
ಉತ್ತಮ ಆರೋಗ್ಯಕ್ಕೆ ಹಣ್ಣುಗಳು ತುಂಬಾ ಸಹಾಯಕಾರಿ. ದೇಹದ ಪೋಷಣೆ, ಬೆಳವಣಿಗೆಗೆ ಹಣ್ಣುಗಳ ಸೇವನೆ ಉತ್ತಮ. ಇಂತಹ ಆರೋಗ್ಯಕರ ಹಣ್ಣುಗಳಲ್ಲಿ ದಾಳಿಂಬೆ ಕೂಡ ಒಂದು. ಇದು ದೇಹವನ್ನು ಸದೃಢವಾಗಿಡುತ್ತದೆ. ಜತೆಗೆ ಅನೇಕ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಲು ಸಹಾಯಕವಾಗಿದೆ. ದಾಳಿಂಬೆಯಲ್ಲಿ ವಿಟಮಿನ್ ಕೆ, ಸಿ, ಮತ್ತು ಬಿ, ಕಬ್ಬಿಣ, ಪೊಟ್ಯಾಸಿಯಮ್ ಸೇರಿ ವಿವಿಧ ಪೋಷಕಾಂಶಗಳಿವೆ. ದಾಳಿಂಬೆ ಹಣ್ಣನ್ನು ನಿಯಮಿತವಾಗಿ ಸೇವಿಸುವ ಮೂಲಕ ದೇಹದಲ್ಲಿ ರಕ್ತಹೀನತೆ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಜತೆಗೆ ದೇಹದಲ್ಲಿನ ಹೆಚ್ಚುವರಿ ಬೊಜ್ಜು ನಿವಾರಣೆಗೆ ಇದು ಸಹಾಯ ಮಾಡುತ್ತದೆ. ಇದು ಕಡಿಮೆ ಪ್ರಮಾಣದ ಕ್ಯಾಲೊರಿ ಹೊಂದಿದ್ದು, ದೇಹದ ತೂಕ ಇಳಿಸಿಕೊಳ್ಳಲು ಸಹಾಯಕವಾಗಿದೆ. ಇದು ಹಲವು ರೋಗಗಳಿಗೂ ಔಷಧಿಯ ಖಜಾನೆಯಂತಿದೆ.
ಉತ್ತಮ ಹೃದಯದ ಆರೋಗ್ಯ:
ದಾಳಿಂಬೆ ಸೇವನೆಯು ಹೃದಯಾಘಾತದ (Heart attack) ಅಪಾಯ ಕಡಿಮೆ ಮಾಡಲು ತುಂಬಾ ಪ್ರಯೋಜನಕಾರಿ. ಇದು ಅನಗತ್ಯವಾಗಿ ರಕ್ತ ಹೆಪ್ಪುಗಟ್ಟುವುದನ್ನು ತಡೆದು, ರಕ್ತ ಸೂಕ್ತ ರೀತಿಯ ಚಲನೆಗೆ ಸಹಾಯ ಮಾಡುತ್ತದೆ. ಇದರಿಂದ ಹೃದಯ ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ದಾಳಿಂಬೆಯಲ್ಲಿ ಫೈಬರ್ ಪ್ರಮಾಣವು ಕಂಡುಬರುತ್ತದೆ, ಇದು ದೇಹದಲ್ಲಿ ನೀರಿನ ಕೊರತೆಯನ್ನು ಪೂರೈಸಲು ಕೆಲಸ ಮಾಡುತ್ತದೆ. ಆದ್ದರಿಂದ ದಾಳಿಂಬೆ (Pomegranate) ಸೇವನೆ ಹೃದಯದ ಆರೋಗ್ಯಕ್ಕೆ ಉತ್ತಮ ಎಂದು ವೈದ್ಯರು ಹೇಳುತ್ತಾರೆ.
ಮಾರಕ ಕ್ಯಾನ್ಸರ್’ಗೆ ರಾಮಬಾಣ:
ದಾಳಿಂಬೆ (Pomegranate) ಹಣ್ಣುಗಳಲ್ಲಿ ಹಲವಾರು ಆಂಟಿ ಆಕ್ಸಿಡೆಂಟುಗಳು ಇರುತ್ತವೆ. ಇವು ಪೌಷ್ಠಿಕಾಂಶವನ್ನು ನೀಡುವ ಮೂಲಕ ದೇಹದ ಶಕ್ತಿಯನ್ನು ಹೆಚ್ಚಿಸುತ್ತವೆ. ಆದ್ದರಿಂದ ಕ್ಯಾನ್ಸರ್ ವಿರುದ್ಧ ದೇಹ ಹೋರಾಡಲು ಸಹಾಯಕವಾಗುತ್ತದೆ. ದಾಳಿಂಬೆ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ. ಇದರ ಗುಣಲಕ್ಷಣಗಳು ಪ್ರಾಸ್ಟೇಟ್ ಮತ್ತು ಸ್ತನ ಕ್ಯಾನ್ಸರ್ ಕೋಶಗಳನ್ನು ಹೆಚ್ಚಿಸುವುದನ್ನು ತಡೆಯುತ್ತದೆ. ಕ್ಯಾನ್ಸರ್ ಇದ್ದವರು ಅಥವಾ ಕ್ಯಾನ್ಸರ್ (Cancer)ಲಕ್ಷಣಗಳು ಗೋಚರಿಸುತ್ತಿದ್ದವರು ದಾಳಿಂಬೆಯನ್ನು ನಿಯಮಿತವಾಗಿ ಸೇವಿಸುವುದರಿಂದ ಕ್ಯಾನ್ಸರ್ ಆಗಮನವನ್ನು ದೂರವಿಡಬಹುದು.
ಚರ್ಮದ ಆರೋಗ್ಯ ವೃದ್ಧಿ:
ದಾಳಿಂಬೆ ಸೇವನೆಯಿಂದ ಚರ್ಮದ ಆರೋಗ್ಯ ವೃದ್ಧಿಯಾಗುತ್ತದೆ. ಇದರಿಂದ ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದು. ಚರ್ಮದಲ್ಲಿನ ಕಪ್ಪು ಕಲೆ, ಮುಖದಲ್ಲಿನ ಎಣ್ಣೆಯಾಂಶ ಹೋಗಲಾಡಿಸಲು ದಾಳಿಂಬೆ ಸಹಾಯಕಾರಿ. ಹಾಗೂ ವಿವಿಧ ಚರ್ಮದ ಸಮಸ್ಯೆಗಳಿಗೂ ದಾಳಿಂಬೆ ಸೇವನೆಯಿಂದ ಪರಿಹಾರ ಕಂಡುಕೊಳ್ಳಬಹುದು. ಜೊತೆಗೆ ದಾಳಿಂಬೆಯು ಮೊಡವೆಗಳನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ. ದಾಳಿಂಬೆ ಬೀಜಗಳನ್ನು ಅರಿಶಿನದೊಂದಿಗೆ ಪುಡಿಮಾಡಿ ಮೊಡವೆಗಳಾಗಿರುವ ಸ್ಥಳಕ್ಕೆ ಲೇಪಿಸಿದರೆ ಮೊಡವೆ ನಿವಾರಣೆಯಾಗುತ್ತದೆ. ಹಾಗೂ ದಾಳಿಂಬೆ ಹಣ್ಣಿನಲ್ಲಿರುವ ಮಿಟಮಿನ್‍ಗಳು ಕೂದಲಿನ ನೈಸರ್ಗಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕಪ್ಪು ಮತ್ತು ಉದ್ದನೆಯ ಕೂದಲು ಬೆಳೆಯಲು ದಾಳಿಂಬೆ ನೆರವಾಗುತ್ತದೆ. ಕೂದಲು ಸೀಳುವುದು, ಮತ್ತು ಕೂದಲು ಉದುರುವುದನ್ನು ತಡೆಯುತ್ತದೆ.
ಇದನ್ನೂ ಓದಿ: ಆಗಾಗ ಕಾಯಿಲೆ ಬೀಳ್ತೀರಾ ? ರೋಗನಿರೋಧಕ ಶಕ್ತಿ ಹೆಚ್ಚಿಸುವ ಈ ಸೂಪರ್‌ಫುಡ್ ತಿನ್ನಿ
ದಾಳಿಂಬೆ ಕಬ್ಬಿಣದ ಖಜಾನೆ:
ಮಾನವನ ದೇಹದಲ್ಲಿ ಹೆಚ್ಚಿನ ಶಕ್ತಿ ತುಂಬಲು ರಕ್ತದಲ್ಲಿ ಕಬ್ಬಿಣದ ಅಂಶ( Iron content) ಇರುವುದು ತುಂಬಾ ಮುಖ್ಯ. ಕಬ್ಬಿಣದ ಅಂಶ ಕಡಿಮೆಯಾದರೆ ದಾಳಿಂಬೆ ವೈದ್ಯರು ತಿನ್ನಲು ಸಲಹೆ ನೀಡುತ್ತಾರೆ. ಇದರಲ್ಲಿ ಕಬ್ಬಿಣದ ಅಂಶ ತುಂಬಾ ಹೆಚ್ಚಿರುವುದರಿಂದ ದಾಳಿಂಬೆ ಆರೋಗ್ಯದ ದೃಷ್ಟಿಯಿಂದ ಅತ್ಯುತ್ತಮ ಆಯ್ಕೆಯಾಗಿದೆ. ಪಾಲಾಕ್ ಸೇರಿ ವಿವಿಧ ಸೊಪ್ಪುಗಳಲ್ಲಿಯೂ ಕಬ್ಬಿಣದ ಅಂಶ ಹೆಚ್ಚಿರುತ್ತದೆ. ಆದರೆ ಸೊಪ್ಪನ್ನು ನೇರವಾಗಿ ಸೇವಿಸಲು ಸಾಧ್ಯವಿಲ್ಲ. ಬೇಯಿಸಿದ ಬಳಿಕ ಹಲವು ಪೌಷ್ಟಿಕಾಂಶಗಳು ನಷ್ಟವಾಗುವ ಕಾರಣ, ನೇರವಾಗಿ ತಿನ್ನಬಹುದಾದ ದಾಳಿಂಬೆ ಅತಿ ಸೂಕ್ತವಾಗಿದೆ.
ಇದನ್ನೂ ಓದಿ: ಸಿಹಿ ಗೆಣಸು ಖಿನ್ನತೆಗೂ ದಿವ್ಯೌಷಧ, ಅನಾರೋಗ್ಯಕ್ಕೆ ಬೆಸ್ಟ್ ಮದ್ದು
ದಾಳಿಂಬೆ ಹಣ್ಣು ವಿವಿಧ ಔಷಧೀಯ ಗುಣಗಳ ಜೊತೆಗೆ ಉತ್ತಮ ಆರೋಗ್ಯ ವೃದ್ಧಿಗೂ ಕೂಡ ಸಹಕಾರಿ. ಇದನ್ನು ನೇರವಾಗಿ ತಿನ್ನುವುದರ ಜೊತೆ ಇದರ ಕಾಳುಗಳಿಂದ ಜ್ಯೂಸ್( Juice) ಮಾಡಿ ಸಹ ಸೇವಿಸಬಹುದಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.