Guava Halwa Recipe: ಪೇರಲೆ ಹಣ್ಣಿನ ಹಲ್ವಾ ಒಮ್ಮೆ ಮಾಡ್ನೋಡಿ

By Suvarna NewsFirst Published Dec 22, 2022, 3:40 PM IST
Highlights

ಪೇರಲೆ ಹಣ್ಣು ಆರೋಗ್ಯಕ್ಕೆ ಒಳ್ಳೆಯದು. ಜನರು ಅದನ್ನು ಕತ್ತರಿಸಿ ಹಾಗೆ ತಿನ್ನುತ್ತಾರೆ. ಆದ್ರೆ ನೀವು ಇದ್ರಲ್ಲೂ ಹಲ್ವಾ ಮಾಡಬಹುದು. ಒಮ್ಮೆ ಪೇರಲೆ ಹಣ್ಣಿನ ಹಲ್ವಾ ತಿಂದ್ರೆ ನೀವು ಮತ್ತೆ ಮತ್ತೆ ಮಾಡ್ತಿರುತ್ತೀರಿ. ಅಷ್ಟು ರುಚಿಯಾಗಿರುತ್ತೆ ಈ ಹಲ್ವಾ.
 

ಬೆಂಗಳೂರು ಸೇರಿದಂತೆ ಭಾರತದ ಬಹುತೇಕ ಭಾಗದಲ್ಲಿ ಚಳಿ ಜೋರಾಗಿಯೇ ಇದೆ. ಚಳಿಗಾಲದಲ್ಲಿ ಬಾಯಿ ಚಪಲ ಹೆಚ್ಚು. ಕೆಲವರು ಬಿಸಿ ಬಿಸಿ ಬಜ್ಜಿ ತಿನ್ನಲು ಇಷ್ಟಪಟ್ಟರೆ ಮತ್ತೆ ಕೆಲವರು ಸಿಹಿ ಪದಾರ್ಥ ಸೇವನೆ ಮಾಡಲು ಬಯಸ್ತಾರೆ. ಸಿಹಿ ಪದಾರ್ಥಗಳಲ್ಲಿ ಹಲ್ವಾ ಕೂಡ ಒಂದು. ಸಾಮಾನ್ಯವಾಗಿ ನಾವು ಕ್ಯಾರೆಟ್ ಹಲ್ವಾ, ರವಾ ಹಲ್ವಾ, ಗೋಧಿ ಹಲ್ವಾ ಹೀಗೆ ಬೇರೆ ಬೇರೆ ಹಲ್ವಾ ತಯಾರಿಸಿ ರುಚಿ ನೋಡಿರ್ತೇವೆ. ಪ್ರತಿ ಬಾರಿ ಒಂದೇ ಹಲ್ವಾ ತಿನ್ನೋಕೆ ನಮಗೂ ಬೋರ್ ಅಲ್ವಾ? ಈ ಬಾರಿ ಚಳಿಗಾಲದಲ್ಲಿ ನೀವು ಹೊಸ ರೆಸಿಪಿ ಟ್ರೈ ಮಾಡಬಹುದು. ಅದು ಪೇರಲೆ ಹಣ್ಣಿನ ಹಲ್ವಾ.

ಚಳಿಗಾಲ (Winter) ದಲ್ಲಿ ಪೇರಲೆ (Guava)  ಹಣ್ಣನ್ನು ಅಗತ್ಯವಾಗಿ ಸೇವನೆ ಮಾಡಬೇಕು. ಪೇರಲೆ ಹಣ್ಣು ಭಾರತದ ಎಲ್ಲ ಕಡೆ ಲಭ್ಯವಿದೆ. ಪೇರಲೆ ಹಣ್ಣಿನ ಸೇವನೆಯಿಂದ ಎದೆ ಹಾಲು ಹೆಚ್ಚಾಗುತ್ತದೆ. ವೀರ್ಯದ ಸಂಖ್ಯೆ ಹೆಚ್ಚಾಗುತ್ತದೆ. ಮೆದುಳನ್ನು ಬಲಪಡಿಸುವ ಕೆಲಸ ಮಾಡುತ್ತದೆ.  ಪೇರಲೆ ಹಣ್ಣನ್ನು ತಿನ್ನುವುದ್ರಿಂದ ಬಾಯಾರಿಕೆ ಕಡಿಮೆಯಾಗುತ್ತದೆ. ಹೃದಯದ ಆರೋಗ್ಯಕ್ಕೆ ಇದು ಒಳ್ಳೆಯದು. ಹೊಟ್ಟೆಯನ್ನು ಶುದ್ಧಗೊಳಿಸಿ, ಕಫ ಹೊರಹಾಕುವ ಶಕ್ತಿಯನ್ನು ಇದು ಹೊಂದಿದೆ.  ಮೆದುಳು ಮತ್ತು ಮೂತ್ರಪಿಂಡದ ಸೋಂಕು, ಜ್ವರ, ಮಾನಸಿಕ ಕಾಯಿಲೆ ಸೇರಿದಂತೆ ಅನೇಕ ರೋಗ (Disease) ಗಳನ್ನು ಗುಣಪಡಿಸುವ ಶಕ್ತಿ ಇದಕ್ಕಿದೆ. ದಿನಕ್ಕೊಂದು ಪೇರಲೆ ಹಣ್ಣು ತಿನ್ನುವಂತೆ ವೈದ್ಯರು ಕೂಡ ಸಲಹೆ ನೀಡುತ್ತಾರೆ. ಇಷ್ಟೆಲ್ಲ ಪ್ರಯೋಜನ ಹೊಂದಿರುವ ಪೇರಲೆ ಹಣ್ಣಿನಿಂದ ಹಲ್ವಾ ಮಾಡೋದು ಹೇಗೆ ಗೊತ್ತಾ? 

Christmas 2022: ಗರ್ಭಿಣಿಯರು ರಮ್ ಕೇಕ್ ತಿನ್ನಬಹುದಾ?

ಪೇರಲೆ ಹಣ್ಣಿನ ಹಲ್ವಾ (Halva) ಮಾಡಲು ಬೇಕಾಗುವ ಪದಾರ್ಥಗಳು : ನಾಲ್ಕು ಪೇರಲೆ ಹಣ್ಣು, ಒಂದು ಕಪ್ ಸಕ್ಕರೆ, ಒಂದು ಚಮಚ ಏಲಕ್ಕಿ, ಒಂದು ಇಂಚು ಬೀಟ್‌ರೂಟ್, ಮುಕ್ಕಾಲು ಕಪ್ ತುಪ್ಪ, ಸಣ್ಣಗೆ ಕತ್ತರಿಸಿದ ಗೋಡಂಬಿ ಮತ್ತು ಬಾದಾಮಿ, ಅರ್ಧ ಲೀಟರ್ ಹಾಲು. ಅರ್ಧ ಕಪ್ ಮಾವಾ. ನೀವು ಎಷ್ಟು ಪೇರಲೆ ಹಣ್ಣನ್ನು ತೆಗೆದುಕೊಳ್ಳುತ್ತೀರಿ ಎನ್ನುವುದ್ರ ಮೇಲೆ ಅದ್ರ ಪ್ರಮಾಣ ಬದಲಾಗುತ್ತದೆ.

ಪೇರಲೆ ಹಣ್ಣಿನ ಹಲ್ವಾ ಮಾಡುವ ವಿಧಾನ: ಪೇರಲೆ ಹಣ್ಣಿನ ಹಲ್ವಾ ಮಾಡುವ ಮೊದಲು ನೀವು ಪೇರಲೆ ಹಣ್ಣನ್ನು ತುರಿದುಕೊಳ್ಳಬೇಕು. ತುರಿದುಕೊಂಡ ನಂತ್ರ ನೀವು ಬೀಟ್ ರೋಟನ್ನು ಸಿಪ್ಪೆ ತೆಗೆದು ಅದನ್ನು ತುರಿದುಕೊಳ್ಳಬೇಕು. ನಂತ್ರ ಇನ್ನೊಂದು ಬಾಣಲೆಗೆ ತುಪ್ಪವನ್ನು ಹಾಕಬೇಕು. ಬೆಣ್ಣೆ ಕೂಡ ಅದಕ್ಕೆ ಬಳಸಬಹುದು. ಆದ್ರೆ ಎಣ್ಣೆಯನ್ನು ಹಾಕಬೇಡಿ. ತುಪ್ಪ ಬಿಸಿಯಾದ್ಮೇಲೆ ನೀವು ಬಾಣಲೆಗೆ ತುರಿದಿಟ್ಟ ಪೇರಲೆ ಹಣ್ಣು ಹಾಗೂ ಬೀಟ್ ರೂಟ್ ಸೇರಿಸಿ. ಮೀಡಿಯಂ ಪ್ಲೇಮ್ ನಲ್ಲಿ ಅದನ್ನು ಚೆನ್ನಾಗಿ ಹುರಿದುಕೊಳ್ಳಿ. ಮೂರರಿಂದ ನಾಲ್ಕು ನಿಮಿಷ ಹುರಿದ ನಂತ್ರ ಹಾಲನ್ನು ನೀವು ಹಾಕಬೇಕು. ಕೋಲ್ಡ್ ಹಾಲನ್ನು ನೀವು ಹಾಕಬಾರದು. ನಂತ್ರ ಇದಕ್ಕೆ ಮಾವಾ ಹಾಕಬೇಕು. ಮಾವಾ ಬದಲು ನೀವು ಹಾಲಿನ ಪುಡಿ ಹಾಕಬಹುದು. ನಂತ್ರ ಸಕ್ಕರೆಯನ್ನು ಹಾಕಿ. ಎಲ್ಲವನ್ನೂ ಸರಿಯಾಗಿ ಮಿಕ್ಸ್ ಮಾಡಿ. ಚೆನ್ನಾಗಿ ಬೆಂದ ನಂತ್ರ ಮಿಶ್ರಣ ಸ್ವಲ್ಪ ಗಟ್ಟಿಯಾಗಲು ಶುರುವಾಗುತ್ತದೆ. ಆಗ ನೀವು ಡ್ರೈ ಫ್ರೂಟ್ಸ್ ಹಾಕಬೇಕು. ಹಾಗೆಯೇ ಏಲಕ್ಕಿ ಪುಡಿಯನ್ನು ನೀವು ಇದಕ್ಕೆ ಬೆರೆಸಬೇಕು. ಕ್ಯಾರೆಟ್ ಹಲ್ವಾದಷ್ಟು ಈ ಮಿಶ್ರಣ ಗಟ್ಟಿಯಾದ ನಂತ್ರ ಗ್ಯಾಸ್ ಬಂದ್ ಮಾಡಬೇಕು. ಬಿಸಿ ಬಿಸಿ ರುಚಿಯಾದ ಪೇರಲೆ ಹಣ್ಣಿನ ಹಲ್ವಾ ಸವಿಯಲು ಸಿದ್ಧವಾಗಿರುತ್ತದೆ. ನೀವು ಪೇರಲೆ ಹಣ್ಣನ್ನು ಬೇಯಿಸಿ ನಂತ್ರ ಮಿಕ್ಸಿ ಮಾಡಿ ಕೂಡ ಹಲ್ವಾ ತಯಾರಿಸಬಹುದು. 

ಅವಶ್ಯಕ ಹೌದು, ಅತಿಯಾದ್ರೆ ಅನಾರೋಗ್ಯ ಕಾಡೋದು ನಿಶ್ಚಿತ!

click me!