
ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi) ನುಗ್ಗೆಕಾಯಿ (Moringa) ಪರಾಠ ರೆಸಿಪಿ ಹೇಳ್ತಿದ್ದಂಗೆ ನುಗ್ಗೆಕಾಯಿ ಬೆಲೆ ಗಗನಕ್ಕೇರಿತ್ತು. ನುಗ್ಗೆಕಾಯಿ ಆರೋಗ್ಯಕ್ಕೆ ಒಳ್ಳೆಯದು. ಬರಿ ಕಾಯಿ ಮಾತ್ರವಲ್ಲ ಅದ್ರ ಸೊಪ್ಪಿನ ಬಳಕೆ ಕೂಡ ಬಹಳ ಒಳ್ಳೆಯದು. ನುಗ್ಗೆ ಸೊಪ್ಪಿನಿಂದ ಪಲ್ಯ, ಪರಾಠ ಮಾಡೋದು ಬಹುತೇಕ ಎಲ್ಲರಿಗೂ ಗೊತ್ತು. ಈ ನುಗ್ಗೆ ಸೊಪ್ಪಿನಿಂದ ರುಚಿಯಾದ ಚಟ್ನಿ ಕೂಡ ಮಾಡ್ಬಹುದು. ಇದು ಆರೋಗ್ಯಕ್ಕೆ ಒಳ್ಳೆಯದು. ಮಾಡೋದು ಸುಲಭ. ಇದಕ್ಕೆ ಈರುಳ್ಳಿ, ಬೆಳ್ಳುಳ್ಳಿ ಅಗತ್ಯವಿಲ್ಲ. ಹಾಗಾಗಿ ನೀವು ಇದನ್ನು ಉಪವಾಸದ ಟೈಂನಲ್ಲೂ ಮಾಡ್ಕೊಳ್ಬಹುದು.
ನುಗ್ಗೆ ಸೊಪ್ಪಿನ ಚಟ್ನಿಗೆ ಬೇಕಾಗುವ ಪದಾರ್ಥ :
ಉದ್ದಿನ ಬೇಳೆ : 2.5 ಚಮಚ
ಶುಂಠಿ : 1 ಇಂಚು
ಕರಿಮೆಣಸು : 8 -10
ಜೀರಿಗೆ : ½ ಚಮಚ
ಹುಣಸೆಹಣ್ಣು : 2 ತುಂಡು
ಹಸಿರು ಮೆಣಸಿನಕಾಯಿ : 2-3
ಇಂಗು ಪುಡಿ : 1/2 ಚಮಚ
ಕೆಂಪು ಮೆಣಸಿನಕಾಯಿ : 1
ನುಗ್ಗೆ ಸೊಪ್ಪು : 2 ಕಪ್
ತುರಿದ ತೆಂಗಿನಕಾಯಿ : 1/4 ಕಪ್
ನೀರು ಸ್ವಲ್ಪ
ಉಪ್ಪು : ರುಚಿಗೆ ತಕ್ಕಷ್ಟು
ಎಣ್ಣೆ : ಒಂದು ಚಮಚ
ಗೃಹಿಣಿಯರೇ ಯಾವುದೇ ಕಾರಣಕ್ಕೂ ಈ 7 ಪದಾರ್ಥಗಳನ್ನ ಗ್ಯಾಸ್, ಸ್ಟೌ ಬಳಿ ಇಡಬೇಡಿ!
ನುಗ್ಗೆ ಸೊಪ್ಪಿನ ಚಟ್ನಿ ಮಾಡುವ ವಿಧಾನ : ಮೊದಲು ಒಂದು ಪ್ಯಾನ್ ಗೆ 1 ಚಮಚ ಎಣ್ಣೆಯನ್ನು ಹಾಕಿ, ಬಿಸಿ ಮಾಡಿ. ಅದು ಬಿಸಿ ಆಗ್ತಿದ್ದಂತೆ ಉದ್ದಿನ ಬೇಳೆಯನ್ನುಹಾಕಿ. ಉದ್ದಿನ ಬೇಳೆ ಸುವಾಸನೆ ಬರುವವರೆಗೆ ಕೆಲವು ನಿಮಿಷ ಕೈ ಆಡಿಸಿ. ನಂತ್ರ ಅದಕ್ಕೆ ಶುಂಠಿ ಸೇರಿಸಿ. ಉದ್ದಿನ ಬೇಳೆ ತಿಳಿ ಕಂದು ಬಣ್ಣಕ್ಕೆ ಬರುವವರೆಗೆ ಕೈ ಆಡಿಸಿ. ಆ ನಂತ್ರ ಪ್ಯಾನ್ ಗೆ ಕರಿಮೆಣಸು, ಜೀರಿಗೆ, ಹುಣಸೆ ಹಣ್ಣು, ಮತ್ತು ಹಸಿರು ಮೆಣಸಿನಕಾಯಿಗಳನ್ನು ಸೇರಿಸಿ. ಇಂಗು ಮತ್ತು ಕೆಂಪು ಮೆಣಸಿನಕಾಯಿಗಳನ್ನು ಸೇರಿಸಿ ಸ್ವಲ್ಪ ಹುರಿಯಿರಿ. ಆ ನಂತ್ರ ತೊಳೆದ ನುಗ್ಗೆ ಸೊಪ್ಪನ್ನು ಅದಕ್ಕೆ ಸೇರಿಸಿ ಚೆನ್ನಾಗಿ ಹುರಿಯಿರಿ. ಸೊಪ್ಪು ಹುರಿದ ನಂತ್ರ ಗ್ಯಾಸ್ ಆಫ್ ಮಾಡಿ. ಈ ಮಿಶ್ರಣಕ್ಕೆ ತೆಂಗಿನ ತುರಿ ಸೇರಿಸಿ, ತಣ್ಣಗಾದ ಮೇಲೆ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಅತಿ ಹೆಚ್ಚು ನೀರಿನ ಅಗತ್ಯವಿಲ್ಲ. ಸ್ವಲ್ಪ ನೀರನ್ನು ಹಾಕಿ ಮಿಶ್ರಣವನ್ನು ರುಬ್ಬಿಕೊಳ್ಳಿ.
99% ಜನರು ಈ ತಪ್ಪು ಮಾಡ್ತಾರೆ! ಮನೆಯಲ್ಲಿನ ಪ್ರಿಡ್ಜ್ ಬಿಸಿಯಾಗದಿರಲು
ಒಗ್ಗರಣೆಗೆ ಅಗತ್ಯವಿರುವ ಪದಾರ್ಥ : ಚಟ್ನಿಗೆ ಒಗ್ಗರಣೆ ಇಲ್ಲ ಅಂದ್ರೆ ರುಚಿ ಇಲ್ಲ. ನೀವು ಒಗ್ಗರಣೆಗೆ ಎಣ್ಣೆ, 1/2 ಟೀಸ್ಪೂನ್ ಕಡಲೆ ಬೇಳೆ, 1/2 ಟೀಸ್ಪೂನ್ ಉದ್ದಿನ ಬೇಳೆ, 1 ಟೀಸ್ಪೂನ್ ಸಾಸಿವೆ, 1 ಒಣ ಕೆಂಪು ಮೆಣಸಿನಕಾಯಿ, ಕರಿಬೇವಿನ ಎಲೆಯನ್ನು ಬಳಸಬೇಕು. ಒಗ್ಗರಣೆ ಮಾಡಲು ಒಂದು ಸಣ್ಣ ಪ್ಯಾನ್ ಗೆ ಎಣ್ಣೆ ಹಾಕಿ ಬಿಸಿ ಮಾಡಿ. ನಂತ್ರ ಅದಕ್ಕೆ ಸಾಸಿವೆ ಸೇರಿಸಿ. ನಂತ್ರ ಉದ್ದಿನ ಬೇಳೆ, ಕಡಲೆ ಬೇಳೆ ಹಾಕಿ. ಒಣ ಮೆಣಸಿನ ಕಾಯಿ ಮತ್ತು ಕರಿಬೇವನ್ನು ಹಾಕಿ. ಕೆಲ ಸೆಕೆಂಡ್ ಕೈ ಆಡಿಸಿ ನಂತ್ರ ಚಟ್ನಿಗೆ ಈ ಒಗ್ಗರಣೆಯನ್ನು ಸೇರಿಸಿ. ಆ ನಂತ್ರ ಚಟ್ನಿಗೆ ಉಪ್ಪನ್ನು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ.
ಇದನ್ನು ನೀವು ದೋಸೆ, ಇಡ್ಲಿ, ಚಪಾತಿ ಅಥವಾ ಅನ್ನದ ಜೊತೆ ಸರ್ವ್ ಮಾಡಬಹುದು. ನುಗ್ಗೆ ಸೊಪ್ಪು ಜೀವಸತ್ವಗಳು, ಹಿಮೋಗ್ಲೋಬಿನ್, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.