ಬೋಂಡಾ-ಬಜ್ಜಿ ಬೋರ್ ಆಗಿದ್ಯಾ? ಸಂಜೆ ಸ್ನ್ಯಾಕ್ಸ್‌ಗೆ ಹತ್ತೇ ನಿಮಿಷದಲ್ಲಿ ಮಾಡಿ ಗರಿಗರಿಯಾದ ಪನೀರ್ ಫಿಂಗರ್ಸ್

Published : Oct 08, 2026, 09:45 PM IST
Paneer fingers recipe

ಸಾರಾಂಶ

Paneer fingers recipe: ಸಂಜೆ ಚಹಾ ಜೊತೆಗೆ ಬೋಂಡಾ-ಬಜ್ಜಿ ತಿಂದು ಬೋರ್ ಆಗಿದ್ಯಾ? ಹಾಗಿದ್ರೆ ಕೇವಲ 15-20 ನಿಮಿಷಗಳಲ್ಲಿ ಮೇಲೆ ಗರಿಗರಿಯಾಗಿ, ಒಳಗಡೆ ಮೃದುವಾಗಿರುವ ‘ಪನೀರ್ ಫಿಂಗರ್ಸ್’ ಮನೆಯಲ್ಲೇ ಟ್ರೈ ಮಾಡಿ. ಮಕ್ಕಳಿಂದ ದೊಡ್ಡವರವರೆಗೂ ಎಲ್ಲರೂ ಇಷ್ಟಪಡುವ ಈ ಸೂಪರ್ ಸ್ನ್ಯಾಕ್ ಮಾಡುವ ಸರಳ ವಿಧಾನ ಇಲ್ಲಿದೆ.

ಸಾಮಾನ್ಯವಾಗಿ ಸಂಜೆಯಾಗುತ್ತಿದ್ದಂತೆ ಏನಾದರೂ ಗರಿಗರಿಯಾದ, ಬಿಸಿಬಿಸಿಯಾದ ತಿಂಡಿ ತಿನ್ನಬೇಕೆಂಬ ಹಂಬಲ ಬಹುತೇಕರಿಗೆ ಇರುತ್ತದೆ. ಈ ಸಮಯದಲ್ಲಿ ಹಲವರು ಬೋಂಡಾ, ಬಜ್ಜಿ, ಸಮೋಸಾ ಅಥವಾ ವಡೆಗಳ ಮೊರೆ ಹೋಗುವುದುಂಟು. ಆದರೆ, ಆರೋಗ್ಯಕ್ಕೂ ಹಿತಕರವಾಗಿ, ನಾಲಿಗೆಗೂ ರುಚಿ ನೀಡುವಂತಹ ಹೊಸ ತಿಂಡಿಯನ್ನು ಬಯಸುವವರು ‘ಪನೀರ್ ಫಿಂಗರ್ಸ್’ (Paneer Fingers) ಟ್ರೈ ಮಾಡಬಹುದು.

ಮೇಲ್ಭಾಗದಲ್ಲಿ ಗರಿಗರಿಯಾಗಿ, ಒಳಗಡೆ ಮೃದುವಾಗಿರುವ ಈ ಸ್ನ್ಯಾಕ್ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರ ಮೆಚ್ಚುಗೆ ಗಳಿಸಲಿದೆ. ವೀಕೆಂಡ್ ಪಾರ್ಟಿ, ಟೀ ಟೈಮ್ ಅಥವಾ ಮನೆಗೆ ಅತಿಥಿಗಳು ಬಂದಾಗ ಇದನ್ನು ಸುಲಭವಾಗಿ ತಯಾರಿಸಿ ಬಡಿಸಬಹುದು. ಇದನ್ನು ಮಾಡುವ ಸರಳ ವಿಧಾನ ಇಲ್ಲಿದೆ..

ಬೇಕಾಗುವ ಸಾಮಗ್ರಿಗಳು

ಮ್ಯಾರಿನೇಷನ್‌ಗಾಗಿ
ಪನೀರ್ – 250 ಗ್ರಾಂ
ಖಾರದ ಪುಡಿ – ಅರ್ಧ ಚಮಚ
ಅರಿಶಿನ – ಕಾಲು ಚಮಚ
ಗರಂ ಮಸಾಲಾ – ಅರ್ಧ ಚಮಚ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ನಿಂಬೆ ರಸ – 1 ಚಮಚ
ರುಚಿಗೆ ತಕ್ಕಷ್ಟು ಉಪ್ಪು

ಕೋಟಿಂಗ್‌ಗಾಗಿ
ಮೈದಾ ಹಿಟ್ಟು – 2 ಚಮಚ
ಕಾರ್ನ್‌ಫ್ಲೋರ್ – 2 ಚಮಚ
ಕಾಳುಮೆಣಸಿನ ಪುಡಿ (ಪೆಪ್ಪರ್ ಪೌಡರ್) – ಅರ್ಧ ಚಮಚ
ಬ್ರೆಡ್ ಕ್ರಂಬ್ಸ್ (ಬ್ರೆಡ್ ಪುಡಿ) – 1 ಕಪ್

ಕರಿಯಲು ಅಗತ್ಯವಿರುವಷ್ಟು ಎಣ್ಣೆ

ಮಾಡುವ ಸರಳ ವಿಧಾನ

ಮೊದಲು ಪನೀರ್ ಅನ್ನು ಉದ್ದುದ್ದವಾಗಿ (ಬೆರಳುಗಳ ಆಕಾರದಲ್ಲಿ) ಒಂದೇ ಸಮನಾಗಿ ಕತ್ತರಿಸಿಕೊಳ್ಳಿ. ಒಂದು ಬಟ್ಟಲಿನಲ್ಲಿ ಕತ್ತರಿಸಿದ ಪನೀರ್ ತುಂಡುಗಳು, ಖಾರದ ಪುಡಿ, ಅರಿಶಿನ, ಗರಂ ಮಸಾಲಾ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು ಮತ್ತು ನಿಂಬೆ ರಸ ಹಾಕಿ ಮಸಾಲೆ ಚೆನ್ನಾಗಿ ಹಿಡಿಯುವಂತೆ ನಿಧಾನವಾಗಿ ಕಲಸಿ. (ಪನೀರ್ ತುಂಡುಗಳು ಮುರಿಯದಂತೆ ಎಚ್ಚರವಹಿಸಿ). ನಂತರ ಇದನ್ನು 15 ನಿಮಿಷಗಳ ಕಾಲ ಹಾಗೆಯೇ ಇಡಿ.

ಮತ್ತೊಂದು ಪಾತ್ರೆಯಲ್ಲಿ ಮೈದಾ, ಕಾರ್ನ್‌ಫ್ಲೋರ್, ಚಿಟಿಕೆ ಅರಿಶಿನ, ಕಾಳುಮೆಣಸಿನ ಪುಡಿ ಮತ್ತು ಸ್ವಲ್ಪ ಉಪ್ಪು ಹಾಕಿ, ನೀರು ಸೇರಿಸಿ ಹೆಚ್ಚು ತೆಳುವಾಗದಂತೆ ಹದವಾಗಿ ಕಲಸಿಕೊಳ್ಳಿ.

ಮ್ಯಾರಿನೇಟ್ ಮಾಡಿದ ಪನೀರ್ ತುಂಡುಗಳನ್ನು ಒಂದೊಂದಾಗಿ ತೆಗೆದುಕೊಂಡು ಮೊದಲು ಮೈದಾ-ಕಾರ್ನ್‌ಫ್ಲೋರ್ ಮಿಶ್ರಣದಲ್ಲಿ ಅದ್ದಿ, ನಂತರ ಬ್ರೆಡ್ ಕ್ರಂಬ್ಸ್‌ನಲ್ಲಿ ಹೊರಳಿಸಿ (ಬ್ರೆಡ್ ಪುಡಿ ಎಲ್ಲಾ ಕಡೆ ಸರಿಯಾಗಿ ಅಂಟಿಕೊಳ್ಳುವಂತೆ ಮಾಡಬೇಕು). ಎಲ್ಲ ತುಂಡುಗಳಿಗೂ ಇದೇ ರೀತಿ ಮಾಡಿ ಪಕ್ಕಕ್ಕಿಡಿ.

ಬಾಣಲೆಯಲ್ಲಿ ಎಣ್ಣೆ ಕಾಯಲು ಇಡಿ. ಎಣ್ಣೆ ಬಿಸಿಯಾದ ನಂತರ ಪನೀರ್ ತುಂಡುಗಳನ್ನು ಹಾಕಿ, ಮಧ್ಯಮ ಉರಿಯಲ್ಲಿ ಹೊಂಬಣ್ಣ (ಗೋಲ್ಡನ್ ಬ್ರೌನ್) ಬರುವವರೆಗೆ ಗರಿಗರಿಯಾಗಿ ಕರಿಯಿರಿ. ನಂತರ ಹೆಚ್ಚುವರಿ ಎಣ್ಣೆಯನ್ನು ತೆಗೆಯಲು ಟಿಶ್ಯೂ ಪೇಪರ್ ಮೇಲೆ ಇಡಿ.

ಆರೋಗ್ಯ ಪ್ರಿಯರಿಗೆ ಸಲಹೆ

ಡಯಟ್ ಮಾಡುವವರು ಅಥವಾ ಎಣ್ಣೆಯಲ್ಲಿ ಕರಿಯಲು ಇಷ್ಟಪಡದವರು ಇದನ್ನು ‘ಏರ್ ಫ್ರೈಯರ್’ (Air Fryer) ನಲ್ಲೂ ಸುಲಭವಾಗಿ ಮಾಡಿಕೊಳ್ಳಬಹುದು.

ಈ ರುಚಿಕರವಾದ ಬಿಸಿಬಿಸಿ ಪನೀರ್ ಫಿಂಗರ್ಸ್ ಅನ್ನು ಟೊಮೆಟೊ ಕೆಚಪ್ ಅಥವಾ ಪುದೀನಾ ಚಟ್ನಿಯೊಂದಿಗೆ ಸವಿದರೆ ಸಂಜೆಯ ಟೀ ಸಮಯ ಮತ್ತಷ್ಟು ಮಜವಾಗಿರುತ್ತದೆ.

ನೆನಪಿಡಿ..

ಪನೀರ್ ರಬ್ಬರ್‌ನಂತೆ ಗಟ್ಟಿಯಾಗದಂತೆ ತಡೆಯಲು
ಪನೀರ್ ಅನ್ನು ಎಣ್ಣೆಯಲ್ಲಿ ಅತಿಯಾಗಿ ಕರಿಯಬಾರದು (Overcook ಮಾಡಬೇಡಿ). ಹೆಚ್ಚು ಹೊತ್ತು ಕರಿದರೆ ಪನೀರ್ ಒಳಗಡೆ ಗಟ್ಟಿಯಾಗಿ, ರಬ್ಬರ್ ತರಹ ಆಗುತ್ತದೆ. ಬಣ್ಣ ಬದಲಾಗಿ ಹೊಂಬಣ್ಣಕ್ಕೆ ತಿರುಗಿದ ತಕ್ಷಣ ತೆಗೆಯಿರಿ. ಫ್ರಿಡ್ಜ್‌ನಲ್ಲಿಟ್ಟ ಪನೀರ್ ಗಟ್ಟಿಯಾಗಿದ್ದರೆ, ಕತ್ತರಿಸುವ ಮೊದಲು 5-10 ನಿಮಿಷ ಉಗುರುಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಹಾಕಿ ಅದರಲ್ಲಿ ಇಡಿ. ಇದರಿಂದ ಪನೀರ್ ತುಂಬಾ ಮೃದುವಾಗುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜಗತ್ತಿನ ಬೆಸ್ಟ್ ವಿಸ್ಕಿ, 'ಇಂದ್ರಿ'ಯ ದೀಪಾವಳಿ ಕಲೆಕ್ಟರ್ಸ್ ಎಡಿಷನ್ 2026 ಭಾರತದ ಮಾರುಕಟ್ಟೆಗೆ ಲಗ್ಗೆ, ಬೆಂಗಳೂರಲ್ಲೂ ಲಭ್ಯ!
ನುಗ್ಗೆ ಸೊಪ್ಪಿನ ಪಲ್ಯ, ಪರೋಟ ತಿಂದಿದ್ದೀರಾ? ಈ ಬಾರಿ ಮಾಡಿ ರುಚಿಯಾದ ಹಲ್ವಾ!