
ಹೈದರಾಬಾದ್ (ಏ.30): ಪ್ರೀತಿಯಿಂದ ಕಟ್ಟಿಕೊಂಡ ಸಂಸಾರದಲ್ಲಿ ನಂಬಿಕೆಯೇ ಅಡಿಪಾಯ. ಆದರೆ ಅದೇ ನಂಬಿಕೆಗೆ ಹೆಂಡತಿಯೇ ದ್ರೋಹ ಬಗೆದಾಗ ಆ ವ್ಯಕ್ತಿ ಅನುಭವಿಸುವ ನೋವು ಎಂತಹುದು ಎಂಬುದಕ್ಕೆ ಹೈದರಾಬಾದ್‌ನ ಈ ಘಟನೆ ಕನ್ನಡಿ ಹಿಡಿದಿದೆ. ಸಾಫ್ಟ್‌ವೇರ್ ಇಂಜಿನಿಯರ್ ಸೀತಾರಾಂ ಎಂಬುವವರು ತಮ್ಮ ಪತ್ನಿ ರೇಣುಕಾ ಅವರ ಅನೈತಿಕ ಸಂಬಂಧಗಳಿಂದ ಬೇಸತ್ತು ಹೈದರಾಬಾದ್‌ನ ಕೆರೆಗೆ ಜಿಗಿದು ಆತ್ಮಹ*ತ್ಯೆ ಮಾಡಿಕೊಂಡಿದ್ದು, ಇದೀಗ ಪ್ರಕರಣದ ಪ್ರಮುಖ ಅಂಶಗಳು ಹೊರಬಂದಿವೆ.
ಸೀತಾರಾಂ ಅವರು ಸಾವಿಗೂ ಮುನ್ನ ಬರೆದಿಟ್ಟಿರುವ 19 ಪುಟಗಳ ಸುದೀರ್ಘ ಡೆತ್ ನೋಟ್ ಈಗ ಎಲ್ಲರ ಕಣ್ಣಲ್ಲಿ ನೀರು ತರಿಸುತ್ತಿದೆ. ಪತ್ನಿ ರೇಣುಕಾ ಕಳೆದ ಒಂದೂವರೆ ವರ್ಷದಲ್ಲಿ ಮೂವರು ವ್ಯಕ್ತಿಗಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಸೀತಾರಾಂ ನೋವಿನಿಂದ ಬರೆದಿದ್ದಾರೆ. ಅಷ್ಟೇ ಅಲ್ಲದೆ, ತನ್ನ ಪ್ರಿಯಕರನ ಜೊತೆಗಿನ ಖಾಸಗಿ ವಿಡಿಯೋಗಳನ್ನು ಅವಳು ರೆಕಾರ್ಡ್ ಮಾಡಿಕೊಂಡಿದ್ದಳು. ಅದರಲ್ಲಿ ರಮಣ ಎಂಬ ವ್ಯಕ್ತಿ ಆ ವಿಡಿಯೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದ. ಇದನ್ನು ನೋಡಿದ ಸೀತಾರಾಂ ಅವರ ಮನಸ್ಸು ಸಂಪೂರ್ಣವಾಗಿ ಒಡೆದು ಹೋಗಿತ್ತು.
'ನಾನು ನನ್ನ ಪತ್ನಿ ರೇಣುಕಾಗೆ ಯಾವುದೇ ಕೊರತೆಯಾಗದಂತೆ ನೋಡಿಕೊಂಡಿದ್ದೆ. ಅವಳಿಗೆ ಏನು ಬೇಕಿತ್ತು? ಪ್ರೀತಿಯೋ ಅಥವಾ ಕಾಮವೋ? ಒಂದೂವರೆ ವರ್ಷದಲ್ಲಿ ಮೂವರನ್ನು ಬದಲಾಯಿಸಿದಳು. ಪ್ರಿಯಕರನ ಜೊತೆಗಿನ ಖಾಸಗಿ ವಿಡಿಯೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ನೋಡಿದ ಮೇಲೆ ನಾನು ಹೇಗೆ ಬದುಕಿರಲಿ? ನನ್ನ ಪತ್ನಿಯ ನಿಜಸ್ವರೂಪ ತಿಳಿದ ಮೇಲೆ ನನಗೆ ಬದುಕುವ ಆಸೆಯೇ ಹೋಯಿತು' ಎಂದು ಸೀತಾರಾಂ ಬರೆದಿದ್ದಾರೆ. ಅಲ್ಲದೆ, 'ಯಾವ ಹೆಣ್ಣೂ ಕೂಡ ಇಂತಹ ದ್ರೋಹವನ್ನು ಮಾಡಬೇಡಿ' ಎಂದು ಇತರರಿಗೆ ಮನವಿಯನ್ನೂ ಮಾಡಿದ್ದಾರೆ.
ಆಂಧ್ರಪ್ರದೇಶದ ಮಾರ್ಕಾಪುರದ ಸೀತಾರಾಂ ಮತ್ತು ನಂದ್ಯಾಲದ ರೇಣುಕಾ ಅವರಿಗೆ 2018ರಲ್ಲಿ ವಿವಾಹವಾಗಿತ್ತು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಹೈದರಾಬಾದ್‌ನ ಬಾಚುಪಲ್ಲಿಯಲ್ಲಿ ವಾಸವಿದ್ದ ಈ ದಂಪತಿಗಳ ಜೀವನದಲ್ಲಿ ರೇಣುಕಾಳ ಅಕ್ರಮ ಸಂಬಂಧ ಬಿರುಗಾಳಿ ಎಬ್ಬಿಸಿತ್ತು. ತಾನು ಮನೆಯಲ್ಲಿ ಇಲ್ಲದ ಸಮಯದಲ್ಲಿ ಪ್ರಿಯಕರ ರಮಣ ಮನೆಗೆ ಬರುತ್ತಿದ್ದ ವಿಷಯ ಸೀತಾರಾಂಗೆ ತಿಳಿದಿತ್ತು. ಇದರಿಂದ ಮನನೊಂದ ಸೀತಾರಾಂ ಕಳೆದ ಫೆಬ್ರವರಿಯಲ್ಲಿ ಹುಸೇನ್ ಸಾಗರ್ (ಟ್ಯಾಂಕ್ ಬಂಡ್) ಗೆ ಜಿಗಿದು ಆತ್ಮ*ಹತ್ಯೆ ಮಾಡಿಕೊಂಡಿದ್ದರು.
ಸೀತಾರಾಂ ಪೋಷಕರ ದೂರಿನ ಮೇರೆಗೆ ಹೈದರಾಬಾದ್ ಪೊಲೀಸರು ತನಿಖೆ ಆರಂಭಿಸಿದ್ದರು. ಸೀತಾರಾಂ ಬರೆದಿದ್ದ 19 ಪುಟಗಳ ಡೆತ್ ನೋಟ್ ಪ್ರಕರಣಕ್ಕೆ ಹೊಸ ತಿರುವು ನೀಡಿತು. ಇದರ ಆಧಾರದ ಮೇಲೆ ಪೊಲೀಸರು ಇದೀಗ ಪತ್ನಿ ರೇಣುಕಾ ಹಾಗೂ ಅವಳ ಇಬ್ಬರು ಪ್ರಿಯಕರರಾದ ರಮಣಾ ರೆಡ್ಡಿ ಮತ್ತು ಶ್ರವಣ್ ಎಂಬುವವರನ್ನು ಬಂಧಿಸಿದ್ದಾರೆ. ಸೀತಾರಾಂ ಅವರ ಸಾವು ಕೇವಲ ಒಂದು ಆತ್ಮಹ*ತ್ಯೆಯಲ್ಲ, ಅದು ನಂಬಿಕೆಯ ಕಗ್ಗೊಲೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್ ತನ್ನ ಬದುಕನ್ನು ಈ ರೀತಿ ಕೊನೆಗೊಳಿಸಿಕೊಂಡಿರುವುದು ಮೃತರ ಕುಟುಂಬವನ್ನು ಅನಾಥವಾಗಿಸಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.