ದಕ್ಷಿಣ ಭಾರತೀಯರ ಮನೆಗಳಲ್ಲಿ ಬೆಳಗ್ಗಿನ ಉಪಾಹಾರಕ್ಕೆ (ಬ್ರೇಕ್‌ಫಾಸ್ಟ್) ಮೊದಲ ಆಯ್ಕೆ ದೋಸೆ. ಆದರೆ, ನಾವೆಲ್ಲರೂ ಮನೆಯಲ್ಲಿ ದೋಸೆ ಮಾಡಿದಾಗ, "ಹೋಟೆಲ್‌ನಲ್ಲಿ ಸಿಗೋ ಹಾಗೆ ಕೆಂಪಗೆ, ಗರಿಗರಿಯಾಗಿ ಯಾಕೆ ಬರಲ್ಲ?" ಎಂಬ ಪ್ರಶ್ನೆ ಕಾಡುವುದು ಸಹಜ. ಹೋಟೆಲ್ ದೋಸೆಯ ರುಚಿಗೆ ಪ್ರಮುಖ ಕಾರಣ ಅವರು ಬಳಸುವ ಪದಾರ್ಥಗಳ ಅಳತೆ ಮತ್ತು ಹಿಟ್ಟು ತಯಾರಿಸುವ ಸೂಕ್ಷ್ಮ ವಿಧಾನ. ಅದೇ ಹೋಟೆಲ್ ಸೀಕ್ರೆಟ್ ಬಳಸಿ ಮನೆಯಲ್ಲೇ ಪರ್ಫೆಕ್ಟ್ ದೋಸೆ ಹಿಟ್ಟು ಮಾಡುವ ಸುಲಭ ವಿಧಾನ ಇಲ್ಲಿದೆ.
ಅಕ್ಕಿ (ದೋಸೆ ಅಕ್ಕಿ/ಸೋನಾ ಮಸೂರಿ): 3 ಕಪ್
ಉದ್ದಿನಬೇಳೆ: 1 ಕಪ್
ಕಡಲೆಬೇಳೆ: 1 ಟೇಬಲ್ ಚಮಚ (ದೋಸೆಗೆ ಒಳ್ಳೆಯ ಬಂಗಾರದ ಬಣ್ಣ ಮತ್ತು ಗರಿಗರಿತನ ನೀಡುತ್ತದೆ)
ಮೆಂತ್ಯ ಕಾಳು: 1 ಟೇಬಲ್ ಚಮಚ (ಉತ್ತಮ ಸುವಾಸನೆ ಮತ್ತು ಹಿಟ್ಟು ಚೆನ್ನಾಗಿ ಉಬ್ಬಲು ಸಹಕಾರಿ)
ನೀರು ಮತ್ತು ಉಪ್ಪು: ಅಗತ್ಯಕ್ಕೆ ತಕ್ಕಷ್ಟು
1. ನೆನೆಸುವ ಪ್ರಕ್ರಿಯೆ
ಮೊದಲು ಒಂದು ಪಾತ್ರೆಯಲ್ಲಿ 3 ಕಪ್ ಅಕ್ಕಿಯನ್ನು ತೆಗೆದುಕೊಂಡು ಚೆನ್ನಾಗಿ ತೊಳೆದು, ನೀರು ಹಾಕಿ ಸುಮಾರು 12 ಗಂಟೆಗಳ ಕಾಲ ನೆನೆಯಲು ಇಡಿ.
ಮತ್ತೊಂದು ಪಾತ್ರೆಯಲ್ಲಿ 1 ಕಪ್ ಉದ್ದಿನಬೇಳೆ, 1 ಚಮಚ ಮೆಂತ್ಯ ಮತ್ತು 1 ಚಮಚ ಕಡಲೆಬೇಳೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ನೀರು ಹಾಕಿ ಇದನ್ನು ಕೂಡ 12 ಗಂಟೆಗಳ ಕಾಲ ನೆನೆಸಿಡಿ.
2. ಹಿಟ್ಟು ರುಬ್ಬಿ
12 ಗಂಟೆಗಳ ನಂತರ ಅಕ್ಕಿ ಮತ್ತು ಬೇಳೆಯ ಮಿಶ್ರಣವನ್ನು ಮತ್ತೊಮ್ಮೆ ಸ್ವಚ್ಛವಾಗಿ ತೊಳೆದುಕೊಳ್ಳಿ.
ಗ್ರೈಂಡರ್ ಅಥವಾ ಮಿಕ್ಸಿ ಜಾರ್‌ಗೆ ಮೊದಲು ಉದ್ದಿನಬೇಳೆ ಮಿಶ್ರಣವನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ನಂತರ ನೆನೆಸಿದ ಅಕ್ಕಿಯನ್ನು ಸೇರಿಸಿ, ಹೆಚ್ಚು ನೀರು ಹಾಕದೆ ಸ್ವಲ್ಪ ಸ್ವಲ್ಪವೇ ನೀರು ಚಿಮುಕಿಸುತ್ತಾ ನುಣ್ಣಗೆ (ಬರಬರ ಇಲ್ಲದಂತೆ ಸ್ಮೂತ್ ಆಗಿ) ರುಬ್ಬಿಕೊಳ್ಳಿ.
3. ಹಿಟ್ಟು ಹುದುಗುವಿಕೆ (Fermentation)
ರುಬ್ಬಿದ ಹಿಟ್ಟನ್ನು ಒಂದು ಅಗಲವಾದ ಪಾತ್ರೆಗೆ ಹಾಕಿ ಕೈಯಿಂದ ಚೆನ್ನಾಗಿ ಒಂದು ಸುತ್ತು ಕಲಸಿ (ನಮ್ಮ ಕೈಯಲ್ಲಿರುವ ನೈಸರ್ಗಿಕ ಉಷ್ಣತೆಯಿಂದಾಗಿ ಹಿಟ್ಟು ಬೇಗನೆ ಮತ್ತು ಅದ್ಭುತವಾಗಿ ಹುದುಗುತ್ತದೆ Ferment ಆಗುತ್ತದೆ) ಮುಚ್ಚಳ ಮುಚ್ಚಿ 12 ಗಂಟೆಗಳ ಕಾಲ ಬೆಚ್ಚಗಿನ ಜಾಗದಲ್ಲಿ ಹಾಗೆಯೇ ಬಿಡಿ (ಯಾವುದೇ ಕಾರಣಕ್ಕೂ ಮಧ್ಯದಲ್ಲಿ ಮುಚ್ಚಳ ತೆಗೆಯಬೇಡಿ).
12 ಗಂಟೆಗಳ ನಂತರ ಹಿಟ್ಟು ಚೆನ್ನಾಗಿ ಉಬ್ಬಿ ಬಂದಿರುತ್ತದೆ (ಫರ್ಮೆಂಟೇಶನ್ ಆಗಿರುತ್ತದೆ).
4. ದೋಸೆ ಮಾಡಿ
ದೋಸೆ ಮಾಡುವ ಮುನ್ನ ಅಗತ್ಯವಿದ್ದಷ್ಟು ಹಿಟ್ಟಿಗೆ ಮಾತ್ರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ನಿಧಾನವಾಗಿ ಕಲಸಿಕೊಳ್ಳಿ.
ದೋಸೆ ಹಾಕುವಾಗ ಹಂಚು ಅತಿಯಾಗಿ ಕಾದಿರಬಾರದು. ಹಂಚು ತುಂಬಾ ಬಿಸಿಯಾಗಿದ್ದರೆ ಹಿಟ್ಟು ಸರಿಯಾಗಿ ಹರಡಲು ಆಗುವುದಿಲ್ಲ. ಪ್ರತಿ ದೋಸೆ ಹಾಕುವ ಮುನ್ನ ಹಂಚಿನ ಮೇಲೆ ಸ್ವಲ್ಪ ನೀರು ಚಿಮುಕಿಸಿ ತಣ್ಣಗೆ ಮಾಡಿಕೊಂಡು ನಂತರ ದೋಸೆ ಹಾಕಿ.
ಒಂದು ಸೌಟು ಹಿಟ್ಟು ಹಾಕಿ ತೆಳುವಾಗಿ ಹರಡಿ. ಸುತ್ತಲೂ ಸ್ವಲ್ಪ ಎಣ್ಣೆ ಅಥವಾ ಬೆಣ್ಣೆ ಹಾಕಿ ಬೇಯಿಸಿದರೆ, ಅಪ್ಪಟ ಹೋಟೆಲ್ ಶೈಲಿಯ ಕೆಂಪಗಿನ, ಗರಿಗರಿಯಾದ ದೋಸೆ ಸಿದ್ಧ!
ಇದನ್ನು ಕಾಯಿ ಚಟ್ನಿ, ಕೆಂಪು ಚಟ್ನಿ ಅಥವಾ ಆಲೂಗಡ್ಡೆ ಪಲ್ಯದ ಜೊತೆ ಬಿಸಿಬಿಸಿಯಾಗಿ ಸವಿಯಲು ಅದ್ಭುತ ರುಚಿ ನೀಡುತ್ತದೆ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.