
ಬೂದುಗುಂಬಳಕಾಯಿ ಎಂದಾಕ್ಷಣ ಬಹುತೇಕರಿಗೆ ಸಾಂಬಾರ್, ಪಲ್ಯ ಅಥವಾ ದೋಸೆ ನೆನಪಾಗಬಹುದು. ಆದರೆ ಇದೇ ಬೂದುಗುಂಬಳಕಾಯಿಯಿಂದ ರುಚಿಯಾದ ಕಾಶಿ ಹಲ್ವಾ ಕೂಡ ಮಾಡಬಹುದು. ಮದುವೆ, ಹಬ್ಬ-ಹರಿದಿನ ಹಾಗೂ ವಿಶೇಷ ಸಂದರ್ಭಗಳಲ್ಲಿ ಸವಿಯಲು ಸೂಕ್ತವಾದ ಈ ಹಲ್ವಾ ತಯಾರಿಸುವುದು ಕೂಡ ತುಂಬಾ ಸುಲಭ. ತುಪ್ಪದ ಪರಿಮಳ, ಏಲಕ್ಕಿಯ ಸುವಾಸನೆ, ಗೋಡಂಬಿ-ದ್ರಾಕ್ಷಿಯ ರುಚಿಯೊಂದಿಗೆ ಬೂದುಗುಂಬಳಕಾಯಿಯ ಹಲ್ವಾ ಸಖತ್ ಟೇಸ್ಟಿಯಾಗಿರುತ್ತದೆ. ಹಾಗಾದರೆ ಮನೆಯಲ್ಲಿ ಕಾಶಿ ಹಲ್ವಾ ಮಾಡುವುದು ಹೇಗೆ? ಇಲ್ಲಿದೆ ಸರಳ ವಿಧಾನ.
ಕಾಶಿ ಹಲ್ವಾ ಮಾಡಲು ಬೇಕಾಗುವ ಸಾಮಗ್ರಿಗಳು
ಬೂದುಗುಂಬಳಕಾಯಿ ತುರಿ - 3 ಕಪ್
ತುಪ್ಪ - 1/2 ಕಪ್
ಸಕ್ಕರೆ - 1.5 ಕಪ್
ಗೋಡಂಬಿ - ಸ್ವಲ್ಪ
ದ್ರಾಕ್ಷಿ - ಸ್ವಲ್ಪ
ಏಲಕ್ಕಿ ಪುಡಿ - 1/2 ಟೀ ಸ್ಪೂನ್
ಉಪ್ಪು - ಚಿಟಿಕೆ
ಕಾಶಿ ಹಲ್ವಾ ಮಾಡುವ ವಿಧಾನ
ಮೊದಲಿಗೆ ಬೂದುಗುಂಬಳಕಾಯಿಯನ್ನು ಸಿಪ್ಪೆ ತೆಗೆದು ತುರಿದುಕೊಳ್ಳಿ. ತುರಿದ ನಂತರ ಅದರಲ್ಲಿರುವ ಹೆಚ್ಚುವರಿ ನೀರನ್ನು ಚೆನ್ನಾಗಿ ಹಿಂಡಿ ತೆಗೆದುಕೊಳ್ಳಿ. ಈಗ ಒಂದು ದಪ್ಪ ತಳದ ಬಾಣಲೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ಸ್ವಲ್ಪ ತುಪ್ಪ ಹಾಕಿ ಬಿಸಿ ಮಾಡಿ. ಅದಕ್ಕೆ ಗೋಡಂಬಿ ಮತ್ತು ದ್ರಾಕ್ಷಿ ಹಾಕಿ ಹುರಿದುಕೊಂಡು ಪ್ರತ್ಯೇಕವಾಗಿ ತೆಗೆದಿಟ್ಟುಕೊಳ್ಳಿ. ಅದೇ ಬಾಣಲೆಗೆ ಬೂದುಗುಂಬಳಕಾಯಿ ತುರಿ ಹಾಕಿ ಚೆನ್ನಾಗಿ ಬೇಯಲು ಬಿಡಿ. ಮಧ್ಯಮ ಉರಿಯಲ್ಲಿ ಆಗಾಗ ಕೈಯಾಡಿಸುತ್ತಾ ಬೇಯಿಸಿ.
ಬೂದುಗುಂಬಳಕಾಯಿ ಮೆತ್ತಗಾಗಿ ಅದರಲ್ಲಿರುವ ನೀರು ಬಹುತೇಕ ಆವಿಯಾದ ಬಳಿಕ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸಕ್ಕರೆ ಹಾಕಿದ ಬಳಿಕ ಮತ್ತೆ ಸ್ವಲ್ಪ ನೀರು ಬಿಡುತ್ತದೆ. ಅದನ್ನು ಆಗಾಗ ಕೈಯಾಡಿಸುತ್ತಾ ಬೇಯಿಸುತ್ತಿರಿ. ಮಿಶ್ರಣ ನಿಧಾನವಾಗಿ ಗಟ್ಟಿಯಾಗುತ್ತಾ ಬಂದಾಗ ಉಳಿದ ತುಪ್ಪವನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸುತ್ತಾ ಕಲಸಿ. ಹಲ್ವಾ ಬಾಣಲೆಯ ಅಂಚನ್ನು ಬಿಟ್ಟು ತುಪ್ಪ ಮೇಲಕ್ಕೆ ಬರುವ ಹಂತಕ್ಕೆ ಬಂದಾಗ ಏಲಕ್ಕಿ ಪುಡಿ ಮತ್ತು ಚಿಟಿಕೆ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕೊನೆಯಲ್ಲಿ ಹುರಿದ ಗೋಡಂಬಿ ಮತ್ತು ದ್ರಾಕ್ಷಿ ಸೇರಿಸಿ ಒಂದು ಬಾರಿ ಕಲಸಿ. ನಂತರ ಒಲೆಯಿಂದ ಕೆಳಗಿಳಿಸಿ. ರುಚಿಯಾದ, ತುಪ್ಪದ ಪರಿಮಳ ತುಂಬಿದ ಕಾಶಿ ಹಲ್ವಾ ಸವಿಯಲು ಸಿದ್ಧ!
ಹಬ್ಬದ ದಿನಕ್ಕೆ ಸೂಕ್ತವಾದ ಸಿಹಿ
ಸರಳವಾಗಿ ಸಿಗುವ ಬೂದುಗುಂಬಳಕಾಯಿಯಿಂದಲೇ ತಯಾರಿಸಬಹುದಾದ ಈ ಹಲ್ವಾ ಹಬ್ಬ-ಹರಿದಿನಗಳಲ್ಲಿ ಅಥವಾ ಮನೆಯಲ್ಲಿ ವಿಶೇಷ ಸಿಹಿ ತಯಾರಿಸಬೇಕೆಂದಾಗ ಮಾಡಬಹುದು. ಬಿಸಿ ಬಿಸಿಯಾಗಿ ಅಥವಾ ತಣ್ಣಗಾದ ಬಳಿಕವೂ ಕಾಶಿ ಹಲ್ವಾವನ್ನು ಸವಿಯಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.