯಾಪುಡಿ 1 ಚಮಚ, ಗೋಡಂಬಿ 8-10, ಅಚ್ಚಖಾರದಪುಡಿ 1 ಚಮಚ, ಗರಂ ಮಸಾಲಾ ಅರ್ಧಚಮಚ, ದಾಲ್ಚೀನಿ ಎಲೆ 1, ಕೊತ್ತಂಬರಿ ಸೊಪ್ಪು, ಸಾಸಿವೆ, ಜೀರಿಗೆ, ಅರಿಶಿನ, ಎಣ್ಣೆ, ಬೆಣ್ಣೆ.

ಮಾಡುವ ವಿಧಾನ

ಒಂದು ಪ್ಯಾನಿಗೆ ಎಣ್ಣೆ ಹಾಕಿ ಈರುಳ್ಳಿ, ಟೊಮೆಟೋ, ಶುಂಠಿ, ಗೋಡಂಬಿ, ದನಿಯಾಪುಡಿ, ಅರಿಶಿನ, ಖಾರದಪುಡಿ, ಗರಂ ಮಸಾಲಾ ಎಲ್ಲವನ್ನೂ ಹಾಕಿ ಫ್ರೆತ್ರೖ ಮಾಡಿ ತಣ್ಣಗಾಗಲು ಬಿಡಿ. ಆಲೂ ಹಾಗೂ ಹೂಕೋಸುಗಳನ್ನು ಸಣ್ಣದಾಗಿ ಕತ್ತರಿಸಿ ಅರ್ಧ ಬೇಯಿಸಿಡಿ. ಫ್ರೆತ್ರೖ ಮಾಡಿಟ್ಟಮಸಾಲಾವನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿ.

ಪ್ಯಾನ್‌ನಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಜೀರಿಗೆ, ದಾಲ್ಚಿನ್ನಿ ಎಲೆ ಬಾಡಿಸಿ, ರುಬ್ಬಿಕೊಂಡ ಮಸಾಲೆ ಹಾಕಿ ಫ್ರೆತ್ರೖ ಮಾಡಿ, ಅರ್ಧ ಬೆಂದ ತರಕಾರಿಗಳನ್ನು ಹಾಕಿ ಉಪ್ಪು ಸೇರಿಸಿ, ನೀರು ಬೇಕಿದ್ದಲ್ಲಿ ಸ್ವಲ್ಪ ಹಾಕಿ ಮುಚ್ಚಳ ಮುಚ್ಚಿ ಕುದಿಸಿ, ಕೊನೆಯಲ್ಲಿ ಬೆಣ್ಣೆ, ಕೊತ್ತಂಬರಿ ಸೊಪ್ಪು ಸೇರಿಸಿದರೆ ರೆಸ್ಟೊರೆಂಟ್‌ ರುಚಿಯ ಘಮಘಮ ಆಲೂಗೋಬಿ ಮಸಾಲಾ ರೆಡಿ.

ಚುಮುಚುಮು ಚಳಿಗಾಲಕ್ಕೆ 5 ಬಿಸಿಬಿಸಿ, ಖಾರಖಾರ ರಸಂ ಹಾಗೂ ತಿಳಿಸಾರು ರೆಸಿಪಿಗಳು! 

ಬದನೆಕಾಯಿ ಗ್ರೇವಿ

ಉತ್ತರ ಕರ್ನಾಟಕದ ಜೋಳದ ರೊಟ್ಟಿಜೊತೆ ಮಾಡುವ ಎಣ್ಗಾಯಿಯ ಸಿಂಪ್ಲಿಫೈಡ್‌ ವರ್ಷನ್‌ ಇದು.

ಸಾಮಗ್ರಿ: ಬದನೆಕಾಯಿ 2, ಈರುಳ್ಳಿ 1, ಟೊಮೆಟೊ 1, ಶೇಂಗಾ ಅರ್ಧ ಕಪ್‌, ಬಿಳಿ ಎಳ್ಳು 2 ಚಮಚ, ಅಚ್ಚ ಖಾರದಪುಡಿ 2 ಚಮಚ, ಜೀರಿಗೆ ಪುಡಿ ಅರ್ಧ ಚಮಚ, ಸಾಸಿವೆ

ಜೀರಿಗೆ, ಕರಿಬೇವು, ಕೊತ್ತಂಬರಿ ಸೊಪ್ಪು, ಉಪ್ಪು, ಎಣ್ಣೆ.

ಮಾಡುವ ವಿಧಾನ

ಒಂದು ಮಿಕ್ಸಿ ಜಾರಿಗೆ ಹುರಿದುಕೊಂಡ ಶೇಂಗಾ, ಎಳ್ಳು ಹಾಕಿ ತರಿತರಿ ಪುಡಿ ಮಾಡಿಕೊಳ್ಳಿ. ಬದನೆಕಾಯಿ ಹಾಗೂ ಈರುಳ್ಳಿಯನ್ನು ಸಣ್ಣದಾಗಿ ಉದ್ದುದ್ದ ಕತ್ತರಿಸಿಕೊಳ್ಳಿ. ಪ್ಯಾನಿಗೆ ಎಣ್ಣೆಹಾಕಿ, ಸಾಸಿವೆ, ಜೀರಿಗೆ, ಕರಿಬೇವು ಸಿಡಿಸಿ, ಈರುಳ್ಳಿ, ಟೊಮೆಟೊ, ಬದನೆಕಾಯಿ ಹಾಕಿ ಅರಿಶಿನ, ಉಪ್ಪು ಸೇರಿಸಿ ಫ್ರೆತ್ರೖ ಮಾಡಿ. ಸ್ವಲ್ಪ ನೀರು ಸೇರಿಸಿ ಮುಚ್ಚಳ ಮುಚ್ಚಿ ಬೇಯಲು ಬಿಡಿ. ಚೆನ್ನಾಗಿ ಬೆಂದಾಗ ಶೇಂಗಾಪುಡಿ, ಅಚ್ಚಖಾರದಪುಡಿ, ಜೀರಿಗೆ ಪುಡಿ ಹಾಕಿ ಮಿಕ್ಸ್‌ ಮಾಡಿ ಬೇಕಿದ್ದಲ್ಲಿ ಉಪ್ಪು, ನೀರು ಸೇರಿಸಿ ಕುದಿಸಿ ಕೊತ್ತಂಬರಿ ಸೊಪ್ಪಿನಿಂದ ಗಾರ್ನಿಷ್‌ ಮಾಡಿ ಸವ್‌ರ್‍ ಮಾಡಿ.

click me!